Friday, 13th December 2024

US Presidential Election 2024: ಇಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ; ಎಷ್ಟು ಹೊತ್ತಿಗೆ ಮತದಾನ? ಫಲಿತಾಂಶ ಯಾವಾಗ?

us presidential election

ವಾಷಿಂಗ್ಟನ್‌: ಪ್ರಪಂಚದ ದೊಡ್ಡಣ್ಣನೆಂದೇ ಕರೆಸಿಕೊಳ್ಳುವ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ(US Presidential Election 2024) ಕೊನೆಯ ಹಂತಕ್ಕೆ ತಲುಪಿದ್ದು, ಇಂದು ನೂತನ ಅಧ್ಯಕ್ಷರ ಆಯ್ಕೆಗೆ ಮತದಾನ ನಡೆಯಲಿದೆ. ರಿಪಬ್ಲಿಕನ್‌ ಪಾರ್ಟಿಯ ಡೊನಾಲ್ಡ್‌ ಟ್ರಂಪ್‌(Donald Trump)ಹಾಗೂ ಡೆಮಾಕ್ರಟಿಕ್‌ ಪಾರ್ಟಿಯ ಕಮಲಾ ಹ್ಯಾರಿಸ್‌(Kamala Harris) ಮಧ್ಯೆ ತೀವ್ರ ಹಣಾಹಣಿ ಏರ್ಪಟ್ಟಿದ್ದು, ಮತದಾರ ಯಾರ ಕೈ ಹಿಡಿಯಲಿದ್ದಾನೆ ಎಂಬುದು ಇಂದು ನಿರ್ಧಾರವಾಗಲಿದೆ.

ಎಷ್ಟು ಹೊತ್ತಿಗೆ ಮತದಾನ?

ಅಮೆರಿಕದ ಸ್ಥಳೀಯ ಕಾಲಮಾನದ ಪ್ರಕಾರ ಬೆಳಗ್ಗೆ 6 ರಿಂದ ರಾತ್ರಿ 8 ಗಂಟೆವರೆಗೆ ಮತದಾನ ನಡೆಯಲಿದೆ. ಇನ್ನು ಭಾರತೀಯ ಕಾಲಮಾನದ ಪ್ರಕಾರ ನೋಡುವುದಾದರೆ ಸಂಜೆ 4 ಗಂಟೆಯಿಂದ ಮತದಾನ ಆರಂಭವಾಗಲಿದ್ದು, ಬುಧವಾರ ಬೆಳಗ್ಗೆ 6.30ಕ್ಕೆ ಅಂತ್ಯವಾಗಲಿದೆ ಎನ್ನಲಾಗಿದೆ.

ಬ್ಯಾಲಟ್​ ಪೇಪರ್ ಬಳಸಿ ಮತದಾನ

ಇನ್ನು ಬ್ಯಾಲಟ್‌ ಪೇಪರ್‌ ಮೂಲಕ ಮತದಾನ ನಡೆಯಲಿದೆ. 50 ರಾಜ್ಯಗಳಲ್ಲಿ 24 ಕೋಟಿ ಮತದಾರರು ಮತದಾನಕ್ಕೆ ಅರ್ಹರಾಗಿದ್ದು, ಈಗಾಗಲೇ ಇ-ಮೇಲ್ ಮೂಲಕ ಕೋಟ್ಯಂತರ ಜನ ಮತ ಚಲಾಯಿಸಿದ್ದಾರೆ. ಮತದಾನಕ್ಕೆ ಮಂಗಳವಾರ ತೆರೆ ಬೀಳಲಿದೆ. ಇವರು ಆಯ್ಕೆ ಮಾಡುವ 538 ಜನಪ್ರತಿನಿಧಿಗಳು (ಎಲೆಕ್ಟೋರಲ್ ಕಾಲೇಜ್) ಧ್ಯಕ್ಷರ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. 270 ಜನಪ್ರತಿನಿಧಿಗಳ ಬೆಂಬಲ ಪಡೆದವರು ಅಧ್ಯಕ್ಷರಾಗಿ ಆಯ್ಕೆ ಆಗಲಿದ್ದಾರೆ.

ಸಮೀಕ್ಷೆಗಳು ಹೇಳೋದೇನು?

ಇನ್ನು ಮತದಾನ ಪೂರ್ವ ಸಮೀಕ್ಷೆಗಳು ಹೊರ ಬಿದ್ದಿದ್ದು, ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರಿಗಿಂತ ಮುನ್ನಡೆ ಕಾಯ್ದುಕೊಂಡಿದ್ದಾರೆ. ಚುನಾವಣೆಯಲ್ಲಿ ನಿರ್ಣಾಯಕ ಎನಿಸಿರುವ ‘ಸ್ವಿಂಗ್‌ ರಾಜ್ಯ’ಗಳಲ್ಲಿ ರಿಪಬ್ಲಿಕನ್‌ ಅಭ್ಯರ್ಥಿ ಪರ ಹೆಚ್ಚಿನ ಒಲವು ಕಂಡು ಬಂದಿದ್ದು, 4 ವರ್ಷಗಳ ಬಳಿಕ ಟ್ರಂಪ್‌ ಮತ್ತೆ ಗದ್ದುಗೆ ಏರುವುದು ಫಿಕ್ಸ್‌ ಎಂಬಂತೆ ಭಾಸವಾಗುತ್ತಿದೆ. ಇನ್ನು ಸಮೀಕ್ಷೆಯಲ್ಲಿ ಭಾಗವಹಿಸಿದ್ದವರ ಪೈಕಿ ಶೇ .49ರಷ್ಟು ಜನ ಟ್ರಂಪ್‌ ಪರ, ಶೇ. 47.2ರಷ್ಟು ಜನ ಕಮಲಾ ಹ್ಯಾರಿಸ್‌ ಪರ ಒಲವು ತೋರಿಸಿದ್ದಾರೆ. ಇಬ್ಬರ ನಡುವಿನ ಮತಗಳ ಅಂತರ ಕೇವಲ ಶೇ. 1.8ರಷ್ಟಿದೆ.

ಮತ ಎಣಿಕೆ ಯಾವಾಗ?

ಇನ್ನು ಇಂದು ನಡೆಯುವ ಚುನಾವಣೆಯ ಮತ ಎಣಿಗೆ ಯಾವಾಗ ನಡೆಯುತ್ತದೆ ಎಂದು ನೋಡಿದರೆ, ಜನವರಿ 6 ರಂದು ಫಲಿತಾಂಶ ಹೊರಬೀಳಲಿದೆ. ಅಧ್ಯಕ್ಷರಾಗಿ ಆಯ್ಕೆಯಾದವರು ಜನವರಿ 20ರಂದು ಅಧಿಕಾರ ಗದ್ದುಗೆ ಏರುತ್ತಾರೆ.

ಈ ಸುದ್ದಿಯನ್ನೂ ಓದಿ: US imposes sanction: 15 ಭಾರತೀಯ ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧ; ಕಾರಣ ಏನು?