ಶಿವಮೊಗ್ಗ: ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆ ಕಾರ್ಯ ಡಿ.30(ಬುಧವಾರ) ರಂದು ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಬೆಳಿಗ್ಗೆ 8ಕ್ಕೆ ಆರಂಭವಾಗಲಿದೆ. ಸಂಜೆಯ ಫಲಿತಾಂಶ ಹೊರಬೀಳಲಿದೆ. 6,973 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ವಾಗಲಿದೆ.
ಚುನಾವಣೆ ಅಭ್ಯರ್ಥಿಗಳು ಫಲಿತಾಂಶಕ್ಕೆ ಕಾತರದಿಂದ ಕಾಯುತ್ತಿದ್ದಾರೆ. ಮತದಾರರ ಬಳಿ ಮತಯಾಚನೆ ಮಾಡಿದ್ದ ಅಭ್ಯರ್ಥಿ ಗಳು ಈಗ ದೇವರ ಮೊರೆ ಹೋಗಿದ್ದಾರೆ. ಮತ ಎಣಿಕೆಗೆ ಕ್ಷಣಗಣನೆ ಹತ್ತರವಾಗುತ್ತಿದ್ದಂತೆ ಅಭ್ಯರ್ಥಿಗಳ ಎದೆಯಲ್ಲಿ ಈಗ ಅಳುಕು, ಆತಂಕ ಎದುರಾಗಿದೆ. ಎಲ್ಲರ ಚಿತ್ತ ಫಲಿತಾಂಶದತ್ತ ನೆಟ್ಟಿದೆ.
ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ ಮುಗಿದಿದೆ. ಅಭ್ಯರ್ಥಿಗಳು ಮತದಾರರ ಪಟ್ಟಿ ತಿರುವಿ ಹಾಕುತ್ತಾ ಮತ ಲೆಕ್ಕಚಾರ ನಡೆಸಿದ್ದಾರೆ. ಜಿಲ್ಲೆಯ 244 ಗ್ರಾಮ ಪಂಚಾಯಿತಿ ಒಟ್ಟು 1192 ಕ್ಷೇತ್ರಗಳಿಂದ 2450 ಸ್ಥಾನಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆದಿತ್ತು. ಕೆಲವು ಅಭ್ಯರ್ಥಿಗಳು ಖಾಸಗಿ ಸಾಲ ಪಡೆದು, ಕೆಲವರು ಜಮೀನು ಗುತ್ತಿಗೆ ನೀಡಿ, ಸ್ನೇಹಿತರು, ಸಂಬಂಧಿಕರ ಬಳಿ ಸಾಲ ಪಡೆದು ಚುನಾವಣೆಗೆ ಖರ್ಚು ಮಾಡಿದ್ದಾರೆ.
ಮುಂಬರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಅಡಿಗಲ್ಲು ಎಂಬ ಕಾರಣಕ್ಕೆ ರಾಜಕೀಯ ವಲಯದಲ್ಲೂ ಕುತೂಹಲ ಮನೆ ಮಾಡಿದೆ.
155 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದರೆ, 6,973 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು. ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಮತ ಏಣಿಕೆ ನಡೆಯಲಿದೆ. ಜಿಲ್ಲೆಯ 244 ಗ್ರಾಮ ಪಂಚಾಯಿತಿಗಳ 1192 ಚುನಾವಣಾ ಕ್ಷೇತ್ರಗಳಿಗೆ 433 ಟೇಬಲ್ಗಳನ್ನು ಸಜ್ಜುಗೊಳಿಸಲಾಗಿದೆ. 433 ಮೇಲ್ವಿಚಾರಕರನ್ನು ಹಾಗೂ 866 ಸಹಾಯಕರನ್ನು ನಿಯೋಜಿಸಲಾಗಿದೆ.