Saturday, 14th December 2024

Unique Tradition: ಸಮಾಧಿಯಿಂದ ಶವ ಹೊರತೆಗೆದು ಸತ್ತವರಿಗೆ ಗೌರವ; ಇಂಡೋನೇಷ್ಯಾದಲ್ಲೊಂದು ವಿಚಿತ್ರ ಸಂಪ್ರದಾಯ!

ಜಗತ್ತಿನಲ್ಲಿ ಸಾಕಷ್ಟು ವಿಚಿತ್ರ ನಂಬಿಕೆ, ಆಚರಣೆಗಳಿವೆ (Unique Tradition). ಕೆಲವು ಸಮುದಾಯಗಳಲ್ಲಿ ಚಿತ್ರ, ವಿಚಿತ್ರ ಆಚರಣೆಗಳನ್ನು ಹಲವಾರು ಶತಮಾನಗಳಿಂದ ನಡೆಸಿಕೊಂಡು ಬರಲಾಗುತ್ತದೆ. ಕೆಲವು ಆಚರಣೆಗಳನ್ನು ತಲೆತಲಾಂತರಗಳಿಂದ ಆಚರಿಸಿಕೊಂಡು ಬರಲಾಗುತ್ತದೆ. ಈ ವಿಶ್ವದಲ್ಲಿ ಎಷ್ಟು ದೇಶಗಳಿವೆಯೋ ಅಷ್ಟೇ ನಂಬಿಕೆ ಮತ್ತು ಸಂಪ್ರದಾಯಗಳೂ ಇವೆ.

ವಿವಿಧ ರಾಷ್ಟ್ರಗಳಲ್ಲಿನ ವಿವಿಧ ಸಮುದಾಯಗಳು ಶತಮಾನಗಳಿಂದ ಆಚರಿಸಲ್ಪಡುವ ಕೆಲವು ಆಚರಣೆಗಳು ಅಸಾಮಾನ್ಯ ಪದ್ಧತಿಗಳಾಗಿವೆ. ಅಂತಹ ಒಂದು ಸಂಪ್ರದಾಯ ಇಂಡೋನೇಷ್ಯಾದಲ್ಲಿದೆ (Indonesia). ಇಲ್ಲಿನ ಸಮುದಾಯವೊಂದು ತಮ್ಮ ಸತ್ತ ಪ್ರೀತಿಪಾತ್ರರನ್ನು ಅತ್ಯಂತ ಅಸಾಮಾನ್ಯ ರೀತಿಯಲ್ಲಿ ನೆನಪಿಸಿಕೊಳ್ಳುತ್ತದೆ.

ಭಾರತೀಯ ಸಂಪ್ರದಾಯಗಳಂತೆಯೇ ಅವರು ತಮ್ಮ ಪೂರ್ವಜರನ್ನು ನೆನಪಿಸಿಕೊಳ್ಳಲು ವರ್ಷದಲ್ಲಿ ವಿಶೇಷ ದಿನಗಳನ್ನು ಹೊಂದಿದ್ದಾರೆ. ಈ ಸಂದರ್ಭದಲ್ಲಿ ಅವರು ಕೆಲವು ವಿಶೇಷ ಆಚರಣೆಗಳನ್ನು ನಡೆಸುತ್ತಾರೆ. ತಮ್ಮ ಪೂರ್ವಜರ ದೇಹಗಳನ್ನು ಸಮಾಧಿಯಿಂದ ಹೊರತೆಗೆಯುತ್ತಾರೆ, ಅವರಿಗೆ ಸ್ನಾನ ಮಾಡಿಸುತ್ತಾರೆ ಮತ್ತು ಹೊಸ ಬಟ್ಟೆಗಳನ್ನು ತೊಡಿಸುತ್ತಾರೆ.

Unique Tradition

ಇಂಡೋನೇಷ್ಯಾದ ದಕ್ಷಿಣ ಸುಲವೆಸಿಯಲ್ಲಿ ತಾನಾ ತೊರಾಜ ಎಂಬ ಪ್ರದೇಶವಿದೆ. ಇಲ್ಲಿ ತೊರಾಜ ಜನಾಂಗದವರು ವಾಸಿಸುತ್ತಿದ್ದಾರೆ. ಅವರು ಈ ಸಂಪ್ರದಾಯವನ್ನು ನಡೆಸಿಕೊಂಡು ಬರುತ್ತಿದ್ದಾರೆ.

ನಿರ್ಜೀವ ವಸ್ತುಗಳಿಗೂ ಜೀವವಿದೆ ಮತ್ತು ಅದನ್ನು ಗೌರವಿಸಬೇಕು ಎಂಬುದು ಅವರ ನಂಬಿಕೆ. ಮಾನವರು ಮತ್ತು ಪ್ರಾಣಿಗಳು ಗೌರವಕ್ಕೆ ಅರ್ಹವಾದ ಆತ್ಮಗಳನ್ನು ಹೊಂದಿದ್ದಾರೆ ಎಂಬ ನಂಬಿಕೆಯುಳ್ಳ ಅವರು ಇದೇ ಕಾರಣಕ್ಕಾಗಿ ಸತ್ತ ಪ್ರೀತಿಪಾತ್ರರನ್ನು ತಕ್ಷಣವೇ ಸಮಾಧಿ ಮಾಡುವುದಿಲ್ಲ. ಬದಲಾಗಿ ಕೆಲವು ದಿನಗಳ ಅನಂತರ ಅಂತ್ಯಕ್ರಿಯೆ ನಡೆಸುತ್ತಾರೆ. ಅಂತ್ಯಕ್ರಿಯೆಗಾಗಿ ಹಣವನ್ನು ಸಂಗ್ರಹಿಸಲು ಸಾಕಷ್ಟು ಸಮಯವನ್ನು ಬಳಸುತ್ತಾರೆ. ಚಿಕ್ಕ ಮಕ್ಕಳ ದೇಹಗಳನ್ನು ಟೊಳ್ಳಾದ ಮರಗಳಲ್ಲಿ ಹೂಳುತ್ತಾರೆ.

ವಿಚಿತ್ರ ಆಚರಣೆ

ಆಗಸ್ಟ್ ತಿಂಗಳಲ್ಲಿ ಈ ಆಚರಣೆ ನಡೆಸಲಾಗುತ್ತದೆ. ಸುಗ್ಗಿಯ ಮೊದಲು ಈ ಆಚರಣೆ ನಡೆಸಲಾಗುತ್ತದೆ. ತಮ್ಮ ಪ್ರೀತಿ ಪಾತ್ರರ ಶವಗಳನ್ನು ಸಮಾಧಿಯಿಂದ ಹೊರ ತೆಗೆದು ಅವರಿಗೆ ಸ್ನಾನ ಮಾಡಿಸಿ ಹೊಸ ಬಟ್ಟೆಗಳನ್ನು ತೊಡಿಸುತ್ತಾರೆ. ಅವರು ಇನ್ನೂ ಜೀವಂತವಾಗಿಯೇ ತಮ್ಮೊಂದಿಗೆ ಇದ್ದಾರೆ ಎನ್ನುವಂತೆ ಶವಗಳೊಂದಿಗೆ ಸಂವಹನ ನಡೆಸುತ್ತಾರೆ. ಅವರೊಂದಿಗೆ ಛಾಯಾಚಿತ್ರಗಳನ್ನು ಕೂಡ ತೆಗೆಸಿಕೊಳ್ಳುತ್ತಾರೆ. ಅವರಿಗಾಗಿ ಆಹಾರ ಮತ್ತು ಪಾನೀಯಗಳನ್ನು ತಯಾರಿಸುತ್ತಾರೆ. ಸಿಗರೇಟ್ ಕೂಡ ನೀಡುತ್ತಾರೆ.

ಅಂತ್ಯಕ್ರಿಯೆ ಎಂದರೆ ಸಂಭ್ರಮ

ಹಬ್ಬ ಮುಗಿದ ಬಳಿಕ ಮತ್ತೆ ಅವರ ಸಮಾಧಿಗಳನ್ನು ಸ್ವಚ್ಛಗೊಳಿಸುತ್ತಾರೆ ಮತ್ತು ದೇಹಗಳನ್ನು ಪುನಃ ಹೂಳುತ್ತಾರೆ. ಇದು ಪ್ರತಿ ವರ್ಷ ನಡೆಸುವ ಸಂಪ್ರದಾಯವಾಗಿದೆ. ಮೃತರ ದೇಹಗಳನ್ನು ಸರಿಯಾಗಿ ಸಂರಕ್ಷಿಸಲಾಗಿದೆ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಅವರು ಈ ರೀತಿ ಮಾಡುತ್ತಾರೆ.

Longest Word: ಇಂಗ್ಲಿಷ್ ಭಾಷೆಯ ಅತ್ಯಂತ ಉದ್ದವಾದ ಪದ ಕುತೂಹಲಕರ!

ಇತ್ತೀಚೆಗೆ ನಿಧನರಾದವರ ಶವಗಳನ್ನು ಹಲವಾರು ತಿಂಗಳುಗಳ ಕಾಲ ಮನೆಯಲ್ಲಿ ಇರಿಸುತ್ತಾರೆ. ಅಂತ್ಯಕ್ರಿಯೆಯ ಸಂದರ್ಭದಲ್ಲಿ ನೃತ್ಯ ಮತ್ತು ಹಾಡುಗಾರಿಕೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ನೂರಾರು ಎಮ್ಮೆ ಮತ್ತು ಹಂದಿಗಾಲ ಬಲಿ ನೀಡಲಾಗುತ್ತದೆ. ಈ ಪ್ರಾಣಿಗಳ ಮಾಂಸವನ್ನು ಉತ್ಸವದಲ್ಲಿ ಪಾಲ್ಗೊಂಡವರಿಗೆ ಹಂಚಲಾಗುತ್ತದೆ.