ವಾಷಿಂಗ್ಟನ್ : ಮಾಲ್ ಒಂದರಲ್ಲಿ ವ್ಯಕ್ತಿಯೋರ್ವ ಗುಂಡಿನ ದಾಳಿ ನಡೆಸಿ ಸುಮಾರು ಎಂಟು ಮಂದಿ ಗಾಯಗೊಂಡ ಘಟನೆ ಅಮೆರಿಕದ ವಿಸ್ಕಾನ್ಸಿನ್ ನಲ್ಲಿ ನಡೆದಿದೆ.
ಗಾಯಗೊಂಡವರನ್ನು ಕೂಡಲೇ ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡಿನ ದಾಳಿ ನಡೆಸಿದ ವ್ಯಕ್ತಿ ನಾಪತ್ತೆಯಾಗಿದ್ದು, ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ವಿಸ್ಕಾನ್ಸಿನ್ ನ ಮೆಲ್ವಾಕಿಯ ಮೇಫಿಲ್ಡ್ ಶಾಪಿಂಗ್ ಮಾಲ್ ನಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಸ್ಟೋರ್ ಒಂದರ ಬಳಿ ಬಂದ ಆಗಂತುಕ ಗುಂಡಿನ ಮಳೆಗರೆದಿದ್ದಾನೆ. ಸುಮಾರು 15 ಸುತ್ತು ಗುಂಡು ಹಾರಿಸಿ ದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ ಎಂದು ವರದಿಗಳು ತಿಳಿಸಿದೆ.
ಗಾಯಗೊಂಡಿರುವ 8 ಮಂದಿಯಲ್ಲಿ 7 ಮಂದಿ ವಯಸ್ಕರಾಗಿದ್ದು, ಮತ್ತೊರ್ವ ಹದಿಹರಿಯದ ಯುವಕನಾಗಿದ್ದಾನೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಶೂಟೌಟ್ ನಲ್ಲಿ ಯಾರೂ ಮೃತಪಟ್ಟಿಲ್ಲ ಎಂದು ಸ್ಥಳೀಯ ಮೇಯರ್ ಡೆನಿಸ್ ಮೆಕ್ ಬ್ರೈಡ್ ಹೇಳಿದ್ದಾರೆ.