Saturday, 14th December 2024

ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡನ್’ರಿಗೆ ಮಾಲಾ ಅಡಿಗ ನೀತಿ ನಿರ್ದೇಶಕಿ

ವಾಷಿಂಗ್ಟನ್: ತಮ್ಮ ಆಡಳಿತ ತಂಡವನ್ನು ಕಟ್ಟುತ್ತಿರುವ ಚುನಾಯಿತ ಅಧ್ಯಕ್ಷ ಜೋ ಬೈಡನ್, ಬರಾಕ್ ಒಬಾಮ ಅವರ ಆಡಳಿತದಲ್ಲಿದ್ದ ನಾಲ್ವರು ಹಿರಿಯರನ್ನು ತಮ್ಮ ಉನ್ನತ ಕಚೇರಿಗಳಿಗೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಈ ಪೈಕಿ, ಭಾರತ ಮೂಲದ ಮಾಲಾ ಅಡಿಗ ಅವರು ಬೈಡನ್ ಆಡಳಿತದಲ್ಲಿ ಪ್ರಮುಖ ಹುದ್ದೆ ಪಡೆದುಕೊಂಡಿದ್ದಾರೆ.

ಬೈಡನ್ ಪ್ರತಿಷ್ಠಾನದಲ್ಲಿ ಉನ್ನತ ಶಿಕ್ಷಣ ಮತ್ತು ಸೇನಾ ಕುಟುಂಬಗಳ ವಿಭಾಗದ ನಿರ್ದೇಶಕರಾಗಿ ಕೆಲಸ ಮಾಡಿದ್ದ ಮಾಲಾ ಅಡಿಗ , ಒಬಾಮ ಆಡಳಿತದ ಅವಧಿಯಲ್ಲಿ ಜೋ ಬೈಡನ್ ಉಪಾಧ್ಯಕ್ಷರಾಗಿದ್ದಾಗ ಅವರ ಪತ್ನಿ ಜಿಲ್ ಬೈಡನ್ ಅವರಿಗೆ ನೀತಿ ಸಲಹೆ ಗಾರರೂ ಆಗಿದ್ದರು. ಈ ಬಾರಿ ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡನ್ ಅವರಿಗೆ ನೀತಿ ನಿರ್ದೇಶಕರಾಗಿ ಕೆಲಸ ಮಾಡಲಿದ್ದಾರೆ.

ಜಿಲ್ ಬೈಡನ್ ಅವರಿಗೆ ಸಿಬ್ಬಂದಿ ಮುಖ್ಯಸ್ಥರಾಗಿದ್ದ ಕ್ಯಾಥಿ ರಸೆಲ್ ಅವರನ್ನು ಶ್ವೇತಭವನದಲ್ಲಿನ ಅಧ್ಯಕ್ಷರ ಖಾಸಗಿ ಕಚೇರಿಯ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಗಿದೆ. ಒಬಾಮ ಆಡಳಿತದಲ್ಲಿ ಅಧ್ಯಕ್ಷರ ಶಾಸಕಾಂಗ ಸಲಹೆಗಾರ ಮತ್ತು ಸೆನೆಟ್‌ನಲ್ಲಿ ಸಿಬ್ಬಂದಿ ಉಪ ಮುಖ್ಯಸ್ಥರಾಗಿದ್ದ ಲೌಸಿಯಾ ಟೆರೆಲ್ ಅವರನ್ನು ಶ್ವೇಭವನದ ಶಾಸಕಾಂಗ ವ್ಯವಹಾರಗಳ ಕಚೇರಿ ನಿರ್ದೇಶಕ ರನ್ನಾಗಿ ನೇಮಿಸಲಾಗಿದೆ.