Tuesday, 26th October 2021

ಶೋಷಿತ ಸಮುದಾಯಗಳು ಒಗ್ಗೂಡಬೇಕು

ತುಮಕೂರು: ಜಿಲ್ಲಾ ಹಿಂದುಳಿದ ಸಮುದಾಯಗಳ ಒಕ್ಕೂಟದಿಂದ ವಿಶ್ವಕರ್ಮ ಜಯಂತಿಯನ್ನು ಆಚರಿಸುವ ಮೂಲಕ ಶೋಷಿತ ಸಮುದಾಯಗಳೆಲ್ಲಾ ಒಂದು ಗೂಡಬೇಕೆ0ಬ ಸಂದೇಶವನ್ನು ರಾಜ್ಯಕ್ಕೆ ನೀಡುತ್ತಿದ್ದು,ಇದು ಮಾದರಿಯಾದ ಕೆಲಸ ಎಂದು ಸರಕಾರಿ ನೌಕರರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಜಿ.ಎಂ. ಸಣ್ಣ ಮುದ್ದಯ್ಯ ಅಭಿಪ್ರಾಯಪಟ್ಟಿದ್ದಾರೆ.

ನಗರದ ಮಡಿವಾಳ ಸಮಾಜದ ವಿದ್ಯಾರ್ಥಿನಿಲಯದ ಆವರಣದಲ್ಲಿ ತುಮಕೂರು ಜಿಲ್ಲಾ ಹಿಂದುಳಿದ ಸಮುದಾಯ ಗಳ ಒಕ್ಕೂಟವತಿಯಿಂದ ಆಯೋಜಿಸಿದ್ದ ವಿಶ್ವಕರ್ಮ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ವಿಶ್ವಕರ್ಮ ಸಮುದಾಯಕ್ಕೆ ಸೇರಿದ ಪತ್ರಕರ್ತ ಹರೀಶ್ ಆಚಾರ್ಯ,ಸುಧೀಂದ್ರ ಆನಂದರಾಮ್ ಮತ್ತು ಆಡಿಟರ್ ಸುನೀತ ಅವರುಗಳನ್ನು ಗೌರವಿಸಿ ಮಾತನಾಡುತಿದ್ದ ಅವರು, ಹರಿದು ಹಂಚಿ ಹೋಗಿರುವ ಶೋಷಿತ ಸಮುದಾಯಗಳು ಒಂದು ಸೂರಿನಡಿ ಬರಬೇಕೆಂಬ ಮಹತ್ವದ ಉದ್ದೇಶದಿಂದ ಹಿಂದುಳಿದ ಸಮುದಾಯಗಳ ಒಕ್ಕೂಟದ ಸಂಚಾ ಲಕರು ಈ ಕಾರ್ಯಕ್ರಮ ಆಯೋಜಿಸಿದ್ದಾರೆ ಎಂದರು.

ವಿಶ್ವಕರ್ಮರೆ0ದರೆ ಜಗತ್ತಿನ ಸೃಷ್ಟಿಕರ್ತರು, ತುಮಕೂರು ಜಿಲ್ಲಾ ಹಿಂದುಳಿದ ಸಮುದಾಯಗಳ ಒಕ್ಕೂಟದ ವತಿ ಯಿಂದ ಈ ಹಿಂದೆ ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಒಕ್ಕೂಟದಿಂದ ಆಚರಿಸಲಾಗಿತ್ತು.ಮುಂದಿನ ದಿನಗಳಲ್ಲಿ ಎಲ್ಲಾ ಶೋಷಿತ ಸಮುದಾಯಗಳ ಮುಖಂಡರ ಹುಟ್ಟು ಹಬ್ಬಗಳನ್ನು ಒಕ್ಕೂಟದಿಂದ ಆಚರಿಸುವ ಮೂಲಕ ನಮ್ಮ ನಮ್ಮಲ್ಲಿಯೇ ಇರುವ ಅಂತರವನ್ನು ಕಡಿಮೆ ಮಾಡಿಕೊಂಡು,ರಾಜಕೀಯವಾಗಿ,ಸಾಮಾಜಿಕವಾಗಿ,ಶೈಕ್ಷಣಿಕವಾಗಿ ಸವಲತ್ತುಗಳನ್ನು ಪಡೆದು,ಬಹುಸಂಖ್ಯಾತರಾಗಿ ಹೊರ ಹೊಮ್ಮುವ ನಿಟ್ಟಿನಲ್ಲಿ ಇಂದು ಒಳ್ಳೆಯ ಬೆಳವಣಿಗೆ ಎಂದು ಜಿ.ಎಂ.ಸಣ್ಣಮುದ್ದಯ್ಯ ತಿಳಿಸಿದರು.

ಆಡಿಟರ್ ಆಂಜನಪ್ಪ ಮಾತನಾಡಿ,ಅಧುನಿಕ ಸಮಾಜಕ್ಕೆ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರ. ಒಂದು ಸುಂದರ ಕೆತ್ತನೆಯಿಂದ ಹಿಡಿದು, ಬೃಹತ್ ಕಟ್ಟಡದವರೆಗೂ ಇವರ ಶ್ರಮವಿದೆ.ಮೂರ್ತಿಗೆ ರೂಪಕೊಟ್ಟು, ದೇವರಾಗಿಸುವ ಇವರ ಸಂಸ್ಕೃತಿ ಅತ್ಯಂತ ಉತ್ಕೃಷ್ಟವಾದುದ್ದು.ಹಿಂದುಳಿದ ಸಮುದಾಯಗಳ ಒಕ್ಕೂಟದಿಂದ ಇವರ ಜಯಂತಿ ಆಚರಿಸುತ್ತಿರುವುದು ಹೊಸ ಸಂಬ0ಧಕ್ಕೆ ಬೇಸುಗೆಯಾಗಿದೆ ಎಂದರು.

ಜಿಲ್ಲಾ ಹಿಂದುಳಿದ ಸಮುದಾಯಗಳ ಒಕ್ಕೂಟದ ಸಂಚಾಲಕ ಧನಿಯಕುಮಾರ್ ಮಾತನಾಡಿ, ಕಾಯಕವೆಂದರೆ ಅದು ವಿಶ್ವಕರ್ಮ ಸಮುದಾಯ.ಅತ್ಯಂತ ಸಂಪ್ರದಾಯ ಬದ್ದ ಜನಾಂಗದ ಇದ್ದಾಗಿದ್ದು,ಇಂದಿಗೂ ಕುಲಕಸುಬನ್ನೇ ನಂಬಿ ಬದುಕುತ್ತಿದೆ. ಸಮುದಾಯದ ಅಭಿವೃದ್ದಿಯ ದೃಷ್ಟಿಯಿಂದ ಸರಕಾರ ಚಕಣಾಚಾರಿ ಅವರ ಹುಟ್ಟೂರಾದ ಕೈದಾಳದಲ್ಲಿ ಶಿಲ್ಪಕಲಾ ತರಬೇತಿ ಶಾಲೆ ಆರಂಭಿಸಿ, ಆಸಕ್ತರಿಗೆ ತರಬೇತಿ ನೀಡುವ ಮೂಲಕ ಪ್ರೋತ್ಸಾಹಿಸಬೇಕಾಗಿದೆ ಎಂದು ಒತ್ತಾಯಿಸಿದರು.

ಪತ್ರಕರ್ತ ಚಿ.ನಿ.ಪುರುಷೋತ್ತಮ್ ಮಾತನಾಡಿ, ಎಲ್ಲಾ ಶೋಷಿತ ಸಮುದಾಯಗಳನ್ನು ಒಂದು ಸೂರಿನಡಿ ತರಬೇಕೆಂಬ ಉದ್ದೇಶದಿಂದ ಹಿಂದುಳಿದ ಸಮುದಾ ಯಗಳ ಒಕ್ಕೂಟ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದು, ಶ್ರೀಕೃಷ್ಣಾ ಜನ್ಮಾಷ್ಠಮಿಯ ನಂತರ, ವಿಶ್ವಕರ್ಮ ಜಯಂತಿ ನಡೆಸಿ, ವಿವಿಧ ವರ್ಗದ ಸಾಧಕರನ್ನು ಗೌರವಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ವೆಂದರು.

ಪತ್ರಕರ್ತ ಹಾಗೂ ಹಿಂದುಳಿದ ಸಮುದಾಯಗಳ ಒಕ್ಕೂಟದ ಸಂಚಾಲಕ ಟಿ.ಎನ್.ಮಧುಕರ್ ಮಾತನಾಡಿ, ಕಲೆ, ವಾಸ್ತುಶಿಲ್ಪದಲ್ಲಿ ವಿಶ್ವಕರ್ಮರು ಎತ್ತಿದ ಕೈ. ಇದಕ್ಕೆ ಉದಾಹರಣೆಗಳೆಂದರೆ ಪುರಾಣದಲ್ಲಿ ಕಂಡು ಬರುವ ಇಂದ್ರಪ್ರಸ್ತ ನಗರ, ದ್ವಾರಕೆ ನಗರಗಳು, ಒಂದು ಸುಂದರ ಕಟ್ಟಡ, ನಗರದ ನಿರ್ಮಾಣದ ಹಿಂದೆ ಇವರ ಶ್ರಮವಿದೆ. ಸಾಧಕರನ್ನು ಒಂದು ಸಮಾಜಕ್ಕೆ ಸಿಮೀತಗೊಳಿಸದೆ ಇತರೆ ವರ್ಗದವರು ಗೌರವಿಸುವಂತೆ ಮಾಡುತ್ತಿರುವುದು ಒಂದು ಉತ್ತಮ ಕೆಲಸ ಎಂದರು.

ಗೌರವ ಸ್ವೀಕರಿಸಿ ಮಾತನಾಡಿದ ಪತ್ರಕರ್ತ ಹರೀಶ್ ಆಚಾರ್ಯ, ಮುಂದುವರೆದ ಸಮಾಜಗಳು ಮತ್ತಷ್ಟು ಒಗ್ಗಟ್ಟಾಗುವ ಮೂಲಕ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗುತ್ತಿರುವ ಇಂತಹ ಸಂದರ್ಭದಲ್ಲಿ, ಸಣ್ಣ, ಪುಟ್ಟ ಸಮುದಾಯಗಳು ತಮ್ಮ ಜಾತಿ, ಸಮುದಾಯದ ಎಲ್ಲೆ ಮೀರಿ ಒಗ್ಗೂಡುತ್ತಿರುವುದು ಭವಿಷ್ಯದಲ್ಲಿ ಹಿಂದುಳಿದ ಸಮುದಾಯಗಳಿಗೆ ಉತ್ತಮ ಅವಕಾಶಗಳು ಲಭಿಸಬಲಿದೆ ಎಂಬುದರ ಗುರುತಾಗಿದೆ.ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಒಕ್ಕೂಟ ತಮ್ಮ ರಾಜಕೀಯ ಶಕ್ತಿ ಹೆಚ್ಚಿಸಿಕೊಳ್ಳಲು ಮುಂದಾಗಬೇಕಿದೆ ಎಂದರು.

ಮಡಿವಾಳ ಸಮಾಜದ ಅಧ್ಯಕ್ಷ ಲಕ್ಷ್ಮಣ್ ಮಾತನಾಡಿ, ಮಡಿವಾಳ ಸಮಾಜದ ಅತ್ಯಂತ ಹಿಂದುಳಿದ ಸಮುದಾಯ. ಇದು ಒಕ್ಕೂಟದ ಪದಾಧಿಕಾರಿಗಳು ನಮ್ಮ ಹಾಸ್ಟಲ್ ಆವರಣದಲ್ಲಿ ವಿಶ್ವಕರ್ಮ ಜಯಂತಿ ಆಚರಿಸುವ ಮೂಲಕ ಶೋಷಿತ ಸಮುದಾಯಗಳು ಒಂದು ವೇದಿಕೆಯಲ್ಲಿ ತರುವ ಪ್ರಯತ್ನ ನಡೆಸಿದ್ದಾರೆ. ಇಂತಹ ಕಾರ್ಯಕ್ರಮಗಳಿಗೆ ನಮ್ಮ ಬೆಂಬಲವಿದೆ ಎಂದರು.

ತುಮಕೂರು ಜಿಲ್ಲಾ ಹಿಂದುಳಿದ ಸಮುದಾಯಗಳ ಒಕ್ಕೂಟದ ಸಂಚಾಲಕ ಕೆಂಪರಾಜು ಮಾತನಾಡಿ,ಹಿರಿಯರ ಮಾರ್ಗದರ್ಶನದಂತೆ ಒಕ್ಕೂಟದ ಸಂಚಾಲ ಕರುಗಳು ಸೇರಿ, ಈ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲಾ ಶೋಷಿತ ಸಮುದಾಯಗಳ ನಾಯಕರ ಜಯಂತಿಗಳನ್ನು ಒಂದೊ೦ದು ಸಮುದಾಯದ ಆವರಣದಲ್ಲಿ ಆಚರಿಸುವ ಮೂಲಕ ಪರಸ್ವರ ಒಗ್ಗೂಡಿಸುವ ಕೆಲಸ ಮಾಡಲಾಗುವುದು ಎಂದರು.

ಈ ವೇಳೆ ಒಕ್ಕೂಟದ ಸಂಚಾಲಕರಾದ ಪ್ರೆಸ್ ರಾಜಣ್ಣ, ಶಾಂತಕುಮಾರ್,ಉಮೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *