Friday, 2nd December 2022

ತುಂಗಭದ್ರಾ ಜಲಾಶಯಕ್ಕೆ ಸಚಿವ ಕಾರಜೋಳ ಬಾಗೀನ ಅರ್ಪಣೆ

ಸಂಸ್ಕೃತಿ, ಸಂಸ್ಕಾರ ಇರುವವರು ಭಾಗಿಯಾಗುತ್ತಾರೆ
ಆನಂದ್ ಸಿಂಗ್ ಗೆ ಪರೋಕ್ಷ ಟಾಂಗ್ ನೀಡಿದ ಕಾರಜೋಳ

ಕೊಪ್ಪಳ: ತುಂಗಭದ್ರಾ ಜಲಾಶಯಕ್ಕೆ ಮಂಗಳವಾರ ಬೆಳಗ್ಗೆ ಬೃಹತ್ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಕೊಪ್ಪಳ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್, ಸಂಸದರಾದ ಸಂಗಣ್ಷ ಕರಡಿ, ದೇವೇಂದ್ರಪ್ಪ ಸೇರಿದಂತೆ ಹಲವರು ಗಂಗಾಮಾತೆಗೆ ಬಾಗಿನ ಅರ್ಪಿಸಿದರು.

ಜಲಾಶಯದ ತಟದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕಾರಜೋಳ ಅವರು ಮಾತನಾಡಿ, ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಚೆನ್ನಾಗಿ ಆಗುತ್ತಿವೆ. ಹಾಗಾಗಿ ತುಂಗಭದ್ರಾ ಜಲಾಶಯದ ಇತಿಹಾಸದಲ್ಲಿ ಅವಧಿ ಮೊದಲೇ ತುಂಬಿದೆ. ಇದರಿಂದ ಲಕ್ಷಾಂತರ ರೈತರೀಗ ಖುಷಿಯಲ್ಲಿದ್ದಾರೆ. ಹಾಗಾಗಿ ಎಲ್ಲ ಜಲಾಶಯಗಳಿಗೆ ಬಾಗಿನ ಅರ್ಪಿಸಲಾಗುತ್ತಿದೆ ಎಂದರು.

ಆಲಮಟ್ಟಿ ಜಲಾಶಯಕ್ಕೆ ಆ. 21ರಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಬಾಗಿನ ಅರ್ಪಿಸಲು ಬರಲಿದ್ದಾರೆ.

ನೀರಾವರಿ ವಿಚಾರದಲ್ಲಿ ಸರ್ಕಾರ ಹೆಚ್ಚು ಕಾಳಜಿ ವಹಿಸಿದೆ ಎಂದರು. ಸಚಿವ ಆನಂದ್ ಸಿಂಗ್ ಅವರು ಬಾಗೀನ ಅರ್ಪಣೆ ವೇಳೆ ಗೈರು ವಿಚಾರಕ್ಕೆ ಪ್ರತಿಕ್ರಿಯಿಸಿ, ಭಾರತೀಯ ಸಂಸ್ಕೃತಿಯಲ್ಲಿ ಗಂಗಾ ಮಾತೆಗೆ ಬಾಗೀನ ಅರ್ಪಣೆ ಮಾಡುವುದು ನಮ್ಮ ಸಂಸ್ಕೃತಿ. ನಾವು ಸಂಸ್ಕೃತಿ, ಸಂಸ್ಕಾರ ಪಾಲಿಸಬೇಕು. ಆದರೆ ಅವರು ಬಾಗೀನ ಕಾರ್ಯಕ್ರಮಕ್ಕೆ ಬರುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ ಎನ್ನುವ ಮೂಲಕ ಸಚಿವ ಆನಂದ್ ಸಿಂಗ್ ಅವರಿಗೆ ಭಾರತೀಯ ಸಂಸ್ಕೃತಿ ಗೊತ್ತಿಲ್ಲ ಎಂದು ಪರೋಕ್ಷವಾಗಿ ಏಟು ನೀಡಿದರು.

ಈ ವೇಳೆ ಶಾಸಕ ಪರಣ್ಣ ಮುನವಳ್ಳಿ, ಬಸವರಾಜ ದಡೆಸೂಗೂರ, ಎಂ.ಪಿ. ನಾಡಗೌಡ ಸೇರಿ ಹಲವರು ಇದ್ದರು. ಮೇಕೆದಾಟು ಯೋಜನೆ ಜಾರಿಗೆ ಯಾರಪ್ಪನ ಅಪ್ಪಣೆಯೂ ಬೇಕಿಲ್ಲ. ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ ಅವರು ಅವರ ರಾಜ್ಯದ ಹಿತಾಸಕ್ತಿ ಗಮನದಲ್ಲಿ ಇಟ್ಟುಕೊಂಡು ಮಾತನಾಡಿದ್ದಾರೆ. ಈ ವಿಚಾರ ಸದ್ಯ ಸುಪ್ರೀಂಕೋರ್ಟ್ ಅಂಗಳದಲ್ಲಿ ಇರುವುದರಿಂದ ಹೆಚ್ಚಿಗೆ ಮಾತನಾಡಲಾರೆ’ ಎಂದು ಪ್ರತಿಕ್ರಿಯಿಸಿದರು.

ಗಣಿ ಮತ್ತು ಭೂವಿಜ್ಞಾನ ಸಚಿವ ಹಾಲಪ್ಪ ಆಚಾರ್, ಸಂಸದರಾದ ವೈ.ದೇವೇಂದ್ರಪ್ಪ, ಕರಡಿ ಸಂಗಣ್ಣ, ಶಾಸಕ ಬಸವರಾಜ ಧಡೇಸುಗೂರು ಇದ್ದರು.