Tuesday, 10th December 2024

SriLankan Airlines: ರಾಮಾಯಣಕ್ಕೆ ಸಂಬಂಧಿಸಿದ ವಿಡಿಯೊ ಹಂಚಿಕೊಂಡ ಶ್ರೀಲಂಕಾ ಏರ್‌ಲೈನ್ಸ್‌; ನೆಟ್ಟಿಗರಿಂದ ಮೆಚ್ಚುಗೆ

SriLankan Airlines

ಕೊಲಂಬೋ: ಹಿಂದೂ ಮಹಾಕಾವ್ಯಗಳು ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿವೆ . ಅದರಲ್ಲಿಯೂ ರಾಮಾಯಣಕ್ಕೆ (Ramayana) ಸಂಬಂಧಿಸಿದ ಕತೆಯನ್ನು ಪ್ರಪಂಚದ ಹಲವು ದೇಶಗಳಲ್ಲಿ ಹೇಳಲಾಗುತ್ತದೆ. ಭಾರತದಂತೆ ಶ್ರೀಲಂಕಾದಲ್ಲಿಯೂ ರಾಮಾಯಣಕ್ಕೆ ಸಂಬಂಧಿಸಿದ ಹಲವು ಪುರಾವೆಗಳು ಪತ್ತೆಯಾಗಿವೆ. ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿನ ರಾವಣನ ಅರಮನೆ, ಸ್ನಾನಗೃಹ ಸೇರಿದಂತೆ ಕೋಟೆ ಕೊತ್ತಲುಗಳು ರಾಮಾಯಣ ನಡೆದಿದೆ ಎನ್ನುವುದಕ್ಕೆ ಸಾಕ್ಷಿಯಾಗಿ ನಿಂತಿವೆ. ಶ್ರೀಲಂಕಾದ ವೈಭವ ಹಾಗೂ ಪೌರಾಣಿಕ ಅನುಭವವನ್ನು ಪಡೆಯಲು ಶ್ರೀಲಂಕಾ ಏರ್‌ಲೈನ್ಸ್‌ (SriLankan Airlines) ಇದೀಗ ತಮ್ಮ ದೇಶದ ಪ್ರೇಕ್ಷಣೀಯ ಸ್ಥಳಗಳ ವಿಡಿಯೊವನ್ನು ಬಿಡುಗಡೆ ಮಾಡಿದೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ (Viral Video).

ಅಜ್ಜಿಯೊಬ್ಬರು ತಮ್ಮ ಮೊಮ್ಮಗನಿಗೆ ರಾಮಾಯಣದ ಚಿತ್ರಕಥೆಯ ಪುಸ್ತಕವನ್ನು ಓದಿ ಹೇಳುತ್ತಾರೆ. ರಾಮ, ರಾವಣ, ಸೀತಾಪಹರಣದ ಬಗ್ಗೆ ವಿವರಿಸುವ ಅಜ್ಜಿ ರಾವಣ ಭೂಮಿಯಲ್ಲಿ ಇರುವ ಸ್ಥಳಗಳ ಬಗ್ಗೆ ಮೊಮ್ಮಗನಿಗೆ ತಿಳುಸುತ್ತಾರೆ.  ಭಾರತ ಮತ್ತು ವಿದೇಶಗಳಿಂದ ಪ್ರವಾಸಿಗರನ್ನು ಆಕರ್ಷಿಸುವ ಗುರಿಯನ್ನು ಹೊಂದಿರುವ ಈ ಜಾಹೀರಾತು ವಿಡಿಯೊ, ರಾಮಾಯಣದ ದೃಶ್ಯಗಳನ್ನು ವಿವರಿಸುತ್ತದೆ ಮತ್ತು ಕಥೆಯಲ್ಲಿ ವಿವರಿಸಲಾದ ನೈಜ ಸ್ಥಳಗಳ ದೃಶ್ಯವನ್ನು ತೋರಿಸಿದೆ.

ವಿಡಿಯೊ ಹಂಚಿಕೊಂಡ ಶ್ರೀಲಂಕಾ ಏರ್‌ಲೈನ್ಸ್‌ ಶ್ರೀಲಂಕಾದ ಪ್ರಾಚೀನ ಸ್ಥಳಗಳಿಗೆ ಭೇಟಿ ನೀಡುವಂತೆ ಪ್ರವಾಸಿಗರನ್ನು ಆಹ್ವಾನಿಸಿದೆ. ರಾಮಾಯಣ ನಡೆದ ಭೂಮಿಯಲ್ಲಿ ಓಡಾಡುವಂತೆ ತಿಳಿಸಿದೆ. ʼʼನಿಮ್ಮ ರಜಾ ದಿನಗಳಲ್ಲಿ ಶ್ರೀಲಂಕಾದ ಪೌರಾಣಿಕ ಭೂ ದೃಶ್ಯಗಳ ಅನುಭವವನ್ನು ಪಡೆಯಿರಿʼʼ ಎಂದು ಹೇಳಿದೆ. ʼʼಶ್ರೀಲಂಕಾದ ಪೌರಾಣಿಕ ಸ್ಥಳಗಳು ಮಾಹಿತಿಯ ಜತೆಗೆ ನಿಮಗೆ ಅದ್ಬುತ ಅನುಭವವನ್ನು ನೀಡುತ್ತದೆʼʼ ಎಂದು ಬರೆದುಕೊಂಡಿದೆ.

ಇದನ್ನೂ ಓದಿ : Anura Kumara Dissanayake: ಶ್ರೀಲಂಕಾ ಸಂಸತ್ತು ವಿಸರ್ಜಿಸಿದ ನೂತನ ಅಧ್ಯಕ್ಷ ಅನುರಾ ಕುಮಾರಾ ದಿಸ್ಸಾನಾಯಕೆ; ನವೆಂಬರ್‌ನಲ್ಲಿ ಚುನಾವಣೆ

ವಿಡಿಯೊ ವೈರಲ್ ಆಗಿದ್ದು, ನೆಟ್ಟಿಗರ ಮನ ಗೆದ್ದಿದೆ. ರಾಮಾಯಣ ಸಂಬಂಧಿತ ಸ್ಥಳಗಳನ್ನು ನೋಡಲು ನಿಜವಾಗಿಯೂ ನಾವು ಕಾತುರರಾಗಿದ್ದೇವೆ ಎಂದು ನೆಟ್ಟಿಗರು ಹೇಳಿದ್ದಾರೆ.