India At UN: "ನಮಗೆ ಲೆಕ್ಚರ್ ಕೊಡುವ ಯೋಗ್ಯತೆ ನಿಮಗಿಲ್ಲ"- ಕೆಣಕಿದ ಪಾಕ್‌ಗೆ ಭಾರತ ತಿರುಗೇಟು
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ 58 ನೇ ಅಧಿವೇಶನದ ಏಳನೇ ಸಭೆಯಲ್ಲಿ ಭಾರತ ಪಾಕಿಸ್ತಾನಕ್ಕೆ ತಕ್ಕ ತಿರುಗೇಟು ನೀಡಿದೆ. ಪಾಕಿಸ್ತಾನ ಒಂದು ವಿಫಲ ರಾಷ್ಟ್ರ, ಪಾಕಿಸ್ತಾನ ಬೇರೆ ದೇಶದವರು ನೀಡಿದ ಅನುದಾನದ ಮೇಲೆ ಅವಲಂಬಿತವಾಗಿದೆ ಎಂದು ಭಾರತದ ಖಾಯಂ ರಾಯಭಾರಿ ಕ್ಷಿತಿಜ್ ತ್ಯಾಗಿ ಆರೋಪಿಸಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಭಾರತದ ಪ್ರತಿನಿಧಿ

ಜಿನೀವಾ: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ (UNHRC)
58 ನೇ ಅಧಿವೇಶನದ ಏಳನೇ ಸಭೆಯಲ್ಲಿ ಭಾರತ (India At UN) ಪಾಕಿಸ್ತಾನ(Pakistan)ಕ್ಕೆ ಬಲವಾದ ಪ್ರತ್ಯುತ್ತರ ನೀಡಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ವಿಷಯದ ಕುರಿತು ಪಾಕಿಸ್ತಾನ ಮಾಡುತ್ತಿರುವ ಆರೋಪಗಳನ್ನು ಭಾರತ ನಿರಾಕರಿಸಿದೆ. ಪಾಕಿಸ್ತಾನ ಒಂದು ವಿಫಲ ರಾಷ್ಟ್ರ, ಪಾಕಿಸ್ತಾನ ಬೇರೆ ದೇಶದವರು ನೀಡಿದ ಅನುದಾನದ ಮೇಲೆ ಅವಲಂಬಿತವಾಗಿದೆ ಎಂದು ಭಾರತದ ಖಾಯಂ ರಾಯಭಾರಿ ಕ್ಷಿತಿಜ್ ತ್ಯಾಗಿ ಆರೋಪಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಪಾಕಿಸ್ತಾನದ ಕಾನೂನು ಸಚಿವ ಅಜಮ್ ನಜೀರ್ ತರಾರ್ ಅವರ ಆರೋಪಗಳಿಗೆ ಪ್ರತಿಕ್ರಿಯೆಯಾಗಿ ತ್ಯಾಗಿ ಅವರು ಖಡಕ್ ಟಾಂಗ್ ಕೊಟ್ಟಿದ್ದಾರೆ.
ಪಾಕಿಸ್ತಾನ ಸರ್ಕಾರವು ಮಿಲಿಟರಿಯ ಆಜ್ಞೆಯಂತೆ ವರ್ತಿಸುತ್ತಿದೆ. ಭಾರತದ ವಿರುದ್ಧ ಸುಖಾ ಸುಮ್ಮನೆ ಆರೋಪ ಮಾಡುವುದನ್ನು ನಿಲ್ಲಿಸಿ ನಿಮ್ಮ ದೇಶದ ಜನರಿಗೆ ಉತ್ತಮ ಆಡಳಿತ ನೀಡಿ ಎಂದು ತ್ಯಾಗಿ ಅವರು ಮಾತಿನ ಚಾಟಿ ಬೀಸಿದ್ದಾರೆ. ಜಿನೀವಾದಲ್ಲಿ ನಡೆದ ಮಾನವ ಹಕ್ಕುಗಳ ಮಂಡಳಿಯ ಅಧಿವೇಶನದಲ್ಲಿ ಅವರು ಮಾತನಾಡಿದ್ದಾರೆ. ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ಅಲ್ಪ ಸಂಖ್ಯಾತರ ಮೇಲಿನ ಕಿರುಕುಳ ಸೇರಿದಂತೆ ಪ್ರಜಾಪ್ರಭುತ್ವ ಮೌಲ್ಯಗಳನ್ನು ಪಾಲಿಸದ ಪಾಕಿಸ್ತಾನವು ಭಾರತಕ್ಕೆ ಬುದ್ದಿವಾದ ಹೇಳುವ ಮಟ್ಟದಲ್ಲಿಲ್ಲ. ಭಾರತ ಪ್ರಜಾಪ್ರಭುತ್ವ ಪ್ರಗತಿ ಮತ್ತು ತನ್ನ ಜನರ ಮೇಲಿನ ಗೌರವದ ಮೇಲೆ ಕೇಂದ್ರೀಕರಿಸುತ್ತದೆ. ಪಾಕಿಸ್ತಾನ ನಮ್ಮ ವಿರುದ್ಧ ಆರೋಪ ಮಾಡುವುದನ್ನು ಬಿಟ್ಟು ತಮ್ಮ ಅಭಿವೃದ್ದಿಯತ್ತ ಗಮನಹರಿಸಬೇಕು ಎಂದು ಅವರು ಹೇಳಿದ್ದಾರೆ.
#WATCH | Geneva: At the 7th Meeting - 58th Session of Human Rights Council, Indian Diplomat Kshitij Tyagi says, "India is exercising its right of reply in response to the baseless and malicious references made by Pakistan. It is regrettable to see Pakistan's so-called leaders and… pic.twitter.com/7Bg5j8jZJX
— ANI (@ANI) February 26, 2025
ಈ ಸುದ್ದಿಯನ್ನೂ ಓದಿ: Shehbaz Sharif : ಶಾಂತಿ ಮಂತ್ರ ಪಠಿಸಿದ ಪಾಕಿಸ್ತಾನ- ಭಾರತದ ಜೊತೆ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂದ ಪಾಕ್ ಪ್ರಧಾನಿ
ಪಾಕಿಸ್ತಾನ ತನ್ನ ದೇಶೀಯ ಬಿಕ್ಕಟ್ಟುಗಳನ್ನು ಪರಿಹರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಆದರೂ ಅವರು ತಮ್ಮ ಅಸಂಬದ್ಧ ಮತ್ತು ಬೇಜವಾಬ್ದಾರಿ ಮನೋಭಾವವನ್ನು ಬಿಡುತ್ತಿಲ್ಲ. ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಭಾರತದ ಅವಿಭಾಜ್ಯ ಅಂಗಗಳಾಗಿವೆ ಮತ್ತು ಹಾಗೆಯೇ ಉಳಿಯುತ್ತವೆ ಎಂದು ತ್ಯಾಗಿ ಪುನರುಚ್ಚರಿಸಿದರು. ದಶಕಗಳಿಂದ ಪಾಕಿಸ್ತಾನಿ ಭಯೋತ್ಪಾದನೆಯಿಂದ ಪ್ರಭಾವಿತವಾಗಿರುವ ಆ ಪ್ರದೇಶದವನ್ನು ಸಾಮಾನ್ಯ ಸ್ಥಿತಿಗೆ ತರಲು ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಅಲ್ಪಸಂಖ್ಯಾತರ ಮೇಲಿನ ಕಿರುಕುಳ, ರಾಜಕೀಯ ಭಿನ್ನಾಭಿಪ್ರಾಯ ಮತ್ತು ಅಂತರರಾಷ್ಟ್ರೀಯವಾಗಿ ಗುರುತಿಸಿಕೊಂಡಿರುವ ಭಯೋತ್ಪಾದಕರಿಗೆ ಆಶ್ರಯ ನೀಡುವಲ್ಲಿ ಪಾಕಿಸ್ತಾನವು ವಿಶೇಷ ದಾಖಲೆಯನ್ನು ಹೊಂದಿದೆ. ಮಾನವ ಹಕ್ಕುಗಳು ಅಥವಾ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಲು ಪಾಕಿಸ್ತಾನಕ್ಕೆ ಯಾವುದೇ ಹಕ್ಕಿಲ್ಲ ಎಂದು ಅವರು ಹೇಳಿದ್ದಾರೆ.