Wednesday, 11th December 2024

WHO: ಕಾಂಡೋಮ್ ಮರೆತು ಯುವಜನರ ಬಿಂದಾಸ್ ಸರಸ; ವಿಶ್ವ ಆರೋಗ್ಯ ಸಂಸ್ಥೆ ಕಳವಳ!

WHO

ನವದೆಹಲಿ: ʼʼಯುರೋಪ್‌ನಲ್ಲಿ ಕಳೆದೊಂದು ದಶಕದಲ್ಲಿ ಯುವ ಜನತೆ ಸರಸದ ವೇಳೆ ಕಾಂಡೋಮ್ ಬಳಕೆಯನ್ನು ಕಡಿಮೆ ಮಾಡಿದೆ. ಇದರಿಂದ ಎಚ್‌ಐವಿಯಂತಹ ಮಾರಣಾಂತಿಕ ರೋಗಗಳ ಪ್ರಮಾಣ ಗಣನೀಯವಾಗಿ ಏರಿಕೆಯಾಗುವ ಅಪಾಯವಿದೆʼʼ ಎಂದು ವಿಶ್ವ ಆರೋಗ್ಯ ಸಂಸ್ಥೆ (World Health Organisation-WHO) ತೀವ್ರ ಕಳವಳ ವ್ಯಕ್ತಪಡಿಸಿದೆ.

ಯುರೋಪ್‌ನ  42 ದೇಶಗಳ 2,42,000ಕ್ಕೂ ಹೆಚ್ಚು 15 ವರ್ಷ ವಯಸ್ಸಿನ ಹದಿಹರೆಯದವರ ಮೇಲೆ ನಡೆಸಿದ ಸಮೀಕ್ಷೆಯಲ್ಲಿ ಈ ಆತಂಕಕಾರಿ ವಿಷಯ ಹೊರಬಿದ್ದಿದೆ. ಕಾಂಡೋಮ್ ಬಳಕೆ ಮಾಡದೇ ಇರುವುದರಿಂದ ಯುವಜನರಲ್ಲಿ ಲೈಂಗಿಕವಾಗಿ ಹರಡುವ ಸೋಂಕುಗಳು (Sexually Transmitted Infections-STIs) ಮತ್ತು ಸುರಕ್ಷಿತವಲ್ಲದ ಗರ್ಭಧಾರಣೆಯ ಅಪಾಯವು ಹೆಚ್ಚಾಗುತ್ತಿದೆ. ಲೈಂಗಿಕ ಶಿಕ್ಷಣದ ಪ್ರಾಧಾನ್ಯತೆಯನ್ನು ಒತ್ತಿ ಹೇಳಿರುವ ಡಬ್ಲ್ಯುಎಚ್‌ಒ ಪರಿಸ್ಥಿತಿ ಕೈ ಮೀರುವ ಮುನ್ನ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರ, ಆರೋಗ್ಯ ಸಂಸ್ಥೆಗಳು ಮತ್ತು ಶಿಕ್ಷಣ ತಜ್ಞರಿಗೆ ಕರೆ ನೀಡಿದೆ.

ವರದಿಯಲ್ಲಿ ಏನಿದೆ?

ಲೈಂಗಿಕವಾಗಿ ಸಕ್ರಿಯವಾಗಿರುವ ಹದಿಹರೆಯದ ಹುಡುಗರ ಪೈಕಿ ಕಾಂಡೋಮ್ ಬಳಸಿದ ಪ್ರಮಾಣವು 2014ರಲ್ಲಿ ಶೇ.  70ರಷ್ಟಿತ್ತು. 2022ರಲ್ಲಿ ಇದರ ಪ್ರಮಾಣ ಇಳಿಕೆಯಾಗಿ ಶೇ. 61ಕ್ಕೆ ತಲುಪಿದೆ.  ಅದೇ ಅವಧಿಯಲ್ಲಿ ಹುಡುಗಿಯರಲ್ಲಿ ಶೇ. 63ರಿಂದ  ಶೇ. 57ಕ್ಕೆ ಇಳಿಕೆ ಕಂಡಿದೆ ಎಂದು ವರದಿ ತಿಳಿಸಿದೆ. ಇದೇ ವೇಳೆ ಗರ್ಭ ನಿರೋಧಕ ಮಾತ್ರೆಯ ಬಳಕೆಯ ಪ್ರಮಾಣ ಸ್ಥಿರವಾಗಿದೆ. ಇನ್ನು ಕೆಳ ಮಧ್ಯಮ ವರ್ಗದ ಕುಟುಂಬಗಳಿಗೆ ಸೇರಿದ ಸೇ. 33ರಷ್ಟು ಯುವಕರು ಕಾಂಡೋಮ್ ಅಥವಾ ಗರ್ಭನಿರೋಧಕ ಮಾತ್ರೆಗಳನ್ನು ಬಳಸುತ್ತಿಲ್ಲ.  ಮೇಲ್ವರ್ಗದ ಕುಟುಂಬಗಳಿಗೆ ಸೇರಿದ ಶೇ. 25ರಷ್ಟು ಯುವ ಜನತೆ ಅಸುರಕ್ಷಿತ ಲೈಂಗಿಕ ಕ್ರಿಯೆಯಲ್ಲಿ ತೊಡಗಿವೆ ಎನ್ನುವ ಅಂಶವೂ ಬಹಿರಂಗಗೊಂಡಿದೆ.

ʼʼಇನ್ನೂ ಹಲವು ದೇಶಗಳಲ್ಲಿ ಲೈಂಗಿಕ ಶಿಕ್ಷಣದ ವಿಚಾರದಲ್ಲಿ ನಿರ್ಲಕ್ಷ್ಯ ಮುಂದುವರಿದಿದೆ. ಅಸುರಕ್ಷಿತ ಸಂಭೋಗದಿಂದಾಗುವ ದುಷ್ಪರಿಣಾಮಗಳನ್ನು ಯುವಜನತೆಗೆ ಸರಿಯಾದ ಸಮಯಕ್ಕೆ ತಿಳಿಸದಿರುವುದರಿಂದ ಇಂತಹ ಸಮಸ್ಯೆ ಹೆಚ್ಚಾಗುತ್ತಿದೆʼʼ ಎಂದು ಡಬ್ಲ್ಯುಎಚ್‌ಒದ ಯುರೋಪ್‌ನ ನಿರ್ದೇಶಕ ಹಾನ್ಸ್‌ ಕ್ಲುಗ್‌ ತಿಳಿಸಿದ್ದಾರೆ. ಹದಿಹರೆಯದವರಿಗೆ ಸೂಕ್ತ ಸಮಯದಲ್ಲಿ ಸರಿಯಾದ ಶಿಕ್ಷಣ ನೀಡುವುದರಿಂದ ಹಲವು ಅಪಾಯಗಿಂದ ಅವರನ್ನು ಪಾರು ಮಾಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.