Sunday, 14th August 2022

ಅತಂತ್ರ ವೈದ್ಯ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಬೇಕು: ಹೆಚ್‌ಡಿಕೆ

ಬೆಂಗಳೂರು: ರಷ್ಯಾದ ಸೇನಾ ದಾಳಿಗೆ ತತ್ತರಿಸಿ ಸ್ವದೇಶಕ್ಕೆ ವಾಪಸ್ ಬಂದು ವೈದ್ಯ ಶಿಕ್ಷಣದಲ್ಲಿ ಅತಂತ್ರರಾಗಿರುವ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ವೈದ್ಯ ಶಿಕ್ಷಣ ನೀಡಬೇಕು ಎಂದು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಸೋಮವಾರ ಸರಣಿ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ, ಕೆಲ ಮಹತ್ವದ ಅಂಶಗಳನ್ನು ಪ್ರಸ್ತಾಪ ಮಾಡಿದ್ದಾರೆ.

ಆಪರೇಷನ್ ಗಂಗಾ ಹೆಸರಿನಲ್ಲಿ ಕೇಂದ್ರ ಸರಕಾರ ಉಕ್ರೇನ್‌ನಿಂದ ವಿದ್ಯಾರ್ಥಿಗಳನ್ನು ಏರ್‌ಲಿಫ್ಟ್ ಮಾಡಿದೆ ಎಂಬುದೇನೋ ಸರಿ. ಆದರೆ, ವೈದ್ಯ ವಿದ್ಯಾರ್ಥಿಗಳ ಮುಂದಿನ ಭವಿಷ್ಯವೇನು? ಅಲ್ಲಿನ ಶಿಕ್ಷಣ ಸಂಸ್ಥೆ, ವಿಶ್ವ ವಿದ್ಯಾಲಯಗಳನ್ನೂ ರಷ್ಯಾ ಸೇನೆ ಧ್ವಂಸ ಮಾಡಿದೆ,” ಎಂದು ಮಾಧ್ಯಮಗಳೇ ತೋರಿಸುತ್ತಿವೆ ಎಂದು ತಿಳಿಸಿದರು.

ಕರ್ನಾಟಕದ 800ರಿಂದ 1000 ಮಕ್ಕಳು ಸೇರಿ ಭಾರತದ 20,000ಕ್ಕೂ ಹೆಚ್ಚು ವೈದ್ಯ ವಿದ್ಯಾರ್ಥಿಗಳು ತಾಯ್ನಾಡಿಗೆ ಮರಳಿದ್ದಾರೆ. ಇನ್ನೂ ಕೆಲವರು ಬರುವವರಿದ್ದಾರೆ. ಪೋಷಕರು ಸಾಲ ಮಾಡಿ ಮಕ್ಕಳನ್ನು ಉಕ್ರೇನ್‌ಗೆ ಕಳಿಸಿದ್ದರು. ಯುದ್ಧದಿಂದ ಅವರ ಶಿಕ್ಷಣ ಅತಂತ್ರವಾಗಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಉಲ್ಲೇಖಿಸಿದ್ದಾರೆ.

ಯುದ್ಧ ಭೂಮಿಯಿಂದ ಜೀವ ಉಳಿಸಿಕೊಂಡು ಬಂದ ಭಾರತೀಯ ವಿದ್ಯಾರ್ಥಿಗಳ ಭವಿಷ್ಯ ವನ್ನು ಮತ್ತೆ ಕಟ್ಟಿಕೊಡುವುದು ಕೇಂದ್ರ ಸರಕಾರದ ಕರ್ತವ್ಯವಾಗಿದೆ.

ಕರ್ನಾಟಕದಲ್ಲಿ 50-60 ವೈದ್ಯ ಕಾಲೇಜುಗಳಿವೆ. ಅಗತ್ಯಬಿದ್ದರೆ ಒಂದು ಪ್ರವೇಶ ಪರೀಕ್ಷೆ ನಡೆಸಿ ಇಷ್ಟೂ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲಿ. ಪ್ರತಿ ಕಾಲೇಜೂ ತಲಾ 10 ಮಕ್ಕಳಿಗಾದರೂ ಉಚಿತ ಶಿಕ್ಷಣ ನೀಡಲಿ ಎಂದು ಆಗ್ರಹಿಸಿದರು.

ಇಷ್ಟು ವಿದ್ಯಾರ್ಥಿಗಳು ವೈದ್ಯರಾದರೆ ಎಷ್ಟು ಜನರ ಜೀವ ಉಳಿಸಬಲ್ಲರು, ರಾಜ್ಯಕ್ಕೆಷ್ಟು ಸೇವೆ ಸಲ್ಲಿಸಬಹುದು. ಹಣದ ಮೂಲಕ ಶಿಕ್ಷಣಕ್ಕೆ ಬೆಲೆ ಕಟ್ಟಿ ಮಕ್ಕಳ ಕನಸುಗಳ ಜತೆ ವ್ಯಾಪಾರೀಕರಣ ಮಾಡುವುದು ಬೇಡ. ಕೇಂದ್ರ- ರಾಜ್ಯ ಸರಕಾರಗಳು ಕೂಡಲೇ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಒತ್ತಾಯಿಸಿದ್ದಾರೆ.