Thursday, 3rd October 2024

ಬ್ರಿಟನ್: ಗೃಹ ಕಾರ್ಯದರ್ಶಿ ಹುದ್ದೆಗೆ ಸುಯೆಲ್ಲಾ ಬ್ರೆವೆರ್‍ಮನ್…?

ಲಂಡನ್: ಲಿಝ್ ಟ್ರಸ್ ಅವರನ್ನು ಮುಂದಿನ ಬ್ರಿಟನ್ ಪ್ರಧಾನಿಯಾಗಿ ಘೋಷಣೆ ಮಾಡಿದ ತಕ್ಷಣ ಗೃಹ ಕಾರ್ಯದರ್ಶಿ ಹುದ್ದೆಗೆ ಭಾರತೀಯ ಮೂಲದ ಸಂಸದೆ ಸುಯೆಲ್ಲಾ ಬ್ರೆವೆರ್‍ಮನ್ ನೇಮಕಗೊಳ್ಳುವ ನಿರೀಕ್ಷೆ ಇದೆ.

ಗೃಹ ಕಾರ್ಯದರ್ಶಿ ಹುದ್ದೆಗೆ ಭಾರತೀಯ ಮೂಲದ ಪ್ರೀತಿ ಪಟೇಲ್ ರಾಜೀ ನಾಮೆ ನೀಡಿದ್ದಾರೆ.

ಪ್ರಧಾನಿ ಬೋರಿಸ್ ಜಾನ್ಸನ್ ರಿಗೆ ಪತ್ರ ಬರೆದಿರುವ ಪ್ರೀತಿ, ಬ್ರಿಟನ್‍ನ ಗೃಹ ಕಾರ್ಯದರ್ಶಿ ಅಥವಾ ಆಂತರಿಕ ಸಚಿವೆ ಹುದ್ದೆಯನ್ನು ತೊರೆಯಲು ನಿರ್ಧ ರಿಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ.‌ ಲಿಝ್‌ ಟ್ರಸ್ ಅವರಿಗೆ ಬೆಂಬಲ ನೀಡುವು ದಾಗಿಯೂ ಭರವಸೆ ನೀಡಿದ್ದಾರೆ.

ಜಾನ್ಸನ್‍ಗೆ ನಿಷ್ಠರಾಗಿರುವ ಪ್ರೀತಿ ಪಟೇಲ್ ಎಸ್ಸೆಕ್ಸ್‌ ನ ವಿಥಮ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. 2019ರ ಜುಲೈನಲ್ಲಿ ಇವರು ಬ್ರಿಟನ್ ಗೃಹ ಕಾರ್ಯದರ್ಶಿಯಾಗಿ ನಿಯುಕ್ತರಾಗಿದ್ದರು. ಇವರ ಹುದ್ದೆಗೆ ಸುಯೆಲ್ಲಾ ಬ್ರೆವೆರ್‍ಮನ್ ಆಯ್ಕೆಯಾಗುವ ನಿರೀಕ್ಷೆ ಇರುವುದು ಮಾತ್ರವಲ್ಲದೇ, ಲಿಝ್ ಟ್ರಸ್ ಸಂಪುಟದ ಏಕೈಕ ಭಾರತೀಯ ಮೂಲದ ಸಂಸದೆಯಾಗುವ ಸಾಧ್ಯತೆ ಇದೆ.‌

ಗೋವಾ ಮೂಲದ 42 ವರ್ಷದ ಬ್ರೆವೆರ್‍ಮನ್ ಪ್ರಸ್ತುತ ಅಟಾರ್ನಿ ಜನರಲ್ ಹುದ್ದೆಯನ್ನು ನಿಭಾಯಿಸುತ್ತಿದ್ದಾರೆ.