Monday, 3rd October 2022

ಕೋಟೆಯ ಕೌತುಕ

ಸಹ್ಯಾದ್ರಿಯ ನಡುವಿನ ದಟ್ಟ ಅರಣ್ಯದಲ್ಲಿರುವ ಈ ಕೋಟೆಯ ಆವರಣ ಪಾಳು ಈಗ ಪಾಳು ಬಿದ್ದಿದೆ. ಆ ಸುತ್ತಲಿನ ಕಾಡಿನಲ್ಲಿ ಕರಿಮೆಣಸು ಕೋಟೆಯ ಕೌತುಕ ಬೆಳೆಯುತ್ತದೆ!

ಮಮತಾ ಹೆಗಡೆ

ಇದೊಂದು ಚಾರಣದ ಕಥೆ. ಸುಮಾರು ೧೧ ಕಿ.ಮೀ. ಗಳಲ್ಲಿ ಮುಗಿಯಬಹುದು ಎಂಬ ಅಂದಾಜಿನಲ್ಲಿ ಶುರುವಾಗಿ, ೨೫ ಕಿ.ಮೀ. ಗಳಲ್ಲಿ ಕೊನೆಗೊಂಡ ಸ್ವಾರಸ್ಯಕರ ಕಥೆ. ಮಲೆನಾಡು ಮತ್ತು ಕರಾವಳಿಯ ಅಂಚಿನ ಕಾಡು ಪ್ರದೇಶದಲ್ಲಿ ಹುಟ್ಟಿ ಬೆಳೆದಿದ್ದರೂ ಸಹ್ಯಾದ್ರಿಯ ಗಿರಿ ಕಂದರಗಳ ಚಾರಣದ ಅವಕಾಶ ಒದಗಿಯೇ ಇರಲಿಲ್ಲ.

ತರಹೇವಾರಿ ಸಸ್ಯ, ಪ್ರಾಣಿ ಪ್ರಭೇಧಗಳನ್ನು ಇಟ್ಟುಕೊಂಡು ಸದಾ ಅಚ್ಚರಿಯ ಗಣಿ ನಮ್ಮ ಪಶ್ಚಿಮಘಟ್ಟದ ನಿತ್ಯ ಹರಿದ್ವರ್ಣ ಕಾಡುಗಳು. ಅಂತಹ ಕಾನೊಳಗೆ ನಮ್ಮದೊಂದು ಚಾರಣ! ಚಿಕ್ಕಂದಿನಿಂದಲೂ ಮನೆಯಲ್ಲಿ ಹೇಳುತ್ತಿದ್ದರು, ಉತ್ತರಕೊಪ್ಪದ ಕಾಡಿನೊಳಗೊಂದು ಕೋಟೆಯಿದೆ; ಕೊಪ್ಪದ ಗುಡ್ಡಗಳ ಆಚೆ ಸಿಗುವ ಊರೇ ಗೇರುಸೊಪ್ಪೆ. ಮೊದಲೆಲ್ಲ ನಮ್ಮೂರಿನವರು ಕಾಲ್ನಡಿಗೆಯ ಗೇರುಸೊಪ್ಪ, ಸಿದ್ಧಾಪುರಗಳಿಗೆ ಹೋಗುತಿದ್ದರಂತೆ. ನನಗೂ ಒಂದು ಕುತೂ ಹಲವಿತ್ತು.

ಇಷ್ಟು ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಲು ಸಾಧ್ಯವೆ ಎಂದು! ಹಿಂದೆ ನಮ್ಮೂರಿನ ಮರಾಠಿ ಜನರು ತಿನ್ನಲು ತಾಳೆ ಮರದ ಹಿಟ್ಟನ್ನು, ಮನೆಗಳಿಗೆ ಹೊದಿಕೆ ಹಾಕಲು ಮರದ ಗರಿಗಳನ್ನು ತರಲು ಕಾಡಿನೊಳಗೆ ಹೋಗುತ್ತಿದ್ದರಂತೆ. ಅವರು ಈ ಕೋಟೆಯನ್ನು ನೋಡಿದ್ದರಂತೆ. ಅವರ ಜ್ಞಾನಕ್ಕೆ ಅದು ಉತ್ತರ ಕೊಪ್ಪ (ನಮ್ಮೂರ ಕೋಟೆ) ಕೋಟೆ. ಇದೇ ಜ್ಞಾನದ ಮೇಲೆ ನಾವೂ ಒಂದು ಉಮೇದಿ ಮಾಡಿದೆವು.

ಒಬ್ಬಳೇ ಹುಡುಗಿ
ಕೋಟೆಗೆ ಹೋಗುವ ಪ್ರಾಜೆಕ್ಟ್ ಸೀರಿಯಸ್ ಆದಂತೆಲ್ಲ ಮಾಹಿತಿ ಸಂಗ್ರಹಿಸಿದೆ. ಇದು ರಾಣಿ ಚೆನ್ನಾಭೈರಾದೇವಿ (ಕಾನೂರು ಕೋಟೆ
ಯ ರಾಣಿ) ಕಟ್ಟಿಸಿದ ಕೋಟೆ! ಇಡೀ ಭಾರತದ ಸುದೀರ್ಘ ಕಾಲ ರಾಜ್ಯಭಾರ ಮಾಡಿದ ರಾಣಿ ಅವಳು! ನಮ್ಮ ತಂಡದ ಚಾರಣಿಗರ ಸಂಖ್ಯೆ ೯. ನಾನೊಬ್ಬಳೇ ಹುಡುಗಿ. ನನ್ನ ೫ ವರ್ಷದ ಮಗಳು ಬೇರೆ ಕೋಟೆಗೆ ಹೋಗುವ ಸುದ್ದಿ ಕೇಳಿದಾ ಗಿನಿಂದ ನಾನೂ ಬರುವೆ ಎಂದು ದುಂಬಾಲು ಬಿದ್ದಿದ್ದಳು. ಮಗಳಿಗೆ ತಿಳಿ ಹೇಳಿ ಮುಂದಿನ ಸಲ ಕರೆದುಕೊಂಡು ಹೋಗುವುದಾಗಿ ಒಪ್ಪಿಸಿ, ಯಜಮಾನರ
ಪ್ರೋತ್ಸಾಹದೊಂದಿಗೆ ಹೊರಟೆ.

ಉತ್ತರ ಕೊಪ್ಪದ ರಸ್ತೆಯಾಚೆಯ ಗುಡ್ಡದ ಇಳಿಜಾರಿನ ತಪ್ಪಲಿನಿಂದ ಬೆಳಗಿನ ೯ ಘಂಟೆಗೆ ನಮ್ಮ ಚಾರಣ ಶುರುವಾಯಿತು. ಆಗಾಗ್ಗೆ ಕಾಲುಗಳಿಗೆಲ್ಲ ಡೆಟಾಲ್, ಸುಣ್ಣ, ನಸ್ಯ ಬಳಿದುಕೊಳ್ಳುತ್ತಿದ್ದರೂ, ಅಂಬುಳ(ಜಿಗಣೆ)ಗಳಿಂದ ಕಚ್ಚಿಸಿ ಕೊಳ್ಳುತ್ತಾ ನಮ್ಮ ಚಾರಣ ಸಾಗಿತು. ಸುಮಾರು ೪ ಕಿ.ಮೀ. ನಡೆದಾಗ ಕಾಣಿಸಿ ದವಳೇ ಝುಳು ಝುಳು ಧಾರೆಯಾಗಿ ಧುಮ್ಮಿಕ್ಕುತ್ತಿರುವ ಅನಾಮಿಕ ಸುಂದರಿ. ಜಲಪಾತದ ನೆತ್ತಿಯನ್ನು ತಲುಪಿದಾಗ ಸುಂದರ ನೋಟ. ಜಲಧಾರೆಯ ಸೌಂದರ್ಯದಿ ಮಿಂದೇಳುವ ಹೊತ್ತಿಗೆ ಸುಮಾರು ಮುಕ್ಕಾಲು ಘಂಟೆ ಕಳೆದದ್ದೇ ತಿಳಿಯಲಿಲ್ಲ.

ನಾಲ್ಕು ಮನೆಗಳ ಹಳ್ಳಿ
ಮುಂದಿನ ದಾರಿ ಹಿಡಿದು ಹೊರಟ ನಮ್ಮ ತಲೆಯಲ್ಲಿದ್ದುದು, ಕೊಪ್ಪದಿಂದ ಜಲಪಾತ ೪ ಕಿ.ಮೀ. ಮತ್ತೆ ಅಲ್ಲಿಂದ ಕೋಟೆ ೪ ಕಿ.
ಮೀ. ಹೀಗೆ ಕೋಟೆ ವೀಕ್ಷಿಸಿ ಮಧ್ಯಾಹ್ನದಷ್ಟೊತ್ತಿಗೆ ಮನೆ ತಲುಪಬಹುದು ಎಂದು. ನಮ್ಮ ಉಳಿದ ೪ ಕಿ.ಮೀ(?) ಪಯಣ ಶುರು ಆಯಿತು. ಜಲಪಾತ ದಿಂದಾಚೆಯ ದಾರಿಯಂತೂ ದುರ್ಗಮವಾಗಿ, ಕಠಿಣ ಚಾಣ ಎನಿಸಿತು.

ನಾಲ್ಕು ಕಿ.ಮೀ. ಐದಾಯಿತು, ಆರಾಯಿತು ಹೀಗೆ ಸುಮಾರು ಎಂಟು ಕಿ.ಮೀ. ನಡೆದ ನಂತರ ಸಿಕ್ಕ ಊರೇ ಚೀಕನಹಳ್ಳಿ. ನಾಲ್ಕು -ಐದು ಮನೆಗಳ ಪುಟ್ಟ ಊರು. ನಾಯಿಗಳು ಒಂದೇ ಸಮನೆ ಬೊಗಳತೊಡಗಿದವು. ಯಾವ ಮನೆ ಗಳಿಗೂ ಬೀಗ ಹಾಕಿರಲಿಲ್ಲ. ಕಾಡಿನ ಹಸಿರ ಕೋಟೆಯ ಮಧ್ಯೆಯಿರುವ ಅವರಿಗೆ ಯಾವ ಕಳ್ಳ ಕಾಕರ ಭಯ? ಊರು ದಾಟಿ ಮತ್ತೆ ಗುಡ್ಡ ಏರತೊಡಗಿದೆವು. ಈಗ ಒಂದೇ ಸಮನೆ ಮೇಲ್ಮುಖವಾಗಿ ಸಾಗುವ ದಾರಿ. ಅದೂ ಸುಮಾರು ೫ ಕಿ. ಮೀ. ಸುಸ್ತಾಯಿತು.

ಸಮ ದಾರಿಗೆ ಬಂದು ತಲುಪುವಲ್ಲಿಗೆ ನನ್ನ ಕಥೆ ಅರ್ಧ ಮುಗಿದಿತ್ತು. ಬೆನ್ನಿಗಿದ್ದ ಭಾರವಾದ ಬ್ಯಾಗ್, ಕಾಲುಗಳನ್ನು ಎತ್ತಿಡಲು ಆಗದಷು ಸುಸ್ತು. ಮುಗಿಯಿತು, ದಿ ಎಂಡ್ ಪರಿಸ್ಥಿತಿ ನನ್ನದು. ನನ್ನ ಯಜಮಾನರು ಮತ್ತೆ ಸಂಗಡಿಗರ ಪ್ರೋತ್ಸಾಹ ಮುಂದೆ ಸಾಗಲು ಸೂರ್ತಿಯಾಯಿತು. ಅಲ್ಲಿಂದ ಮುಂದೆ ಸಾಗಿ ಬಂದು ತಲುಪಿದ್ದು ಸಾಲೆಕೊಡ್ಲು ಎಂಬ ಊರಿಗೆ. ಈ ಹಳ್ಳಿಯೂ
ಮೊದಲಿನ ಹಳ್ಳಿಗಿಂತೇನೂ ಭಿನ್ನವಾಗಿರಲಿಲ್ಲ.

ವಿದ್ಯುತ್, ಫೋನು, ಸಾರಿಗೆ ಇವೆಲ್ಲಾ ಇನ್ನೂ ಅಪರಿಚಿತ ಅವರಿಗೆ. ಅವರ ಮನೆಯ ಸಗಣಿ ಸಾರಿಸಿದ ಅಂಗಳದಲ್ಲಿ ಕುಳಿತು ಅವರಿತ್ತ ನೀರನ್ನು ಗಟ ಗಟನೆ ಕುಡಿದು, ಒಂದಿಷ್ಟು ಬಾಟಲಿಗಳಲ್ಲೂ ತುಂಬಿಸಿಕೊಂಡು ಚಾರಣ ಮುಂದುವರೆಸಿದೆವು.

ಮೈ ಕೈ ಚುಚ್ಚುವ ಬೆತ್ತದ ಗಿಡ 
ಮುಂದೆ ಸಿಗಲಿರುವ ಊರಿನ ಹೆಸರು ಹೆಬ್ಬಾನ್‌ಕಾನ್. ಮತ್ತೆ ಸುಮಾರು ೫-೬ ಕಿ.ಮೀ. ನಡೆಯಬೇಕು. ಅದು ಎಂತಹ ದಾರಿ ಯೆಂದರೇ.. ಅಬ್ಬಾ ! ಈಗಲೂ ಮೈ ರೋಮಾಂಚನ ಗೊಳ್ಳುತ್ತದೆ. ದಟ್ಟವೂ, ಅಭೇಧ್ಯವೂ ಆದ ಕಾಡಿನ ದಾರಿಯುದ್ದಕ್ಕೂ ಮೈಕೈಗೆ ಚುಚ್ಚುವ ಬೆತ್ತದ ಗಿಡಗಳು, ಧರೆಗುರುಳಿದ ಬೃಹದಾರದ ಮರಗಳು, ಮೇಲಿನಿಂದೆ ಜೋತು ಬಿದ್ದ ಬೆತ್ತದ ಕೋಲನ್ನು ಹಿಡಿದು ಈಚೆ ದಡದಿಂದ ಆಚೆ ದಡಕ್ಕೆ ಜಿಗಿಯಬೇಕಾದಂತಹ ಕಂದಕಗಳು.

ಪ್ರಪಾತಗಳ ಅಂಚಿನ ಕಿರು ದಾರಿಗಳು. ನನ್ನ ಬದುಕಿನ ಪುಟಗಳಲ್ಲಿ ಸಾಕ್ಷೀಕರಿಸಿದ ಅದ್ಭುತ ಚಾರಣವಿದು. ಇಂತಹ ಕಾಡಿನ ಮಧ್ಯದಂದು, ವರ್ಷಕ್ಕೊಮ್ಮೆ ಪೂಜೆಗೊಳ್ಳುವ ಅನಾದಿಕಾಲದ ಶಿವ ದೇವಾಲಯ. ಕೊನೆಗೂ ಒಂದು ಊರು ಸಿಕ್ಕುವ ಸೂಚನೆ ಮನಸ್ಸಿಗೆ ಸಮಾಧಾನ ತಂದಿದ್ದಂತೂ ಸುಳ್ಳ. ದಟ್ಟ ವನದ ದುರ್ಗಮ ಹಾದಿಗಳಲ್ಲಿ ಸಂಚರಿಸಿದ ನಮಗೆ ಸಂಜೀವಿನಿಯಂತೆ ಕಂಡ ಊರು ಹೆಬ್ಬಾನ್ ಕಾನ್. ಸುಮಾರು ಮಧ್ಯಾಹ್ನ ೩ ಘಂಟೆಗೆ ನಾವು ಈ ಊರು ತಲುಪಿದಾಗ, ಇನ್ನೇನು ಕೋಟೆ ತಲುಪಿದೆವು ಎನ್ನುವ ಸಂತೋಷ.

ಸ್ಥಳೀಯರನ್ನು ವಿಚಾರಿಸಿದಾಗ ಕೋಟೆ ತಲುಪಲು ಇನ್ನೂ ಸುಮಾರು ೮ ಕಿ.ಮೀ. ನಡೆಯಬೇಕು ಎಂದರು. ಉಸ್ಸಪ್ಪಾ ! ನನ್ನಿಂದ ಇನ್ನು ಒಂದು ಹೆಜ್ಜೆಯಿಡಲೂ ಆಗದು ಎಂದು ನಾನಂತೂ ಅ ಕುಸಿದೆ. ಈಗೇನು ಮಾಡುವುದೆಂದು ಯೋಚಿಸುತ್ತಿರುವಾಗಲೇ
ಸ್ಥಳೀಯರೊಬ್ಬರು ಇಲ್ಲಿ ಒಬ್ಬರದು ಜೀಪ್ ಇದೆ, ಅವರು ನಿಮಗೆ ಸಹಾಯ ಮಾಡಬಹುದು ಎಂದರು (ಆ ದಾರಿಯಲ್ಲಿ ಜೀಪ್
ಮಾತ್ರ ಸಂಚರಿಸಬಹುದು). ಅವರನ್ನು ಹುಡುಕಿ ವಿಚಾರಿಸಿದಾಗ, ಅವರು ಒಪ್ಪಿ ನಮ್ಮನ್ನೆಲ್ಲ ಜೀಪಿನಲ್ಲಿ ಹತ್ತಿಸಿಕೊಂಡು ಸುಮಾರು ೫ ಕಿ.ಮೀ. ದೂರ ತಂದು ಜೀಪ್ ನಿಲ್ಲಿಸಿದರು.

‘ನೋಡಿ ಮಕ್ಕಳಾ ಜೀಪ್ ಇಲ್ಲಿ ತನಕ ಮಾತ್ರ ಬರೋದು. ಮುಂದಿನ ಎರಡು ಕಿ.ಮೀ. ನಡೆದುಕೊಂಡೇ ಹೋಗಬೇಕು’ ಎಂದರು. ಮತ್ತೆ ಚಾರಣ. ದಟ್ಟವಾದ ಕಾಡು ಗಿಡ ಗಂಟಿಗಳನ್ನುಸರಿಸುತ್ತ, ಕಂದಕಗಳನ್ನು ಜಿಗಿಯುತ್ತ, ಗುಡ್ಡವನ್ನು ಹತ್ತತೊಡಗಿದೆವು. ಆ ದಾರಿಯ ಮೇಲೆ ಈಗ ತಾನೇ ನಡೆದುಹೋದ ಕಾಡು ಕೋಣಗಳ ಹೆಜ್ಜೆಗುರುತು ಹಸಿಮಣ್ಣಿನಲ್ಲಿ ಅಚ್ಚೊತ್ತಿದಂತಿತ್ತಿತ್ತು.
ಅಂತೂ ಕೋಟೆಯ ಕುರುಹು ಎಂಬಂತೆ ದೊಡ್ಡದಾದ ಕೆರೆ ಯೊಂದು ಕಾಣಿಸಿತು. ಅದು ರಾಣಿ ಕೆರೆ. ಗೊಂಡಾರಣ್ಯದ ನಡುವೆ
ವಿಶಾಲವಾದ ಸಮತಟ್ಟು ಜಾಗದಲ್ಲಿ ಮೈ ಹರವಿ ಮಲಗಿರುವ ೫೦೦ ವರ್ಷಗಳ ಇತಿಹಾಸವನ್ನು ತನ್ನೊಡಲಲ್ಲಿ ಅಡಗಿಸಿ ಕೊಂಡಿರುವ ಶುಭ್ರ ಜಲರಾಶಿ.

ಅದಾಗಲೇ ಗಡಿಯಾರದಲ್ಲಿ ೪ ಘಂಟೆಯಾಗಿತು. ಹೊಟ್ಟೆ ತಾಳ ಹಾಕುತ್ತಿತ್ತು. ರಾಣಿಕೆರೆಯ ದಡದ ಮೇಲೆ ಕುಳಿತು ಹೊಟ್ಟೆ ತಣ್ಣಗಾಗಿಸಿಕೊಂಡು, ಹದಿನೈದು ನಿಮಿಷ ನಡೆದು ಕೋಟೆಯ ಬಾಗಿಲಿಗೆ ಬಂದು ತಲುಪಿದೆವು. ಇಲ್ಲಿ ಎಲ್ಲರ ಸೆಲ್ ಫೋನ್‌ಗಳು ಸದ್ದು ಮಾಡಲು ಶುರು ಮಾಡಿದವು. ನಾವು ಮನೆ ಬಿಟ್ಟ ಮೇಲೆ ಮೊಬೈಲ್ ಸಿಗ್ನಲ್ ಕಂಡಿದ್ದು ಈಗಲೇ. ನಮ್ಮ ಗೈಡ್
ಬಿನ್ನಿಯವರು ನಮ್ಮನ್ನು ಸರಾಗವಾಗಿ ಗುರಿ ತಲುಪಿಸಿದರು.

ಕೋಟೆಯೇನು ಇತ್ತು, ಆದರೆ ಎಲ್ಲಾ ಕಡೆ ಹಾಳು ಬಿದ್ದಿತ್ತು. ವಾಸ್ತು ರಚನೆಗಳನ್ನು ಜನರು ಹಾಳುಗೆಡಹಿದ್ದರು. ನಮಗೆ ಕೋಟೆಯ ನಿರ್ವಹಣೆ ಕೊಂಚ ಬೇಸರ ಮೂಡಿಸಿತು. ರಾಣಿ ಚೆನ್ನಾಭೈರಾದೇವಿ ಆಳಿದ ನಾಡಿನಲ್ಲಿ ಹುಟ್ಟಿದ ನಾನೆಷ್ಟು ಧನ್ಯ ಎಂಬಷ್ಟು ಹೆಮ್ಮೆ ಪಡುವ ಇತಿಹಾಸ ಈ ಕೋಟೆಯದ್ದು, ಆದರೆ ಇಂದು ಯಾರಿಗೂ ಬೇಡವಾದ ಒಂದು ಸಾಮಾನ್ಯ ಪಾಳುಬಿದ್ದ
ಜಾಗವಾಗಿ ಬಿಟ್ಟಿದೆ!

ಇವೆಲ್ಲದರ ನಡುವೆ ನಮ್ಮೂರ ಕೋಟೆ ನೋಡಿದ ಖುಷಿ. ಪುನಃ ನಡೆದುಕೊಂಡೇ ಮನೆಗೆ ಹಿಂದಿರುಗುವಷ್ಟು ತ್ರಾಣ ಇಲ್ಲದಿದ್ದು ದರಿಂದ, ರಾಮಚಂದ್ರಪ್ಪನವರ ಜೀಪಿನಲ್ಲಿ ಬಿಳಿಗಾರ್ ತಲುಪಿದೆವು. ಅಲ್ಲಿ ಬಾಡಿಗೆ ಗಾಡಿಗಾಗಿ ಕಾಯುವಾಗ ಬಾಯಲ್ಲಿ ಉಫ್ ಎಂದು ಗಾಳಿ ಬಿಟ್ಟಾಗ ಮಂಜಿನ ಹೊಗೆ! ಚಳಿ. ಅಂತೂ ಸುಮಾರು ಮಧ್ಯರಾತ್ರಿ ೧೨ ರ ಸುಮಾರಿಗೆ ಮನೆ ತಲುಪಿದೆವು.
ಮುಂದಿನ ಒಂದೆರಡು ದಿನ ನಮ್ಮೂರ ಕೋಟೆ… ಅಲ್ಲ ಅಲ್ಲ ಕಾನೂರು ಕೋಟೆಯದ್ದೇ ಗುಂಗು.

ಕರಿಮೆಣಸಿನ ರಾಣಿ
ಕಾನೂರು ಕೋಟೆಯಲ್ಲಿ ಹದಿನಾರನೆಯ ಶತಮಾನದಲ್ಲಿ ಆಳ್ವಿಕೆ ನಡೆಸಿದ ಕರಿಮೆಣಸಿನ ರಾಣಿ ಚೆನ್ನಭೈರಾದೇವಿಯ ಕುರಿತು ಹಲವು ಕಥನಗಳಿವೆ. ನಮ್ಮ ದೇಶದ ಇತಿಹಾಸದಲ್ಲಿ ಅತಿ ದೀರ್ಘಕಾಲ (೫೪ ವರ್ಷ. ೧೫೫೨-೧೬೦೬) ಆಳ್ವಿಕೆ ನಡೆಸಿದ ರಾಣಿ ಅವಳು. ಸಾಹಿತಿ ಗಜಾನನ ಶರ್ಮ ಅವರು ಆಕೆಯ ಕುರಿತು ಸಂಶೋಧನೆ ನಡೆಸಿ, ‘ಚೆನ್ನಭೈರಾದೇವಿ’ ಕಾದಂಬರಿಯನ್ನು ರಚಿಸಿದ್ದಾರೆ. ನಾನಂತು ಮೊದಲ ದಿನವೇ ಅದನ್ನು ಕೊಂಡು ತಂದಿದ್ದೇನೆ. ಕಾನೂರು ಕೋಟೆಯು ಈಗ ಅರಣ್ಯದಲ್ಲಿ ಮುಚ್ಚಿಹೋಗಿದೆ, ಬೆಟ್ಟದ ತುದಿಯಲ್ಲಿರುವ ದೇಗುಲ, ಅರಮನೆ, ಬುರುಜು ಮತ್ತಿತರ ರಚನೆಗಳು ಮರಗಿಡಗಳ ನಡುವೆ ಪಾಳು ಬಿದ್ದಂತಿವೆ.

ಸೂಚನೆ : ಕಾನೂರು ಕೋಟೆ ವೀಕ್ಷಣೆಗೆ ಅರಣ್ಯ ಇಲಾಖೆಯ ಅನುಮತಿ ಕಡ್ಡಾಯ.