Friday, 13th December 2024

ಶ್ರೀಲಂಕಾದಲ್ಲಿ ಬುರ್ಖಾ ನಿಷೇಧ, ಇಸ್ಲಾಮಿಕ್ ಶಾಲೆಗಳಿಗೆ ಬೀಗಮುದ್ರೆ

ಕೊಲಂಬೋ: ನೆರೆಯ ದ್ವೀಪರಾಷ್ಟ್ರ ಶ್ರೀಲಂಕಾದ ಮುಸ್ಲಿಂ ಮೂಲಭೂತವಾದಕ್ಕೆ ತೆರೆ ಎಳೆಯಲು ಸ್ಥಳೀಯ ಸರ್ಕಾರ ಇದರ ಪ್ರಾಥಮಿಕ ಹಂತದ ಕ್ರಮವಾಗಿ, ದೇಶದಲ್ಲಿ ಬುರ್ಖಾ ನಿಷೇಧಿಸಿ ಸಾವಿರಾರು ಇಸ್ಲಾಮಿಕ್ ಶಾಲೆಗಳನ್ನು ಮುಚ್ಚಲು ನಿರ್ಧರಿಸಿದೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಶ್ರೀಲಂಕಾ ಸಾರ್ವಜನಿಕ ಭದ್ರತಾ ಸಚಿವ ಶರತ್ ವೀರಶೇಖರ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧರಿಸಲಾಗಿದೆ. ರಾಷ್ಟ್ರದ ಭದ್ರತೆ ದೃಷ್ಟಿಯಿಂದ ಬುರ್ಖಾ ಧರಿಸುವುದನ್ನು ನಿಷೇಧಿಸಲು ನಿರ್ಧರಿಸಲಾಗಿದೆ.

ಈ ಹಿಂದೆ ಶ್ರೀಲಂಕಾದ ಮುಸ್ಲಿಂ ಮಹಿಳೆಯರು ಮುಖ ಮುಚ್ಚುವಂತೆ ಬುರ್ಖಾ ಧರಿಸಿರುವುದನ್ನು ನಾವು ನೋಡಿಲ್ಲ, ಆದರೆ ದೇಶದಲ್ಲಿ ಮೂಲಭೂತವಾದ ಹೆಚ್ಚುತ್ತಿರುವಂತೆ ಸಂಪೂರ್ಣ ಮುಖ ಮುಚ್ಚುವಂತೆ ಬುರ್ಖಾ ಧರಿಸಲಾಗುತ್ತಿದೆ. ಹೀಗಾಗಿ ಇದನ್ನು ನಿಷೇಧಿಸುವುದು ಅನಿವಾರ್ಯವಾಗಿದೆ.

2019ರಲ್ಲಿ ಚರ್ಚ್‌ ಮೇಲೆ ನಡೆದ ದಾಳಿಯಲ್ಲಿ 250 ಶ್ರೀಲಂಕಾ ಪ್ರಜೆಗಳು ಮೃತಪಟ್ಟಿದ್ದರು, ಆಗಲೇ ಶ್ರೀಲಂಕಾದಲ್ಲಿ ತಾತ್ಕಾಲಿಕವಾಗಿ ಬುರ್ಖಾ ಧರಿಸುವುದನ್ನು ನಿಷೇಧಿಸಲಾಗಿತ್ತು. ಸಾವಿರಾರು ಇಸ್ಲಾಮಿಕ್ ಸಂಸ್ಥೆಗಳನ್ನು ಮುಚ್ಚಿ ಎಲ್ಲರೂ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪಾಲಿಸುವುದನ್ನು  ಕಡ್ಡಾಯಗೊಳಿಸಲಾಗುತ್ತಿದೆ.