ಸಾವಿರಾರು ಭಕ್ತರು ತಂಡೋಪಾದಿಯಲ್ಲಿ ಆಗಮಿಸುತ್ತಿದ್ದು, ನಿರೀಕ್ಷೆಗೂ ಮೀರಿ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ದೇವಾಲಯ ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದು, ಸರತಿ ಸಾಲಿನ ಕೆಲವೆಡೆ ನೂಕುನುಗ್ಗಲು, ತಳ್ಳಾಟಗಳು ಸಂಭವಿಸು ತ್ತಿದೆ. ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾಡಳಿತ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಹಾಸನಾಂಬ ದೇವಾಲಯಕ್ಕೆ ಆಗಮಿಸುತ್ತಿರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಹಾಸನಾಂಬೆ ದರ್ಶನ ಅವಧಿ ವಿಸ್ತರಣೆ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಸೂಚನೆ ಮೇರೆಗೆ ಜಿಲ್ಲಾಡಳಿತ ದೇವಿಯ ದರ್ಶನದ ಅವಧಿ ವಿಸ್ತರಣೆ ಮಾಡಿದೆ. ಒತ್ತಡ ತಗ್ಗಿಸಲು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆವರೆಗೆ ಹಾಸನಾಂಬೆ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ವರ್ಷಕ್ಕೊಮ್ಮೆ ದರ್ಶನ ಕಲ್ಪಿಸುವ ಹಾಸನಂಬೆಯ ಗರ್ಭದ ಗುಡಿ ಬಾಗಿಲು ಅ.13ರಂದು ತೆರೆದಿತ್ತು. ಅಕ್ಟೋಬರ್ 14ರಿಂದ ಅಕ್ಟೋಬರ್ 18ವರೆಗೆ ನಡೆದ 1 ಸಾವಿರ ಮತ್ತು 300 ರೂಪಾಯಿಗಳ ಟಿಕೆಟ್ಗಳು ಮತ್ತು ಲಡ್ಡು ಮಾರಾಟದಿಂದ 60.56 ಲಕ್ಷ ರೂಪಾಯಿ ಹಣ ದೇವಾಲಯಕ್ಕೆ ಸಂಗ್ರಹವಾಗಿದೆ.