Tuesday, 17th May 2022

ರಾಜ್ಯಪಾಲ ಥಾವರ್‌ಚಂದ್ ಕರಾವಳಿ ಪ್ರವಾಸ, ಇಂದು ಉಡುಪಿಗೆ ಭೇಟಿ

ಮಂಗಳೂರು: ಕರಾವಳಿ ಪ್ರವಾಸದಲ್ಲಿರುವ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು, ಶುಕ್ರವಾರ ಉಡುಪಿಗೆ ಭೇಟಿ ನೀಡಿ, ಶ್ರೀಕೃಷ್ಣ ದೇವರ ದರ್ಶನ ಮಡಿದರು. ಇದಕ್ಕೂ ಮುನ್ನ, ದಕ್ಷಿಣ ಕನ್ನಡ ಜಿಲ್ಲೆಯ ಕಾರಣಿಕ ಶಕ್ತಿಯ ದರ್ಶನ ಪಡೆದಿದ್ದಾರೆ.

ಧರ್ಮಸ್ಥಳದಿಂದ ಉಡುಪಿಗೆ ಪ್ರಯಾಣಿಸುವ ವೇಳೆ, ಅಳದಂಗಡಿಯ ಸತ್ಯದೇವತೆಯ ದರ್ಶನ ಮಾಡಿದ್ದು, ಈ ಮೂಲಕ ಕಾರಣಿಕ ಶಕ್ತಿಯ ದರ್ಶನ ಮಾಡಿದ ಗಣ್ಯರ ಪಾಲಿಗೆ ರಾಜ್ಯಪಾಲರೂ ಸೇರಿದ್ದಾರೆ.

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಸರ್ವಧರ್ಮ ಸಮ್ಮೇಳನ ಉದ್ಘಾಟಿಸಿದ ಬಳಿಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಉಡುಪಿಗೆ ತೆರಳಿದ್ದು, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮನವಿಯಂತೆ, ರಾಜ್ಯಪಾಲರು ಅಳದಂಗಡಿ ಸತ್ಯದೇವತೆ ಕಲ್ಲುರ್ಟಿ ದೈವ ಸ್ಥಾನಕ್ಕೆ ಭೇಟಿ ನೀಡಿ, ದೈವದ ಕೋಲ ಸೇವೆಯಲ್ಲಿ ಭಾಗಿಯಾಗಿ ಪ್ರಸಾದ ಸ್ವೀಕರಿಸಿದ್ದಾರೆ.

ಅಜಿಲ ಸೀಮೆಯ ತಿಮ್ಮಣ್ಣರಸರಾದ ಪದ್ಮ ಪ್ರಸಾದ್ ಅಜಿಲ, ಶಾಸಕ ಹರೀಶ್ ಪೂಂಜಾ ಸೇರಿದಂತೆ ಗ್ರಾಮಸ್ಥರು ಭಾಗಿಯಾಗಿದ್ದಾರೆ. ಈ ವೇಳೆ ಅಜಿಲ ಸೀಮೆಯ ಅರಸರಾದ ಪದ್ಮ ಪ್ರಸಾದ್ ಅಜಿಲ, ಸತ್ಯದೇವತೆ ಕಲ್ಲುರ್ಟಿ ದೈವದ ಮಹಿಮೆ, ಜನರ ನಂಬಿಕೆ ಮತ್ತು ಇಷ್ಟಾರ್ಥ ಸಿದ್ಧಿಯಾದ ಬಗ್ಗೆ ರಾಜ್ಯಪಾಲರಿಗೆ ವಿವರಿಸಿದ್ದಾರೆ.‌ ರಾಜ್ಯಪಾಲರು ಕರಾವಳಿ ಶಕ್ತಿಯ ಪ್ರಥಮ ದರ್ಶನ ಮಾಡಿದ್ದರಿಂದ, ರಾಜ್ಯಪಾಲರೂ ಕುತೂಹಲಭರಿತರಾಗಿ ದೈವದ ಕೋಲದಲ್ಲಿ ಭಾಗಿಯಾಗಿದ್ದಾರೆ.

ಕಾರಣಿಕ ಶಕ್ತಿಯಿಂದೇ ಪ್ರಸಿದ್ಧಿ ಪಡೆದ ಈ ದೈವ ಕರ್ನಾಟಕದ ಹಲವು ಖ್ಯಾತನಾಮರ ಇಷ್ಟಾರ್ಥ ಸಿದ್ಧಿ ಮಾಡಿ, ಕಷ್ಟಗಳನ್ನು ದೂರ ಮಾಡಿದೆ. ನಟ ದರ್ಶನ್, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ದಿ. ಸುಷ್ಮಾ ಸ್ವರಾಜ್ ಸೇರಿದಂತೆ ಹಲವು ಖ್ಯಾತನಾಮರೂ ಈ ಹಿಂದೆ ಕಷ್ಟ ಬಂದಾಗ ಅಳದಂಗಡಿ ಸತ್ಯದೇವತೆಯ ಬಳಿ ಶರಣಾಗಿದ್ದರು. ಕಲ್ಲುರ್ಟಿ ದೈವಕ್ಕೆ ಕೋಲ ಸೇವೆಯನ್ನು ಒಪ್ಪಿಸಿ ಹರಕೆ ತೀರಿಸಿಕೊಂಡಿದ್ದರು.ಸತ್ಯದೇವತೆಯ ಗುಡಿಯ ಪಕ್ಕದಲ್ಲೇ 800 ವರ್ಷಗಳ ಹಿಂದಿನ ಇತಿಹಾಸ ಪ್ರಸಿದ್ಧವಾದ ಸೋಮನಾಥೇಶ್ವರಿಯ ದೇವಾಲಯವಿದೆ. ಸತ್ಯದೇವತೆ ಕಲ್ಲುರ್ಟಿ ದೈವಕ್ಕೆ ಜಾತಿ-ಮತ, ಭೇದ ಮೀರಿದ ಭಕ್ತರಿದ್ದಾರೆ.