Friday, 13th December 2024

ಪಾಕಿಸ್ತಾನದಲ್ಲಿ ಲೀಟರ್ ಪೆಟ್ರೋಲ್ ದರ 233.89ರೂ.

#Petrol

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಒಂದು ಲೀಟರ್ ಪೆಟ್ರೋಲ್ ದರದಲ್ಲಿ 24 ರೂಪಾಯಿ ಏರಿಕೆಯಾಗಿದೆ. ಈ ಸಂದರ್ಭದಲ್ಲೇ ಡೀಸೆಲ್ ದರದಲ್ಲಿ 16.31 ರೂಪಾಯಿ ಏರಿಕೆಯಾಗಿದೆ.

ಪರಿಷ್ಕರಣೆಯ ಬಳಿಕ ದೇಶದಲ್ಲಿ ಒಂದು ಲೀಟರ್ ಪೆಟ್ರೋಲ್ ದರವು ರೂಪಾಯಿ 233.89ಕ್ಕೆ ಹೆಚ್ಚಳ ಕಂಡಿದೆ. ಡೀಸೆಲ್ ದರವು ರೂಪಾಯಿ 263.31ಕ್ಕೆ ಹೆಚ್ಚಳವಾಗಿದೆ. ಪಾಕಿಸ್ತಾನದಲ್ಲಿ ಧಾನ್ಯ, ಸಕ್ಕರೆ, ತರಕಾರಿ, ಹಣ್ಣುಗಳ ಬೆಲೆಯು ಗಗನಕ್ಕೆ ಏರುತ್ತಿದೆ.

ಪಾಕಿಸ್ತಾನದ ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್, “ಜೂನ್ 15ರ ಮಧ್ಯರಾತ್ರಿಯಿಂದ ಹೊಸ ದರವು ಜಾರಿಗೆ ಬಂದಿದೆ.  ಇನ್ನೊಂದೆಡೆ ಸೀಮೆಎಣ್ಣೆ ಬೆಲೆ 29.49 ರೂಪಾಯಿ ಏರಿಕೆಯಾಗಿ ರೂಪಾಯಿ 211.43ಕ್ಕೆ ತಲುಪಿದೆ. ಕೈಗಾರಿಕೆಗಳಿಗೆ ಬಳಕೆ ಮಾಡಲಾಗುವ ಡೀಸೆಲ್ ಬೆಲೆಯು 207.47 ರೂಪಾಯಿಗೆ ತಲುಪಿದೆ ಎಂದು ಮಾಹಿತಿ ನೀಡಿದ್ದಾರೆ.

ಜನರು ಚಹಾ ಕುಡಿಯುವುದನ್ನು ಕೊಂಚ ಕಡಿಮೆ ಮಾಡುವಂತೆ ನಾಗರಿಕರಿಗೆ ಸರ್ಕಾರವು ಮನವಿ ಮಾಡಿದೆ. ಪಾಕಿಸ್ತಾನ ಸದ್ಯ ಹೊರ ದೇಶದಿಂದ ಚಹಾ ವನ್ನು ಆಮದು ಮಾಡಿಕೊಳ್ಳಬೇಕಾಗಿದೆ. ಜನರು ಚಹಾ ಸೇವನೆ ಕಡಿಮೆ ಮಾಡಿದರೆ ಆಮದು ವೆಚ್ಚ ಕಡಿಮೆಯಾಗಲಿದೆ ಎಂದು ಸರ್ಕಾರ ಹೇಳಿದೆ.

ಆರ್ಥಿಕ ಬಿಕ್ಕಟ್ಟಿನ ನಡುವೆ ಪಾಕಿಸ್ತಾನವು ಸುಮಾರು 41 ವಸ್ತುಗಳ ಮೇಲೆ ಎರಡು ತಿಂಗಳುಗಳ ಕಾಲ ನಿಷೇಧ ಹೇರಿದೆ.