Wednesday, 11th December 2024

Yahya Sinwar: ಯಾಹ್ಯಾ ಸಿನ್ವರ್‌ ಹತ್ಯೆ; ಯಾರಾಗ್ತಾರೆ ಮುಂದಿನ ಹಮಾಸ್‌ ನಾಯಕ? ಇಲ್ಲಿದೆ ಸಂಭಾವ್ಯರ ಪಟ್ಟಿ

Yahya Sinwar

ಜೆರುಸಲೇಂ: 2023ರಲ್ಲಿ ಇಸ್ರೇಲ್‌ ಮೇಲೆ ನಡೆದ ದಾಳಿಯ ಮಾಸ್ಟರ್‌ ಮೈಂಡ್‌, ಹಮಾಸ್‌ ನಾಯಕ (Hamas leader) ಯಾಹ್ಯಾ ಸಿನ್ವರ್‌ (Yahya Sinwar)ನನ್ನು ಹೊಡೆದುರುಳಿಸುವ ಮೂಲಕ ಇಸ್ರೇಲ್‌ ಸೇನೆ ಸೇಡು ತೀರಿಸಿಕೊಂಡಿದೆ. ಒಂದು ವರ್ಷಕ್ಕೂ ಹೆಚ್ಚು ತಲೆಮರೆಸಿಕೊಂಡಿದ್ದ 61 ವರ್ಷದ ಯಾಹ್ಯಾ ಸಿನ್ವರ್‌ನನ್ನು ದಕ್ಷಿಣ ಗಾಜಾದಲ್ಲಿ ಇಸ್ರೇಲ್ ಪಡೆಗಳು ಗುರುವಾರ (ಅಕ್ಟೋಬರ್‌ 18) ಹತ್ಯೆ ಮಾಡಿವೆ. ಸಿನ್ವರ್ ಗಾಝಾಗೆ ಹಮಾಸ್‌ನ ಉನ್ನತ ನಾಯಕನಾಗಿ ಹೊರಹೊಮ್ಮುವ ಮೊದಲು ಇಸ್ರೇಲ್ ಜೈಲುಗಳಲ್ಲಿ ಎರಡು ದಶಕಗಳನ್ನು ಕಳೆದಿದ್ದ.

1,200ಕ್ಕೂ ಹೆಚ್ಚು ಇಸ್ರೇಲಿಗಳನ್ನು ಹತ್ಯೆಗೈದು 250ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ಗಾಜಾಕ್ಕೆ ಕರೆತಂದ ಇಸ್ರೇಲ್ ಮೇಲಿನ ಅನಿರೀಕ್ಷಿತ ದಾಳಿಯ ಮುಖ್ಯ ರೂವಾರಿಗಳಲ್ಲಿ ಒಬ್ಬನಾದ ಸಿನ್ವರ್‌ನ ಹತ್ಯೆಗೆ ಇಸ್ರೇಲ್‌ ಕೆಲವು ದಿನಗಳಿಂದ ಶ್ರಮಿಸುತ್ತಲೇ ಇತ್ತು. ಆತನ ಸುಳಿವು ನೀಡಿದವರಿಗೆ 4,00,000 ಡಾಲರ್ (3,36,24,000 ರೂ.) ಬಹುಮಾನವನ್ನು ಘೋಷಿಸಿತ್ತು. ಹಮಾಸ್ ನಾಯಕರ ಗುರಿಯಾಗಿಸಿಕೊಂಡು ಇಸ್ರೇಲ್‌ ಹಲವು ವೈಮಾನಿಕ ದಾಳಿ ನಡೆಸಿದ್ದರೂ ಸಿನ್ವರ್ ಗಾಜಾದ ಕೆಳಗಿರುವ ಸುರಂಗಗಳಲ್ಲಿ ಅವಿತು ಜೀವ ಉಳಿಸಿಕೊಂಡಿದ್ದ. ಸದ್ಯ ಆತನನ್ನು ಹೊಡೆದುರುಳಿಸುವಲ್ಲಿ ಇಸ್ರೇಲ್‌ ಯಶಸ್ವಿಯಾಗಿದೆ.

ಸಿನ್ವರ್ ಸಾವು ಈಗ ಹಮಾಸ್‌ನ ನಾಯಕತ್ವದ ಬಗ್ಗೆ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಈ ನಿರ್ಣಾಯಕ ಹಂತದಲ್ಲಿ ಹಮಾಸ್‌ ನಾಯಕತ್ವವನ್ನು ಯಾರು ಹೊತ್ತುಕೊಳ್ಳುತ್ತಾರೆ ಎನ್ನುವ ಕುತೂಹಲ ಮೂಡಿದೆ. ಉಗ್ರಗಾಮಿ ಕಾರ್ಯಾಚರಣೆಗಳು ಮತ್ತು ರಾಜಕೀಯ ತಂತ್ರಗಾರಿಕೆಯ ಸುದೀರ್ಘ ಇತಿಹಾಸವನ್ನು ಹೊಂದಿರುವ ಹಲವು ಉನ್ನತ ಶ್ರೇಣಿಯ ಹಮಾಸ್ ನಾಯಕರ ಹೆಸರು ಉತ್ತರಾಧಿಕಾರಿಯ ರೇಸ್‌ನಲ್ಲಿ ಕೇಳಿ ಬಂದಿವೆ. ಅವರ ಸಂಕ್ಷಿಪ್ತ ಪರಿಚಯ ಇಲ್ಲಿದೆ.

ಮಹಮೂದ್ ಅಲ್-ಜಹರ್ (Mahmoud al-Zahar)

ಹಮಾಸ್ ಸ್ಥಾಪಕ ಸದಸ್ಯರಲ್ಲಿ ಒಬ್ಬನಾದ ಮಹಮೂದ್ ಅಲ್-ಜಹರ್ ಹೆಸರು ಮುಂಚೂಣಿಯಲ್ಲಿದೆ. ಈತನೇ ಸಿನ್ವರ್‌ನ ಉತ್ತರಾಧಿಕಾರಿಯಾಗಲಿದ್ದಾನೆ ಎನ್ನಲಾಗುತ್ತಿದೆ. ಕಠಿಣ ನಿಲುವಿಗೆ ಹೆಸರುವಾಸಿಯಾದ ಅಲ್-ಜಹರ್, ಹಮಾಸ್‌ ಗುಂಪಿನ ಸೈದ್ಧಾಂತಿಕ ಚೌಕಟ್ಟನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. 2006ರ ಫ್ಯಾಲಸ್ತೀನ್‌ ಶಾಸಕಾಂಗ ಚುನಾವಣೆಯ ನಂತರ ಹಮಾಸ್‌ ಗುಂಪು ಅಧಿಕಾರಕ್ಕೆ ಏರುವಲ್ಲಿ ಅಲ್-ಜಹರ್ ನಿರ್ಣಾಯಕ ಪಾತ್ರ ವಹಿಸಿದ್ದ ಮತ್ತು ಅದರ ಮೊದಲ ವಿದೇಶಾಂಗ ಸಚಿವನಾಗಿಯೂ ಆಯ್ಕೆಯಾಗಿದ್ದ. 1992 ಮತ್ತು 2003ರಲ್ಲಿ ಇಸ್ರೇಲ್‌ ಸೇನೆಯ ಹತ್ಯೆ ಯತ್ನಗಳಿಂದ ಬದುಕುಳಿದಿರುವ ಅಲ್-ಜಹರ್ ಹಮಾಸ್‌ನ ರಾಜಕೀಯ ಚಟುವಟಿಕೆಯಲ್ಲಿ ಪ್ರಮುಖ ವ್ಯಕ್ತಿಯಾಗಿದ್ದಾನೆ.

ಮೊಹಮ್ಮದ್ ಸಿನ್ವರ್ (Mohammed Sinwar)

ಯಾಹ್ಯಾ ಸಿನ್ವರ್‌ನ ಸಹೋದರ ಮೊಹಮ್ಮದ್ ಸಿನ್ವರ್ ಮತ್ತೊಬ್ಬ ಸಂಭಾವ್ಯ ಉತ್ತರಾಧಿಕಾರಿ. ಈತ ಕೂಡ ತನ್ನ ಸಹೋದರನಂತೆ ಹಮಾಸ್‌ನ ಮಿಲಿಟರಿ ವಿಭಾಗದಲ್ಲಿ ದೀರ್ಘ ಕಾಲದಿಂದ ನಾಯಕನಾಗಿದ್ದಾನೆ. ಒಂದುವೇಳೆ ಮೊಹಮ್ಮದ್ ಸಿನ್ವರ್ ನಾಯಕತ್ವ ವಹಿಸಿಕೊಂಡರೆ ಶಾಂತಿ ಮಾತುಕತೆಗಳನ್ನು ಇನ್ನಷ್ಟು ಜಟಿಲವಾಗಲಿದೆ ಎಂದು ಅಮೆರಿಕದ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಹಮಾಸ್‌ನ ಮಿಲಿಟರಿ ಕಾರ್ಯಾಚರಣೆಗಳಲ್ಲಿ ನಿರ್ಣಾಯಕ ವ್ಯಕ್ತಿಯಾಗಿರುವ ಈತನ ಹತ್ಯೆಗೂ ಇಸ್ರೇಲ್‌ ಹಲವು ಬಾರಿ ಯತ್ನಿಸಿತ್ತು.

ಮೌಸಾ ಅಬು ಮರ್ಜೌಕ್ (Mousa Abu Marzouk)

ಹಮಾಸ್‌ನ ರಾಜಕೀಯ ಬ್ಯೂರೋದ ಹಿರಿಯ ಸದಸ್ಯ ಮೌಸಾ ಅಬು ಮರ್ಜೌಕ್ ಮತ್ತೊಬ್ಬ ಸಂಭಾವ್ಯ ನಾಯಕ. 1980ರ ದಶಕದ ಉತ್ತರಾರ್ಧದಲ್ಲಿ ಪ್ಯಾಲಸ್ತೀನ್‌ ಮುಸ್ಲಿಂ ಬ್ರದರ್ ಹುಡ್‌ನಿಂದ ಬೇರ್ಪಟ್ಟ ನಂತರ ಆತ ಹಮಾಸ್ ಅನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಈತ ಒಂದು ಕಾಲದಲ್ಲಿ ಹಮಾಸ್‌ನ ರಾಜಕೀಯ ಬ್ಯೂರೋದ ಮುಖ್ಯಸ್ಥನಾಗಿದ್ದ. ಉಗ್ರಗಾಮಿ ಚಟುವಟಿಕೆಗಳಿಗೆ ಬೆಂಬಲ ಸೇರಿದಂತೆ ಸಾಂಸ್ಥಿಕ ಮತ್ತು ಹಣಕಾಸು ಕಾರ್ಯಾಚರಣೆಗಳಲ್ಲಿ ದೀರ್ಘ ಕಾಲದಿಂದ ತೊಡಗಿಸಿಕೊಂಡಿದ್ದಾನೆ. ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ 1990ರ ದಶಕದಲ್ಲಿ ಅಮೆರಿಕದ ಜೈಲಿನಲ್ಲಿದ್ದ ಆತನನ್ನು ಬಳಿಕ ಜೋರ್ಡಾನ್‌ಗೆ ಗಡೀಪಾರು ಮಾಡಲಾಯಿತು.

ಮೊಹಮ್ಮದ್ ದೀಫ್ (Mohammed Deif)

ಹಮಾಸ್‌ನ ಮಿಲಿಟರಿ ವಿಭಾಗವಾದ ಇಜ್ ಅಲ್-ದಿನ್ ಅಲ್-ಖಾಸ್ಸಾಮ್ ಬ್ರಿಗೇಡ್‌ನ ಕಮಾಂಡರ್ ಮೊಹಮ್ಮದ್ ದೀಫ್ ಇಸ್ರೇಲಿ ವೈಮಾನಿಕ ದಾಳಿಯ ನಂತರ ಸಾವನ್ನಪ್ಪಿದ್ದಾನೆ ಅಥವಾ ತೀವ್ರವಾಗಿ ಗಾಯಗೊಂಡಿದ್ದಾನೆ ಎಂಬ ವದಂತಿಗಳಿವೆ. ಅದಾಗ್ಯೂ ಆತ ಇನ್ನೂ ಜೀವಂತವಾಗಿದ್ದಾನೆ ಎನ್ನಲಾಗುತ್ತಿದೆ. 2023ರ ಅಕ್ಟೋಬರ್ 7ರ ದಾಳಿ ಸೇರಿದಂತೆ ಹಮಾಸ್‌ನ ಅನೇಕ ಅತ್ಯಾಧುನಿಕ ಕಾರ್ಯಾಚರಣೆಗಳ ಮಾಸ್ಟರ್ ಮೈಂಡ್ ಎಂದು ಕರೆಯಲ್ಪಡುವ ದೀಫ್ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.

ಖಲೀಲ್ ಅಲ್-ಹಯ್ಯ (Khalil al-Hayya)

ಖಲೀಲ್ ಅಲ್-ಹಯಾ ಪ್ರಸ್ತುತ ಕತಾರ್‌ನಲ್ಲಿ ನೆಲೆಸಿದ್ದಾನೆ. ಈತ ಹಮಾಸ್‌ನ ರಾಜಕೀಯ ಬ್ಯೂರೋದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದು, ಹಿಂದಿನ ಸಂಘರ್ಷಗಳಲ್ಲಿ ಕದನ ವಿರಾಮ ಮಾತುಕತೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. ಗಾಜಾದಲ್ಲಿನ ಪ್ರಸ್ತುತ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸಲು ಹಮಾಸ್ ಚಿಂತನೆ ನಡೆಸಿದರೆ ಖಲೀಲ್ ಅಲ್-ಹಯಾಗೆ ನಾಯಕತ್ವ ಪಟ್ಟ ಕಟ್ಟಲಿದೆ. ಇಸ್ರೇಲ್ ಜತೆಗಿನ 2014ರ ಕದನ ವಿರಾಮ ಮಾತುಕತೆಗಳಲ್ಲಿ ಆತ ಪ್ರಮುಖ ಪಾತ್ರವಹಿಸಿದ್ದ. 2007ರಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಅಲ್-ಹಯಾ ಬದುಕುಳಿದಿದ್ದಾನೆ.

ಖಾಲಿದ್ ಮಶಾಲ್ (Khaled Mashal)

2006ರಿಂದ 2017ರವರೆಗೆ ಒಂದು ದಶಕಕ್ಕೂ ಹೆಚ್ಚು ಕಾಲ ಹಮಾಸ್ ಅನ್ನು ಮುನ್ನಡೆಸಿದ ಖಾಲಿದ್ ಮಶಾಲ್, ಕೆಲವು ಪ್ರಮುಖ ಬಣಗಳ ಪರವಾಗಿಲ್ಲದಿದ್ದರೂ ಪ್ರಭಾವಶಾಲಿ ನಾಯಕನಾಗಿ ಗುರುತಿಸಿಕೊಂಡಿದ್ದಾನೆ. ಆತ ನಾಯಕತ್ವದ ವೇಳೆ ಹಮಾಸ್‌ನ ಕೆಲವು ಪ್ರಮುಖ ಮಿಲಿಟರಿ ಮತ್ತು ರಾಜಕೀಯ ಚಟುವಟಿಕೆಗಳ ಮೇಲ್ವಿಚಾರಣೆ ನಡೆಸಿದ್ದ. ಈಗ ಕತಾರ್‌ನಲ್ಲಿ ನೆಲೆಸಿರುವ ಮಶಾಲ್ ಉತ್ತರಾಧಿಕಾರಿಯಾಗುವ ಸಾಧ್ಯತೆ ಇದೆ.

ಈ ಸುದ್ದಿಯನ್ನೂ ಓದಿ: Yahya Sinwar: ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವರ್‌ನನ್ನು ಹೊಡೆದುರುಳಿಸಿದ ವಿಡಿಯೊ ರಿಲೀಸ್‌ ಮಾಡಿದ ಇಸ್ರೇಲ್‌ ಸೇನೆ