Friday, 13th December 2024

ದಿಢೀರ್‌ ರಾಜೀನಾಮೆ ನೀಡಿದ ನೂತನ ಹಣಕಾಸು ಸಚಿವ

ಕೊಲಂಬೊ: ಶ್ರೀಲಂಕಾದ ಹೊಸ ಹಣಕಾಸು ಸಚಿವರಾಗಿ ಸೋಮವಾರ ಅಧಿಕಾರ ವಹಿಸಿಕೊಂಡಿದ್ದ ಅಲಿ ಸಬ್ರಿ ಮಂಗಳವಾರ ದಿಢೀರ್‌ ರಾಜೀನಾಮೆ ನೀಡಿದ್ದಾರೆ.

ದ್ವೀಪ ರಾಷ್ಟ್ರ ಶ್ರೀಲಂಕಾದ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟಿದ್ದು, ಅಧ್ಯಕ್ಷ ಗೋಟಬಯಾ ರಾಜಪಕ್ಸ ಅವರು, ಈ ಹಿಂದಿನ ಹಣಕಾಸು ಸಚಿವ ಬೇಸಿಲ್‌ ರಾಜಪಕ್ಸ ಅವರನ್ನು ಸೋಮವಾರ ವಜಾಗೊಳಿಸಿ ದ್ದರು. ಬೇಸಿಲ್‌ ಅವರಿಂದ ತೆರವಾಗಿದ್ದ ಮಂತ್ರಿ ಸ್ಥಾನ ವಹಿಸಿಕೊಂಡಿದ್ದ ಅಲಿ ಸಬ್ರಿ ಅವರೂ ಈಗ ರಾಜೀನಾಮೆ ನೀಡಿ ಹೊರ ನಡೆದಿದ್ದಾರೆ.

ತಾತ್ಕಾಲಿಕ ಕ್ರಮಗಳ ಭಾಗವಾಗಿ ಈ ಸ್ಥಾನವನ್ನು ತಾವು ವಹಿಸಿಕೊಂಡಿದ್ದಾಗಿ ಅಧ್ಯಕ್ಷರಿಗೆ ಬರೆದ ರಾಜೀನಾಮೆ ಪತ್ರದಲ್ಲಿ ಅಲಿ ಸಬ್ರಿ ತಿಳಿಸಿದ್ದಾರೆ.

ಭಾನುವಾರ ರಾತ್ರಿ ಶ್ರೀಲಂಕಾ ಸರ್ಕಾರದ 26 ಸಚಿವರು ರಾಜೀನಾಮೆ ನೀಡಿದ್ದರು. ನಂತರ ಅಧ್ಯಕ್ಷ ರಾಜಪಕ್ಸ ಅವರು ನಾಲ್ವರು ಹೊಸ ಸಚಿವರನ್ನು ನೇಮಕ ಮಾಡಿದ್ದರು. ಇತಿಹಾಸದಲ್ಲೇ ಅತಿ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಶ್ರೀಲಂಕಾ ಸದ್ಯ ಅನುಭವಿಸುತ್ತಿದೆ.