Friday, 13th December 2024

Lebanon Pager Explosions: ಪೇಜರ್‌ ಬ್ಲಾಸ್ಟ್‌ ಬೆನ್ನಲ್ಲೇ ಲೆಬನಾನ್‌ನಲ್ಲಿ ವಾಕಿಟಾಕಿಗಳೂ ಸ್ಫೋಟ; ಇಲ್ಲಿದೆ ವಿಡಿಯೋ

lebanon

ಬೈರುತ್‌: ಭಯೋತ್ಪಾದಕ ಗುಂಪು ಹೆಜ್ಬುಲ್ಲಾ(Hezbollah)ವನ್ನು ಗುರಿಯಾಗಿಸಿಕೊಂಡು ನಡೆಸಿದ ಪೇಜರ್‌ (Lebanon Pager Explosions) ದಾಳಿ ಬೆನ್ನಲ್ಲೇ ಲೆಬನಾನ್‌ನಲ್ಲಿ ಕೈಯಲ್ಲಿ ಹಿಡಿಯುವ ರೇಡಿಯೋ ಅಥವಾ ವಾಕಿಟಾಕಿ(walkie-talkies)ಗಳು ಏಕಾಏಕಿ ಸ್ಫೋಟಗೊಂಡಿವೆ. ಘಟನೆಯಲ್ಲಿ ಮೂವರು ಬಲಿಯಾಗಿದ್ದು, ನೂರಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ನಿನ್ನೆ ಲೆಬನಾನ್‌ನಲ್ಲಿ ಭಯೋತ್ಪಾದಕ ಗುಂಪು ಹೆಜ್ಬುಲ್ಲಾವನ್ನು ಗುರಿಯಾಗಿಸಿಕೊಂಡು ನಡೆಸಿದ ಪೇಜರ್‌ ದಾಳಿಯಲ್ಲಿ (Hezbollah Attack) ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ 12 ಮಂದಿ ಸಾವನ್ನಪ್ಪಿದ್ದು, 3000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ದಾಳಿಯ ಹಿಂದೆ ಇಸ್ರೇಲ್ ಕೈವಾಡವಿದೆ ಎಂದು ಹೆಜ್ಬುಲ್ಲಾ ಆರೋಪಿಸಿದೆ. ಇಸ್ರೇಲ್‌ನ ಮೊಸ್ಸಾದ್ ಗೂಢಚಾರ ಸಂಸ್ಥೆ (Mossad spy agency) ತಿಂಗಳುಗಳ ಮೊದಲು ಹೆಜ್ಬುಲ್ಲಾ ಆರ್ಡರ್‌ ನೀಡಿದ 5,000 ತೈವಾನ್ ನಿರ್ಮಿತ ಪೇಜರ್‌ಗಳಲ್ಲಿ 3 ಗ್ರಾಂ ಸ್ಫೋಟಕಗಳನ್ನು ತುಂಬಿಸಿಟ್ಟಿತ್ತು ಎಂದು ಹೇಳಿದೆ.

ತೈವಾನ್‌ನ ಗೋಲ್ಡ್ ಅಪೊಲೊ (Gold Apollo) ಕಂಪನಿಗೆ ಹಿಜ್ಬುಲ್ಲಾ ಪೇಜರ್‌ ಪೂರೈಸುವಂತೆ ಆರ್ಡರ್‌ ನೀಡಿತ್ತು. ಈ ಪೇಜರ್‌ಗಳು ಲೆಬನಾನ್‌ಗೆ ತಲುಪುವ ಮುನ್ನ ಅದಕ್ಕೆ ಸ್ಫೋಟಕಗಳನ್ನು ತುಂಬಲಾಗಿದೆ ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಸ್ಫೋಟಗೊಂಡ ಪೇಜರ್‌ಗಳ ಪೈಕಿ ಬಹುತೇಕ AP924 ಮಾಡೆಲ್‌ ಆಗಿದ್ದು, ಇವನ್ನು ಗೋಲ್ಡ್ ಅಪೊಲೊದ ಇತರ 3 ಮಾಡೆಲ್‌ಗಳೊಂದಿಗೆ ಸಾಗಿಸಲಾಗಿತ್ತು. ಪೇಜರ್‌ಗಳನ್ನು ಲೆಬನಾನ್ ಮತ್ತು ಸಿರಿಯಾದ ಹಲವಾರು ಜನರಿಗೆ ವಿತರಿಸಿದ ನಂತರ ರೇಡಿಯೊ ಆವರ್ತನದೊಂದಿಗೆ ಸ್ಫೋಟಿಸಲಾಗಿದೆ.

ಲೆಬನಾನ್‌ನಲ್ಲಿ ಮಂಗಳವಾರ (ಸೆಪ್ಟೆಂಬರ್‌ 18) ಸ್ಥಳೀಯ ಕಾಲಮಾನ ಮಧ್ಯಾಹ್ನ 3:30ರ ಸುಮಾರಿಗೆ (ಭಾರತೀಯ ಕಾಲಮಾನ ಸಂಜೆ 6 ಗಂಟೆ) ಸ್ಫೋಟ ಸಂಭವಿಸಿದೆ. ಇನ್ನು ಸಿರಿಯಾದಲ್ಲಿಯೂ ಇದೇ ಮಾದರಿಯ ಸ್ಫೋಟ ಸಂಭವಿಸಿದೆ. ಭಾರತೀಯ ಕಾಲಮಾನದ ಪ್ರಕಾರ ಸೆ. 17ರ ಸಂಜೆ 6ರ ಸುಮಾರಿಗೆ ಸಿರಿಯಾದಲ್ಲಿ ಈ ಸ್ಫೋಟಗಳು ನಡೆದಿವೆ. ಹೆಜ್ಬುಲ್ಲಾ ಸಂಘಟನೆಯ 14 ಮಂದಿಯ ಪೇಜರ್‌ ಇದೇ ರೀತಿ ಏಕಾಏಕಿ ಸ್ಫೋಟಗೊಂಡು 14 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Lebanon Pager Explosions: ಲೆಬನಾನ್‌ನಲ್ಲಿ ಸ್ಫೋಟ; ಇಸ್ರೇಲ್ ಕೈವಾಡದ ಬಗ್ಗೆ ಪೇಜರ್‌ ತಯಾರಕ ಕಂಪನಿ ಹೇಳಿದ್ದೇನು?