Sunday, 6th October 2024

ಟ್ವಿಟರ್​ನಿಂದ ವಜಾ: ಮಸ್ಕ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಮಹಿಳೆಯರು

ಸ್ಯಾನ್ ಫ್ರಾನ್ಸಿಸ್ಕೊ: ಟ್ವಿಟರ್​​ನಿಂದ ವಜಾಗೊಂಡಿರುವ ಇಬ್ಬರು ಮಹಿಳೆಯರು ಕಂಪನಿ ಮಾಲೀಕ ಎಲಾನ್ ಮಸ್ಕ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ.

ಟ್ವಿಟರ್​ ಸಾಮೂಹಿಕ ವಜಾ ಪ್ರಕ್ರಿಯೆಯಿಂದ ಮಹಿಳಾ ಉದ್ಯೋಗಿಗಳೇ ಹೆಚ್ಚು ತೊಂದರೆಗೆ ಒಳಗಾಗಿದ್ದಾರೆ. ವಜಾ ಪ್ರಕ್ರಿಯೆ ನಡೆಸುವಾಗ ಸ್ತ್ರೀಯರನ್ನೇ ಗುರಿಯಾಗಿಸಲಾಗಿದೆ ಎಂದು ಮಹಿಳೆಯರು ಆರೋಪಿಸಿದ್ದಾರೆ.

ಎಲಾನ್ ಮಸ್ಕ್ ಅವರು 44 ಶತಕೋಟಿ ಡಾಲರ್ ಮೊತ್ತಕ್ಕೆ ಟ್ವಿಟರ್​ ಅನ್ನು ಖರೀದಿಸಿದ ಬೆನ್ನಲ್ಲೇ ಮೈಕ್ರೋ ಬ್ಲಾಗಿಂಗ್ ತಾಣ ಉದ್ಯೋಗಿಗಳ ಸಾಮೂಹಿಕ ವಜಾ ಆರಂಭಿಸಿತ್ತು.

ಸ್ಯಾನ್ ಫ್ರಾನ್ಸಿಸ್ಕೊ ಫೆಡರಲ್ ಕೋರ್ಟ್ ಮೆಟ್ಟಿಲೇರಿರುವ ಮಹಿಳೆಯರು, ಟ್ವಿಟರ್​ನಿಂದ ವಜಾಗೊಂಡಿರುವ ಉದ್ಯೋಗಿಗಳಲ್ಲಿ ಶೇ.57ರಷ್ಟು ಮಂದಿ ಮಹಿಳೆಯರು ಎಂದು ಆರೋಪಿಸಿದ್ದಾರೆ.

ಟ್ವಿಟರ್​ ಕ್ರಮದಿಂದಾಗಿ ಮಹಿಳೆಯರಿಗೆ ತೊಂದರೆಯಾಗಿದೆ. ಮಹಿಳೆಯರನ್ನು ಉದ್ಯೋಗ ದಿಂದ ವಜಾಗೊಳಿಸಿರುವುದು ಮಕ್ಕಳು, ಕುಟುಂಬದವರ ಮೇಲೆ ಹೆಚ್ಚು ಕಾಳಜಿ ವಹಿಸುವ ಅವರ ಮೇಲೆ ಪರಿಣಾಮ ಬೀರಿದೆ ಎಂದು ವರದಿ ಮಾಡಿದೆ. ವಜಾಗೊಂಡ ಮಹಿಳಾ ಉದ್ಯೋಗಿಗಳ ಪರವಾಗಿ ಕೆರೊಲಿನಾ ಬರ್ನಾಲ್ ಸ್ಟ್ರಿಫ್ಲಿಂಗ್ ಹಾಗೂ ವಿಲೋ ರೆನ್ ಟರ್ಕಲ್ ಎಂಬವರು ಕೋರ್ಟ್​​ನಲ್ಲಿ ದಾವೆ ಹೂಡಿದ್ದಾರೆ ಎಂದು ವರದಿ ತಿಳಿಸಿದೆ.

ಎಲಾನ್ ಮಸ್ಕ್ ಅವರು ಮಹಿಳೆಯರ ಬಗ್ಗೆ ಹಲವಾರು ಬಾರಿ ಸಾರ್ವಜನಿಕವಾಗಿ ತಾರತಮ್ಯದ ಮಾತುಗಳನ್ನಾಡಿದ್ದಾರೆ.