Wednesday, 9th October 2024

ಉಕ್ರೇನ್‌: ರಷ್ಯಾ ಕ್ಷಿಪಣಿ ದಾಳಿ, ಮೃತರ ಸಂಖ್ಯೆ 6ಕ್ಕೆ ಏರಿಕೆ

ಕೀವ್: ಉಕ್ರೇನ್‌ನ ಕ್ರಿವಿ ರಿಹ್ ನಗರದ ಮೇಲೆ ರಷ್ಯಾದ ಸೇನೆ ಸೋಮವಾರ ಕ್ಷಿಪಣಿ ದಾಳಿ ನಡೆಸಿದೆ.

ಘಟನೆಯಲ್ಲಿ ಮೃತರ ಸಂಖ್ಯೆ 6ಕ್ಕೆ ಏರಿದ್ದು, ಕನಿಷ್ಠ 75 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಅಂತಾರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ.

‘ಈ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ಮುಗಿದಿದೆ. ಘಟನೆಯಲ್ಲಿ 6 ಮಂದಿ ಸಾವನ್ನಪ್ಪಿ, 75 ಮಂದಿ ಗಾಯ ಗೊಂಡಿದ್ದಾರೆ’ ಎಂದು ಉಕ್ರೇನಿಯನ್ ಆಂತರಿಕ ವ್ಯವಹಾರಗಳ ಸಚಿವರ ಸಲಹೆಗಾರ ಆಂಟನ್ ಗೆರಾಶ್ಚೆಂಕೊ ಟ್ವೀಟ್ ಮಾಡಿದ್ದಾರೆ.

ವರದಿಗಳ ಪ್ರಕಾರ, ಕ್ರಿವಿ ರಿಹ್‌ ನಗರ ಅಧ್ಯಕ್ಷ ಝೆಲೆನ್‌ಸ್ಕಿ ಅವರ ಹುಟ್ಟೂರು. ಮೃತರಲ್ಲಿ 10 ವರ್ಷದ ಬಾಲಕಿ ಸಹ ಸೇರಿದ್ದಾಳೆ. 230 ಜನರು ಮತ್ತು 57 ವಾಹನ ಗಳನ್ನು ಒಳಗೊಂಡ ರಕ್ಷಣಾ ತಂಡದ ದಾಳಿಯಲ್ಲಿ ಹಾನಿಗೊಳಗಾದ ಎರಡು ಕಟ್ಟಡಗಳಿಂದ ಜನರನ್ನು ರಕ್ಷಿಸುವಲ್ಲಿ ನಿರತವಾಗಿದ್ದವು.

ಮಧ್ಯ ಉಕ್ರೇನಿಯನ್ ನಗರವಾದ ಕ್ರಿವಿ ರಿಹ್‌ನಲ್ಲಿ ರಷ್ಯಾ ಜೋಡಿ ಕ್ಷಿಪಣಿಗಳನ್ನು ಉಡಾಯಿಸಿತು. ಎರಡು ವಸತಿ ಸಮುಚ್ಚಯ ಕಟ್ಟಡಗಳನ್ನು ಗುರಿಯಾಗಿಸಿ ದಾಳಿ ನಡೆಸಿದೆ. ಸಂಕೀರ್ಣವೊಂದರ 4 ಮತ್ತು 9ನೇ ಮಹಡಿಯ ಭಾಗವು ಭಾಗಶಃ ತೀವ್ರ ಹಾನಿಯಾಗಿದೆ. ಅಲ್ಲದೇ, ಯೂನಿವರ್ಸಿಟಿ ಕಟ್ಟಡ ಕೂಡ ಭಾಗಶಃ ಹಾನಿಗೊಂಡಿದೆ ಎಂದು ಉಕ್ರೇನ್‌ನ ಆಂತರಿಕ ವ್ಯವಹಾರಗಳ ಸಚಿವ ಇಹೋರ್ ಕ್ಲೈಮೆಂಕೊ ವಿವರಿಸಿದ್ದಾರೆ.

“ಕ್ರಿವಿ ರಿಹ್‌ನಲ್ಲಿನ ಕ್ಷಿಪಣಿ ದಾಳಿ ರಷ್ಯಾದ ಬಾಂಬ್ ದಾಳಿಯ ಭಾಗವಾಗಿದೆ. ಶತ್ರುಗಳು ನಗರಗಳು, ನಗರ ಕೇಂದ್ರಗಳು ಮತ್ತು ಜನ ವಸತಿ ಪ್ರದೇಶಗಳ ಮೇಲೆ ಮೊಂಡುತನದಿಂದ ದಾಳಿ ಮಾಡುತ್ತಿವೆ” ಎಂದು ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಆರೋಪಿಸಿದ್ದಾರೆ.

ಭಾನುವಾರ ಮಾಸ್ಕೋ ಸೇರಿದಂತೆ ತನ್ನ ದೇಶದ ಪ್ರದೇಶದ ಮೇಲೆ ಡ್ರೋನ್ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಉಕ್ರೇನ್ ಮೇಲೆ ದಾಳಿಯನ್ನು ತೀವ್ರಗೊಳಿಸ ಲಾಗಿದೆ ಎಂದು ಹೇಳಿದ್ದಾರೆ. ಈ ಭಯೋತ್ಪಾದಕ ದಾಳಿಗಳನ್ನು ಬೆಂಬಲಿಸುವುದು ಸೇರಿದಂತೆ ಉಕ್ರೇನಿಯನ್ ಮಿಲಿಟರಿ ಸೌಲಭ್ಯಗಳ ಮೇಲಿನ ದಾಳಿಯ ತೀವ್ರತೆಯನ್ನು ಇನ್ನೂ ಹೆಚ್ಚಿಸಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು ಹೇಳಿದರು.

ಮತ್ತೊಂದೆಡೆ ಉಕ್ರೇನ್‌ನ ಸೇನಾ ಪಡೆ ರಷ್ಯಾ ಭಾಗಶಃ ಆಕ್ರಮಿಸಿಕೊಂಡಿರುವ ಡೊನೆಟ್ಸ್ಕ್‌ ಪ್ರಾಂತ್ಯದ ಮೇಲೆ ದಾಳಿ ನಡೆಸಿದೆ. ಅಲ್ಲಿ ಇಬ್ಬರು ಮೃತಪಟ್ಟಿದ್ದು, 6 ಜನರು ಗಾಯಗೊಂಡಿದ್ದಾರೆ ಎಂದು ರಷ್ಯಾದ ನಾಯಕ ಡೆನಿಸ್‌ ಪುಷಿಲಿನ್‌ ಮಾಹಿತಿ ನೀಡಿದ್ದಾರೆ.