Sunday, 24th January 2021

ಗ್ರಾಮ ಪಂಚಾಯ್ತಿಗಳ ರಚನೆ ಉದ್ದೇಶ ಸಾಕಾರಗೊಂಡಿದೆಯೇ ?

ಅಭಿವ್ಯಕ್ತಿ

ಡಾ.ಸತೀಶ್ ಕೆ.ಪಾಟೀಲ್

ರಾಜ್ಯದ ಗ್ರಾಮೀಣ ಭಾಗದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಈ ಸಲದ 5800ಕ್ಕೂ ಹೆಚ್ಚು ಗ್ರಾಮ ಪಂಚಾಯ್ತಿಗಳ ಚುನಾವಣೆಗೆ ವೇದಿಕೆ ಸಿದ್ಧವಾಗಿದೆ.

ಹಾಗಾದರೆ ಈ ಗ್ರಾಮ ಪಂಚಾಯ್ತಿಗಳ ಬೆಳವಣಿಗೆಯ ಹಿನ್ನೆಲೆಯೇನು? ಗ್ರಾಮ ಪಂಚಾಯ್ತಿಗಳ ಸ್ಥಾಪನೆಯ ಉದ್ಧೇಶ ಈಡೇರಿ ದೆಯೇ? ಗ್ರಾಮ ಪಂಚಾಯ್ತಿಗಳು ಎದುರಿಸುತ್ತಿರುವ ಸವಾಲುಗಳು ಮತ್ತು ಸಮಸ್ಯೆಗಳು ಯಾವುವು?ಹಾಗಾದರೆ ಇವುಗಳಿಗೆ ಪರಿಹಾರವೇನು ಎಂಬ ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಈ ಎಲ್ಲಾ ಅಂಶಗಳನ್ನು ನೋಡುವ ಮೊದಲು ಈ ಗ್ರಾಮೀಣ ಸ್ಥಳೀಯ ಆಡಳಿತದ ಪ್ರಮುಖ ಭಾಗವಾದ ಈ ಗ್ರಾಮ ಪಂಚಾಯ್ತಿಗಳು ರಾಜ್ಯ ಮತ್ತು ದೇಶದಲ್ಲಿ ಇವುಗಳ ಬೆಳವಣಿಗೆಯ ಹಂತ ಗಳನ್ನು ಚರ್ಚಿಸುವುದು ಸೂಕ್ತವೆನಿಸುತ್ತದೆ.

ಭಾರತ ಪ್ರಾಚೀನ ಕಾಲದಿಂದಲೂ ಈ ಸ್ಥಳೀಯ ಸರಕಾರಗಳು ಇದ್ದವು ಎನ್ನುವ ಉಲ್ಲೇಖ ನಮಗೆ ರಾಮಾಯಣ, ಮಹಾಭಾರತ ಮತ್ತು ವೇದಗಳ ಕಾಲದಲ್ಲಿನ ಹಲವು ಸಂಗತಿಗಳಿಂದ ತಿಳಿದುಬರುತ್ತದೆ. ನಂತರ ಮೊಘಲರ ಕಾಲದಲ್ಲಿ ಈ ಸ್ಥಳೀಯ ಸಂಸ್ಥೆೆ ಗಳನ್ನ ಕಡೆಗಣಿಸಲಾಯಿತು. ನಂತರ ಬ್ರಿಟೀಷರ ಕಾಲದಲ್ಲಿ ಈ ಸಂಸ್ಥೆಗಳ ಕಡೆಗಣಿಸುವುದು ಮುಂದುವರಿಯಿತಾದರೂ ಬ್ರಿಟೀಷ್ ಅಧಿಕಾರಿ ಲಾರ್ಡ್ ರಿಪ್ಪನ್ ಗ್ರಾಮಗಳ ಅಭಿವೃದ್ಧಿಗೆ ಈ ಸ್ಥಳೀಯ ಸಂಸ್ಥೆಗಳ ಮಹತ್ವ ಅರಿತು ಈ ಸಂಸ್ಥೆಗಳ ಬಲವರ್ಧನೆಗೆ ಹಲವು ಕ್ರಮಗಳನ್ನ ಕೈಗೊಂಡರು, ಆ ಕಾರಣಕ್ಕಾಗಿಯೆ ಲಾರ್ಡ್ ರಿಪ್ಪನ್ ಅವರನ್ನು ಭಾರತದ ಸ್ಥಾ ನೀಕಾಡಳಿತದ ಪಿತಾಮಹ ಎಂದು ಕರೆಯುತ್ತೇವೆ.

ನಂತರ ಸ್ವತಂತ್ರ ಭಾರತದ ಸಂವಿಧಾನ ರಚನಾ ಸಭೆಯಲ್ಲಿ ಇವುಗಳ ಬಗ್ಗೆ ಸಾಕಷ್ಟು ಚರ್ಚೆಯಾಗಿ ಗಾಂಧೀಜಿ ಮತ್ತು ಅಂಬೇಡ್ಕರ್ ಮಧ್ಯೆ ವಾದಕ್ಕೂ ಕಾರಣವಾಯಿತು. ಕೊನೆಗೆ ನೆಹರು ಸೂಚಿಸಿದ ಮಾರ್ಗದಂತೆ ಇವುಗಳಿಗೆ ಸಂವಿಧಾನಬದ್ಧ ಸ್ಥಾನಮಾನ ನೀಡದೆ ಕೇವಲ ರಾಜ್ಯ ನೀತಿ ನಿರ್ದೇಶಕ ತತ್ವಗಳಲ್ಲಿ ಉಲ್ಲೇಖ ಮಾಡಲಾಯಿತು. ಆದರೆ ಕಡ್ಡಾಯ ಗೊಳಿಸಲಿಲ್ಲ. ನಂತರ 1950ರ ದಶಕ ದಲ್ಲಿ ಕೇಂದ್ರ ಸರಕಾರದ ಯೋಜನೆಗಳ ಅನುಷ್ಠಾನದಲ್ಲಿ ಈ ಸ್ಥಳೀಯ ಸಂಸ್ಥಗಳ ಅಗತ್ಯ ಮನಗಂಡು 1956ರಲ್ಲಿ ಆಗಿನ ಸರಕಾರ ಬಲವಂತರಾಯ ಮೆಹತಾ ನೇತೃತ್ವದಲ್ಲಿ ಒಂದು ಸಮಿತಿ ರಚಿಸಿತು, ಅವರು ಕೂಲಂಕಷವಾಗಿ ಅಧ್ಯಯನ ಮಾಡಿ ಮೂರು ಹಂತಗಳ ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿಗಳ, ಗ್ರಾಮೀಣ ಸ್ಥಳೀಯ ಸಂಸ್ಥೆಗಳ ರಚನೆಗೆ ಮತ್ತು ಇವುಗಳಿಗೆ ಸಂವಿಧಾನಿಕ ಸ್ಥಾನಮಾನ ನೀಡಬೇಕು ಎಂದು ಶಿಫಾರಸ್ಸು ಮಾಡಿದರು.

ಇವರ ಶಿಫಾರಸ್ಸಿನ ಅನುಗುಣವಾಗಿ 1959ರಲ್ಲಿ ರಾಜಸ್ಥಾನ ರಾಜ್ಯದಲ್ಲಿ ಮೊದಲ ಬಾರಿಗೆ ಈ ಸ್ಥಳೀಯ ಸಂಸ್ಥೆಗಳನ್ನ ಸ್ಥಾಪಿಸ ಲಾಯಿತು. ನಂತರ 1977ರ ಅವಧಿಯಲ್ಲಿ ಅಂದಿನ ಜನತಾ ಪಕ್ಷದ ಸರಕಾರ ಪುನಃ ಮತ್ತೊಂದು ಸಮಿತಿಯಾದ ಅಶೋಕ ಮೆಹತಾ ಸಮಿತಿಯನ್ನ ನೇಮಕ ಮಾಡಲಾಯಿತು. ಅವರು ಎರಡು ಹಂತಗಳ ಗ್ರಾಮ ಮತ್ತು ಜಿಲ್ಲಾ ಪಂಚಾಯ್ತಿ, ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಸ್ಥಾಪನೆಗೆ ಶಿಫಾರಸ್ಸು ಮಾಡಿದರು. ಅಲ್ಲದೆ ಇವುಗಳಿಗೆ ಸಂವಿಧಾನಿಕ ಸ್ಥಾನಮಾನ ನೀಡಬೇಕು ಎಂದು ಹೇಳಿದರು. ನಂತರ  1984 – 85ರಲ್ಲಿ ಸಿಂಘ ಮತ್ತು ರಾವ್ ಸಮಿತಿ ಕೂಡಾ ಈ ಮೊದಲಿನ ಎರಡು ಸಮಿತಿಗಳು ಮಾಡಿದ ಶಿಫಾರಸ್ಸನ್ನು ಅನು ಮೋದಿಸಿದವು.

1989ರಲ್ಲಿ ಆಗಿನ ಪ್ರಧಾನ ಮಂತ್ರಿ ರಾಜೀವ್ ಗಾಂಧಿಯವರು ಈ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಸಂವಿಧಾನ ತಿದ್ದುಪಡಿ ತರಲು ಸಂಸತ್ತಿನಲ್ಲಿ ಮಸೂದೆಯನ್ನು ಮಂಡಿಸಿದರು. ಆದರೆ ಅವರ ಪಕ್ಷಕ್ಕೆ ರಾಜ್ಯಸಭೆಯಲ್ಲಿ ಬಹುಮತ ಇಲ್ಲದ ಕಾರಣ ಸಂವಿಧಾನ ತಿದ್ದುಪಡಿ ಮಾಡಲು ಸಾಧ್ಯವಾಗಲಿಲ್ಲ. ಕೊನೆಗೆ 1992ರಲ್ಲಿ ಆಗೀನ ಪ್ರಧಾನ ಮಂತ್ರಿ ಪಿ.ವಿ. ನರಸಿಂಹರಾವ್ ಸರಕಾರ ಈ ಗ್ರಾಮೀಣ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಪಂಚಾಯತ್ ರಾಜ್ಯ ಮಸೂದೆಯನ್ನ ಸಂಸತ್ತಿನಲ್ಲಿ ಮಂಡಿಸಿ  ಎರಡು ಸದನಗಳ ಒಪ್ಪಿಗೆ ಪಡೆದ ಪರಿಣಾಮ 1993ರಲ್ಲಿ ಸಂವಿಧಾನಕ್ಕೆ 73ನೇ ತಿದ್ದುಪಡಿ ಮಾಡುವ ಮೂಲಕ ದೇಶಾದ್ಯಂತ
ಏಕರೂಪ ಪಂಚಾಯತ್ ರಾಜ್ ಸಂಸ್ಥೆಗಳನ್ನ ಸ್ಥಾಪಿಸಲು ಕಾರಣವಾದರು. ಮತ್ತು ಈ ಸಂಸ್ಥೆಗಳಿಗೆ ಸಂವಿಧಾನಿಕ ಮಾನ್ಯತೆ ಕೂಡ ದೊರೆಯಿತು.

ಇದು ಭಾರತದಲ್ಲಿ ಪಂಚಾಯತ್ ರಾಜ್ಯ ಸಂಸ್ಥೆಗಳ ಬೆಳವಣಿಗೆ ಹಿನ್ನೆಲೆಯಾದರೆ ಇನ್ನು ಕರ್ನಾಟಕ ರಾಜ್ಯದಲ್ಲಿ 1983ರ ಅವಧಿ ಯಲ್ಲಿ ಆಗೀನ ರಾಮಕೃಷ್ಣ ಹೆಗ್ಡೆ ನೇತೃತ್ವದ ಜನತಾ ಪಕ್ಷದ ಸರಕಾರದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವರಾಗಿದ್ದ ಅಬ್ದುಲ್ ನಜೀರ್ ಸಾಬ್ ಪ್ರಯತ್ನದ ಫಲವಾಗಿ ದೇಶದಲ್ಲಿಯೇ ವ್ಯವಸ್ಥಿತವಾಗಿ ಪಂಚಾಯತ್ ರಾಜ್ಯ ಸಂಸ್ಥೆಗಳ ಸ್ಥಾಪನೆ ಕಾರಣಕರ್ತರಾದರು.

ಇವರನ್ನು ಕರ್ನಾಟಕ ರಾಜ್ಯದ ಸ್ಥಳೀಯ ಆಡಳಿತದ ಪಿತಾಮಹ ಎಂದು ಕರೆಯುತ್ತೇವೆ. ಈಗ ರಾಜ್ಯದಲ್ಲಿ ಪ್ರಸ್ತುತ ಸಂವಿಧಾನದ 73ನೇ ತಿದ್ದುಪಡಿಯ ಅನುಗುಣವಾಗಿ ಈ ಗ್ರಾಮೀಣ ಸ್ಥಳೀಯ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ಈ ಗ್ರಾಮ ಪಂಚಾಯ್ತಿಗಳ ಸ್ಥಾಪನೆಯ ಮೂಲ ಉದ್ದೇಶವೇನೆಂದರೆ ಜನರ ಕೈಯಲ್ಲಿ ಅಧಿಕಾರ ಕೊಡಬೇಕು, ಅಧಿಕಾರ ವಿಕೇಂದ್ರಿಕರಣವಾಗಬೇಕು.
ಸಮಾಜದ ಎಲ್ಲಾ ವರ್ಗದ ಜನರು ಆಡಳಿತ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ತಮ್ಮ ಗ್ರಾಮದ ಸಮಸ್ಯೆಗಳನ್ನ ತಾವೇ ಬಗೆಹರಿಸಿಕೊಳ್ಳಬೇಕು.

ಗ್ರಾಮಗಳ ಅಭಿವೃದ್ಧಿಯಾಗಬೇಕು, ಜನರಿಗೆ ರಾಜಕೀಯದ ಅರಿವು ಮೂಡಬೇಕು. ಗ್ರಾಮ ಸ್ವರಾಜ್ಯ ಕಲ್ಪನೆಯು ಸಾಕಾರಗೊಳ್ಳ ಬೇಕು ಎಂಬ ಆಶಯದಿಂದ ಇಂದು ಗ್ರಾಮ ಪಂಚಾಯ್ತಿಗಳಲ್ಲಿ ಮಹಿಳೆಯರಿಗೆ ಶೇ.50ರಷ್ಟು ಸ್ಥಾನಗಳ ಮೀಸಲಾತಿ ನೀಡಲಾಗಿದೆ. ಅದೇ ರೀತಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಶೇ.15ರಷ್ಟು ಮತ್ತು ಇತರೆ ಹಿಂದುಳಿದ ವರ್ಗದವರಿಗೆ ಶೇ.13ರಷ್ಟು ಸ್ಥಾನ ಗಳನ್ನು ಮೀಸಲಿಡುವ ಮೂಲಕ ಎಲ್ಲರಿಗೂ ಅಧಿಕಾರ ಸಿಗಲಿ ಎನ್ನುವ ಉದ್ದೇಶ ಇದರಲ್ಲಿ ಅಡಕವಾಗಿದೆ. ಆ ಮೂಲಕ ಮುಂದಿನ ನಾಯಕರನ್ನು ತಯಾರು ಮಾಡುವ ಕಾರ್ಖಾನೆ ಗಳಂತೆ ಇವುಗಳು ಕಾರ್ಯಮಾಡಲಿ, ಪ್ರಜಾಪ್ರಭುತ್ವದ ನೈಜ
ಅನುಷ್ಠಾನ ಇವುಗಳ ಮೂಲಕವಾಗಲಿ ಎನ್ನುವ ಆಶಯ ಹೊಂದಲಾಗಿದೆ.

ಆದರೆ ವಾಸ್ತವಿಕವಾಗಿ ಈ ಎಲ್ಲಾ ಆಶಯಗಳು ಮೇಲ್ನೋಟಕ್ಕೆ ಈಡೇರಿದೆ ಎಂದು ಅನಿಸಿದರೂ ಈ ಸ್ಥಳೀಯ ಸಂಸ್ಥೆಗಳಲ್ಲಿ ಇಂದು ಹಲವು ಸಮಸ್ಯೆಗಳು ಹುಟ್ಟಿಕೊಂಡಿವೆ. ಇಂದು ಗ್ರಾಮ ಪಂಚಾಯ್ತಿಗಳಿಗೆ ಹೆಚ್ಚಿನ ಅಧಿಕಾರ ಮತ್ತು ಅನುದಾನವನ್ನು
ನೀಡುತ್ತಿದಂತೆಯೇ ಅದರ ದುರುಪಯೋಗ ಹೆಚ್ಚಾಗುತ್ತಿದೆ ಮತ್ತು ಭ್ರಷ್ಟಾಚಾರ ಈ ಸಂಸ್ಥೆಗಳಲ್ಲಿ ವ್ಯಾಪಕವಾಗಿದೆ.

ಇವತ್ತು ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳು ಗ್ರಾಮ ಪಂಚಾಯ್ತಿ ಮೂಲಕವೇ ಅನುಸ್ಠಾನಗೊಳ್ಳುತ್ತಿದ್ದು, ವ್ಯಾಪಕ
ಭ್ರಷ್ಟಾಚಾರ ನಡೆಯುತ್ತಿರುವುದು ಕಂಡುಬರುತ್ತಿದೆ. ಉದಾಹರಣೆಗೆ ಸರಕಾರದ ಯೋಜನೆಗಳಾದ ಉದ್ಯೋಗ ಖಾತ್ರಿ ಯೋಜನೆ, ರಸ್ತೆ ನಿರ್ಮಾಣ, ಆಶ್ರಯ ಮನೆಗಳ ನಿರ್ಮಾಣ, ಶೌಚಾಲಯಗಳ ನಿರ್ಮಾಣ, ಚರಂಡಿ ನಿರ್ಮಾಣ, ಶುದ್ಧನೀರು ಪೂರೈಕೆ ಯೋಜನೆ, ಆರ್ಥಿಕ ಸಹಾಯದ ಯೋಜನೆಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ.

ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸದಸ್ಯರು ಮತ್ತು ಅಧಿಕಾರಿಗಳು ಸೇರಿ ಅಕ್ರಮದಲ್ಲಿ ತೊಡಗಿದ್ದಾರೆ. ಅದೂ ಅಲ್ಲದೆ ಅಧಿಕಾರದ ದುರುಪಯೋಗ ಆಗುತ್ತಿದೆ. ಪತ್ನಿಯ ಹೆಸರಿನಲ್ಲಿ ಪತಿ ಇಲ್ಲವೆ ಪ್ರಭಾವಿಗಳು ಹಿಂಬಾಗಿಲಿನಿಂದ ಅಧಿಕಾರ ಚಲಾಯಿಸು
ತ್ತಿದ್ದಾರೆ. ಇದಕ್ಕೆ ಅನಕ್ಷರತೆಯೂ ಕೂಡ ಕಾರಣವಾಗಿದೆ. ಒಂದು ಗ್ರಾಮ ಪಂಚಾಯ್ತಿಯ ವಾರ್ಡ್‌ಗೆ ಲಕ್ಷಾಂತರ ರುಪಾಯಿ ಹಣವನ್ನು ಚುನಾವಣೆಯಲ್ಲಿ ಖರ್ಚುಮಾಡುತ್ತಾರೆ. ಕಾರಣ ಚುನಾಯಿತರಾದರೆ ಇದರ ಹತ್ತುಪಟ್ಟು ಗಳಿಸಬಹುದು ಎನ್ನುವ
ದುರಾಲೋಚನೆ ಮನೆ ಮಾತಾಗಿದೆ.

ಹಳ್ಳಿಗಳಲ್ಲಿ  ಒಂದು ಮಾತು ಪ್ರಚಲಿತದಲ್ಲಿದೆ. ಆದರೆ ಎಂಎಲ್‌ಎ ಆಗಬೇಕು ಇಲ್ಲವೆ ಗ್ರಾಮ ಪಂಚಾಯ್ತಿ ಸದಸ್ಯನಾಗಬೇಕು ಎನ್ನುವ ಮಾತಿನಿಂದ ನಾವು ತಿಳಿಯಬಹುದು. ಇದರಿಂದಾಗಿ ಚುನಾವಣಾ ಅಕ್ರಮಗಳು ಹೆಚ್ಚಾಗುತ್ತಿವೆ. ಗ್ರಾಮ ಪಂಚಾಯ್ತಿ ಚುನಾವಣೆಯು ಪಕ್ಷಾತೀತವಾಗಿ, ಅಂದರೆ ಪಕ್ಷಗಳ ಕಾರ್ಯಕರ್ತರೆ ಚುನಾವಣೆಗೆ ಸ್ಪರ್ಧಿಸುವುದರಿಂದ ಇಲ್ಲಿಯೂ
ರಾಜಕೀಯ ವಾಸನೆ ಇದ್ದೇ ಇರುತ್ತದೆ. ಇದರಿಂದ ಗ್ರಾಮಗಳಲ್ಲಿನ ಗುಂಪು ಹುಟ್ಟಿಕೊಳ್ಳಲು ಇದು ದಾರಿ ಮಾಡಿ ಕೊಡುತ್ತದೆ. ಸರಕಾರ ಹೆಚ್ಚು ಅನುದಾನ ಮತ್ತು ಅಧಿಕಾರ ನೀಡುತ್ತಿದಂತೆಯೇ ಗ್ರಾಮ ಪಂಚಾಯ್ತಿಗಳಲ್ಲಿ ವ್ಯಾಪಕ ಭ್ರಷ್ಟಾಚಾರಕ್ಕೆ ದಾರಿ
ಮಾಡಿಕೊಟ್ಟಿದೆ.

100 ರಲ್ಲಿ ಶೇ.85ರಷ್ಟು ಜನಪ್ರತಿನಿಧಿಗಳು ಇದರಿಂದ ಹೊರತಾಗಿಲ್ಲ. ಎಲ್ಲೋ ಶೇ.15ರಷ್ಟು ಗ್ರಾಮ ಪಂಚಾಯ್ತಿ ಸದಸ್ಯರು ಒಳ್ಳೆಯ ಕಾರ್ಯಮಾಡಿ ಗ್ರಾಮಗಳ ಅಭಿವೃದ್ಧಿಗೆ ಕಾರಣವಾಗಿದ್ದಾರೆ. ಬಹುತೇಕ ಗ್ರಾಮ ಪಂಚಾಯ್ತಿ ಸದಸ್ಯರು ಜನರಿಗೆ ಕೆಲಸ ಮಾಡಿಕೊಡಲು ಕಮೀಷನ್ ಪಡೆಯುವುದು ಸಮಾನ್ಯವಾಗಿದೆ.

ಗ್ರಾಮ ಪಂಚಾಯ್ತಿಗಳು ಈ ಸಮಸ್ಯೆಗಳಿಂದ ಮತ್ತು ಅವುಗಳು ಎದುರಿಸುತ್ತಿರುವ ಸವಾಲುಗಳಿಂದ ಮುಕ್ತವಾಗದೆ ಈ ಗ್ರಾಮ ಪಂಚಾಯ್ತಿ ಸ್ಥಾಪನೆ ಉದ್ದೇಶ ಈಡೇರಲು ಸಾಧ್ಯವಿಲ್ಲ. ಮೂಲ ಆಶಯದಂತೆ ಗ್ರಾಮ ಪಂಚಾಯ್ತಿಗಳು ಕಾರ್ಯ ನಿರ್ವಹಿಸ
ಬೇಕಾದರೆ ಜನರು ಜಾಗೃತರಾಗಬೇಕು. ಒಳ್ಳೆಯ ಜನಪ್ರತಿನಿಧಿಗಳನ್ನ ಆಯ್ಕೆೆ ಮಾಡಬೇಕು. ಗ್ರಾಮ ಸಭೆಗಳಲ್ಲಿ ಗ್ರಾಮದ ಜನರು ಸಕ್ರೀಯವಾಗಿ ಭಾಗವಹಿಸಬೇಕು. ಗ್ರಾಮ ಪಂಚಾಯ್ತಿಗಳು ಸಮರ್ಥವಾಗಿ ಭ್ರಷ್ಟಾಚಾರ ರಹಿತವಾಗಿ ಕಾರ್ಯ  ನಿರ್ವಹಿಸಲು ಜನರ ಪಾತ್ರ ಮಹತ್ವದ್ದು. ಇದನ್ನು ಜನ ಅರಿತು ಈ ಸಲದ ಕರ್ನಾಟಕದ ಗ್ರಾಮ ಪಂಚಾಯ್ತಿಗಳಲ್ಲಿ ಮತದಾರರು ಈ ಎಲ್ಲಾ
ಅಂಶಗಳನ್ನು ಗಣನೆಗೆ ತೆಗೆದುಕೊಂಡು ತಮ್ಮ ಪಾತ್ರವನ್ನ ನಿರ್ವಹಿಸಬೇಕು.

ಒಟ್ಟಿನಲ್ಲಿ ಗ್ರಾಮ ಪಂಚಾಯ್ತಿಗಳ ರಚನೆಯ ಉದ್ದೇಶ ನೈಜವಾಗಿ ಸಾಕರಗೊಳ್ಳಲಿ. ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಅನುಷ್ಠಾನ ವಾಗಿ ಗ್ರಾಮಗಳಲ್ಲಿ ಒಳ್ಳೆಯ ಜನಪ್ರತಿನಿಧಿಗಳು ಆಯ್ಕೆಯಾಗಿ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಲಿ ಎನ್ನುವುದೇ ಬಹುಜನರ ಆಶಯ.

Leave a Reply

Your email address will not be published. Required fields are marked *