ಲಂಡನ್: ನ್ಯೂಯಾರ್ಕ್ ಮೂಲದ ಸ್ಕಾಟಿಸ್ ಲೇಖಕ ಡೌಗ್ಲಾಸ್ ಸ್ಟುವರ್ಟ್ ತನ್ನ ಆತ್ಮಚರಿತ್ರೆ ಆಧರಿಸಿದ ಚೊಚ್ಚಲ ಕಾದಂಬರಿ ‘ಶಗ್ಗಿ ಬೈನ್’ಗಾಗಿ 2020ನೇ ಸಾಲಿನ ಪ್ರತಿಷ್ಠಿತ ಬುಕರ್ ಪ್ರಶಸ್ತಿ ಗೌರವಕ್ಕೆ ಭಾಜನರಾಗಿದ್ದಾರೆ.
ಇದು 1980ರ ಗ್ಲ್ಯಾಸ್ಕೊದಲ್ಲಿ ನಡೆಯುವ ಪ್ರೇಮ ಮತ್ತು ಮದ್ಯಪಾನ ವಿಷಯಗಳ ಕುರಿತಾದ ಕಥೆಯಾಧಾರಿತ ಕಾದಂಬರಿ. ದುಬೈನ ಭಾರತೀಯ ಮೂಲದ ಲೇಖಕರಿ ಅವ್ನಿ ದೋಷಿ ಅವರ ಚೊಚ್ಚಲ ಕಾದಂಬರಿ ‘ಬರ್ನಟ್ ಶುಗರ್’ ಈ ಪ್ರಶಸ್ತಿಯ ಅಂತಿಮ ಸುತ್ತಿನಲ್ಲಿತ್ತು. 44 ವರ್ಷದ ಸ್ಟುವರ್ಟ್ ಚೊಚ್ಚಲ ಕಾದಂಬರಿಯನ್ನು ಮದ್ಯಪಾನದ ಚಟದಿಂದ ಮೃತಪಟ್ಟ ತನ್ನ ತಾಯಿಗೆ ಅರ್ಪಿಸಿದ್ದಾರೆ.
16ನೇ ವರ್ಷಕ್ಕೆ ತಾಯಿಯನ್ನು ಕಳೆದುಕೊಂಡ ಸ್ಟುವರ್ಟ್, ಮುಂದೆ ಲಂಡನ್‌ನ ರಾಯಲ್ ಕಾಲೇಜ್ ಆಫ್ ಆರ್ಟ್‌ನಿಂದ ಪದವಿ ಪಡೆದು, ಫ್ಯಾಷನ್ ವಿನ್ಯಾಸ ಕ್ಷೇತ್ರದಲ್ಲಿ ವೃತ್ತಿಜೀವನ ಕಂಡುಕೊಳ್ಳಲು ನ್ಯೂಯಾರ್ಕ್‌ಗೆ ತೆರಳಿದರು. ವಸ್ತ್ರವಿನ್ಯಾಸಕರಾಗಿ ಕ್ಯಾಲ್ವಿನ್ ಕ್ಲೈನ್, ರಾಲ್ಫ್ ಲಾರೆನ್ ಮತ್ತು ಗ್ಯಾಪ್ ಸೇರಿದಂತೆ ವಿವಿಧ ಬ್ರಾಂಡ್‌ಗಳಿಗಾಗಿ ಕೆಲಸ ಮಾಡಿದ್ದಾರೆ. ಬಿಡುವಿನ ವೇಳೆ ಯಲ್ಲಿ ಈ ಕಾದಂಬರಿ ರಚಿಸಿದ್ದಾರೆ.
ಸ್ಟುವರ್ಟ್, ‘ಇದನ್ನು ನಂಬಲು ಸಾಧವಾಗುತ್ತಿಲ್ಲ. ಈ ಕಾದಂಬರಿಯ ಕಥೆ ಕಾಲ್ಪನಿಕವಾದರೂ, ಇದನ್ನು ಬರೆಯುತ್ತಾ, ನನ್ನ ಮನಸ್ಸು ತುಂಬಾ ಹಗುರವಾಯಿತು’ ಎಂದು ಹೇಳಿದ್ದಾರೆ.
‘ನಾನೊಬ್ಬ ಲೇಖಕನಾಗಬೇಕೆಂದು ಕನಸು ಕಂಡಿದ್ದೆ. ಈ ಕಾದಂಬರಿ ನನ್ನ ಇಡೀ ನನ್ನ ಬದುಕನ್ನೇ ಬದಲಿಸಿತು’ ಎಂದು ಸ್ಟುವರ್ಟ್ ಹೇಳಿದ್ದಾರೆ. ದುಬೈ ಮೂಲದ ಭಾರತೀಯ ಲೇಖಕಿ ಅವ್ನಿ ದೋಷಿ ಅವರ ಚೊಚ್ಚಲ ಕಾದಂಬರಿ ‘ಬರ್ನಟ್ ಶುಗರ್’, ಈ ಪ್ರಶಸ್ತಿಯ ಅಂತಿಮ ಸುತ್ತಿಗೆ ಆಯ್ಕೆಯಾಗಿತ್ತು. ಕೊನೆಯ ಸುತ್ತಿನಲ್ಲಿ ಆರು ಲೇಖಕರು ಸ್ಪರ್ಧೆಯಲ್ಲಿದ್ದರು.