Wednesday, 1st December 2021

ಹಂಪಿಗೆ ಹರಿದು ಬಂದ ಪ್ರವಾಸಿಗರ ದಂಡು

ಹಲವು ಸ್ಮಾರಕಗಳಿಗೆ ಭೇಟಿ ನೀಡಿದ ಪ್ರವಾಸಿಗರು

ವಿರೂಪಾಕ್ಷ ದೇಗುಲದಲ್ಲಿ ಸರತಿಯಲ್ಲಿ ದರ್ಶನ ಪಡೆದ ಭಕ್ತರು

ಹೊಸಪೇಟೆ: ವಿಶ್ವವಿಖ್ಯಾತ, ಐತಿಹಾಸಿ ಪ್ರವಾಸಿ ತಾಣವಾಗಿರುವ ಹಂಪಿಗೆ ಭಾನುವಾರ ಜನಸಾಗರವೆ ಹರಿದುಬಂತು. ರಾಜ್ಯದಲ್ಲಿ ಕರೋನಾ ಎರಡನೇ ಅಲೆಯ ಅಬ್ಬರ  ಕಡಿಮೆಯಾಗುತ್ತಿದ್ದಂತೆ ಜನರ ಬೇಕಾಬಿಟ್ಟಿ ಓಡಾಟ ಜೋರಾಗಿದೆ‌.

ರಾಜ್ಯ ಸರ್ಕಾರ ಲಾಕ್ ಡೌನ್ ನಲ್ಲಿ ಭಾರಿ ಸಡಿಲಿಕೆ ಮಾಡಿ , ಒಂದೊಂದು ನಿಯಮಗಳನ್ನು ತೆಗೆದು ಹಾಕಿ ಈಗ ಸಂಪೂರ್ಣ ಅನ್ ಲಾಕ್ ಪ್ರಕ್ರಿಯೆ ಆರಂಭ ಮಾಡಿದೆ. ಇದನ್ನೇ ನೆಪವಾಗಿ ಇಟ್ಟುಕೊಂಡು ಜನರು, ಪ್ರವಾಸಿ ತಾಣಗಳಿಗೆ‌ ಮುಗಿ ಬೀಳುತ್ತಿದ್ದಾರೆ. ಹಂಪಿಯ ವಿಜಯವಿಠಲ‌ ದೇಗುಲಕ್ಕೆ ಭೇಟಿ ನೀಡಿದ ಪ್ರವಾಸಿಗರು ಇಲ್ಲಿನ ಕಲ್ಲಿನರಥ, ಸಪ್ತಸ್ವರ ಸಂಗೀತ ಕಂಬ, ಮಹಾನವಮಿ ದಿಬ್ಬ, ಕಮಲ್ ಮಹಲ್, ಗಜಶಾಲೆ ಸೇರಿದಂತೆ ಇತರ ಸ್ಮಾರಕಗಳನ್ನು ವೀಕ್ಷಿಸಿ ಕಣ್ತುಂಬಿಕೊಂಡರು.

ಅಲ್ಲದೇ ರಾಜಬೀದಿಯ ಎದುರು ಬಸವಣ್ಣ, ಸಾಸಿವೆ, ಕಡಲೆ ಕಾಳು ಗಣಪತಿ ಸೇರಿದಂತೆ ಇತರ ಸ್ಮಾರಕಗಳಿಗೆ ಭೇಟಿ ನೀಡಿದರು. ಹಂಪಿಯ ಹಲವು ಸ್ಮಾರಕ ಹಾಗೂ ವಿರೂಪಾಕ್ಷ ದೇವಸ್ಥಾನದಲ್ಲಿಯೂ ಜನರು ಭೇಟಿ ನೀಡಿದರು. ಕೋವಿಡ್‌ ಸುರಕ್ಷತಾ ಕ್ರಮಗಳನ್ನು ಪಾಲಿಸಿ ರಾಜ್ಯದ ಎಲ್ಲಾ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಅವಕಾಶವನ್ನು ಮಾಡಿಕೊಡಲಾಗಿದೆ. ಪ್ರವಾಸಿ ತಾಣಗಳು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗುತ್ತಿದ್ದಂತೆ ಎಲ್ಲೆಡೆ ಜನರು ಒಮ್ಮೆಲೇ ಮುಗಿ ಬೀಳುತ್ತಿದ್ದಾರೆ.

ಕಳೆದ ಮೂರು ತಿಂಗಳಿಂದ ಲಾಕ್ ಡೌನ್ ಜಾರಿಯಾದ ಹಿನ್ನೆಲೆಯಲ್ಲಿ,  3 ತಿಂಗಳು ಮನೆಯಲ್ಲಿಯೇ ಕುಳಿತಿದ್ದ ಜನರು ನಾಡಿನ ಪ್ರವಾಸಿ ತಾಣಗಳಿಗೆ ಲಗ್ಗೆ ಇಟಿದ್ದಾರೆ. ಕೋವಿಡ್‌ ನಿಯಮಗಳನ್ನು ಗಾಳಿಗೆ ತೂರಿ ಮಾಸ್ಕು, ಸಾಮಾಜಿಕ ಅಂತರವನ್ನು ಮರೆತಿರುವ ಚಿತ್ರಗಳು ಸರ್ವೇ ಸಾಮಾನ್ಯವಾಗಿದೆ.

ಉಗ್ರನರಸಿಂಹ ಸ್ಮಾರಕ ಬಳಿ ಪ್ರವಾಸಿಗರು..