Sunday, 13th October 2024

ಪ್ರಜಾಪ್ರಭುತ್ವಕ್ಕೆ ನೆಲೆಯಿಲ್ಲ, ಷರಿಯಾ ಕಾನೂನಿನ ಆಳ್ವಿಕೆ ಅಂತಿಮ: ವಹೀದುಲ್ಲಾ ಹಶಿಮಿ

ಕಾಬೂಲ್: ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿರುವ ತಾಲಿಬಾನ್ ಆಡಳಿತದಲ್ಲಿ ಷರಿಯಾ ಕಾನೂನಿನ ಆಳ್ವಿಕೆ ಕಾಣಲಿವೆ.

ತಾಲಿಬಾನ್ ಸಂಘಟನೆಯ ವಹೀದುಲ್ಲಾ ಹಶಿಮಿ ಮಾತನಾಡಿ, ಯಾವ ರೀತಿಯ ರಾಜಕೀಯ ವ್ಯವಸ್ಥೆ ಅಫ್ಘಾನಿ ಸ್ತಾನದಲ್ಲಿ ತರಬೇಕೆಂದು ಚರ್ಚೆ ಸಾಧ್ಯತೆ ಇಲ್ಲ, ಷರಿಯಾ ಕಾನೂನು ಬರಲಿದೆ ಅಷ್ಟೇ. ಪ್ರಜಾಪ್ರಭುತ್ವ ಎಂಬುದು ನಮ್ಮ ದೇಶದಲ್ಲಿ ನೆಲೆಯೂರಲು ಸಾಧ್ಯವಿಲ್ಲ. ಆಡಳಿತದ ಸಂಬಂಧ ಮುಂದಿನ ದಿನಗಳಲ್ಲಿ ತಾಲಿಬಾನ್ ನಾಯಕತ್ವ ಸಭೆ ನಡೆಸಿ ತೀರ್ಮಾನಕ್ಕೆ ಬರಲಿದೆ” ಎಂದು ತಿಳಿಸಿದ್ದಾನೆ.

ತಾಲಿಬಾನ್‌ನ ಉನ್ನತ ಸಮಿತಿಯ ಮುಖ್ಯಸ್ಥನಾಗಿ ಮುಲ್ಲಾ ಹೈಬಾತುಲ್ಲಾ ಅಖುಂಜ಼ಾದಾ ಇರಲಿದ್ದು, ಈತನ ನೇತೃತ್ವದಲ್ಲಿ ಅಫ್ಘಾನಿಸ್ತಾನದ ಆಡಳಿತದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. 1996-2001ರ ನಡುವೆ ಇದೇ ರೀತಿ ತಾಲಿಬಾನ್ ಸಮಿತಿ ತೆಗೆದುಕೊಳ್ಳುವ ಎಲ್ಲಾ ನಿರ್ಣಯಗಳ ಮೇಲೆ ಮುಲ್ಲಾ ಓಮರ್‌ನ ಮುದ್ರೆ ಇರುತ್ತಿತ್ತು.

ಇದುವರೆಗೂ ಅಫ್ಘಾನಿಸ್ತಾನದ ಜನ ಚುನಾಯಿತ ಸರ್ಕಾರದ ಪರವಾಗಿ ಕರ್ತವ್ಯದಲ್ಲಿದ್ದ ಸಶಸ್ತ್ರ ಪಡೆಗಳ ಸೈನಿಕರನ್ನು ತಾಲಿಬಾನ್‌ನ ಹೊಸ ರಾಷ್ಟ್ರೀಯ ಪಡೆಯ ಸಿಬ್ಬಂದಿಯಾಗಿ ಸೇರಿಸಿಕೊಳ್ಳುವ ಸಾಧ್ಯತೆ ಇದೆ.

ತಾಲಿಬಾನ್‌ಗೆ ಅಧಿಕಾರ ಹಸ್ತಾಂತರ ಮಾಡುವ ಸಂಬಂಧ ಸಂಘಟನೆಯ ಪ್ರಮುಖರೊಂದಿಗೆ ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರ್ಜ಼ಾಯ್ ಹಾಗೂ ಮತ್ತೊಬ್ಬ ನಾಯಕ ಅಬ್ದುಲ್ಲಾ ಅಬ್ದುಲ್ಲಾ ಮಾತುಕತೆಯಲ್ಲಿದ್ದಾರೆ.