Friday, 2nd December 2022

ನಮ್ಮದು ಕುಟುಂಬ ರಾಜಕಾರಣ ಎನ್ನುವುದಾದರೆ ಸಿದ್ದರಾಮಯ್ಯನವರದ್ದು ಏನು ?

ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸೂಟ್ ಕೇಸ್ ರಾಜಕಾರಣಿ ಎಂಬ ಶಾಸಕ ಜಮೀರ್ ಅಹ್ಮದ್ ಆರೋಪಕ್ಕೆ ತಿರುಗೇಟು ನೀಡಿರುವ ಕುಮಾರಸ್ವಾಮಿ, ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ.

ಯಾರನ್ನೋ ಮುಂದೆ ಬಿಟ್ಟು ನನ್ನ ವಿರುದ್ಧ ಆರೋಪಗಳನ್ನು ಮಾಡಿಸುತ್ತಿದ್ದಾರೆ. ಸಿದ್ದರಾಮಯ್ಯ ಒಳ ಸಂಚು ನಡೆಸಿ ಎಷ್ಟು ಸೂಟ್ ಕೇಸ್ ಪಡೆದಿದ್ದಾರೆ ? ಯಡಿಯೂ ರಪ್ಪ ಜೊತೆ ಸೇರಿಕೊಂಡು ಒಳಸಂಚು ಮಾಡಿದರು. ಬಿಜೆಪಿ ಗೆಲುವಿನಲ್ಲಿ ಸಿದ್ದರಾಮಯ್ಯ ಪಾತ್ರ ದೊಡ್ಡದು ಉಪಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಸಿದ್ದರಾಮಯ್ಯ ಕಾರಣ. ಬಿ ಎಸ್ ವೈ ಅವರಿಂದಲೇ ಸಿದ್ದರಾಮಯ್ಯ ಹಣ ಪಡೆದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ವಚನ ಭ್ರಷ್ಟ ಕಳಂಕದ ವಿರುದ್ಧ ಗುಡುಗಿದ ಕುಮಾರಸ್ವಾಮಿ, ಬಿಜೆಪಿಯಲ್ಲಿನ ಕೆಲ ನಾಯಕರೇ ಯಡಿಯೂರಪ್ಪನವರಿಗೆ ಅಧಿಕಾರ ಹಸ್ತಾಂತರ ಮಾಡದಂತೆ ವಾತಾವರಣ ಸೃಷ್ಟಿ ಮಾಡಿ ನನ್ನನ್ನು ತಡೆದರು. ಬಿಜೆಪಿ ಜೊತೆ ಸರ್ಕಾರ ರಚನೆಗೆ ಸಿದ್ದರಾ ಮಯ್ಯ ಕೂಡ ಕಾರಣರಾಗಿದ್ದರು. ಇವರಿವರೇ ಒಳಸಂಚು ನಡೆಸಿ ಈಗ ನನ್ನ ವಿರುದ್ಧ ಅನಗತ್ಯ ಆರೋಪಗಳನ್ನು ಮಾಡುತ್ತಿರುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.

ಜೆಡಿಎಸ್ ಕುಟುಂಬ ರಾಜಕಾರಣ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ನಮ್ಮದು ಕುಟುಂಬ ರಾಜಕಾರಣ ಎನ್ನುವುದಾದರೆ ಸಿದ್ದರಾಮಯ್ಯನವರದ್ದು ಏನು? ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಬೇರೆ ಯಾರೂ ನಾಯಕರಿರಲಿಲ್ಲವೇ? ತಮ್ಮ ಪುತ್ರನನ್ನು ಏಕೆ ಸ್ಪರ್ಧೆಗೆ ಇಳಿಸಿದಿರಿ? ಇದು ಕುಟುಂಬ ರಾಜಕಾರಣವಲ್ಲವೇ ಎಂದು ಪ್ರಶ್ನಿಸಿದ್ದಾರೆ.