Wednesday, 11th December 2024

Lebanon Pager Explosions: ಪೇಜರ್‌, ವಾಕಿಟಾಕಿ ಸ್ಫೋಟ; ಸಾವಿನ ಸಂಖ್ಯೆ 32ಕ್ಕೆ ಏರಿಕೆ; ಶೀಘ್ರವೇ ಇಸ್ರೇಲ್‌ -ಲೆಬನಾನ್‌ ಯುದ್ಧ?

Lebanon Pager Explosions

ಬೈರುತ್‌: ಭಯೋತ್ಪಾದಕ ಗುಂಪು ಹೆಜ್ಬುಲ್ಲಾ(Hezbollah)ವನ್ನು ಗುರಿಯಾಗಿಸಿಕೊಂಡು ನಡೆದಿರುವ ಪೇಜರ್‌ ಮತ್ತು ವಾಕಿಟಾಕಿ(Lebanon Pager Explosions) ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 32ಕ್ಕೆ ಏರಿಕೆ ಆಗಿದೆ. ಇನ್ನು 3,250 ಜನ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ದಾಳಿಗೆ ಇಸ್ರೇಲ್‌ ಅನ್ನು ಹೊಣೆಯಾಗಿಸಿರುವ ಹೆಜ್ಬುಲ್ಲಾ ಪ್ರತಿದಾಳಿ ನಡೆಸುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿದೆ. ಈ ಬ್ಯಾಕ್‌ ಟು ಬ್ಯಾಕ್‌ ದಾಳಿ ಇಸ್ರೇಲ್‌ ಮತ್ತು ಹೆಜ್ಬುಲ್ಲಾ ನಡುವಿನ ಯುದ್ಧಕ್ಕೆ ನಾಂದಿ ಹಾಡುತ್ತದೆಯೇ ಎಂಬ ಭೀತಿ ಎದುರಾಗಿದೆ.

ಪೇಜರ್‌ ಸ್ಫೋಟದ ಬೆನ್ನಲ್ಲೇ ನಿನ್ನೆ ಹೆಜ್ಬುಲ್ಲಾ ಉಗ್ರರನ್ನು ಗುರಿಯಾಗಿಸಿ ವಾಕಿಟಾಕಿಗಳನ್ನು ಸ್ಫೋಟಿಸಲಾಗಿತ್ತು. ಘಟನೆಯಲ್ಲಿ ಬರೋಬ್ಬರಿ 20 ಜನ ಧಾರುಣವಾಗಿ ಬಲಿಯಾಗಿದ್ದು, 450ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಮಂಗಳವಾರ ನಡೆದ ದಾಳಿಯಲ್ಲಿ ಮೃತಪಟ್ಟವರ ಅಂತ್ಯಕ್ರಿಯೆಯನ್ನು ನಿನ್ನೆ ನಡೆಸಲಾಗುತ್ತಿತ್ತು. ಈ ವೇಳೆ ಈ ಭಾರೀ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ.

ಯುದ್ಧದ ಆತಂಕ ಹೆಚ್ಚಳ

ಇನ್ನು ಈ ದಾಳಿ ಬೆನ್ನಲ್ಲೇ ಇಸ್ರೇಲ್‌ ಮತ್ತು ಹೆಜ್ಬುಲ್ಲಾ ನಡುವೆ ಯು‍ದ್ಧದ ಭೀತಿ ಎದುರಾಗಿದೆ. ಈ ಕುರಿತು ಇಸ್ರೇಲಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರ ಹೇಳಿಕೆಯು ಎರಡು ಕಡೆಯ ನಡುವೆ ಯುದ್ಧವು ಉಲ್ಬಣಗೊಳ್ಳಬಹುದು ಎಂಬ ಆತಂಕವನ್ನು ಹೆಚ್ಚಿಸಿದೆ. ಇಸ್ರೇಲ್‌ನ ಉತ್ತರ ಭಾಗದಲ್ಲಿ ಯುದ್ಧದ ಭೀತಿ ಎದುರಾಗಿದೆ. ಅದಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಬೆಂಜಮಿನ್ ನೆತನ್ಯಾಹು ಪ್ರತಿಕ್ರಿಯೆ

ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರತಿಕ್ರಿಯಿಸಿದ್ದು, “ನಾವು ಉತ್ತರದ ನಿವಾಸಿಗಳನ್ನು ಸುರಕ್ಷಿತವಾಗಿ ಅವರ ಮನೆಗಳಿಗೆ ಹಿಂದಿರುಗಿಸುತ್ತೇವೆ,” ಹೇಳಿದ್ದಾರೆ. ಅವರ ಈ ಹೇಳಿಕೆ ಇಸ್ರೇಲ್‌ ಯುದ್ಧಕ್ಕೆ ಸಜ್ಜಾಗುತ್ತಿದೆ ಎಂಬುದನ್ನು ತೋರಿಸುತ್ತಿದೆ. ಅಲ್ಲದೇ ಹೆಜ್ಬುಲ್ಲಾಗಳ ರಾಕೆಟ್‌ ದಾಳಿಯನ್ನು ಯುದ್ಧದಿಂದ ಮಾತ್ರ ನಿಲ್ಲಿಸಲು ಸಾಧ್ಯ ಎಂದು ಇಸ್ರೇಲ್‌ ನಂಬಿದೆ.

ಹೆಜ್ಬೊಲ್ಲಾ ಎನ್ನುವುದು ಒಂದು ಶಿಯಾ ಮುಸ್ಲಿಂ ಸಂಘಟನೆಯಾಗಿದ್ದು, ಲೆಬನಾನ್‌ನಲ್ಲಿ ಮಹತ್ವದ ರಾಜಕೀಯ ಪ್ರಭಾವ ಮತ್ತು ಮಿಲಿಟರಿ ಉಪಸ್ಥಿತಿಯನ್ನು ಹೊಂದಿದೆ. ಇಸ್ರೇಲನ್ನು ತಡೆಗಟ್ಟುವ ಉದ್ದೇಶದಿಂದ, ಪ್ರಮುಖ ಶಿಯಾ ಮುಸ್ಲಿಂ ರಾಷ್ಟ್ರವಾದ ಇರಾನ್ 1980ರ ದಶಕದ ಆರಂಭದಲ್ಲಿ ಬೆಂಬಲ ನೀಡಿ, ಹೆಜ್ಬೊಲ್ಲಾ ಸಂಘಟನೆಯ ಆರಂಭಕ್ಕೆ ಕಾರಣವಾಯಿತು. ಲೆಬನಾನ್‌ನಲ್ಲಿ ಆಂತರಿಕ ಯುದ್ಧ ನಡೆಯುತ್ತಿದ್ದ ಅವಧಿಯಲ್ಲಿ, ಇಸ್ರೇಲಿ ಪಡೆಗಳು ದಕ್ಷಿಣ ಲೆಬನಾನನ್ನು ಆಕ್ರಮಿಸಿದ ಸಮಯದಲ್ಲಿ ಹೆಜ್ಬೊಲ್ಲಾ ಸಂಘಟನೆಯ ಸ್ಥಾಪನೆಯಾಯಿತು. 1992ರ ಬಳಿಕ, ಹೆಜ್ಬೊಲ್ಲಾ ಸಂಘಟನೆ ಲೆಬನಾನಿನ ರಾಷ್ಟ್ರೀಯ ಚುನಾವಣೆಯಲ್ಲೂ ಪಾಲ್ಗೊಳ್ಳುತ್ತಿದ್ದು, ಪ್ರಮುಖ ರಾಜಕೀಯ ಶಕ್ತಿಯಾಗಿಯೂ ಹೊರಹೊಮ್ಮಿದೆ.

ಈ ಸುದ್ದಿಯನ್ನೂ ಓದಿ: Lebanon Pager Explosion: ಪೇಜರ್‌ ಸ್ಫೋಟ; ಯಾರು ಈ ಹೆಜ್ಬೊಲ್ಲಾಗಳು? ಇಸ್ರೇಲ್‌ಗೂ ಇವರಿಗೂ ಯಾಕಿಷ್ಟು ವೈರತ್ವ?