Friday, 13th December 2024

ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಸ ಇಂದು ರಾಜೀನಾಮೆ ?

ಕೊಲಂಬೊ: ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಸ ಅವರು ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಗಳಿವೆ ಎನ್ನಲಾಗಿದೆ.

ತೀವ್ರ ಆರ್ಥಿಕ ಬಿಕ್ಕಟ್ಟಿನ ನಿವಾರಣೆಗಾಗಿ ಹೊಸ ಸರ್ಕಾರ ರಚನೆ ಮಾಡುವಂತೆ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ಮೇಲೆ ಒತ್ತಡ ಹೆಚ್ಚುತ್ತಿದೆ.

ಮಹಿಂದಾ ಅವರು ರಾಜೀನಾಮೆ ನೀಡಬೇಕು ಎಂದು ಒಂದೆಡೆ ಸ್ವಪಕ್ಷೀಯ (ಎಸ್‌ಎಲ್‌ ಪಿಪಿ) ನಾಯಕರೇ ಒತ್ತಡ ಹೇರಿದ್ದಾರೆ. ಆದರೆ, ಬೆಂಬಲಿಗರು ನಾಯಕ ರಾಜೀನಾಮೆ ನೀಡಬಾರದು ಎಂದು ಆಗ್ರಹಿಸುತ್ತಿದ್ದಾರೆ.

ಮಹಿಂದಾ ರಾಜಪಕ್ಸ ಅವರ ತಮ್ಮ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ಕೂಡ ರಾಜೀನಾಮೆ ಬಯಸಿದ್ದಾರಾದರೂ, ಈ ಬಗ್ಗೆ ನೇರವಾಗಿ ಅಣ್ಣನಿಗೆ ತಿಳಿಸಿಲ್ಲ. ಆದರೆ, ಪ್ರಸ್ತುತ ಆರ್ಥಿಕ ಪರಿಸ್ಥಿತಿಯ ನಿವಾರಣೆಗಾಗಿ ‘ಐಕ್ಯತಾ ಸರ್ಕಾರ’ ರಚಿಸುವ ಸಲುವಾಗಿ ಅಣ್ಣನ ರಾಜೀನಾಮೆಯನ್ನು ಬಯಸಿರುವುದಾಗಿ ಮೂಲಗಳು ತಿಳಿಸಿವೆ.

ರಾಜೀನಾಮೆ ಒತ್ತಡಗಳ ಹೊರತಾಗಿಯೂ, ರಾಜಪಕ್ಸ ಸೋದರರು ಅಧಿಕಾರ ತೊರೆ ಯಲು ನಿರಾಕರಿಸಿದ್ದಾರೆ.

ರಾಜಪಕ್ಸ ಕುಟುಂಬದ ಹಿರಿಯಣ್ಣ, ಪ್ರಧಾನಿ ಮಹಿಂದಾ ರಾಜಪಕ್ಸ ಅವರು ಭಾನುವಾರ ಧಾರ್ಮಿಕ ಸ್ಥಳ ಅನುರಾಧಪುರಕ್ಕೆ ತೆರಳಿದ್ದಾಗ ಅಲ್ಲಿ ಸಾರ್ವಜನಿಕರಿಂದ ಪ್ರತಿಭಟನೆ ಎದುರಿಸಬೇಕಾಯಿತು. ಇಂಧನ, ಅಡುಗೆ ಅನಿಲಕ್ಕಾಗಿ ಜನ ಆಗ್ರಹಿಸಿದರು. ವಿದ್ಯುತ್ ಕಡಿತ ನಿಲ್ಲಿಸುವಂತೆ ಒತ್ತಾಯಿಸಿ ಘೇರಾವ್‌ ಹಾಕಿದರು.

ಇಡೀ ರಾಜಪಕ್ಸ ಕುಟುಂಬ ರಾಜಕೀಯ ತ್ಯಜಿಸಬೇಕು ಮತ್ತು ದೇಶದಿಂದ ಲೂಟಿ ಮಾಡಿರುವ ಆಸ್ತಿಯನ್ನು ಹಿಂದಿರುಗಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.