Thursday, 19th May 2022

ವಿಶಾಲ ವೃಕ್ಷದ ಹಕ್ಕಿಗಳೆಲ್ಲ ಸೇರಿದ ಸಂಭ್ರಮದ ಗಳಿಗೆ…

ವಿಶ್ವವಾಣಿ ವಾರ್ಷಿಕೋತ್ಸವ ಸಂದರ್ಭದಲ್ಲಿ ‘ವಿಶ್ವವಾಣಿ ಕ್ಲಬ್‌ಹೌಸ್’ನ ಸಂಭ್ರಮ

ಬೆಂಗಳೂರು: ವಿಶ್ವಾಸವನ್ನೇ ವಿಶ್ವವಾಗಿಸಿಕೊಂಡಿರುವ ಅದೊಂದು ವಿಶಾಲ ವೃಕ್ಷ. ಸಸಿ ನೆಡುವ ಕಾಲದಿಂದ ವೃಕ್ಷವಾಗುವವರೆಗೂ ‘ನಾಯಕ’ನ ಜತೆಗಿರುವ, ವೃಕ್ಷದ ರೆಂಬೆಕೊಂಬೆಗಳಲ್ಲಿ ಗೂಡು ಕಟ್ಟಿಕೊಂಡು ಆಶ್ರಯ ಪಡೆದ, ಕೆಲ ಕಾಲ ದೂರ ಹೋಗಿ ಮತ್ತೆ ಬಂದ ಹಕ್ಕಿಗಳು ಸೇರಿದಂತೆ ಈಗಷ್ಟೇ ಮೊಟ್ಟೆಯಿಂದ ಹೊರಬಂದ ಮರಿಗಳೆಲ್ಲ ಒಂದೆಡೆ ಸೇರಿದ್ದ ಕ್ಷಣ ಅದಾಗಿತ್ತು. ಈ ಸಂಭ್ರಮದ ಹಬ್ಬವೇ ‘ವಿಶ್ವವಾಣಿ’ ೭ನೇ ವರ್ಷಕ್ಕೆ ಕಾಲಿಟ್ಟ ಗಳಿಗೆಯಾಗಿತ್ತು.

‘ವಿಶ್ವವಾಣಿ ಕ್ಲಬ್‌ಹೌಸ್’ ಇದಕ್ಕೆ ವೇದಿಕೆಯಾಗಿದ್ದು, ಈ ಸಂದರ್ಭದಲ್ಲಿ ಹಕ್ಕಿಗಳು ಸಂಭ್ರಮಿಸಿದ್ದು, ಭಾವುಕ ವಾಗಿದ್ದು, ಹೆಮ್ಮೆ ಪಡುತ್ತಿದ್ದ ಕ್ಷಣಗಳೆಲ್ಲ ಘಟಿಸಿದವು. ವಿಶ್ವೇಶ್ವರ ಭಟ್ ನಾನಾ ಪತ್ರಿಕೆಗಳ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದು, ಸ್ವಂತ ಪತ್ರಿಕೆ ಆರಂಭಿಸುವ ಯೋಚನೆ ಯೊಂದಿಗೆ ಪಾಟೀಲ ಪುಟ್ಟಪ್ಪನವರಿಂದ ‘ವಿಶ್ವ ವಾಣಿ’ ಪತ್ರಿಕೆ ಖರೀದಿಸಿದ್ದು, ಹಳೆಯ ತಂಡದೊಂದಿಗೆ ಎಳೆ ನಿಂಬೆಕಾಯಿಗಳನ್ನು ಕಟ್ಟಿಕೊಂಡು ಪ್ರಧಾನ ಸಂಪಾದಕರಾಗಿದ್ದು, ಎಲ್ಲ ಕಷ್ಟಗಳ ನಡುವೆಯೂ ಪತ್ರಿಕೆಯನ್ನು ಎತ್ತಿ ನಿಲ್ಲಿಸಿದ ಕ್ಷಣದವರೆಗೂ, ಭಟ್ಟರ ತೈಷಿಗಳು, ಗೆಳೆಯರು, ಒಡನಾಡಿಗಳು, ಸಹೋದ್ಯೋಗಿಗಳು, ಓದುಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಅಮ್ಮ, ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು… ಹಾಡಿನೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಿರೂಪಕಿ ರೂಪಾ ಗುರುರಾಜ್, ಪ್ರತಿಭೆ ಇರುವ ಎಲ್ಲರಿಗೂ ‘ವಿಶ್ವವಾಣಿ’ಯಲ್ಲಿ ವೇದಿಕೆ ಸಿಗುತ್ತದೆ. ೪ ದಿನದ ಸುದ್ದಿಗಳನ್ನು ಒಂದೇ ದಿನದಲ್ಲಿ ನೀಡುತ್ತಾರೆ, ನಾವು ಹೇಗೆ ಮಲ ಗುವುದೆಂದು ಹಿರಿಯರು ಪ್ರೀತಿ ಯಿಂದ ದೂರುತ್ತಾರೆಂದು ಹೇಳಿದರು.

ಪ್ರಾರಂಭದ ದಿನಗಳ ಬಗ್ಗೆ ಹಿರಿಯ ಪತ್ರಕರ್ತ ನಂಜನಗೂಡು ಮೋಹನ್ ಭಾವುಕರಾದರು. ಭಟ್ಟರು ಕನ್ನಡ ಪ್ರಭಕ್ಕೆ ರಾಜೀನಾಮೆ ನೀಡಿದಾಗ, ನಾನು ಫೋನ್ ಡಿ, ನಿಮ್ಮ ಅಭಿಮಾನಿ ಓದುಗರು ಒಂದೊಂದು ರು. ಕೊಟ್ಟರೂ ಸ್ವಂತ ಪತ್ರಿಕೆ ಮಾಡಬಹುದು ಎಂದಿದ್ದೆ. ಉಸಿರುಗಟ್ಟಿದ ವಾತಾವರಣದಲ್ಲಿದ್ದ ‘ವಿಶ್ವವಾಣಿ’ ಯನ್ನು ಭಟ್ಟರು ಖರೀದಿಸಿ, ರೀಲಾಂಚ್ ಮಾಡಿದರು. ೭ ವರ್ಷಗಳಲ್ಲಿ ೬ ತಿಂಗಳಿನಿಂದಷ್ಟೇ ಸವಿಗನಸುಗಳು ಬೀಳುತ್ತಿವೆ.

‘ವಿಶ್ವವಾಣಿ’ ೭ ವರ್ಷಗಳಿಂದ ಸಿಬ್ಬಂದಿಗೆ ೧೫ ಕೋಟಿ ರು. ಸಂಬಳ ನೀಡಿದ್ದು, ಸುಮಾರು ೫೦ ಕೋಟಿ ರು.ಗಳನ್ನು ಇನ್ನಿತರೆಗಾಗಿ ಖರ್ಚು ಮಾಡಿದೆ. ಇದು ಭಟ್ಟರ ಸಾಮರ್ಥ್ಯ. ಅವರು ಜೀವದ ಬೆದರಿಕೆಯನ್ನೂ ಸವಾಲಾಗಿ ಸ್ವೀಕರಿಸಿ ೩೦ ವರ್ಷಗಳಿಂದ ಈ ನೆಲದ ಸಂಸ್ಕೃತಿ, ಹಿರಿಮೆ- ಗರಿಮೆಗಳನ್ನು ಬರಹ ರೂಪದಲ್ಲಿ ಕಟ್ಟಿಕೊಡುತ್ತ ಬಂದಿದ್ದಾರೆ ಎಂದು ಹೇಳಿದರು.

ಜಸ್ಟ್ ನೋಡ್ತಾ ಇರಿ, ಏನೇನ್ ಮಾಡ್ತಿವಿ

ಹೃದ್ಯ ಮಾತುಗಳನ್ನಾರಂಭಿಸಿದ ‘ವಿಶ್ವವಾಣಿ’ ಕಾರ್ಯನಿರ್ವಾಹಕ ಸಂಪಾದಕ ರಾಧಾಕೃಷ್ಣ ಭಡ್ತಿ, ಪತ್ರಿಕೆಯನ್ನು ಯಾರೇ ಬಿಟ್ಟು ಹೋದರೂ, ಓದುಗ ಕೈ
ಬಿಡಲಿಲ್ಲ. ಇವತ್ತಿನ ಸುದ್ದಿ, ಬರವಣಿಗೆ, ಶೈಲಿ ನಾಳೆಗೆ ಭಟ್ಟರಿಗೆ ಬೇಸರವಾಗುತ್ತದೆ. ಹಾಗಾಗಿ, ಹೊಸತು, ಜೀವಂತಿಕೆ ಇರುವವರೆಗೆ ವಿಶ್ವವಾಣಿಗೆ ಸಾವಿಲ್ಲ ಎಂದರು. ಜೀವನದಲ್ಲಿ ತಪ್ಪುಗಳನ್ನು ಮಾಡದೇ ಇದ್ದರೆ, ಮುಂದೊಂದು ದಿನ ಗೆದ್ದಾಗ ಅಥವಾ ವಯಸ್ಸಾದ ಮೇಲೆ ನೆನೆಸಿಕೊಂಡು ನಗಲು ಅವಕಾಶವೇ ಇರುವುದಿಲ್ಲ.

ಹಾಗಾಗಿ, ಕಷ್ಟಕರ ಹಾದಿ ಇಲ್ಲದೇ ಇದ್ದರೆ, ಯಶಸ್ಸಿನ ಸಮಯದಲ್ಲಿ ನೆನೆಸಿ ಕೊಂಡು ಥ್ರಿಲ್‌ಪಡಲಿಕ್ಕೆ ಏನೂ ಇರುವುದಿಲ್ಲ. ಪತ್ರಿಕೆ ಆರಂಭಿಸಬೇಕು ಎಂದು ಕೊಂಡ ಮರುದಿನ ಬೆಳಗ್ಗೆಯಿಂದ ಒತ್ತಡಗಳು, ಸವಾಲುಗಳೂ ಆರಂಭವಾದವು. ಕನ್ನಡ, ಪಾಟೀಲ ಪುಟ್ಟಪ್ಪನವರಿಂದ ತನ್ನ ಕೂಸನ್ನು ಎತ್ತಿ ಕೊಡುವುದು ಸುಲಭದ ಮಾತಾಗಿರಲಿಲ್ಲ. ಪತ್ರಿಕೆ ನಿಮ್ಮ ನಂತರವೂ ಜೀವಂತವಾಗಿ ಉಳಿಯಬೇಕೆಂಬ ಮಾತಿಗೆ ಕನ್ವಿನ್ಸ್ ಆದ ನಂತರ ಭಟ್ಟರಿಗೆ ನೀಡಿದರು ಎಂದು ನೆನಪಿಸಿಕೊಂಡರು. ಆನಂತರ ನಡೆದಿದ್ದೆಲ್ಲ ಇತಿಹಾಸ.

ಎಲ್ಲ ದಾಖಲೆಗಳನ್ನೂ ಮುರಿದು, ಮೊದಲ ದಿನವೇ ‘ವಿಶ್ವವಾಣಿ’ ವಿತ್ ಡೆಪಾಸಿಟ್ ೨ ಲಕ್ಷ ಪ್ರಸಾರ ಸಂಖ್ಯೆಯನ್ನು ೬ ಆವೃತ್ತಿಗಳೊಂದಿಗೆ ಆರಂಭಿಸಿತು. ಈ ೭ ವರ್ಷಗಳಲ್ಲಿ ಅದ್ಭುತ ಅನುಭವವನ್ನು ಎಲ್ಲರಿಗೂ ಕಟ್ಟಿಕೊಟ್ಟಿದೆ ಎಂದು ಹೇಳಿ ಭಡ್ತಿ ಭಾವಪರವಶರಾದರು.

***

ಪಾಟೀಪ ಪುಟ್ಟಪ್ಪನವರ ಕಾಲದಿಂದಲೂ ವಿಶ್ವವಾಣಿ ಬಗ್ಗೆ ನನಗೆ ಅಭಿಮಾನವಿತ್ತು. ಆದರೆ, ಬೆಂಗಳೂರಿನಲ್ಲಿ ಪ್ರಪಂಚ ವಾರಪತ್ರಿಕೆಯಷ್ಟೇ ಸಿಗುತ್ತಿದ್ದು, ಈ ಕೊರತೆಯನ್ನು ವಿಶ್ವೇಶ್ವರ ಭಟ್ ಅವರು ಹೋಗಲಾಡಿಸಿದರು. ಅವರು ವಿಶ್ವಾಸದಿಂದ ವಿಶ್ವವನ್ನು ಗೆದ್ದು ವಿಶ್ವೇಶ್ವರರಾದರು. ಪ್ರಾರಂಭದಿಂದ ಇಂದಿನ
ವರೆಗೂ ನಾನು ಪತ್ರಿಕೆಯನ್ನು ಟೆಕ್ಸ್ಟ್ ಬುಕ್‌ನಂತೆ ಓದಿಕೊಂಡು ಬಂದಿದ್ದೇನೆ. ನನ್ನ ಟೇಬಲ್ ಮೇಲಿರುವ ೬ ಪತ್ರಿಕೆಗಳಲ್ಲಿ ನಾನು ಮೊದಲು ಕೈಗೆತ್ತಿಕೊಳ್ಳುವುದು
ವಿಶ್ವವಾಣಿಯನ್ನು. ಕನ್ನಡ ರಾಜ್ಯೋತ್ಸವ ಸಂದರ್ಭದಲಿ ವಿದೇಶಿ ಮಕ್ಕಳ ಕೈಯಲ್ಲಿ ಕನ್ನಡಾಭಿಮಾನದ ಬಗ್ಗೆ ಬರೆಸಿರುವ ಪತ್ರಿಕೆಯನ್ನು ಜತನದಿಂದ ಎತ್ತಿಟ್ಟಿದ್ದೇನೆ.
-ಬೇಲಿಮಠದ ಶ್ರೀ ಶಿವರುದ್ರ ಸ್ವಾಮೀಜಿ

ನಾನು ಸಣ್ಣಹಳ್ಳಿಯಲ್ಲಿದ್ದಾಗ ಟೂರಿಂಗ್ ಟಾಕೀಸ್ ಬಂದು, ಅದರ ಎದುರುಗಡೆ ಒಬ್ಬ ಬೋಂಡಾ ಅಂಗಡಿಯನ್ನಿಡುತ್ತಿದ್ದನು. ಟಾಕೀಸ್ ಹೋದೆಡೆಯೆಲ್ಲ ಬೋಂಡಾ
ಅಂಗಡಿಯವನು ಶಿಫ್ಟ್ ಆಗುತ್ತಿದ್ದನು. ಅಂತೆಯೇ, ಭಟ್ಟರು ಹೋದೆಡೆಯೆಲ್ಲ ನಾನೂ ಹೋಗುತ್ತಿದ್ದೆ. ಭಟ್ಟರ ಕೃಪಾಶೀರ್ವಾದಿದಂದ ೩.೭೫ ಲಕ್ಷ ಪುಸ್ತಕ ಮಾರಾಟ ವಾಗಿದ್ದು, ಎಲ್ಲ ಕೀರ್ತಿಯನ್ನೂ ಭಟ್ಟರಿಗೆ ಅರ್ಪಿಸುವೆ. ಅವರು ಬರೆಯುವ ಸ್ವಾತಂತ್ರ್ಯ, ಆನಂದ ಕೊಟ್ಟವರು. ಯಾವ ಪತ್ರಿಕಾ ಸಂಪಾದಕನೂ ಇಷ್ಟೊಂದು ಸ್ವಾತಂತ್ರ ಕೊಡುವುದಿಲ್ಲ. ಕಾರ್ಯಕ್ರಮದಲ್ಲಿ ಮೊದಲನೆ ಪ್ರತಿ ಸ್ವೀಕರಿಸಿದ ಹೆಮ್ಮೆ ನನ್ನದು. ವಿಶ್ವವಾಣಿ ಅಂಕಣಕಾರರ ಪತ್ರಿಕೆ. ಸುದ್ದಿಯನ್ನು ಯಾರು ಬೇಕಾದರೂ ಕೊಡಬಹುದು, ಬುದ್ಧಿ, ಜ್ಞಾನಭಂಡಾರ ತುಂಬುವುದು ವಿಶ್ವವಾಣಿಯ ವೈಶಿಷ್ಟ್ಯ. ನನ್ನ ಬದುಕಿನ ದಿಕ್ಕನ್ನೇ ಬದಲಿಸಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ್ದು ಭಟ್ಟರು. ೭೦ನೇ ವರ್ಷದ ಸಂಭ್ರಮವೂ ನಮ್ಮದಾಗಲಿ.
ಎಸ್. ಷಡಕ್ಷರಿ ಅಂಕಣಕಾರ, ಉದ್ಯಮಿ

ವಿಶ್ವವಾಣಿಯ ೭ ವರ್ಷಗಳ ಹೆಜ್ಜೆಗೆ ನಾನೂ ಸಾಕ್ಷಿಯಾಗಿದ್ದೇನೆ. ವಿಶ್ವೇಶ್ವರ ಭಟ್ ಅವರಿಗೆ ನಾನು ಅಭಿಯಾನಿಗಿಂತ ದೊಡ್ಡ ಭಕ್ತ. ವಿಶ್ವವಾಣಿ ತಂಡ ಅದ್ಭುತವಾಗಿ
ನಡೆಯುತ್ತಿದ್ದು, ಭಟ್ಟರು ಸಕ್ಸಸ್‌ಗೆ ಡೆಫಿನೇಷನ್ ಏನಂತ ತೋರಿಸಿದ್ದಾರೆ. ಬಹಳಷ್ಟು ಜನರಿಗೆ ಅವರು ಮಾರ್ಗರ್ಶಕರು. ನನ್ನಂತಹ ಮಧ್ಯಮವರ್ಗದ
ಹುಡುಗರು ಬೆಂಗಳೂರಿನಲ್ಲಿ ನೆಲೆ ಕಟ್ಟಿಕೊಳ್ಳಲು ಕಾರಣಕರ್ತರು. ಅವರು ನನ್ನಿಂದ ಅಂಕಣ ಬರೆಸುತ್ತಿರುವುದು ನನ್ನ ಸೌಭಾಗ್ಯ.
– ಪ್ರದೀಶ್ ಈಶ್ವರ್ ಪರಿಶ್ರಮ ಅಕಾಡೆಮಿ

ನಾನು ಕರ್ನಾಟಕದ ಖಾವಿ- ಖಾದಿ ಧರಿಸಿದ ಅಷ್ಟೊಂದು ದಿಗ್ಗಜರನ್ನು ನೋಡಿದ್ದು ವಿಶ್ವವಾಣಿ ಲೋಕಾರ್ಪಣೆಯ ವೇದಿಕೆಯಲ್ಲಿ ಮಾತ್ರ. ವಿಶ್ವೇಶ್ವರ ಭಟ್ಟರನ್ನು ೬
ವರ್ಷದಲ್ಲಿ ೬೦ ಬಾರಿ ಭೇಟಿಯಾದರೂ ತಮ್ಮ ಕಷ್ಟವನ್ನೂ ಎಂದಿಗೂ ಹೇಳಿಕೊಂಡಿರಲಿಲ್ಲ. ಭಟ್ಟರ ಸಾಮರ್ಥ್ಯ ಎಂದರೆ, ಯಾರ ಕೈಯಲ್ಲಾದರೂ ಅಂಕಣ ಬರೆಸುವುದು. ಅಂತೆಯೇ, ಎಲ್ಲೋ ವಿದೇಶದಲ್ಲಿ ಕುಳಿತ ನನ್ನಿಂದಲೂ ಅಂಕಣ ಬರೆಸಿದರು. ವಿಶ್ವವಾಣಿ ನ್ಯೂಸ್ ಚಾನೆಲ್ ಆದಷ್ಟು ಬೇಗ ಈಡೇರಲಿ.
– ಕಿರಣ್ ಉಪಾಧ್ಯಯ ಅಂಕಣಕಾರ, ಬಹ್ರೇನ್

ಕಾರ್ಯಕ್ರಮದ ಮುಂಚೆ ನನಗೆ ಹಾಡುವ ಅವಕಾಶ ನೀಡಿದ್ದರೆ, ಏಳು ನಾರಾಯಣನೇ, ಏಳು ಲಕ್ಷ್ಮೀ ರಮಣ… ಏಳಯ್ಯಾ ಬೆಳಗಾಯಿತು…. ಎಂದು ಹಾಡು ತ್ತಿದ್ದೆ. ೭ ಎಂಬ ಸಂಖ್ಯೆಯನ್ನು ಏಳು ಎಂದು ಪನ್ ಮಾಡಿಕೊಂಡು ಹಾಡುತ್ತಿದ್ದೆ. ಶಾಂತವಾದ ಸಾಗರವಿದ್ದರೆ ನಾವಿಕ ಪಳಗುವುದಿಲ್ಲ. ಅಲೆಗಳಿದ್ದರೆ ಮಾತ್ರ ನಾವಿಕನಿಗೆ
ಶಕ್ತಿಯ ಅರಿವಾಗಿ, ಸಾಹಸ ಮಾಡುತ್ತಾನೆ. ಅದೇ ರೀತಿ ವಿಶ್ವವಾಣಿ ಮತ್ತು ಭಟ್ಟರ ವಿಚಾರವಾಗಿದೆ. ಮೊದಲ ವಾರದಿಂದ ಇಲ್ಲಿಯವರೆಗೂ ಯಾವುದೇ
ತಡೆಯಿಲ್ಲದೇ ಅಂಕಣಗಳನ್ನು ಕಳುಹಿಸಿದ ಹೆಮ್ಮೆ ನನಗೂ ಇದೆ.
– ಶ್ರೀವತ್ಸ ಜೋಶಿ
ವಾಷಿಂಗ್ಟನ್ ಡಿಸಿ

ವಿಶ್ವೇಶ್ವರ ಭಟ್ಟರ ಅಂಕಣಗಳನ್ನು ಅವರು ಕೆಲಸ ಮಾಡಿದ ಎಲ್ಲ ಪತ್ರಿಕೆಗಳಲ್ಲೂ ಓದಿದ್ದೇನೆ. ಅಂತೆಯೇ, ಆವಿಷ್ಕಾರದ ಹರಿಕಾರದಲ್ಲಿ ಇಸ್ರೇಲ್ ಬಗ್ಗೆ ತುಂಬಾ
ಚೆನ್ನಾಗಿ ಬರೆದಿದ್ದಾರೆ. ಅವರು ವಿಜಯ ಕರ್ನಾಟದಲ್ಲಿದ್ದಾಗ ಮದ್ಯ ಪಾನದ ಬಗ್ಗೆ ಪ್ರತಿ ಭಾನುವಾರ ಬರುತ್ತಿದ್ದಂತಹ ಅಂಕಣ ವಿಶ್ವವಾಣಿಯಲ್ಲೂ ಬರಲಿ. ವಿಶ್ವವಾಣಿ ಇಂದು ಎವರೆಸ್ಟ್ ಹತ್ತುತ್ತಿದೆ. ಇನ್ನೂ ನೂರು ವರ್ಷವಾದರೂ ಒಳ್ಳೊಳ್ಳೆಯ ವಿಚಾರಗಳನ್ನು ಸಮಾಜಕ್ಕೆ ತಿಳಿಸಲಿ. ಶ್ರೀವತ್ಸ ಜೋಶಿಯವರ ಅಂಕಣ ಓದಿ ಮನೆಯವರೆಲ್ಲಾ ಭಗವದ್ಗೀತೆ ಕಲಿಯುತ್ತಿದ್ದು, ಇದರಲ್ಲಿ ಸುತ್ತಮುತ್ತಲಿನ ೧೫೦ ಜನರೂ ಸೇರಿದ್ದಾರೆ. ಇದು ನಮ್ಮ ಜೀವನದಲ್ಲಿ ವಿಶ್ವವಾಣಿ ತಂದ ಬದಲಾವಣೆ.
– ಚಂದ್ರು ಓದುಗ