Tuesday, 31st January 2023

ಸರಕಾರಿ ನೌಕರರೇ ಟಾರ್ಗೆಟ್

ಮಾರಣಹೋಮ- ಅನ್‌ಟೋಲ್ಡ್ ಸ್ಟೋರಿ ಆಫ್ ಕಾಶ್ಮೀರ

ಸಂತೋಷಕುಮಾರ ಮೆಹೆಂದಳೆ

ಇದೇ ಹಂಡೂವಿನ ಸೋದರ ಸಂಬಂಧಿ ಆರ್.ಎನ್ ಹಂಡೂ ಗವರ್ನರ್ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ. ಪರ್ಸನಲ್ ಅಸಿಸ್ಟೆಂಟ್ ಆಗಿದ್ದ ಕೂಡಾ. ಶ್ರೀನಗರದ ನರಸಿಂಗ್ ನಗರದಲ್ಲಿ ಪುಟ್ಟ ಮನೆಯೊಂದನ್ನು ಮಾಡಿಕೊಂಡಿದ್ದ ಹಂಡೂ ಹೊರಗೆ ಬರುತ್ತಿದ್ದಂತೆ ನುಗ್ಗಿದ್ದ ಕಾಡತೂಸುಗಳು ಅವನನ್ನು ಕೆಡುವಿ ಹಾಕಿದ್ದವು. ಅವನು ಕೆಲವೇ ಸೆಕೆಂಡ್ ಅಂತರದಲ್ಲಿ ಅವನನ್ನು ಕಛೇರಿಗೆ ಕರೆದೊಯ್ಯಲು ಬಂದಿದ್ದ ವಾಹನ ಏರುವವನಿದ್ದ. ದುರದೃಷ್ಟ ಆ ಗ್ಯಾಪ್‌ನಲ್ಲಿ ಕರೆಕ್ಟಾಗಿ ಗುಂಡು ಹಾರಿಸಿ
ಕೊಂದು ಹಾಕಿದ್ದರು.

ನಿರಂತರವಾದ ಟಾರ್ಗೆಟ್ ಕಿಲ್ಲಿಂಗ್‌ನಿಂದ ಕಣಿವೆ ಬಸವಳಿಯುತ್ತಿದ್ದರೆ ಅಕ್ಕಪಕ್ಕದಲ್ಲಿ ಮನೆಯಲ್ಲಿ ಅಡಗಿದ್ದ ಸದ್ದೇ ಮಾಡದೇ ಕೂರುತ್ತಿದ್ದ ಜನರನ್ನು ಅಕ್ಕಪಕ್ಕದವರೇ ಹೇಳಿ ಹೊಡೆಸುವ ಅಪಸವ್ಯಗಳೂ ನಡೆದುಹೋದವು. ಹಾಗೆ ನೆರೆಮ ನೆಯವರ ಮೋಸಕ್ಕೆ ಬಲಿಯಾದವನೇ ಬಿ.ಕೆ.ಗಂಜು ಎಂಬಾತ. ಇದಾದ ಮರುದಿನವೇ ಎ.ಕೆ.ರೈನಾ ಅಹಾರ ಮತ್ತು ಪೂರೈಕೆ ಉಪ ನಿರ್ದೇಶಕ ಅವನದೇ ಆಫೀಸಿನಲ್ಲಿ ಗುಂಡಿಟ್ಟು ಕೊಲ್ಲಲ್ಪಟ್ಟ. ಅವನು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿ ಸಾಯುತ್ತಿದ್ದರೆ ಜನರೆಲ್ಲ ಅಲ್ಲೆ ಸುಮ್ಮನೆ ನಿಂತು ನೋಡುತ್ತಿದ್ದರಂತೆ.

ಕಾರಣ ಎಲ್ಲ ಸ್ಥಳೀಯರು. ಕಣ್ಣೆದುರೇ ನಡೆದ ಹತ್ಯೆಗೆ ಯಾವ ಪ್ರತಿಕ್ರಿಯೆಯೂ ಇಲ್ಲದೆ ಕಛೇರಿ ಖಾಲಿ ಆಗಿತ್ತಂತೆ. ಈ ಮಧ್ಯೆ ಇನ್ನೊಂದು ಬೆಳಕಿಗೆ ಬಾರದ ಘೋರ ಘಟನೆ ಕೂಡಾ ನಡೆದು ಹೋಯಿತು. ಅದು ೧೭. ಮಾರ್ಚ್ ೧೯೯೦. ಶ್ರೀನಗರ ಟಾಕೂರಾ ಏರಿಯಾದ ಎಮ್.ಎನ್ .ಪಾಲ್ ಎಂಬ ಬಿ.ಎಸ್.ಎಫ್. ಇನ್ಸ್ಪೆಕ್ಟರ್ ಒಬ್ಬಾತನನ್ನು ಅವನ ಹೆಂಡತಿಯ ಸಮೇತ ಕಿಡ್‌ನ್ಯಾಪ್ ಮಾಡಲಾಯಿತು. ಲೆಕ್ಕ ತಪ್ಪಿ ದಿನಗಳವರೆಗೆ ಆಕೆಯನ್ನು ಹಸಿಹಸಿಯಾಗಿ ಭೋಗಿಸಿದ ಮತಾಂಧ ಉಗ್ರರು ಹಿಂಸೆಗೂ ಈಡು ಮಾಡಿದ್ದರು.

ಮೊಳಕೈ ಗಂಟುಗಳನ್ನು ಮತ್ತು ಕೈಯ್ಯ ಮುಂಭಾಗವನ್ನೂ ಮುರಿದು ಹಾಕಿದ್ದಲ್ಲದೆ, ಅತ್ಯಂತ ಕ್ರೂರವಾಗಿ ಆಕೆಯನ್ನು ಬಳಸಿ ಕೊಂಡಿದ್ದರು. ಕೊನೆಗೆ ತುಂಬ ಮಾರುಕಟ್ಟೆಯ ಭಾಗದಲ್ಲಿ ಆಕೆಯ ಶವವನ್ನು ಎಸೆದು ಹೋಗಲಾಗಿತ್ತು. ಅದನ್ನು ನೋಡಿದರೇನೆ ಗೊತ್ತಾಗುತ್ತಿತ್ತು ಅದರ ಪರಿಸ್ಥಿತಿ ಮತ್ತು ಆಕೆ ಅನುಭವಿಸಿದ ಹಿಂಸೆ. ಇನ್ಸ್‌ಪೆಕ್ಟರ್ ಕತೆ ಏನಾಯಿತು ವಿವರಿಸುವವರಾರು? ಆಗಿನ ಕಾಲಕ್ಕೆ ಅತ್ಯಂತ ಪ್ರಸಿದ್ಧಿಯಾಗಿದ್ದ ಎಚ್.ಎಮ್.ಟಿ. ಕಂಪೆನಿಯ ಎಹ್.ಎಲ್. ಖೇರಾ ಎಂಬಾತ ಏಪ್ರಿಲ್ ೧೦, ೧೯೯೦ ರಂದು ಮನೆಯಿಂದ ಆಚೆ ಬರುತ್ತಿದ್ದಂತೆ ಟಾರ್ಗೆಟ್ ಕಿಲ್ಲಿಂಗ್‌ಗೆ ಬಲಿಯಾಗಿದ್ದ.

ಹಾಗೆ ಸತ್ತವರಲ್ಲಿ ಇವರೆಲ್ಲ ಲೆಕ್ಕಕ್ಕೆ ಸಿಕ್ಕವರು ಮಾತ್ರ. ಆದರ ಮಧ್ಯೆ ಏಷ್ಟು ನಡೆದವೋ ದೇವರಿಗೇ ಗೊತ್ತು. ಆದರೂ ಕಣಿವೆ
ಯಲ್ಲಿ ಕಗ್ಗೊಲೆಯಾಗುತ್ತಿದೆ ಮಾನವ ಹರಣ ನಡೆಯುತ್ತಿದೆ ಎಂದಾಗುತ್ತಿದೆಯಾಗಲಿ, ಮಾನವ ಹಕ್ಕು ಆಯೋಗವಾಗಲಿ ಎಲ್ಲಿಂದಲೂ ಒಂದು ಸದ್ದೂ ಹೊರಡಿಸದೇ ಕೂತ ಹೊತ್ತಿನಲ್ಲಿ ಹೊರಗೆ ಬಂತು ನೋಡಿದರೆ ಮತ್ತೊಂದು ಸುದ್ದಿ. ಆದರೆ ಅದಾಗಲೇ ಬೆಚ್ಚಿ ಬಿದ್ದಿದ್ದ ಜನಕ್ಕೆ ಭೀತರಾಗಲೂ ಏನೂ ಉಳಿದಿರಲಿಲ್ಲ. ಆದರೆ ಆದ ಘಟನೆ ಮತ್ತು ದೇಹ ನೋಡಿ ಜರ್ಜರಿತರಾಗಿ ಹೋಗಿದ್ದರು. ಅದೇ ಈ ಹತ್ಯಾಕಾಂಡದಲ್ಲಿ ಮತ್ತೊಂದು ಸುತ್ತಿನ ದೊಡ್ಡ ಸದ್ದು ಮಾಡಿದ್ದ ಸರಳಾ ಭಟ್ ಮರ್ಡರ್ ಕೇಸು.

ಏ.೧೪, ೧೯೯೦ ರಂದು ಕಿಡ್ನ್ಯಾಪ್ ಆದ ಹೆಣ್ಣು ಮಗಳು ಪತ್ತೆಯಾಗಿದ್ದು ಏಪ್ರಿಲ್ ೧೯ ರಂದು ರಸ್ತೆಯ ಪಕ್ಕದಲ್ಲಿ ಹೆಣವಾಗಿ. ಅತ್ಯಂತ ದಾರುಣವಾಗಿ, ಲೆಕ್ಕ ತಪ್ಪಿ ಗ್ಯಾಂಗ್ ರೇಪಿಗೆ ಒಳಗಾದ ಸರಳಾ ಭಟ್ ಅತ್ಯಂತ ಕ್ರೂರವಾಗಿ ಹಿಂಸೆಗೆ ಸಿಕ್ಕು ಸತ್ತು ಹೋದ ಪಾಪದ ೩೧ ವರ್ಷದ ಹೆಣ್ಣು ಮಗಳು. ಅನಂತನಾಗ ಪ್ರದೇಶದ ಸರಳಾ ಭಟ್ ಸೌರಾದ ಹೆಸರುವಾಸಿ ಮೆಡಿಕಲ್ ಇನ್ಸಿಟ್ಯೂಟ್‌ನಲ್ಲಿ ಕೆಲಸ ಮಾಡುತ್ತಿದ್ದವಳು.

ಅವಳ ಹಾಸ್ಟೆಲ್‌ನಿಂದ ಅವಳನ್ನು ಕಿಡ್‌ನ್ಯಾಪ್ ಮಾಡಿದ ಉಗ್ರರ ತಂಡ ನಿರಂತರ ನಾಲ್ಕೈದು ದಿನಗಳ ಕಾಲ ಅವಳನ್ನು ರೇಪ್ ಮಾಡಿ ಅತ್ಯಂತ ದಾರುಣವಾಗಿ ಅಮಾನವೀಯ ರೀತಿಯಲ್ಲಿ ಕೊಂದು ಹಾಕಲಾಗಿತ್ತು. ಅವಳನ್ನು ವಾಹನದಿಂದ ಜನರ ಜಂಗುಳಿಯ ನೋಡುವಾಗಲೇ ಹಾಡಹಗಲಲ್ಲೇ ಮಧ್ಯೆ ಎಸೆದು ಹೋಗಲಾಗಿತ್ತು. ಅದು ಹೆಚ್ಚು ಕಮ್ಮಿ ಸಚಿತ್ರವಾಗಿ ವರದಿಯಾದ ಸ್ವಲ್ಪ ಮಾತ್ರ ಸಂಚಲನ ಸೃಷ್ಟಿ ಮಾಡಿದ ಮೊದಲ ವರದಿ. ಇದಕ್ಕೂ ಮೊದಲು ಜನೇವರಿ ೧೯-೨೦ ರ ಭೀಕರ ರಾತ್ರಿಯ ಹತ್ಯಾಕಾಂಡ ಕುರಿತ ಅಲ್ಲಲ್ಲಿ ಕತೆಗಳು ಮತ್ತು ಗೂಗಲ್‌ನಲ್ಲಿ ರಿಪೀಟೆಡ್ ಮಾಹಿತಿ ಬಿಟ್ಟರೆ ಬೇರೆ ಏನೂ ಲಭ್ಯವೇ ಇಲ್ಲ.

ಹಾಗಾಗಿ ಬಿದ್ದಿದ್ದ ಸರಳಾ ಭಟ್ ಕುರಿತಾಗಿ ಅಲ್ಲಲ್ಲಿ ದನಿಗಳು ಹುಟ್ಟಿದವಾದರೂ ಬಂದೂಕಿನ ನಳಿಕೆಗಳಲ್ಲಿ ಗುಬ್ಬಿ ಗೂಡು ಕಟ್ಟಿಸುವ ಹುಕಿಯ ಮಂದಿ ಮಾತ್ರ ಗುಬ್ಬಿ ಮರಿ ಹಾಕಿಸಲೇ ಇಲ್ಲ. ಎಲ್ಲಾ ಇಂಥಾ ಕವನ ಬರೆಯುವ ಮತ್ತು ಹಗರಣದ ಬದಲಿಗೆ ಕಶ್ಮೀರ್ ಕತೆಯ ನಾಲ್ಕಾರು ಪುಟ ಬರೆಯುವ ಲೇಖಕಿಯರದ್ದು ಒಂದೇ ಉದ್ದೇಶ ಅಂದಿನಿಂದ ಇಂದಿನವರೆಗೂ. ಏನಿದ್ದರೂ ಕಶ್ಮೀರ್ ಇಶ್ಯೂ ಬಳಸಿ ಹೆಸರಿಗೆ ಹವಣಿಸಿದ್ದು. ಇಂಥಾ ವಿಷಯಕ್ಕೆ ನಾನೂ ಕೈ ಹಾಕಿದ್ದೆ ಎಂಬುದರ ಹೊರತಾಗಿ ಇರುವ ವಿಷಯವನ್ನು ಯಾರಾದರೂ ಎತ್ತಿಕೊಂಡಿದ್ದು ನನಗಂತೂ ಕಂಡಿಲ್ಲ.

ಆದರೆ ಇದಾವುದೂ ಲೆಕ್ಕಕ್ಕೆ ಇಲ್ಲ ಎಂಬಂತೆ ಇದಾದ ಕೇವಲ ನಾಲ್ಕೇ ದಿನಗಳಲ್ಲಿ ಹಾಡು ಹಗಲೇ ಮತ್ತೊಂದು ಸುತ್ತಿನ ಹತ್ಯೆ ಮಾಡಿದ ಉಗ್ರರು ಒಂದೇ ದಿನ ಎರಡೆರಡು ಕಡೆ ನರಮೇಧ ನಡೆಸಿದ್ದರು. ಏ. ೨೪, ಬನ್ಸಿಲಾಲ್ ಸಪ್ರು ೪೫ ವರ್ಷದ ಪಂಡಿತ ಶ್ರೀನಗರದ ಗುಲಾಬ್ ಭಾಗ್‌ನವನು. ಪಕ್ಕದ ಮನೆಯವನು ಏನೋ ಸಹಜ ಮಾತುಕತೆ ಎಂಬಂತೆ ಕರೆದು ಬಾಗಿಲು ತೆರೆದಿದ್ದಾನೆ.

ತೆರೆಯುತ್ತಿದ್ದಂತೆ ಸೀದಾ ಮೂರು ಗುಂಡು ಹೊಡೆಸಿ ಸಾಯಿಸಿದ್ದ. ಸಪ್ರು ತನ್ನ ಕುಟುಂಬವನ್ನು ಆಗಲೇ ದೂರ ಕಳಿಸಿದ್ದವನು ಇನ್ನೇನು ತಾನೂ ಹೊರಡುವ ತಯಾರಿಯಲ್ಲಿದ್ದನಂತೆ. ಅದರೆ ಇದನ್ನೇ ಗಮನಿಸುತ್ತಿದ್ದ ನೆರೆಮನೆಯವನೇ ಉಗ್ರರನ್ನು ಕರೆಸಿ ಹತ್ಯೆ ಮಾಡಿಸಿದ್ದ. ಅದೇ ದಿನ ಅನಂತ ನಾಗ್‌ನ ಮಟ್ಟಾನ್ ಪ್ರದೇಶದ ರವೀಂದ್ರ ಕುಮಾರ ಪಂಡಿತ್ ಮನೆಗೆ ಹಿಂದಿರುಗುವಾಗ ಸುಖಾ ಸುಮ್ಮನೆ ಕಗ್ಗೊಲೆ ನಡೆಸಿದ್ದೂ ಅಲ್ಲದೆ ದೇಹವನ್ನು ಎಳೆದಾಡುತ್ತಾ ಕುಣಿದಾಡಿ, ಒದೆಯುತ್ತಾ ಕೀಳುತನ ಮೆರೆದಿದ್ದರಂತೆ.

ಇದಾದ ಮೂರೇ ದಿನಕ್ಕೆ ಪೈಶಾಚಿಕತೆ ಮೆರೆದ ಉಗ್ರರು ಬಿಸಾಕಿದ್ದ ದೇಹವೊಂದು ಕುಪ್ವಾರ ಜಿಲ್ಲೆಯ ಸಾಧುಗಂಜ್ ಹತ್ತಿರ ಸಿಕ್ಕಿತ್ತು. ದೇಹಕ್ಕಾದ ಹಿಂಸೆಯನ್ನು ವರ್ಣಿಸಲು ಬೇರೇನೂ ಬೇಕಿರಲಿಲ್ಲ. ಜೀವಂತ ಇರುವಾಗಲೆ ಹೊಲಿದು ಹಾಕಲಾಗಿದ್ದ ಬಾಯಿಯೇ ಏಪ್ರಿಲ್ ೨೭, ೧೯೯೦ರಂದು ಬ್ರಿಜ್‌ನಾಥ್ ಶಾಹ ಮೇಲೆ ನಡೆದ ಹಲ್ಲೆಯ ಕತೆ ಹೇಳುತ್ತಿತ್ತು. ಕಿಡ್‌ನ್ಯಾಪ್ ಆಗಿದ್ದಾನೆಂದು ರಿಪೋರ್ಟ್ ಆದ ಎರಡು ದಿನದ ನಂತರದ ದೇಹ ಸಿಕ್ಕಿತ್ತು. ದೇಹ ಗುರುತು ಹಿಡಿಯಲೇ ಕಷ್ಟವಾಗುವ ಹಾಗಿದ್ದ ಬ್ರಿಜ್‌ನಾಥ್ ಶಾಹ ಯಾವ ಪಾಪವೂ ಮಾಡದೆ ಉಗ್ರರ ಹಿಂಸೆಗೀಡಾಗಿದ್ದ.

ಇಲ್ಲೊಂದು ವಿಚಿತ್ರ ಕೇಸ್ ಕೂಡಾ ಇದೆ. ಏಪ್ರಿಲ್ ೨೨, ೧೯೯೦ ರಂದು ಕಿಡ್ ನ್ಯಾಪ್ ಆದ ಸುಷ್ಮಾ ಪಂಡಿತ್ ಜೀವಂತ ಹಿಂದಿರುಗಿದ ಏಕೈಕ ಹೆಣ್ಣು ಮಗಳು. ಹೇಗೆ ಎಷ್ಟು ಜನ ರೇಪ್ ಮಾಡಿದರು ಎಲ್ಲೆಲ್ಲಿ ಹಿಂಸೆ ಕೊಟ್ಟರು ಇತ್ಯಾದಿ ಏನನ್ನೂ ಆಕೆ ಬಾಯಿಬಿಟ್ಟ ಬಗ್ಗೆ ದಾಖಲೆಗಳಿಲ್ಲ. ಯಾಕೆ ಎನ್ನುವುದೂ ಗೊತ್ತಾಗಲಿಲ್ಲ. ಆದರೆ ಆಕೆಯ ಕಾಲುಗಳಿಗೆ ಗುಂಡು ಹಾರಿಸಿ ಮುರಿದು ಕಳಿಸ ಲಾಗಿತ್ತು. ಆದರೆ ಸುಷ್ಮಾ ಪಂಡಿತ ಮೈ ಸುಡುವಿಕೆಗೂ, ಹೀನಾಯ ಹಿಂಸೆಗೂ ಸಿಲುಕಿರಲಿಲ್ಲ. ಆದರೆ ಆಕೆಯನ್ನು ಜೀವಂತ ಮರಳಿಸಿದ್ದೇ ಆಗಿನ ಕಾಲದ ಅತಿ ದೊಡ್ಡ ಅಚ್ಚರಿ ಮತ್ತು ಆಕೆಯಿಂದ ಯಾವ ಮಾಹಿತಿಗಳೂ ಬರಲಿಲ್ಲ ಎನ್ನುವುದೂ ಗಮನೀ ಯವೇ. ಆದರೆ ಮೀಡಿಯಾ ಮತ್ತಿತರ ಹಾವಳಿಯಿಂದಾಗಿ ಸುಷ್ಮಾ ತನ್ನನ್ನು ತೆರೆದುಕೊಳ್ಳಲೇ ಇಲ್ಲ.

ಇದರ ನಂತರ ನಡೆದ ಕಥೆಯಿದೆಯಲ್ಲ ಎಂಥವನಿಗೂ ಈ ಉಗ್ರರ ವಿರುದ್ಧ ಎದ್ದು ನಿಲ್ಲುವಂತೆ ಮಾಡುತ್ತಿದೆ. ಕಾರಣ ಹಲವಾರು ದಶಕಗಳಿಂದ ನಾನು ಕವಿ ನಾನು ಎಲ್ಲರೊಂದಿಗೂ ಸಹಬಾಳ್ವೆ ಎನ್ನುವ ನಿಲುವಿನೊಂದಿಗೆ ಅಕ್ಕ ಪಕ್ಕದವರನ್ನೆಲ್ಲ ಇನ್ನು ನಂಬಿ ಕೊಂಡೆ ಬದುಕಿಬಿಟ್ಟಿದ್ದವ, ದೊಡ್ಡ ಉದಾರತೆಯಿಂದ ಅವರ ಬಂದೂಕಿನ ನಳಿಕೆಯಲ್ಲಿ ಗೂಡು ಕಟ್ಟಿಸುವ ಇರಾದೆ ಹೊಂದಿದ್ದ ಸನಲ್ಲ, ಸರ್ವಾನಂದ ಕೌಲ್, ಅವನ ದೇಹ ಬರ್ಬರವಾಗಿ ಸುಲಿದು, ಸುಟ್ಟು ಹಾಕಿದ್ದು ಸಿಕ್ಕಾಗ ಒಮ್ಮೆ ಈ ಎಬುಜೀಗಳು ಅವಶ್ಯ ಅದನ್ನು ನೋಡಬೇಕಿತ್ತು ಎನ್ನಿಸುತ್ತದೆ.

ಅದು ಏಪ್ರಿಲ್ ೩೦, ಯಾವುದೋ ಲಹರಿಯಲ್ಲಿ ಕವನ ಕಟ್ಟುವ ಮೂಡಿನಲ್ಲಿದ್ದ ಕವಿ ಸರ್ವಾನಂದ್ ಕೌಲ್ ನ ಮನೆ ಬಾಗಿಲು ತಟ್ಟಿದ ಉಗ್ರರು ಅವನ ಜೊತೆ ಅವನ ಮಗನನ್ನು ನೇರ ಜೀಪಿನಲ್ಲಿ ತುಂಬಿ ಎಳೆದೊಯ್ದಿದಾರೆ. ಇದನ್ನು ಯಾವ ಕಾಲಕ್ಕೂ ನಂಬದ ಸರ್ವಾನಂದ ಕೌಲ್ ಆಘಾತಕ್ಕೊಳಗಾಗೇ ಸಾಯಬೇಕಿತ್ತು. ಕಾರಣ ಈ ‘ಪ್ರೇಮಿ’ ಎನ್ನುವ ಕಾವ್ಯನಾಮದ ಕವಿ ಅದೇ ಭರವಸೆ, ನಂಬಿಕೆ ಎನ್ನುವ ಸವಕಲು ಪದಕ್ಕೆ ಜೋತು ಬಿದ್ದುಕೊಂಡೆ ಬದುಕಿದ್ದ. ಅದೇ ಅವನ ಜೀವಕ್ಕೆ ಮಾರಕವಾಗಿದ್ದಲ್ಲದೆ ಮಗನ ಬದುಕೂ ಎಕ್ಕುಟ್ಟುವುದರಲ್ಲಿತ್ತು.

(….ಮುಂದುವರೆಯುವುದು)

error: Content is protected !!