Friday, 13th December 2024

US Presidential Election 2024: ಪ್ರಚಂಡ ಗೆಲುವಿನತ್ತ ಡೊನಾಲ್ಡ್‌ ಟ್ರಂಪ್‌; ಎರಡನೇ ಬಾರಿ ಅಧ್ಯಕ್ಷ ಪಟ್ಟ ಫಿಕ್ಸ್‌!

Donald Trump

ವಾಷಿಂಗ್ಟನ್‌: ಇಡೀ ಪ್ರಪಂಚವೇ ಕಣ್ಣು ನೆಟ್ಟಿದ್ದ ಅಮೆರಿಕ ಚುನಾವಣೆ(US Presidential Election 2024)ಯ ಫಲಿತಾಂಶ ಸ್ಪಷ್ಟವಾಗಿದ್ದು, ಎರಡನೇ ಬಾರಿ ಡೊನಾಲ್ಡ್‌ ಟ್ರಂಪ್‌(Donald Trump) ಗದ್ದುಗೆ ಏರುವುದು ಖಚಿತವಾಗಿದೆ. ಮಂಗಳವಾರದಿಂದ ನಡೆದ ಚುನಾವಣೆಯ ಮತ ಎಣಿಕೆ ಕೊನೆಯ ಹಂತದಲ್ಲಿದ್ದು, ರಿಪಬ್ಲಿಕ್‌ ಪಕ್ಷ ಅಭ್ಯರ್ಥಿಯಾಗಿರುವ ಡೊನಾಲ್ಡ್‌ ಟ್ರಂಪ್‌ ಮ್ಯಾಜಿಕ್‌ ನಂಬರ್‌ 270ರ ಸನಿಹದಲ್ಲಿದ್ದಾರೆ. ಇನ್ನು ಅವರ ಪ್ರತಿಸ್ಪರ್ಧಿ ಡೆಮಾಕ್ರಟಿಕ್‌ ಪಕ್ಷದ ಕಮಲಾ ಹ್ಯಾರಿಸ್‌ 214 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಿದೆ.

ಇನ್ನು ಚುನಾವಣೆಯಲ್ಲಿ ಪ್ರಚಂಡ ಗೆಲುವಿನ ಅಂಚಿನಲ್ಲಿರುವ ಡೊನಾಲ್ಡ್ ಟ್ರಂಪ್ ಮೊದಲ ಪ್ರತಿಕ್ರಿಯೆ ನೀಡಿದ್ದು, ತಮ್ಮ ಬೆಂಬಲಿಗರಿಗೆ ಧನ್ಯವಾದಗಳನ್ನು ಅರ್ಪಿಸಿದರು ಮತ್ತು “ಅಮೆರಿಕಾದ ಜನರ ಅದ್ಭುತ ಗೆಲುವು” ಎಂದು ಬಣ್ಣಿಸಿದ್ದಾರೆ. ರಿಪಬ್ಲಿಕನ್ ಅಭಿಯಾನವನ್ನು “ಸಾರ್ವಕಾಲಿಕ ಶ್ರೇಷ್ಠ ರಾಜಕೀಯ ಚಳುವಳಿ” ಎಂದು ವಿವರಿಸಿದ ಟ್ರಂಪ್, “ನಾವು ನಮ್ಮ ದೇಶವನ್ನು ಸರಿಪಡಿಸಲು, ನಮ್ಮ ಗಡಿಗಳನ್ನು ಸರಿಪಡಿಸಲು ಸಹಾಯ ಮಾಡಲಿದ್ದೇವೆ, ನಾವು ಇತಿಹಾಸವನ್ನು ನಿರ್ಮಿಸಿದ್ದೇವೆ. ನಾವು ಅತ್ಯಂತ ನಂಬಲಾಗದ ರಾಜಕೀಯ ಗೆಲುವು ಸಾಧಿಸಿದ್ದೇವೆ. ನಾನು ಅಮೆರಿಕದ ಜನರಿಗೆ ಧನ್ಯವಾದ ಹೇಳಲು ಬಯಸುತ್ತೇನೆ, ನನ್ನ ದೇಹದ ಪ್ರತಿ ಉಸಿರಿನೊಂದಿಗೆ ನಾನು ನಿಮಗಾಗಿ ಮತ್ತು ನಿಮ್ಮ ಕುಟುಂಬಕ್ಕಾಗಿ ಹೋರಾಡುತ್ತೇನೆ ಎಂದಿದ್ದಾರೆ.

ನಿರ್ಣಾಯಕ ಏಳು ಸ್ವಿಂಗ್ ರಾಜ್ಯಗಳಲ್ಲಿ ರಿಪಬ್ಲಿಕನ್ ಸ್ವೀಪ್ ಟ್ರಂಪ್ ಅವರ ವಿಜಯದಲ್ಲಿ ಒಂದು ದೊಡ್ಡ ಪಾತ್ರ ವಹಿಸಿದೆ. ಟ್ರಂಪ್‌ ಈಗಾಗಲೇ ಜಾರ್ಜಿಯಾ, ಪೆನ್ಸಿಲ್ವೇನಿಯಾ ಮತ್ತು ಉತ್ತರ ಕೆರೊಲಿನಾ ಮೂರು ಸ್ವಿಂಗ್ ರಾಜ್ಯಗಳನ್ನು ಗೆದ್ದಿದ್ದಾರೆ. ಇನ್ನು ಅರಿಜೋನಾ, ವಿಸ್ಕಾನ್ಸಿನ್, ಮಿಚಿಗನ್ ಮತ್ತು ನೆವಾಡಾದಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: US Presidential Election 2024: ಅಮೆರಿಕ ಅಧ್ಯಕ್ಷ ಚುನಾವಣೆ ಮತ ಎಣಿಕೆ ಆರಂಭ, ಡೊನಾಲ್ಡ್‌ ಟ್ರಂಪ್‌ ಭಾರಿ ಮುನ್ನಡೆ