Wednesday, 11th December 2024

ವಾಷಿಂಗ್ಟನ್’ನಲ್ಲಿ ಹಿಂಸಾಚಾರ: ಟ್ರಂಪ್, ಬಿಡೆನ್ ಬೆಂಬಲಿಗರ ಮಾರಾಮಾರಿ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣಾ ಫಲಿತಾಂಶದ ನಂತರ ನಿರೀಕ್ಷೆಯಂತೆ ಹಿಂಸಾಚಾರ ಭುಗಿಲೆದ್ದಿದೆ.

ವಾಷಿಂಗ್ಟನ್‍ ನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಮತ್ತು ಅಧ್ಯಕ್ಷೀಯ ಚುನಾಯಿತ ಜೋ ಬಿಡೆನ್ ಬೆಂಬಲಿಗರ ನಡುವೆ ಭಾರೀ ಮಾರಾಮಾರಿ ನಡೆದಿದೆ. ಘರ್ಷಣೆಯಲ್ಲಿ ಪೊಲೀಸರು ಸೇರಿದಂತೆ ಅನೇಕರು ತೀವ್ರ ಗಾಯಗೊಂಡಿದ್ದಾರೆ.

ಚುನಾವಣೆಯಲ್ಲಿ ಭಾರೀ ಅಕ್ರಮಗಳು ನಡೆದಿದ್ದು, ಟ್ರಂಪ್ ರನ್ನೇ ಇನ್ನೂ ನಾಲ್ಕು ವರ್ಷ ಕಾಲ ಅಧ್ಯಕ್ಷರಾಗಿ ಮುಂದುವರಿಸು ವಂತೆ ಆಗ್ರಹಿಸಿ ಸಹಸ್ರಾರು ಬೆಂಬಲಿಗರು ವಾಷಿಂಗ್ಟನ್ ಬೀದಿಗಳಿಗಿಳಿದು ಪ್ರತಿಭಟನೆ ನಡೆಸಿದರು.

ಈ ಪ್ರತಿಭಟನೆಯನ್ನು ಜೋ ಬಿಡೆನ್ ಬೆಂಬಲಿಗರು ವಿರೋಧಿಸಿದಾಗ ಭಾರೀ ಘರ್ಷಣೆ ಮತ್ತು ಮಾರಾಮಾರಿ ನಡೆಯಿತು. ಉದ್ರಿಕ್ತ ಪರಿಸ್ಥಿತಿ ನಿಯಂತ್ರಿಸಲು ಮುಂದಾದ ಪೊಲೀಸರಿಗೂ ಗಾಯಗಳಾಗಿವೆ. ವಾಷಿಂಗ್ಟನ್‍ನಲ್ಲಿ ಹಿಂಸಾಚಾರ ಭುಗಿಲೆದ್ದಿರುವುದರಿಂದ ಉಳಿದ ರಾಜ್ಯಗಳಲ್ಲೂ ಇದು ವಿಸ್ತರಿಸದಂತೆ ತಡೆಯಲು ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.