ವಾಷಿಂಗ್ಟನ್: ಪೌಲ್ ಅಲೆಕ್ಸಾಂಡರ್ ಎಂಬಾತ ಪಾರ್ಶ್ವವಾಯು ಸಮಸ್ಯೆಯಿಂದ ಉಸಿರಾಡಲು ಕಷ್ಟಪಡುತ್ತಿದ್ದು, ವೈದ್ಯರ ಸಲಹೆಯಂತೆ ಉಸಿರಾಡಲು ಅಳವಡಿಸಿದ ಲೋಹದ ಸಿಲಿಂಡರ್ ಒಳಗೇ ಜೀವನ ಪೂರ್ತಿ ಕಳೆದಿದ್ದು 78ನೇ ವರ್ಷದಲ್ಲಿ ನಿಧನರಾಗಿದ್ದಾರೆ.
ಸ್ವತಂತ್ರವಾಗಿ ಓಡಾಡಲು ಸಾಧ್ಯವಾಗದೇ ಬಾಲ್ಯದಲ್ಲೇ ಲೋಹದ ಸಿಲಿಂಡರ್ ಒಳಗೆ ದೇಹ ತೂರಿಸಿಕೊಂಡೇ ಬದುಕಿದ ಪೌಲ್, ಕಾನೂನು ಪದವಿ ಪಡೆದವರು. ಲೋಹದ ಸಿಲಿಂಡರ್ ಒಳಗೆ ತೂರಿಕೊಂಡೇ ವಕೀಲಿ ವೃತ್ತಿಯನ್ನೂ ನಡೆಸಿದರು.
‘ಲೋಹದ ಸಿಲಿಂಡರ್ ಹೊಂದಿದ ಮಾತ್ರಕ್ಕೆ ಆತ ವಿಶೇಷ ವ್ಯಕ್ತಿಯಾಗಿರಲಿಲ್ಲ. ಇತರರಿಗೆ ಇರುವಂತೆಯೇ ನನಗೂ ಆತ ಸಹಜ ಸಹೋದರನಂತೆಯೇ ಇದ್ದ. ನಾವು ಜಗಳವಾಡಿದ್ದೇವೆ, ಬಡಿದಾಡಿಕೊಂಡಿದ್ದೇವೆ. ಪಾರ್ಟಿಗಳಿಗೂ ಹೋಗಿದ್ದೇವೆ. ಆತನ ಇತರರಂತೆ ಸಾಮಾನ್ಯನಲ್ಲ ಎಂಬ ಕಲ್ಪನೆಯೂ ನನಗೆ ಎಂದಿಗೂ ಬಾರದಷ್ಟು ಸಹಜವಾಗಿ ಆತ ಬದುಕಿದ್ದ’ ಎಂದು ಪೌಲ್ ಸೋದರ ಫಿಲಿಪ್ ನೆನೆದಿದ್ದಾರೆ.
ಇತ್ತೀಚಿನ ಕೆಲ ದಿನಗಳಲ್ಲಿ ಆತನ ಆರೋಗ್ಯ ಹದಗೆಡುತ್ತಿತ್ತು. ಅಂತಿಮ ಕಾಲದಲ್ಲಿ ಆತ ನನ್ನೊಂದಿಗೇ ಇದ್ದ. ಇಬ್ಬರೂ ಜತೆಗೂಡಿ ಪಿಂಟ್ ಹಾಗೂ ಐಸ್ ಕ್ರೀಂ ಸವಿದಿದ್ದೇವೆ. ಆತನೊಂದಿಗೆ ದಿನಗಳನ್ನು ಕಳೆದಿದ್ದೇ ನನ್ನ ಬದುಕಿನ ಸುಂದರ ಕ್ಷಣ’ ಎಂದಿದ್ದಾರೆ.
ಪೌಲ್ ದೇಹದ ಸುತ್ತ ಹಾಕಲಾಗಿದ್ದ ಲೋಹದ ಸಿಲಿಂಡರ್ ಅವರಿಗಿದ್ದ ಶ್ವಾಸಕೋಶದ ಸಮಸ್ಯೆಗೆ ಸ್ವಲ್ಪ ಮಟ್ಟಿನ ನೆರವು ನೀಡುತ್ತಿತ್ತು. ತೆಗೆದುಕೊಂಡ ಉಸಿರು, ಅವರ ಪುಪ್ಪಸವನ್ನು ಇನ್ನಷ್ಟು ಉಬ್ಬಿಸುವಂತೆ ಮಾಡುತ್ತಿತ್ತು. ಇದರಿಂದ ಅವರ ಶ್ವಾಸಕೋಶದೊಳಗೆ ಗಾಳಿ ಸೇರುತ್ತಿತ್ತು. ಈ ಪ್ರಕ್ರಿಯೆ ನಡೆಯುತ್ತಲೇ ಇತ್ತು.
1950ರ ನಂತರದಲ್ಲಿ ಪೋಲಿಯೊಗೆ ಲಸಿಕೆ ಕಂಡುಹಿಡಿಯಲಾಯಿತು. ನಂತರವಷ್ಟೇ ಪೋಲಿಯೊ ನಿರ್ಮೂಲನೆಗೆ ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾಯಿತು. ಅಲ್ಲಿಯವರೆಗೂ ಇಂಥ ಸಮಸ್ಯೆ ಎದುರಿಸುವವರಿಗೆ ಲೋಹದ ಶ್ವಾಸಕೋಶವನ್ನೇ ಅಳವಡಿಸಲಾಗುತ್ತಿತ್ತು.
1960ರಲ್ಲೇ ಲೋಹದ ಸಿಲಿಂಡರ್ ಮರೆಯಾಗಿ, ವೆಂಟಿಲೇಟರ್‌ಗಳು ಮಾರುಕಟ್ಟೆಗೆ ಬಂದಿದ್ದವು. ಬಾಲ್ಯದಿಂದ ಬದುಕಿನ ಬಹುಪಾಲು ಲೋಹದ ಸಿಲಿಂಡರ್‌ಗೆ ಒಗ್ಗಿಕೊಂಡಿದ್ದರಿಂದ, ಅದರಿಂದ ಹೊರ ಬರಲು ಪೌಲ್ ನಿರಾಕರಿಸಿದರು.
ಅತಿ ದೀರ್ಘಕಾಲದವರೆಗೆ ಲೋಹದ ಶ್ವಾಸಕೋಶ ಹೊಂದಿದ್ದಕ್ಕಾಗಿ ಪೌಲ್ ಹೆಸರು ಗಿನ್ನಿಸ್ ವಿಶ್ವ ದಾಖಲೆಯೂ ಆಗಿ ದಾಖಲಾಗಿದೆ.