ಇರಾನ್ - ಇಸ್ರೇಲ್ ಶಾಂತಿ ಮಾತುಕತೆ ನಡೆಯುತ್ತಿದ್ದಾಗಲೇ ಶ್ವೇತ ಭವನದ ಬಳಿ ಗುಂಡಿನ ದಾಳಿ
ಅಮೆರಿಕಾದ ಶ್ವೇತಭವನದ ಬಳಿ ಮತ್ತೆ ಗುಂಡಿನ ದಾಳಿ ನಡೆದಿದೆ. ಸ್ಥಳೀಯ ಕಾಲಮಾನದ ಪ್ರಕಾರ ಶನಿವಾರ(ಮೇ.23) ಸಂಜೆ ವೇಳೆಗೆ ಶ್ವೇತಭವನದ ಭದ್ರತಾ ತಪಾಸಣಾ ಕೇಂದ್ರವನ್ನು ಸಮೀಪಿಸಿ ಅಧಿಕಾರಿಗಳ ಮೇಲೆ ಗುಂಡು ಹಾರಿಸಿದ್ದು, ಈ ವೇಳೆ ನಡೆದ ಶೂಟೌಟ್‌ನಲ್ಲಿ ಬಂದೂಕುಧಾರಿ ಸಾವನ್ನಪ್ಪಿದ್ದಾರೆ.
ಸಂಗ್ರಹ ಚಿತ್ರ -
ವಾಷಿಂಗ್ಟನ್: ಅಮೆರಿಕಾದ ಶ್ವೇತಭವನದ ಬಳಿ ಮತ್ತೆ ಗುಂಡಿನ ದಾಳಿ ನಡೆದಿದೆ. ಸ್ಥಳೀಯ ಕಾಲಮಾನದ ಪ್ರಕಾರ ಶನಿವಾರ(ಮೇ.23) ಸಂಜೆ ವೇಳೆಗೆ ಶ್ವೇತಭವನದ ಭದ್ರತಾ (White house shooting) ತಪಾಸಣಾ ಕೇಂದ್ರವನ್ನು ಸಮೀಪಿಸಿ ಅಧಿಕಾರಿಗಳ ಮೇಲೆ ಗುಂಡು ಹಾರಿಸಿದ್ದು, ಈ ವೇಳೆ ನಡೆದ ಶೂಟೌಟ್‌ನಲ್ಲಿ ಬಂದೂಕುಧಾರಿ ಸಾವನ್ನಪ್ಪಿದ್ದು, ಇಬ್ಬರಿಗೆ ಗಾಯವಾಗಿದೆ ಎಂದು ಫೆಡರಲ್ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುತ್ತಮುತ್ತಲ ಪ್ರದೇಶದಲ್ಲಿ ನಡೆದ ಮೂರನೇ ಗುಂಡಿನ ದಾಳಿ ಇದಾಗಿದೆ.
ಯುಎಸ್ ಸೀಕ್ರೆಟ್ ಸರ್ವಿಸ್ ವಕ್ತಾರರು ಈ ಕುರಿತು ಮಾಹಿತಿ ನೀಡಿದ್ದು, ಶನಿವಾರ ಸಂಜೆ 6 ಗಂಟೆ ಸುಮಾರಿಗೆ ಸಂಕೀರ್ಣದಲ್ಲಿ ತನ್ನ ಬ್ಯಾಗ್‌ನಿಂದ ಆಯುಧವನ್ನು ತೆಗೆದು ಏಕಾಏಕಿ ಅಲ್ಲಿ ನಿಯೋಜಿಸಲಾಗಿದ್ದ ಗುಪ್ತಚರದಳದ ಭದ್ರತಾ ಅಧಿಕಾರಿಗಳ ಮೇಲೆ ಗುಂಡು ಹಾರಿಸಲು ಮುಂದಾಗಿದ್ದಾನೆ. ಈ ವೇಳೆ ಇದಕ್ಕೆ ಪ್ರತಿಯಾಗಿ ಅಧಿಕಾರಿಗಳು ಗುಂಡನ್ನು ಹಾರಿಸಿದ್ದು, ಗುಂಡಿನ ಚಕಮಕಿಗೆ ಕಾರಣವಾಗಿದೆ. ಈ ವೇಳೆ, ಅಧಿಕಾರಿಗಳು ಬಂದೂಕುಧಾರಿಗೆ ಗುಂಡು ಹಾರಿಸಿದ್ದು, ಬಳಿಕ ಆತನನ್ನು ಅಲ್ಲಿಂದ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ಬಳಿಕ ಆತ ಸಾವನ್ನಪ್ಪಿರುವುದು ದೃಢಪಟ್ಟಿದೆ. ಈ ಶೂಟೌಟ್ ಸಮಯದಲ್ಲಿ ಬಂದೂಕುಧಾರಿಯ ಗುಂಡಿನಿಂದಾಗಿ ಒಬ್ಬ ಅಧಿಕಾರಿಗೆ ಗಾಯವಾಗಿದ್ದು, ಇದರ ಜೊತೆಗೆ ಈ ರಸ್ತೆಯ ಸಮೀಪದಲ್ಲೇ ಇದ್ದ ಟ್ರಕ್ ಡ್ರೈವರ್ ಒಬ್ಬರಿಗೆ ಗಾಯವಾಗಿದೆ.
ಶಂಕಿತನನ್ನು 21 ವರ್ಷದ ನಾಸಿರ್ ಬೆಸ್ಟ್ ಎಂದು ಗುರುತಿಸಲಾಗಿದೆ. ಘಟನೆ ನಡೆದಾಗ ಶ್ವೇತಭವನದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಪಸ್ಥಿತರಿದ್ದರು. ಹಿರಿಯ ಸಹಾಯಕರೊಂದಿಗೆ ವಾರಾಂತ್ಯದಲ್ಲಿ ಇರಾನ್‌ನೊಂದಿಗಿನ ಸಂಘರ್ಷವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿರುವ ಶಾಂತಿ ಒಪ್ಪಂದದ ಮಾತುಕತೆಯ ಕುರಿತು ಚರ್ಚೆ ನಡೆಸುವ ವೇಳೆ ನಡೆದಿದೆ.
ಮಣಿಪುರದಲ್ಲಿ ಉಗ್ರರ ವಿರುದ್ಧ ಭದ್ರತಾ ಪಡೆಗಳ ಕಾರ್ಯಾಚರಣೆ: ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಜಪ್ತಿ
ದಾಳಿಯ ಸಮಯದಲ್ಲಿ ಅಲರ್ಟ್ ಆದ ಭದ್ರತಾ ಅಧಿಕಾರಿಗಳು ವೈಟ್‌ಹೌಸ್ ಉತ್ತರ ಲೇನ್‌ನ ಶ್ವೇತಭವನದ ಪತ್ರಿಕಾ ದಳದ ಸದಸ್ಯರನ್ನು ಶ್ವೇತಭವನದ ಬ್ರೀಫಿಂಗ್ ಕೋಣೆಗೆ ಸುರಕ್ಷಿತವಾಗಿ ಕರೆದೊಯ್ದಿದ್ದು, ಪತ್ರಿಕಾಗೋಷ್ಠಿ ಕೊಠಡಿಯನ್ನು ನಿರ್ಬಂಧಿಸಿದ್ದಾರೆ. ಗುಂಡಿನ ದಾಳಿ ಹಿನ್ನಲೆಯಲ್ಲಿ ಸುರಕ್ಷತಾ ಕ್ರಮವಾಗಿ ವೈಟ್‌ಹೌಸ್ ಸಂಕೀರ್ಣದಲ್ಲಿ ಕೆಲಹೊತ್ತು ಲಾಕ್‌ಡೌನ್ ಮಾಡಲಾಗಿದ್ದು, ಬಳಿಕ ಸಂಜೆ 6:45ರ ಬಳಿಕ ಇದನ್ನು ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.