Wednesday, 11th December 2024

ವಾರ್ಷಿಕ ಮಿಲಿಟರಿ ಪರೇಡ್‌ ನಡೆಸದಿರಲು ಪಾಕ್ ಸರ್ಕಾರ ನಿರ್ಧಾರ

ಇಸ್ಲಾಮಾಬಾದ್:‌ ವಾರ್ಷಿಕ ಮಿಲಿಟರಿ ಪರೇಡ್‌ ಅನ್ನೂ ನಡೆಸದಿರಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ.

ಮಾರ್ಚ್‌ 23ರಂದು ಸಾಮಾನ್ಯವಾಗಿ ಮಿಲಿಟರಿ ಪರೇಡ್‌ ನಡೆಯುತ್ತದೆ. ಅದಕ್ಕೆ ಅದರದ್ದೇ ಐತಿಹಾಸಿಕ ಕಾರಣವೂ ಇದೆ. ಏಕೆಂದರೆ ಆ ದಿವನ್ನು ಪಾಕಿಸ್ತಾನ ದಿನ ಎಂದು ಆಚರಿಸಲಾಗುತ್ತದೆ. ಪಾಕಿಸ್ತಾನ ಇಸ್ಲಾಮಿಕ್‌ ರಿಪಬ್ಲಿಕ್‌ ಪಾಕಿಸ್ತಾನವಾಗಿ ಹೊರಹೊಮ್ಮಿದ ದಿನವಿದು. ಇದಕ್ಕೂ ಹಿಂದೆ ಮುಸ್ಲೀಂ ಲೀಗ್‌ ಪ್ರತ್ಯೇಕ ದೇಶ ಪಾಕಿಸ್ತಾನಕ್ಕಾಗಿ ಲಾಹೋರ್‌ ನಿರ್ಣಯ ಅಂಗೀಕರಿಸಿದ ದಿನವೂ ಮಾರ್ಚ್‌ 23 ಆಗಿದೆ.

ಪ್ರತಿ ವರ್ಷ ಮಾರ್ಚ್‌ 23 ರಂದು ಪಾಕಿಸ್ತಾನ ತನ್ನ ಸೇನಾ ಶಕ್ತಿಯನ್ನು ಜಗತ್ತಿಗೆ ಸಾರಲು ಮಿಲಿಟರಿ ಪರೇಡ್‌ ನಡೆಸುತ್ತಿತ್ತು. ಆದರೆ ಈ ವರ್ಷ ಹಣಕಾಸು ಕೊರತೆಯಿಂದಾಗಿ ಪರೇಡ್‌ ನಡೆಯುತ್ತಿಲ್ಲ.

ಪಾಕಿಸ್ತಾನ ಈಗಾಗಲೇ ದಿವಾಳಿಯಾಗಿದೆ ಎಂದು ರಕ್ಷಣಾ ಸಚಿವ ಕ್ವಾಜಾ ಆಸಿಫ್‌ ಅವರು ಒಪ್ಪಿಕೊಂಡಿದ್ದಾರೆ. ನಾವು ಈಗ ದಿವಾಳಿಯಾಗಿರುವ ದೇಶದಲ್ಲಿ ಜೀವಿಸುತ್ತಿದ್ದೇವೆ. ಇದಕ್ಕೆ ಪ್ರತಿಯೊಬ್ಬರೂ ಹೊಣೆಯಾಗಿದ್ದಾರೆ. ರಾಜಕೀಯ, ಆಡಳಿತ ವ್ಯವಸ್ಥೆ ಮತ್ತು ಸಮಾಜ ಇದರ ಜವಾಬ್ದಾರಿ ಹೊತ್ತುಕೊಳ್ಳಬೇಕಾಗಿದೆ ಎಂದು ಪಾಕ್‌ ರಕ್ಷಣಾ ಸಚಿವರು ಹೇಳಿದ್ದಾರೆ. ಪಾಕಿಸ್ತಾನದ ಸಮಸ್ಯೆಗೆ ಪಾಕಿಸ್ತಾನವೇ ಪರಿಹಾರ ಕಂಡುಕೊಳ್ಳಬೇಕು. ಇದು ಐಎಂಎಫ್‌ನಿಂದ ಸಿಗದು ಎಂದು ಪಿಎಂಎಲ್‌-ಎನ್‌ ನಾಯಕ ಕ್ವಾಜಾ ಆಸಿಫ್‌ ಹೇಳಿದ್ದಾರೆ.