ಬೆಂಗಳೂರು: ಕೇಂದ್ರದ ಮಾಜಿ ಸಚಿವ ಹಾಗೂ ಪ್ರಭಾವಿ ರೈತ ಮುಖಂಡರಾಗಿದ್ದ ಬಾಬುಗೌಡ ಪಾಟೀಲ್ ಅವರ ನಿಧನಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ತೀವ್ರ ಸಂತಾಪ ಸೂಚಿಸಿದ್ದಾರೆ.
ಬಾಬುಗೌಡ ಪಾಟೀಲ್ ಅವರ ನಿಧನದ ಸುದ್ದಿ ತಿಳಿದು ಮನಸ್ಸಿಗೆ ತೀವ್ರ ಘಾಸಿಯಾಗಿದೆ ಎಂದು ಗೌಡರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. ಅವರ ನಿಧನ ರೈತಾಪಿ ವರ್ಗಕ್ಕೆ ತುಂಬಲಾರದ ನಷ್ಟ. ಭಗವಂತ ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ ಹಾಗೂ ಅವರ ಕುಟುಂಬ, ಹಿತೈಷಿಗಳಿಗೆ ಈ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಅವರು ಹೇಳಿದ್ದಾರೆ.
ರೈತರ ಪರ ಧ್ವನಿಯಾಗಿ ನಾಡಿನ ಅನ್ನದಾತರ ಕಷ್ಟ- ನಷ್ಟಗಳಿಗೆ ಸದಾ ಸ್ಪಂಧಿಸುತ್ತಿದ್ದ ಬಾಬಗೌಡ ಪಾಟೀಲ್ ಅವರ ನಿಧನ ವಿಶೇಷವಾಗಿ ರೈತ ಸಮುದಾಯಕ್ಕೆ ತುಂಬಾಲಾರದ ನಷ್ಟ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಂಬನಿ ಮಿಡಿದಿದ್ದಾರೆ. ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಸಚಿವರಾಗಿದ್ದ ಬಾಬುಗೌಡ ಪಾಟೀಲ್, ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ, ರೈತರಿಗೆ ಸದಾ ಸ್ಪಂಧಿಸುತ್ತಿದ್ದ ಅಪರೂಪದ ಜನಪರ ಕಾಳಜಿಯುಳ್ಳ ನಾಯಕ ಎಂದು ಬಣ್ಣಿಸಿದ್ದಾರೆ.