Monday, 15th August 2022

ಐತಿಹಾಸಿಕ ಕೊಪ್ಪಳ ಗವಿಮಠ ಜಾತ್ರೆ ರದ್ದು

– ಜ. 19ರ ಮಹಾರಥೋತ್ಸವ ನಡೆಸುವ ಬಗ್ಗೆ ಗೊಂದಲ 

– ಕೋವಿಡ್ ನಿಯಮ‌ ಪಾಲಿಸಿ ರಥೋತ್ಸವ ನಡೆಸುವ ಸಂಭವ

ಕೊಪ್ಪಳ: ಕೋವಿಡ್-19 ಹಾಗೂ ಓಮಿಕ್ರಾನ್ ಹೆಚ್ಚಳ ಹಿನ್ನೆಲೆಯಲ್ಲಿ ಶತಮಾನಗಳಿಂದ ನಡೆದುಕೊಂಡು ಬಂದ ಕೊಪ್ಪಳದ ಆರಾಧ್ಯ ದೈವ ಶ್ರೀ ಗವಿಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ರದ್ದು ಮಾಡಲಾಗಿದೆ ಎಂದು ಶ್ರೀ ಗವಿಮಠ ತಿಳಿಸಿದೆ.

ಈ ಕುರಿತು ಶ್ರೀಮಠವು ಅಧಿಕೃತವಾಗಿ ಪ್ರಕಟಣೆ ಹೊರಡಿಸಿದ್ದು, ದಕ್ಷಿಣ ಭಾರತದ ಮಹಾಕುಂಭ ಮೇಳ, ಉತ್ತರದ ಸಿದ್ಧಗಂಗೆ ಎಂಬ ಖ್ಯಾತಿ ಪಡೆದಿದ್ದ ಗವಿಮಠ ಜಾತ್ರೆ ಕರೋನಾ ಹಾಗೂ ಓಮೈಕ್ರಾನ್ ಭೀತಿ ಹಿನ್ನೆಲೆಯಲ್ಲಿ ಈ ಬಾರಿ ಜಾತ್ರೆಯ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಿರುವುದಾಗಿ ಗವಿಮಠದ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.

ಪ್ರತಿವರ್ಷ ರಥೋತ್ಸವದಲ್ಲಿ 5-6 ಲಕ್ಷ ಜನ ಸೇರುತ್ತಿದ್ದರು. 15 ದಿನಗಳ ಕಾಲ ಮಹಾ ಜಾತ್ರೋತ್ಸವ  ನಡೆಯುತ್ತಿತ್ತು. ಈ ವರ್ಷ ಜ.19ರಂದು ಮಹಾರಥೋ ತ್ಸವ  ನಡೆಯಬೇಕಿದೆ. ಈ ಬಾರಿ ಮಹಾರಥೋತ್ಸವ ವನ್ನೂ  ರದ್ದು ಮಾಡಲಿದ್ದಾತೆಯೆ ಎಂಬ ಬಗ್ಗೆ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದರೆ ಶ್ರೀಮಠದ ಸಂಪ್ರದಾಯಬದ್ದವಾಗಿ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ಸಧ್ಯ ಗವಿಸಿದ್ದೇಶ್ವರ ಕರ್ತೃ ಗದ್ದುಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಒಂದು ವೇಳೆ ಕರೊನಾ ಸೋಂಕು ಹೆಚ್ಚಾದರೆ ಶ್ರೀಮಠದ ಭಕ್ತರ ಪ್ರವೇಶಕ್ಕೂ ನಿರ್ಬಂಧ ಹೇರಲಾಗುವುದು ಎಂದು ಗವಿಮಠದ ಪ್ರಕಟಣೆ ತಿಳಿಸಿದೆ.

ರಥೋತ್ಸವದ ಗೊಂದಲ: ಮಠದ ಪ್ರಕಟಣೆ ಪ್ರಕಾರ ಜಾತ್ರೆ ರದ್ದು ಮಾಡಲಾಗಿದೆ. ಆದರೆ ಜ. 19ರಂದು ಧಾರ್ಮಿಕ ಪದ್ಧತಿಯಂತೆ ರಥೋತ್ಸವ ನಡೆಸುವ ಬಗ್ಗೆ ಇಡೀ ಪ್ರಕಟಣೆಯಲ್ಲಿ ಎಲ್ಲೂ ತಿಳಿಸಿಲ್ಲ. ಹೀಗಾಗಿ ಕೇವಲ ಜಾತ್ರೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ರದ್ದು ಮಾಡ ಲಾಗಿದೆ. ಮಠದ ಸಾಂಪ್ರದಾಯಿಕ ಕೆಲ ವಿಧಿವಿಧಾನಗಳನ್ನು ಹೊರತುಪಡಿಸಿ ಉಳಿದೆಲ್ಲ ಜಾತ್ರೆ, ಕಾರ್ಯಕ್ರಮ ರದ್ದು ಮಾಡಲಾಗಿದೆ ಎಂದು ತಿಳಿಸಲಾಗಿದೆ.

ಕಳೆದ ವರ್ಷದಂತೆ ಈ ವರ್ಷವೂ ಜ. 19ರ ಬೆಳಗ್ಗೆ ಕೋವಿಡ್ ನಿಯಮಗಳನ್ನು ಅನುಸರಿಸಿ ರಥೋತ್ಸವ ನಡೆಸುವ ಸಂಭವ ಇದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಎಲ್ಲಿಯೂ ಸಹ ಮಠದ ಆಡಳಿತ ಮಂಡಳಿ ರದ್ದು ಮಾಡಿದ ಅಥವಾ ರಥೋತ್ಸವ ನಡೆಸುವ ಬಗ್ಗೆ ತಿಳಿಸಿಲ್ಲ. ಹೀಗಾಗಿ ಭಕ್ತರಲ್ಲಿ ಗೊಂದಲ ಮುಂದುವರೆದಿದೆ. ಕಳೆದ ಬಾರಿ ಕೋವಿಡ್ ನಿಯಮಗಳನ್ನು ಪಾಲಿಸಿ ಬೆಳಗ್ಗೆ ರಥೋತ್ಸವ ನಡೆಸಲಾಗಿತ್ತು. ಕಳೆದ ವರ್ಷ ಕರೋನಾ ಸಂಖ್ಯೆ ಇಳಿಕೆ ಹಂತದಲ್ಲಿ ಇತ್ತು. ಆದರೆ ಈ ಬಾರಿ ಇದೀಗ ಕೋವಿಡ್ ಸಂಖ್ಯೆ ಹೆಚ್ಚಳವಾಗುತ್ತಿದ್ದು, ರಥೋತ್ಸವ ಯಾವ ಸಮಯಕ್ಕೆ‌ ನಡೆಸಲಾಗುತ್ತದೆ ಎಂಬುದು ತಿಳಿಯದಾಗಿದೆ. ಈ ಬಗ್ಗೆ ಶ್ರೀಮಠದ ಆಡಳಿತ ಮಂಡಳಿಯೇ ಸ್ಪಷ್ಟವಾಗಿ ಹೇಳಬೇಕಿದೆ.