Monday, 16th May 2022

ಹಾಸನಾಂಬ ದೇವಿ ದರ್ಶನಕ್ಕೆ ಕ್ಷಣಗಣನೆ

ಹಾಸನ: ಒಂದಾದ ಹಾಸನಾಂಬ ದೇವಿ ದೇವಾಲಯದ ಬಾಗಿಲು ತೆರೆಯಲು ಕ್ಷಣಗಣನೆ ಆರಂಭವಾಗಿದ್ದು, ಎರಡು ವರ್ಷದ ಬಳಿಕ ಸಾರ್ವಜನಿಕರಿಗೆ ದರ್ಶನ ಭಾಗ್ಯ ಸಿಗಲಿದೆ.

ಆಶ್ವೀಜ ಮಾಸದ ಮೊದಲ ಗುರುವಾರದಂದು ಬ್ರಾಹ್ಮೀ ಮುಹೂರ್ತದಲ್ಲಿ ಬಾಗಿಲು ತೆರೆಯಲಿದ್ದು, ಶಕ್ತಿದೇವತೆ ಹಾಸನಾಂಬೆ ಭಕ್ತರಿಗೆ ದರ್ಶನ ನೀಡಲಿದ್ದಾಳೆ.

ವರ್ಷಕೊಮ್ಮೆ ಮಾತ್ರ ಭಕ್ತರಿಗೆ ಈ ದೇವಿ ದರ್ಶನ ಭಾಗ್ಯ ನೀಡಲಿದ್ದು, ಈ ಬಾರಿ 10 ದಿನಗಳ ಕಾಲ ದೇವಾಲಯದ ಬಾಗಿಲು ತೆರಯಲಿದ್ದು, ಎಂಟು ದಿನ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕರೋನಾ ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.

ನಾಡಿನ ಶಕ್ತಿ ದೇವತೆಗಳ ದೇವಾಲಯಗಳಲ್ಲಿ ಒಂದಾಗಿರುವ ಹಾಸನಾಂಬೆ ದೇವಾಲ ಯದ ಬಾಗಿಲು ತೆರೆಯಲು ಗುರುವಾರ 12 ಗಂಟೆಗೆ ವಿದ್ಯುಕ್ತವಾಗಿ ಚಾಲನೆ ಸಿಗಲಿದೆ. ಕಳೆದ ಬಾರಿ ಕೋವಿಡ್ ಹಿನ್ನಲೆ ಸಾರ್ವಜನಿಕ ದರ್ಶನಕ್ಕೆ ನಿರ್ಬಂಧ ಹೇರಿದ್ದ ಹಾಸನ ಜಿಲ್ಲಾಡಳಿತ ಈ ಬಾರಿಯೂ ಅದೇ ನಿಯಮವನ್ನು ಪಾಲಿಸಲು ಯೋಜಿಸಿತ್ತು.

ದೇವಾಲಯದ ಆವರಣವನ್ನು ಫಲ, ಪುಷ್ಪಗಳಿಂದ ಭರ್ಜರಿಯಾಗಿ ಸಿಂಗರಿಸಲಾಗಿದೆ. ದೇವಾಲಯದ ಮುಂಭಾಗ, ಸುತ್ತಮುತ್ತ ಮತ್ತು ನಗರದ ತುಂಬೆಲ್ಲಾ ವಿದ್ಯುತ್ ದೀಪ ಗಳನ್ನು ಅಳವಡಿಸಲಾಗಿದೆ.

ಸಾರ್ವಜನಿಕ ದರ್ಶನಕ್ಕೆ ತೊಂದರೆ ಆಗದಂತೆ ಸರತಿ ಸಾಲಿನಲ್ಲಿ ಬರಲು ಬ್ಯಾರೀಕೇಡ್‌ಗಳನ್ನು ನಿರ್ಮಿಲಾಗಿದ್ದು, ಶೀಘ್ರ ದರ್ಶನ ಕ್ಕಾಗಿ 300 ರೂ. ಮತ್ತು 1000 ರೂ.ಗಳ ಟಿಕೆಟ್ ವ್ಯವಸ್ಥೆಯನ್ನು ಮಾಡಲಾಗಿದೆ. ದರ್ಶನಕ್ಕೆ ಬರುವ ಭಕ್ತರಿಗೆ ಕೋವಿಡ್ ವ್ಯಾಕ್ಸಿನ್ ಕಡ್ಡಾಯಗೊಳಿಸಿರುವ ಜಿಲ್ಲಾಡಳಿತ ವ್ಯಾಕ್ಸಿನ್ ಪಡೆದ ದೃಢೀಕರಣ ಪತ್ರವನ್ನು ಮತ್ತು ಗುರುತಿನ ಚೀಟಿಯನ್ನು ತಂದರೆ ಮಾತ್ರ ಪ್ರವೇಶವೆಂದು ಆದೇಶಿಸಿದೆ.