Friday, 24th September 2021

ಸೇವಾ ಕಾಯಕದಲ್ಲಿ ಫುಲ್ ಸರ್ಕಲ್

ಬಾಲಕೃಷ್ಣ ಎನ್.

ಗ್ರಾಮೀಣ ಭಾಗದ ಬಡವರು, ವಿಕಲಚೇತನರು, ವಯಸ್ಕರು ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಕಾರ ನೀಡುವುದರೊಂದಿಗೆ, ಅವರ ಮನೋಸ್ಥೈರ್ಯ ಹೆಚ್ಚಿಸುವ ಪ್ರಯತ್ನ ಮಾಡುತ್ತಿದೆ ಫುಲ್ ಸರ್ಕಲ್ ಸಂಸ್ಥೆ.

ದಯವೇ ಧರ್ಮದ ಮೂಲವಯ್ಯ. ಇದೇ ನಮ್ಮ ಕೂಡಲ ಸಂಗಮನ ಒಲಿಸುವ ಪರಿ’ ಎಂದು ಹೇಳಿದ್ದಾರೆ ಬಸವಣ್ಣನವರು ತಮ್ಮ ವಚನಗಳಲ್ಲಿ. ಈ ಅಂಶದ ಅಡಿಯಲ್ಲಿಯೇ ಸರ್ವ ಧರ್ಮಗಳು ಕಾರ್ಯ ನಿರ್ವಹಿಸುತ್ತಾ ಇರುವುದು. ನಮ್ಮಲ್ಲಿ ಅನೇಕರು ತಾವು ಮಾಡುವ ಸೇವೆಯ ಬಗ್ಗೆ ಎಂದಿಗೂ ಸಮಾಜದ ಮುಂದೆ ಬಿಚ್ಚಿ ತೋರಿಸುವುದಕ್ಕೆ ಹೋಗುವುದಿಲ್ಲ. ಆದರೆ ಅವರು ಮಾಡುವ ಮಹೋನ್ನತ ಕೆಲಸವೂ ಅವರಿಗೆ ಸಮಾಜದಲ್ಲಿ ಒಂದು ವಿಶಿಷ್ಟ ಸ್ಥಾನ ನೀಡುವಲ್ಲಿ ಸಫಲವಾಗುತ್ತದೆ. ಅಂತಹ ಸಂಸ್ಥೆ ಫುಲ್ ಸರ್ಕಲ್.

ಗ್ರಾಮೀಣ ಭಾಗದ ಬಡವರು, ವಿಕಲಚೇತನರು, ವಯಸ್ಕರು ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ಅಗತ್ಯ ಆರ್ಥಿಕ ಸಹಕಾರದೊಂದಿಗೆ ಅವರ ಮನೋಸ್ಥೈರ್ಯ ಹೆಚ್ಚಿಸುವ ಮತ್ತು ಜೀವನಮಟ್ಟವನ್ನು ಸುಧಾರಣೆಗೊಳಿಸುವ ಹಿನ್ನೆಲೆಯಲ್ಲಿ ಹಾಗೂ ಸಮಾಜದ ವಿವಿಧ ಸೇವಾ ಕಾರ್ಯಗಳಿಗೆ ನೆರವಾಗುವ ಉದ್ದೇಶದೊಂದಿಗೆ ಜನ್ಮತಾಳಿದ ಸಂಸ್ಥೆ ಫುಲ್ ಸರ್ಕಲ್. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ಗಾದೆ ಮಾತಿನಂತೆ ಸಮಾಜದಲ್ಲಿ ಆರ್ಥಿಕವಾಗಿ ಸದೃಢರಾದವರು ತಮ್ಮ ಗಳಿಕೆಯ ಸಣ್ಣ ಪಾಲನ್ನು ಸಮಾಜಮುಖಿ ಕೈಕರ್ಯಗಳಿಗೆ ವಿನಿಯೋಗಿಸಲು ಈ ಸಂಸ್ಥೆ ಪೂರಕ ವಾತಾವರಣ ಕಲ್ಪಿಸಿಕೊಡುತ್ತದೆ.

ಸಮಾಜಮುಖಿ ಚಿಂತನೆಯಿಂದ ಹುಟ್ಟಿಕೊಂಡ ಈ ಸಂಸ್ಥೆ ವೈಯಕ್ತಿಕ, ರಾಜಕೀಯ ಭಿನ್ನಾಭಿಪ್ರಾಯ ಹಾಗೂ ಯಾವುದೇ ರೀತಿಯ ಒತ್ತಡಕ್ಕೂ ಒಳಗಾಗದೇ ನಿಷ್ಪಕ್ಷಪಾತವಾಗಿ ಸಮಾಜದ ಬಡವರ, ದುರ್ಬಲರ ಸೇವೆ ಮಾಡಲು ಸಂಕಲ್ಪಿಸಿದೆ. ಕರೋನಾ ಮಹಾಮಾರಿ ಎಡೆ ವ್ಯಾಪಿಸಿ ಸಾಕಷ್ಟು ಜನರ ಉದ್ಯೋಗ ಕಿತ್ತುಕೊಂಡಿದೆ. ಸಣ್ಣಪುಟ್ಟ ವ್ಯಾಪಾರ ಮಾಡುವವರು, ಕೂಲಿ ಕಾರ್ಮಿಕರು, ಚಾಲಕರು ತುತ್ತಿನ ಚೀಲ ತುಂಬಿಸಿಕೊಳ್ಳಲು ಹೆಣಗಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಂತಹ ತುತ್ತಿನ ಚೀಲ ತುಂಬಿಸಲು ಹುಟ್ಟಿರು ವಂತಹ ಈ ಸಂಸ್ಥೆಯೇ ಫುಲ್ ಸರ್ಕಲ್ ಸಂಸ್ಥೆ.

ಕೆಲವರು ಉಚಿತವಾಗಿ ಬಡವರಿಗೆ ಊಟ ನೀಡುತ್ತಿದ್ದಾರೆ ಅಂದ್ರೆ ಅದಕ್ಕೆ ಏನೋ ಒಂದು ಬಲವಾದ ಕಾರಣ ಇರುತ್ತೆ. ಅವರ ರಾಜಕೀಯ ಪ್ರಚಾರಕ್ಕೋ, ವೈಯಕ್ತಿಕ ವರ್ಚಸ್ಸೋ ಹೀಗೆ ಹಲವು ಕಾರಣಗಳಿಂದ ಅನ್ನ- ನೀರು ನೀಡುವ ಕೆಲಸ ಮಾಡ್ತಾರೆ. ಆದರೆ ಬೆಂಗಳೂರಿನ ಫುಲ್ ಸರ್ಕಲ್ ಸಂಸ್ಥೆ ಹಲವು ದಶಕ ಗಳಿಂದ ಅನ್ನ, ಅಕ್ಷರ ನೀಡುತ್ತಾ ಬಂದಿದೆ. ಅದರಲ್ಲೂ ಕರೋನಾ ಸಮಯದಲ್ಲಿ ಆಹಾರ ಕಿಟ್‌ಗಳನ್ನು ಸಾಕಷ್ಟು ಜನರಿಗೆ ವಿತರಿಸಿದ್ದು ಈ ಸಂಸ್ಥೆಯ ವಿಶೇಷ ಪ್ರಯತ್ನ ಎಂದೇ ಗುರುತಿಸಲ್ಪಟ್ಟಿದೆ. ಅಕ್ಷರ, ಅನ್ನ, ಆರೋಗ್ಯ ಕ್ಷೇತಗಳಲ್ಲಿ ಬಡವರಿಗೆ, ಜನಸಾಮಾನ್ಯರಿಗೆ, ಅಗತ್ಯ ಉಳ್ಳವರಿಗೆ ಸಹಾಯ ಮಾಡುತ್ತಿರುವ ಫುಲ್ ಸರ್ಕಲ್ ಸಂಸ್ಥೆಯ ಕೆಲಸ ಶ್ಲಾಘನೀಯ.

ಏನೆಲ್ಲಾ ಮಾಡಿದೆ ಸಂಸ್ಥೆ

ಸಂಸ್ಥೆಯು ೨೦೧೧ ರಲ್ಲಿ ಆರಂಭವಾಗಿದ್ದು, ಸಮುದಾಯ ಅಭಿವೃದ್ಧಿ, ಪ್ರಾಥಮಿಕ ಶಿಕ್ಷಣಕ್ಕೆ ಒತ್ತು, ಪರಿಸರ ಹಾಗೂ ಕೌಶಲಾಭಿವೃದ್ಧಿ ಕುರಿತು ತರಬೇತಿ. ಸುಮಾರು ೩೨ ಮಾದರಿ ಶಾಲೆಗಳಲ್ಲಿ ಇಂತಹ ಸೇವೆ ಪ್ರಾರಂಭಿಸಿದೆ.

ಆರ್ಥಿಕವಾಗಿ ಹಿಂದುಳಿದ ಹಾಗೂ ಪೌರ ಕಾರ್ಮಿಕರಿಗೆ ಇತ್ತೀಚಿಗೆ ಉಚಿತವಾಗಿ ಆಹಾರ ಕಿಟ್‌ಗಳನ್ನು ವಿತರಿಸಿದೆ.

ಉಚಿತವಾಗಿ ಮಕ್ಕಳಿಗೆ ಯೋಗ ತರಬೇತಿ ಶಿಬಿರಗಳನ್ನು ಆಯೋಜಿಸುತ್ತಿದೆ.

ಜಿಗಣಿ ಹೋಬಳಿಯ ವಡೇರ ಮಂಚನಹಳ್ಳಿ ಮಹಿಳೆಯ ರಿಗೆ ಉಚಿತವಾಗಿ ಮೂರು ತಿಂಗಳ ಕಂಪ್ಯೂಟರ್ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ಯಲ್ಲಮ್ಮದೊಡ್ಡಿ ಪ್ರದೇಶದ ಜನರಿಗೆ ಉಚಿತವಾಗಿ ಟೈಲರಿಂಗ್ ತರಬೇತಿ ನೀಡಿದೆ.

Leave a Reply

Your email address will not be published. Required fields are marked *