Friday, 3rd February 2023

ಇದ್ದದ್ದನ್ನು ಇದ್ದಂಗೆ ಹೇಳಿದ್ರೆ ಗೌಡ್ರ ಮ್ಯಾಗೇಕ್ ಕೋಪ ?

ಹಂಪಿ ಎಕ್ಸ್’ಪ್ರೆಸ್

ದೇವಿ ಮಹೇಶ್ವರ ಹಂಪಿನಾಯ್ಡು

ದಿನಬೆಳಗಾದರೆ ಇಂದಿಗೂ ರೇಡಿಯೋಗಳಲ್ಲಿ ಹಳ್ಳಿಗಳಲ್ಲಿ ಆಟೋಗಳಲ್ಲಿ ಕರ್ನಾಟಕದ ಮೂಲೆಮೂಲೆಗಳಲ್ಲಿ ಕನ್ನಡಿಗರ ಕಿವಿಗೆ
ಇಂಪಾದ ಗೀತೆಗಳು ಕೇಳಸಿಗುವುದು ಕನ್ನಡ ಚಲನಚಿತ್ರ ಗೀತೆಗಳು.

ಅದರಲ್ಲೂ ಕನ್ನಡ ಸಾಹಿತ್ಯದಲ್ಲಿ ದಂತಕಥೆಯಾಗಿರುವ ಸಾಹಿತ್ಯರತ್ನ ಚಿ.ಉದಯ ಶಂಕರ್ ಅವರು ರಚಿಸಿರುವ ಗೀತೆಗಳದ್ದೇ ಸಾಕ್ಷಾತ್ ‘ಸರಸ್ವತಿಪಾಲು’. ಬರೋಬ್ಬರಿ ನಾಲ್ಕು ಸಾವಿರಕ್ಕೂ ಮೀರಿ ಗೀತೆಗಳನ್ನು ರಚಿಸಿ ದಾಖಲೆ ಸ್ಥಾಪಿಸಿರುವ ಮೇರು ಸಾಹಿತಿ
ಚಿ.ಉದಯಶಂಕರ್ ಅವರಿಗೆ ಕೊನೆಯ ದಿನದವರೆಗೂ ಕಾಡಿದ ಒಂದು ನೋವು ಕನ್ನಡ ಸಾಹಿತ್ಯ ಲೋಕದ ಒಂದು ದುರ್ದೈವ.

ಅಂದು ರೇಡಿಯೋ ಸಂದರ್ಶನವೊಂದರಲ್ಲಿ ತಮ್ಮ ನಿರಾಸೆ ಯನ್ನು ಹೊರಹಾಕಿದ ಉದಯಶಂಕರ್ ಅವರು ‘ನಾನು  ಕನ್ನಡ ದಲ್ಲಿ ಇಷ್ಟೆಲ್ಲಾ ಸಾಹಿತ್ಯ ಸೇವೆ ಸಲ್ಲಿಸಿದರೂ ನನ್ನನ್ನು ಒಬ್ಬ ಸಾಹಿತಿ ಯೆಂದು ಕನ್ನಡ ಸಾಹಿತ್ಯ ಪರಿಷತ್ತು ಪರಿಗಣಿಸಲೇ ಇಲ್ಲ’
ಎಂದು ನೋವಿನಿಂದ ನುಡಿದಿದ್ದರು. ಅಂದು ಅಂಥ ವ್ಯವಸ್ಥಿತ ಸ್ಥಿತಿ ಕನ್ನಡ ಸಾಹಿತ್ಯ ಲೋಕದಲ್ಲಿ ಖಂಡಿತಾ ಜಾರಿ ಯಲ್ಲಿತ್ತು. ಅಂದು ಕನ್ನಡದ ಸಾಹಿತಿಗಳಿಂದ ಮೇಲಿಂದ ಮೇಲೆ ಸಾಹಿತ್ಯ ಕೃತಿಗಳಾಗುತ್ತಿದ್ದವು.

ಕನ್ನ ಸಾಹಿತ್ಯವೆಂಬುದು ಅಕ್ಷಯಪ್ರಾತ್ರೆಯಾಗಿತ್ತು. ಸಾರಸ್ವತ  ಕದಲ್ಲಿ ಕನ್ನಡದ ಕವಿಗಳು ಸಾಹಿತಿ ಗಳೆಂದರೆ ಮೇಲ್ವರ್ಗದವರು. ಸಿನಿಮಾ ಸಾಹಿತ್ಯ ವೆಂಬುದು ಕೆಳವರ್ಗದವರ ಕ್ಷೇತ್ರವೆಂಬಂತೆ ಬಿಂಬಿಸಿ ಸಿನಿಮಾ ಸಾಹಿತಿಗಳೆಂದರೆ ಅಸ್ಪೃಶ್ಯರೆಂಬಂಥ ಭಾವನೆ ಯನ್ನು ಹುಟ್ಟುಹಾಕಿದ್ದರು. ಆದರೆ ಇವೆಲ್ಲವನ್ನು ಮೀರಿ ಅಂದು ಚಿ.ಉದಯಶಂಕರ್, ಗೀತಪ್ರಿಯ, ವಿಜಯನರಸಿಂಹ,
ಆರ್.ಎನ್. ಜಯಗೋಪಾಲ ರಂಥ ಸಾಹಿತಿಗಳು ಪ್ರಶಸ್ತಿಗಳನ್ನು ಮೀರಿಸುವಂಥ ಸಾಹಿತ್ಯವನ್ನು ನೀಡಿ ಸಾಮಾನ್ಯ ಕನ್ನಡಿಗರ ಹೃದಯ ಸ್ಪರ್ಶಿಸಿದ್ದರು.

ಅದರಲ್ಲೂ ಚಿ. ಉದಯ ಶಂಕರ್ ಇದ್ದರಲ್ಲಾ, ಅವರಿಗೆ ಒಂದು ಪಲ್ಲವಿ ನಾಲ್ಕು ಚರಣಗಳ ಗೀತರಚನೆ ಎಂಬುದು ಕೇವಲ ಎರಡು ನಿಮಿಷದ ಬರವಣಿಗೆಯಾಗಿತ್ತು. ಬರಿಯ ಗೀತೆ ಯನ್ನಲ್ಲ, ಅವರು ನೂರಾರು ಚಿತ್ರಗಳಿಗೆ ಪ್ರಬುದ್ಧ ವಾದ ಶಾಸ್ತ್ರೀಯ ಭಾಷೆಯ ಸಂಭಾಷಣೆ ಯನ್ನು ರಚಿಸಿದ್ದಲ್ಲದೆ ವರನಟ ರಾಜ್ ಅವರಲ್ಲಿ ತಾತ್ವಿಕ ವ್ಯಕ್ತಿತ್ವ ರೂಪುಗೊಳ್ಳಲು ಪರೋಕ್ಷ ಕಾರಣ
ರಾದರು.

ಕನ್ನಡದ ಭಾಷಾಜ್ಞಾನ ಭಾಷಾ ಸೌಂದರ್ಯ ವನ್ನು ಹೆಚ್ಚಿಸಿದ ಉದಯ ಶಂಕರರನ್ನು ಕನ್ನಡಿಗರು ಇನ್ನೂ ಸಾವಿರ ವರ್ಷ ಗಳಾದರೂ ಮರೆಯುವುದಿಲ್ಲ. ಆದರೆ ಅವರು ಬದುಕಿದ್ದಾಗ ಸಾಹಿತ್ಯ ಪರಿಷತ್ತು ಒಂದು  ದೊಡ್ಡ ಗೌರವ ಸ್ಥಾನ ನೀಡಬೇಕಿತ್ತು.
ಈಗ ಮುಂದಿನ ತಿಂಗಳು ಹಾವೇರಿಯಲ್ಲಿ ನಡೆಯಲಿರುವ ೮೬ನೇ ‘ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ’ ಚಲನಚಿತ್ರ ಸಾಹಿತ್ಯ ಕ್ಷೇತ್ರ ದಲ್ಲೇ ಹೆಚ್ಚು ಗುರುತಿಸಿಕೊಂಡಿರುವ ಪದ್ಮಶ್ರೀ ಡಾ.ದೊಡ್ಡರಂಗೇಗೌಡರನ್ನು ಸಮ್ಮೇಳನದ ಅಧ್ಯಕ್ಷ ರನ್ನಾಗಿ ಘೋಷಿಸಲಾಗಿದೆ.

ಇದು ನಿಜಕ್ಕೂ ಸಾಮಾನ್ಯ ಕನ್ನಡಿಗರೂ ಖುಷಿ ಪಡುವ ವಿಷಯ. ಚಿ.ಉದಯ ಶಂಕರ್ ಅವರಿಗಾದ ಅನ್ಯಾಯ ಗೌಡರಿಗಾಗಲಿಲ್ಲ. ಅಸಲಿಗೆ ದೊಡ್ಡರಂಗೇಗೌಡರು ‘ಮೇಲ್ವರ್ಗದ’ ಸಾಹಿತಿಗಳಂತೆ ಬರಿಯ ‘ಗರ್ಭಗುಡಿ’ಯೊಳಗೆ ಸ್ಥಾಪಿತರಾದವರಲ್ಲ. ನೂರಕ್ಕೂ
ಹೆಚ್ಚು ಕೃತಿಗಳು ಐನೂರಕ್ಕೂ ಹೆಚ್ಚು ಅಮರಗೀತೆಗಳ ತೋರಣವನ್ನು ಕನ್ನಡದ ಸಾಹಿತ್ಯ ಹೆಬ್ಬಾಗಿಲಿಗೆ ಕಟ್ಟಿದ ಕನ್ನಡದ ಶ್ರೇಷ್ಠ ಜಾನಪದ ಕವಿ, ಸಂಭಾವಿತ ಸಾಹಿತಿಗಳಾಗಿ ರಾಜಕೀಯವಾಗಿ ನಿರ್ಲಿಪ್ತರಾಗಿ ಗುರುತಿಸಿ ಕೊಂಡವರು.

ಇವರು ಕನ್ನಡ ಮತ್ತು ಸಂಸ್ಕೃತಿಗೆ ಚ್ಯುತಿ ಬಂದಾಗ ಅದನ್ನು ಮುಲಾಜಿಲ್ಲದೆ ಖಂಡಿಸುವ ಎದೆಗಾರಿಕೆ ಉಳ್ಳವರೂ ಹೌದು.
ಹಳ್ಳಿಸೊಗಡಿನ ಕವಿಗಳಾದ ಗೌಡರು ಕನ್ನಡ ಚಲನಚಿತ್ರ ಸಾಹಿತ್ಯ ಲೋಕವನ್ನು ಪ್ರವೇಶಿಸಿ ತಮ್ಮದೇ ಆದ ಜಾನಪದ ಶೈಲಿಯ ಗ್ರಾಮೀಣ ಭಾಷೆಯ ಗೀತೆಗಳ ಮೂಲಕ ಕನ್ನಡಿಗರಲ್ಲಿ ‘ಹೃದಯಗೀತೆ’ ಬರೆದವರು. ಇವರ ಕವನಗಳು ಸಂಗೀತ ಸಂಯೋಜನೆ ಗೊಂಡು ಕನ್ನಡ ಸಿನಿಮಾ ಗೀತೆಯಾದ ನೂರಾರು ಗೀತೆಗಳು ಕನ್ನಡಿಗರ ಅಸ್ತಿತ್ವ ಇರುವವರೆಗೂ ಶಾಶ್ವತವಾಗಿ ಉಳಿದಿರುತ್ತದೆ.

ಒಂದು ಕಡೆ ‘ಮನುಜ’ ಎಂಬ ಕಾವ್ಯನಾಮದಲ್ಲಿ ಕವನ ಸಂಕಲನಗಳು ಗದ್ಯ ಕೃತಿಗಳು ಪ್ರಗಾಥ ಕೃತಿಗಳು ಮುಕ್ತಗಳು ಪ್ರವಾಸ ಸಾಹಿತ್ಯವನ್ನು ರಚಿಸುತ್ತಲೇ ಇನ್ನೊಂದು ಕಡೆ ಕನ್ನಡ ಚಲನಚಿತ್ರಕ್ಕೆ ಅದ್ಭುತವಾದ ಜಾನಪದ ಸಾಹಿತ್ಯ ನೀಡುವ ಮೂಲಕ ‘ಮರಗಿಡದಂತೆ’ ಕನ್ನಡಿಗರನ್ನು ತೂಗಿಸುತ್ತಲೇ ಬಂದರು. ಜತೆಗೆ ‘ಕಂಡದ್ದ ಕಂಡಂಗೆ ಹೇಳಿದ್ರೆ ನೀವೆಲ್ಲಾ ಕೆಂಡ್ದಂತ ಕೋಪ
ಮಾಡ್ಬೇಡಿ, ಹುಡ್ಗಿರು ಚಡ್ಡಿಯ ಹುಡ್ಗಾರು ಲಂಗಾವ ತೊಟ್ಕೊಳ್ಳಿ ಯಾವ್ದಾರ ದೇಶ್ನಾಗೆ ಮೈಪೂರ ಬಿಟ್ಕೊಂಡು ಮಾನಾನೆ ಕಳ್ಕೊಂಡು ಕುಂತ್ಕೊಳ್ಳಿ ಎಂಗಾರ ಹುಚ್ಚ್ರಾಂಗೆ, ಬ್ಯಾಡ್ರಪ್ಪೋ ಆ ರೀತಿ ನಮ್ಗಲ್ಲ, ಇರ‍್ಲಪ್ಪ ನಮ್ಮ ರೀತಿ ನಮ್ಗೆಲ್ಲ’ ಎಂಬ ಸಾಹಿತ್ಯದ ಮೂಲಕ ನಮ್ಮ ಸಂಸ್ಕೃತಿ ನಮ್ಮತನದ ಕುರಿತು ನೇರ ನುಡಿ ಗಳಿಂದ ಕನ್ನಡಿಗರಿಗೆ ಎಚ್ಚರಿಸುವಂಥ ಗೀತೆಗಳನ್ನೂ ನೀಡಿದವರು.

ಪರಿಷತ್ತು ಮಟ್ಟದ ಸಾಹಿತಿಗಳೆಂದೆನಿಸಿ ದರೂ ಕೆಲ ರೆಡಿಮೇಡ್ ಸಾಹಿತಿಗಳಂತೆ, ಸರಕಾರದ ಸವಲತ್ತುಗಳಿಗಾಗಿ ಎಡತಾಕದೆ, ‘ಎಡ’ ತಾಕಿಸಿಕೊಳ್ಳದೆ ಭಾರತೀಯತೆ ಸಂಸ್ಕೃತಿ ವೈಚಾರಿಕತೆಯನ್ನು ಪ್ರತಿಪಾದಿಸುತ್ತಲೇ ವಸ್ತುನಿಷ್ಠರಾಗಿ ಬದುಕಿ ಬಂದ ಸಜ್ಜನ ಸಾಹಿತಿ. ನಾಲ್ಕು ವರ್ಷಗಳ ಹಿಂದೆ ‘ಆ ದಿನಗಳು’ ಕಳೆದು ಹೋದ ಹೆಂಗಸಿನಂತೆ ಯಾವುದೋ ಕಾಲದಲ್ಲಿ ಸಾಹಿತ್ಯದ ಚಿಗುರು ಸತ್ತುಹೋದ ಮಾಜಿ ಸಾಹಿತಿಗಳು, ಕೃಪಾಪೋಷಿತ ಪೀಠಸ್ಥರ ಅವಿವೇಕದ ನಡೆಗಳಿಂದ ಬೇಸತ್ತ ದೊಡ್ಡರಂಗೇಗೌಡರು ಅತಿರೇಕದ ವರ್ತನೆ ಯಿಂದ ಗೋಮಾಂಸ ಭಕ್ಷಿಸುವ ಟೌನ್‌ಹಾಲ್ ಪೀಠಸ್ಥರು ಮತ್ತು ಸಾಹಿತಿಗಳು ಮೇದಾವಿ ಗಳಲ್ಲ ಎಂದು ಕೊಬ್ಬಿದ ಕಬ್ಬಿಗರಿಗೆ ಚಾಟಿ ಬೀಸಿದ್ದರು. ಆಗಲೇ ನೋಡಿ ಗೌಡರು ಕನ್ನಡಿಗರಿಗೆ ಬಲು ದೊಡ್ಡವರಾಗಿ ಕಂಗೊಳಿಸಿದರು.

ನಾಡೋಜ ಡಾ.ಎಂ. ಚಿದಾನಂದ ಮೂರ್ತಿಗಳು ಇಂಥದ್ದೇ ಧೋರಣೆಯನ್ನು ಹೊಂದಿದ್ದರಿಂದ ಸಾಹಿತ್ಯ ಲೋಕದ ಹೆಗ್ಗಣದಂಥ ವ್ಯಕ್ತಿಗಳು ಚಿಮೂ ಅವರಿಗೆ ನ್ಯಾಯವಾಗಿ ಸಲ್ಲುತ್ತಿದ್ದ ಗೌರವ ಡಾಕ್ಟರೇಟ್ ಪ್ರಶಸ್ತಿಗಳು ಸಾಹಿತ್ಯ ಸಮ್ಮೇಳನ ಅಧ್ಯಕ್ಷಗಿರಿಯನ್ನು ಕುತಂತ್ರದಿಂದ ತಪ್ಪಿಸುತ್ತಲೇ ಬಂದರು. ಇದರಿಂದ ರೋಸಿಹೋದ ಚಿಮೂ ಅವರು ‘ನನ್ನ ಹೆಸರನ್ನು ಸಾಹಿತ್ಯ ಸಮ್ಮೇಳನದ
ಅಧ್ಯಕ್ಷಗಿರಿಗೆ ಎಂದಿಗೂ ಪರಿಗಣಿಸಬಾರದೆಂದು’ ಎಚ್ಚರಿಸಿ ಪತ್ರಿಕಾಗೋಷ್ಠಿ ನಡೆಸಿದ್ದರು.

ಈಗ ದೊಡ್ಡರಂಗೇಗೌಡರ ವಿಚಾರ ದಲ್ಲೂ ಇಂಥದ್ದೇ ಪ್ರಯತ್ನಗಳು ನಡೆಯುವ ಲಕ್ಷಣಗಳು ಗೋಚರಿಸುತ್ತಿದೆ. ಸರಕಾರದ ಗಂಜಿ ಕೇಂದ್ರದ ನಿರಾಶ್ರಿತರಾದ ಕೆಲ ಬರಗೆಟ್ಟ ಸಾಹಿತಿಗಳ ವರ್ಗ ಇಂಥ ಹುನ್ನಾರವನ್ನು ಕಾಲಕಾಲಕ್ಕೆ ನಡೆಸುತ್ತಲೇ ಬಂದಿದೆ. ಮೊನ್ನೆ ದೊಡ್ಡರಂಗೇಗೌಡರು ಸಂದರ್ಶನ ವೊಂದರಲ್ಲಿ ‘ಪರದೇಶಿ ಆಂಗ್ಲ ಭಾಷೆಯನ್ನು ಒಪ್ಪಿಕೊಂಡು ಆರಾಧಿಸುವ ನಾವುಗಳು ಹಿಂದಿಯನ್ನು ಏಕೆ ಒಪ್ಪಿಕೊಳ್ಳುವುದಿಲ್ಲ’ ಎಂದು ಇದ್ದದ್ದು ಇದ್ದಂಗೆ ಹೇಳಿದರೆ ಕೆಲವರು ಕೆಂಡದಂತ ಕೋಪವನ್ನು
ತೋರಲಾರಂಭಿಸಿದ್ದಾರೆ.

ಅವರ ಅಭಿಪ್ರಾಯವನ್ನು  ಸರಿಯಾಗಿ ಅರ್ಥಮಾಡಿಕೊಳ್ಳದೆ ಅವರನ್ನು ಖಂಡಿಸಿ ಸಮ್ಮೇಳನಾಧ್ಯಕ್ಷತೆಯಿಂದಲೇ ಬದಲಾಯಿಸಿ ಬೇರೆಯವರನ್ನು ನೇಮಿಸಬೇಕು ಎಂಬುದಾಗಿ ಬೊಬ್ಬೆ ಇಡಲು ಶುರುವಿಟ್ಟಿದ್ದಾರೆ. ಆರು ದಶಕಗಳಿಂದ ಕನ್ನಡ ಕೈಂಕರ್ಯ
ಮಾಡಿ ಕೊಂಡು ಬಂದ ಹಿರಿಯ ಸಾಹಿತಿಯೊಬ್ಬರನ್ನು ಹೀಗೆ ಅಪ್ರಜ್ಞಾವಂತರಾಗಿ ದೂಷಿಸುವುದು ಕನ್ನಡದ ಸಾರಸತ್ವ ಲೋಕಕ್ಕೆ ಕಳಂಕ. ಗೌಡರಿಗೆ ಹಿಂದಿ ಮಾತನಾಡಲು ಬರುತ್ತದೆಯೋ ಇಲ್ಲವೋ ಆದರೆ ಅವರು ದೇಶದ ಸಂವಿಧಾನತ್ಮಕತೆಯನ್ನು ಒಪ್ಪಿಕೊಳ್ಳುವ ಉದಾರ ವ್ಯಕ್ತಿತ್ವವನ್ನು ತೋರಿದರಲ್ಲದೇ ಕನ್ನಡವನ್ನು ಅಲ್ಲಗೆಳೆದರೇ?.

ಅವರೆಂದಿಗೂ ಹೊಟ್ಟೆಪಾಡಿನ ಕನ್ನಡದ ಕೆಲಸವನ್ನು ಮಾಡಿದವರಲ್ಲ. ನಮ್ಮದಲ್ಲದ ಇಂಗ್ಲಿಷ್‌ಗಿಂತ ಹಿಂದಿಯನ್ನು
ರಾಷ್ಟ್ರೀಯತೆಯಾಗಿ ಸ್ವಾಗತಿಸುವ ಮನೋಭಾವ ಹೊಂದುವುದು ದೇಶದ ಸ್ವಾವಲಂಬನೆಗೆ ಪೂರಕವಾಗುತ್ತದೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರಷ್ಟೆ. ಆದರೆ ಇಂದಿನ ಮಹಾರಾಷ್ಟ್ರ ಬೆಳಗಾವಿ ವಾದದ ವೇಳೆಯಲ್ಲಿ ತಮ್ಮ ಹೇಳಿಕೆಯನ್ನು ಇನ್ನೂ ಹಲವು ತಪ್ಪು ದಾರಿಗೆ ಎಳೆಯುವ ಅಪಾಯವನ್ನು ಮತ್ತು ನಾಳಿನ ಸಮ್ಮೇಳನದ ವೇದಿಕೆಯಲ್ಲಿ ಇದೇ ವಿಷಯವನ್ನಿಟ್ಟು ಕೊಂಡು
ಸಮ್ಮೇಳನದ ಘನತೆಯನ್ನು ಕುಲಗೆಡಿಸ ಬಹುದಾದ ಸಾಧ್ಯತೆಯನ್ನು ಅರಿತು ಮೊನ್ನೆ ಕ್ಷಮೆಯಾಚಿಸಿದ್ದಾರೆ.

ಇಷ್ಟಕ್ಕೂ ಕನ್ನಡವನ್ನು ನಿರ್ಲಕ್ಷಿಸಿ ಹಿಂದಿಯನ್ನು ಒಪ್ಪಿಕೊಳ್ಳಿ ಎಂದು ಯಾವೊಬ್ಬ ಕನ್ನಡಿಗನೂ ಹೇಳುವುದಿಲ್ಲ. ಇಲ್ಲಿ ಗಮನಿಸಬೇಕಾದ ಸೂಕ್ಷ್ಮ ವಿಷಯವೆಂದರೆ ಎರಡು ವರ್ಷಗಳ ಹಿಂದೆ ದೊಡ್ಡರಂಗೇಗೌಡರು ‘ಮೋದಿ ಮತ್ತೊಮ್ಮೆ’ ಸಂದರ್ಶನ
ದಲ್ಲಿ ಮೂರು ನಿಮಿಷಗಳ ಕಾಲ ಪ್ರಧಾನಿ ಮೋದಿ ಯವರ ಆಡಳಿತ ಕಾರ್ಯಸಿದ್ಧಿ ಸಾಧನೆಗಳನ್ನು ಹೊಗಳಿ ಮೋದಿಯಂಥ ಪ್ರಧಾನಿಗಳೇ ದೇಶವನ್ನು ಸದಾ ಆಳುವಂತಾಗಬೇಕು ಎಂದು ಕರೆ ನೀಡಿದ್ದರು.

ಇದರ ‘ಅಡ್ಡ’ ಪರಿಣಾಮಗಳನ್ನು ಅವರು ಇಂದು ಎದುರಿಸಬೇಕಾಗಿ ಬಂದರೂ ಆಶ್ಚರ್ಯವಿಲ್ಲ. ಕನ್ನಡ ಸಾಹಿತ್ಯ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಬಿಲಗಳನ್ನು ಮಾಡಿಕೊಂಡಿರುವ ಪಿತೃಪಕ್ಷಗಳ ಗಂಜಿ ಗಿರಾಕಿಗಳಿಗೆ ಇಂಥ ದೇಶನಿಷ್ಠರು ಸಂಸ್ಕೃತಿ ಸಂಜಾತರು ಯಾವಾಗಲೂ ಅಪಥ್ಯ. ಕನ್ನಡಿಗರು ಹೆಸರನ್ನೇ ಕೇಳಿರದ ಸಾಹಿತಿಗಳನ್ನು ಎಬ್ಬಿಸಿಕೊಂಡು ಬಂದು ಅಲಂಕರಿಸಿ
ಸಮ್ಮೇಳನದ ಅಧ್ಯಕ್ಷರನ್ನಾಗಿಸಿ ಮೆರವಣಿಗೆ ಮಾಡಿ ಮೆರೆಸಿರುವಾಗ ದೊಡ್ಡರಂಗೇ ಗೌಡರು ಎಂದಿಗೋ ಸಮ್ಮೇಳನದ ಅಧ್ಯಕ್ಷರಾಗ ಬೇಕಿತ್ತು. ಆದರೆ ಈಗ ಅಂಥ ಗುರುತಿಸಬಹುದಾದ ಸಾಹಿತಿಗಳಾರೂ ಕಾಣಸಿಗುತ್ತಿಲ್ಲ.

ಎಚ್.ಎಸ್. ವೆಂಕಟೇಶಮೂರ್ತಿಯವರನ್ನು ಹೊರತು ಪಡಿಸಿದರೆ ಆಧುನಿಕ ಪುರಂದರ ಹಂಸಲೇಖರಂಥ ಅಪ್ರತಿಮ ಚಿತ್ರಸಾಹಿತಿಗಳೇ ಕನ್ನಡಿಗರ ಆಸ್ತಿ. ಎಲ್ಲರ ಕೋಟಾ ಗಳೂ ಮುಗಿದುಹೋಗಿ ಎಡಗೈಗೆ ‘ಅದೇನೋ’ ಹತ್ತಿರವೆಂಬಂತೆ ಈ ಬಾರಿಯ ಸಮ್ಮೇಳನದ ಅಧ್ಯಕ್ಷ ಗಾದಿಗೆ ಭಗವಾನನಂಥ ಹೆಸರೂ ಸಂಭವನೀಯ ಪಟ್ಟಿಯಲ್ಲಿ ಸೇರಿಕೊಂಡಿದ್ದು ಕನ್ನಡಿಗರಿಗೆ ಶಾಪ
ವೆಂದೆನಿಸಿತ್ತು.

ಮುಂದೇನಾದರು ಸಿದ್ದರಾಮಯ್ಯ ಮಲ್ಲಿಕಾರ್ಜುನ ಖರ್ಗೆಯವರಿಗೆ ಅವಕಾಶ ಸಿಕ್ಕರೆ ಖಂಡಿತಾ ಭಗವಾನ್ ಸಮ್ಮೇಳನದ ಅಧ್ಯಕ್ಷನಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಆದರೆ ಬಿಜೆಪಿ ಸರಕಾರವಿರುವುದರಿಂದ ಅದು ಅಸಾಧ್ಯದವೆಂದೇ
ಹೇಳಬೇಕು. ಹೀಗಾಗಿ ಗೌಡರಿಗೆ ಹಾವೇರಿಯಲ್ಲಿ ಕನ್ನಡದ ತೇರನ್ನು ಎಳೆಯುವ ಅಮೋಘ ಅವಕಾಶ ಕೂಡಿಬಂದಿದೆ.

ಉಪನ್ಯಾಸಕರಾಗಿ ಪ್ರಾಧ್ಯಾಪಕರಾಗಿ ಪ್ರಾಚಾರ್ಯರಾಗಿ ದಶಕಗಳ ಕಾಲ ಕನ್ನಡದ ಬೀಜವನ್ನು ಬಿತ್ತಿದವರಾದ ದೊಡ್ಡರಂಗೇ ಗೌಡರು ಕನ್ನಡ ಸಾಹಿತ್ಯ ಸಂಸ್ಕೃತಿಯ ಪರಿಚಾರಕರಾಗಿ ಇಂಗ್ಲೆಂಡ್ ನೇಪಾಳ ಜರ್ಮನಿ ಅಮೆರಿಕಾ ಈಜಿಪ್ಟ್ ದೇಶಗಳ ಪ್ರವಾಸ ಮಾಡಿ ಅಲ್ಲಿನ ಕನ್ನಡ ಸಂಘಗಳಲ್ಲಿ ಧಾರ್ಮಿಕ ಸಂಸ್ಥೆಗಳಲ್ಲಿ ನಮ್ಮ ನಾಡಿನ ಹಿರಿಮೆಯನ್ನು ತಮ್ಮ ಉಪನ್ಯಾಸಗಳ ಮೂಲಕ ಪಸರಿಸಿದ್ದಾರೆ. ಎಸ್. ಇ.ಟಿ ಗೌರ್ನಿಂಗ್ ಕೌನ್ಸಿಲ್ ಸದಸ್ಯರಾಗಿ, ಐ.ಪಿ.ಆರ್.ಎಸ್‌ನ ಗೌರವ ಸದಸ್ಯರಾಗಿ, ಅನೇಕ ಶೈಕ್ಷಣಿಕ ಸಂಸ್ಥೆಗಳ ಗೌರವ ಸದಸ್ಯರುಗಳಾಗಿ, ಕೆಲ ಕನ್ನಡ ಆಂಗ್ಲಭಾಷೆಗಳ ಪತ್ರಿಕೆಗಳಿಗೆ ಸಂಪಾದಕರಾಗಿ, ಕನ್ನಡ ಚಲನಚಿತ್ರ ಗುಣಮಟ್ಟದ ಚಿತ್ರಗಳ ಆಯ್ಕೆ ಸಮಿತಿಯ ಸದಸ್ಯರಾಗಿ, ರಾಜ್ಯ ಸರಕಾರದ ಕರ್ನಾಟಕ ರತ್ನ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

ಇತ್ತೀಚೆಗಷ್ಟೇ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಇವೆಲ್ಲಕ್ಕಿಂತ ಮಿಗಿಲಾಗಿ ಆದಿಚುಂಚನಗಿರಿಯ ಕಾಲಭೈರವೇಶ್ವರ, ಸಿದ್ದೇಶ್ವರ, ಸಪ್ತಮಾತ, ಅಷ್ಟದೇವಿಯರು, ಹಿಮವತ್ ವೇಣುಗೋಪಾಲಸ್ವಾಮಿ, ಚಿನ್ಮಯಿ ತಾಯಿ ಚೌಡೇಶ್ವರಿ,
ಗೀತಾ ಗಂಗಾಧರ, ಶಿವಯೋಗಿ ಹೀಗೆ ಭಕ್ತಿಗೀತೆ ಭಾವಗೀತೆಗಳನ್ನು ಕಟ್ಟಿಕೊಡುವ ಮೂಲಕ ತಮ್ಮಲ್ಲಿನ ಸಹಜ ಆಸ್ತಿಕತೆಯನ್ನು ಮೆರೆದಿದ್ದಾರೆ. ಆದರೂ ಕನ್ನಡಿಗರಿಗೆ ದೊಡ್ಡರಂಗೇಗೌಡರು ಎಂದಾಕ್ಷಣ ‘ತೇರಾ ಏರಿ ಅಂಬರದಾಗೆ ನೇಸರ ನಗುತಾನೆ’ – ನೋಟದಾಗೆ ನಗೆಯ ಮೀಟಿ – ನಮ್ಮೂರ ಮಂದಾರ ಹೂವೇ ಯಂಥ ಹಲವು ಗೀತೆಗಳೇ ನೆನಪಿಗೆ ಬರುತ್ತದೆ.

ಆಶ್ಚರ್ಯವೆಂದರೆ ಅಂಥ ದೊಡ್ಡರಂಗೇಗೌಡರ ಲೇಖನಿಯಿಂದಲೇ ರೌದ್ರಗೀತೆಯಾದ ‘ಹೃದಯ ಸಮುದ್ರ ಕಲಕಿ ಉಕ್ಕಿದೆ ದ್ವೇಷದ ಬೆಂಕಿ ರೋಷಾಗ್ನಿ ಜ್ವಾಲೆ ಉರಿದುರಿದು’ ಹಾಡೂ ಬಡಿದೆಬ್ಬಿಸುತ್ತದೆ. ಇಂಥ ಸಾಧನೆಗಳ ಶಿಖರವನ್ನು ಏರಿದ ದೊಡ್ಡರಂಗೇ
ಗೌಡರನ್ನು ಗುರುತಿಸಿದ ಇದೇ ಯಡಿಯೂರಪ್ಪನವರ ಬಿಜೆಪಿ ಸರಕಾರ ೨೦೦೮ರಲ್ಲಿ ವಿಧಾನ ಪರಿಷತ್‌ಗೆ ಸದಸ್ಯರನ್ನಾಗಿಸಿ ಗೌರವಿಸುತ್ತದೆ. ಈಗ ಅದೇ ಯಡಿಯೂರಪ್ಪನವರ ಸರಕಾರ ೮೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ನೇಮಿಸುವ ಮೂಲಕ ದೇಶಪ್ರೇಮ, ರಾಷ್ಟ್ರೀಯತೆ, ಧರ್ಮ – ಸಂಸ್ಕೃತಿ – ಭಕ್ತಿ – ಭಾಷೆ ಇವುಗಳ ಸಿರಿವಂತರಾದ ದೊಡ್ಡರಂಗೇಗೌಡರಿಗೆ ಸಲ್ಲಬೇಕಾದ ಸಹಜ ಗೌರವವನ್ನು ಸಲ್ಲಿಸಿದೆ.

ಇಷ್ಟು ವರ್ಷಗಳ ಕಾಲ ಐಷರಾಮಿ ವೈಭೋಗವನ್ನು ಅನುಭವಿಸದೆ ಇಂದಿಗೂ ಸಾಮಾನ್ಯರಂತೆ ಆಟೋ ಬಸ್ ಗಳಲ್ಲಿ ಓಡಾಡಿಕೊಂಡು ಸರಳ ಜೀವನ ನಡೆಸುತ್ತಾ ಬಂದಿದ್ದಾರೆ. ಪಾಮರರನ್ನೂ ಗೌರವಿಸುವ, ಪಂಡಿತರನ್ನು ಪ್ರಾಮಾಣಿಕವಾಗಿ ಹೊಗಳುವ ದೊಡ್ಡ ಗುಣ ಹೊಂದಿರುವ ಗೌಡರು ನಿಜಕ್ಕೂ ಪರಿಪೂರ್ಣ ಭಾರತೀಯ ಮತ್ತು ಆದರ್ಶ ಕನ್ನಡಿಗರಾಗಿದ್ದಾರೆ. ಇತ್ತೀಚೆಗೆ ಚಲನಚಿತ್ರರಂಗದ ಕೆಲ ಅಯೋಗ್ಯರು ಅತಿರೇಕಿಗಳು ಗೌಡರ ಉದಾರತನವನ್ನು ದುರಪಯೋಗ ಪಡಿಸಿಕೊಂಡು ತಮ್ಮ ತಿಕ್ಕಲು ಗಳಿಗೆ ‘ದೊಡ್ಡ’ ಹೆಸರನ್ನು ಬಳಸಿಕೊಂಡು ದೊಡ್ಡವ ರಾಗಲು ಯತ್ನಿಸುತ್ತಿರುವುದು ಶೋಚನೀಯ.

ಗೌಡರು ಇಂಥವರ ಬಗ್ಗೆ ಕೊಂಚ ಎಚ್ಚರವಹಿಸಬೇಕಿದೆ. ಹಾಗೆಯೇ ಯಾರು ಏನೇ ಜರಿದ ರೂ ಹಿಂಜರಿಯದೆ ಹಾವೇರಿಯ ಸಾಹಿತ್ಯ ಸಮ್ಮೇಳನದ ಕನ್ನಡ ವೇದಿಕೆಯಲ್ಲಿ ವಿರಾಜಮಾನರಾಗಿ ಕನ್ನಡದ ಸೊಗಡನ್ನು ಪಸರಿಸಿ ಕನ್ನಡ ಭಾಷೆಯ ಬೆಳವಣಿಗೆಗೆ ಮಾರ್ಗದರ್ಶನವನ್ನು ನೀಡಿ, ಸರಕಾರದ ಮಟ್ಟದಲ್ಲಿ ಮತ್ತು ಸಾಮಾನ್ಯ ಕನ್ನಡಿಗನ ಹೊಣೆಗಾರಿಕೆ, ಕನ್ನಡದ ಪರಂಪರೆ
ಸಂಸ್ಕೃತಿ ಸಂಸ್ಕಾರ ಸಾಹಿತ್ಯ ಇವುಗಳ ಮೇಲೆ ಸಾರ್ಥಕ ಚರ್ಚೆ ಸಂಕಲ್ಪಗಳನ್ನು ಹುಟ್ಟುಹಾಕಲಿ.

ಬರಿದಾಗುತ್ತಿರುವ ಕನ್ನಡ ಸಾಹಿತ್ಯ ಕೃಷಿಗೆ ನೀರರಿಸುವ ಕೆಲಸಗಳಿಗೆ ದಿಕ್ಸೂಚಿಯಾಗಲಿ ಎಂದು ಹಾರೈಸೋಣ.

error: Content is protected !!