Tuesday, 27th October 2020

ಶಿರಾಕ್ಕಿಂದು ಹೆಚ್.ಡಿ.ಕೆ.: ಜೆಡಿಎಸ್ ಕಾರ್ಯಕರ್ತರ ಸಭೆ

ಶಿರಾ: ಶಾಸಕ ಬಿ.ಸತ್ಯನಾರಾಯಣ ಅವರ ಅಕಾಲಿಕ ಮರಣದಿಂದ ಕಂಗೆಟ್ಟಿರುವ ಜೆಡಿಎಸ್ ಕಾರ್ಯಕರ್ತರಲ್ಲಿ ಹುರುಪು, ಹುಮ್ಮಸ್ಸು ತುಂಬಲು ಪಕ್ಷದ ವರಿಷ್ಟ ದೇವೇಗೌಡರು ಮತ್ತು ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಶಿರಾ ಸೆ.30ರಂದು ಆಗಮಿಸಲಿದ್ದಾರೆ ಎಂದು ಪಕ್ಷದ ತಾಲ್ಲೂಕು ಅಧ್ಯಕ್ಷ ಆರ್.ಉಗ್ರೇಶ್ ತಿಳಿಸಿದರು.

ಇಲ್ಲಿನ ಪ್ರವಾಸಿ ಮಂದಿರ ಆವರಣದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಶಾಸಕರ ಸಾವಿನಿಂದ ಕ್ಷೇತ್ರ ತೆರವಾಗಿದ್ದು, ಇದಕ್ಕೆ ಸದ್ಯದಲ್ಲಿಯೇ ಉಪ ಚುನಾವಣೆ ನಡೆಯಲಿದೆ. ಚುನಾವಣೆ ಘೋಷಣೆಗೂ ಮುನ್ನ, ಪಕ್ಷದ ವರಿಷ್ಟರು ನಗರಕ್ಕೆ ಆಗಮಿಸಿ ಪಕ್ಷದ ಕಾರ್ಯಕರ್ತರಲ್ಲಿ ಕಳೆದುಕೊಂಡಿರುವ ಉತ್ಸಾಹ ಪುಟಿದೆಬ್ಬಿಸಲಿದ್ದಾರೆ. ಇದಕ್ಕಾಗಿ ಚಂಗಾವರ ರಸ್ತೆಯಲ್ಲಿನ ಪಕ್ಷದ ಕಛೇರಿ ಆವರಣದಲ್ಲಿ ಬುಧವಾರ 10 ರಿಂದ 1ರ ವರೆಗೆ ಕಾರ್ಯಕರ್ತರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮಾವೇಶದಲ್ಲಿ ಪ್ರಜ್ವಲ್ ರೇವಣ್ಣ, ಜಿಲ್ಲೆಯ ಹಾಲಿ ಮತ್ತು ಮಾಜಿ ಶಾಸಕರು ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಪಕ್ಷದ ಅಭ್ಯರ್ಥಿ ಯಾರು ಆಗಬೇಕು ಎನ್ನುವ ಅಭಿಪ್ರಾಯ ವರಿಷ್ಟರು ಸಂಗ್ರಹಿಸಲಿದ್ದಾರೆ ಎಂದರು.

ನಮ್ಮಲ್ಲಿ ಕಾರ್ಯಕರ್ತರ ದೊಡ್ಡ ಪಡೆಯೇ ಇದೆ. ಆದರೆ ಬಿಎಸ್ ಸಾವಿನಿಂದ ಕೆಲವರು ದಿಗ್ಭçಮೆಗೆ ಈಡಾಗಿದ್ದಾರೆ. ಪಕ್ಷದ ಮುಖಂಡರ ಆಗಮನ ಎಲ್ಲರಲ್ಲೂ ಉತ್ಸಾಹ ತುಂಬಲಿದೆ. ಬರುವ ಚುನಾವಣೆಗೆ ಇತರೆ ಪಕ್ಷಗಳು ಈಗಾಗಲೇ ತಯಾರಿ ನಡೆಸಿರ ಬಹುದು. ನಮ್ಮ ಪಕ್ಷದ ಕಾರ್ಯಕರ್ತರು ಇತರಿರಿಗಿಂತ ಹೆಚ್ಚಿನ ಉತ್ಸಾಹದಲ್ಲಿ ಕೆಲಸ ಮಾಡುವ ಮೂಲಕ ಪಕ್ಷವನ್ನು ಚುನಾ ವಣೆಗೆ ಸಜ್ಜುಗೊಳಿಸಲಿದ್ದಾರೆ ಎಂದರು.

ಇದೇ ವೇಳೆ ಪಕ್ಷದವರು ಮತ್ತು ಸ್ಥಳೀಯರೇ ಆದ ಜಿಲ್ಲಾಪಂಚಾಯಿತಿ ಅಧ್ಯಕ್ಷರ ಪದಚ್ಯುತಿ ಅವಿಶ್ವಾಸ ನಿರ್ಣಯಕ್ಕೆ ತಾಲ್ಲೂಕಿನ ಜೆಡಿಎಸ್ ಸದಸ್ಯರೇ ಹೇಗೆ ಸಹಿ ಹಾಕಿದರು? ಎನ್ನುವ ವಿಚಾರದ ಬಗ್ಗೆ ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸ್ಥಳದಲ್ಲೇ ಇದ್ದ ಜಿಪಂ ಸದಸ್ಯ ಆರ್.ರಾಮಕೃಷ್ಣ ಅದು ಹೈಕಮಾಂಡ್ ನಿರ್ಧಾರದಂತೆ ನಡೆದ ಘಟನೆ. ಹಿಂದೆ ನಾವು ವಚನಭ್ರಷ್ಟ ಎನ್ನುವ ಅಪಖ್ಯಾತಿಗೆ ಒಳಗಾಗಿದ್ದೆವು. ಈಗ ಅಂತಹ ಪರಿಸ್ಥಿತಿ ನಿರ್ಮಾಣ ಮಾಡುವುದು ಬೇಡ ಎನ್ನುವುದು ಪಕ್ಷದ ವರಿಷ್ಟರ ಚಿಂತನೆ. ಅದರಂತೆ ನಾವು ಅವಿಶ್ವಾಸಕ್ಕೆ ಸಹಿ ಹಾಕಬೇಕಾಯಿತು ಎಂದರು.

ಜೊತೆಯಲ್ಲೇ ಇದ್ದ ಮತ್ತೋರ್ವ ಮುಖಂಡ ಮತ್ತು ಜಿಪಂ ಅಧ್ಯಕ್ಷರ ಗಂಡ ಕಲ್ಕೆರೆ ರವಿಕುಮಾರ್, ಇದು ಏಳೆಂಟು ತಿಂಗಳ ಹಿಂದೆ ನಡೆದ ವಿಷಯ. ಮೈತ್ರಿ ಒಪ್ಪಂದದಂತೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಇಬ್ಬರೂ ರಾಜೀನಾಮೆ ನೀಡಬೇಕಿತ್ತು. ಆದರೆ ಕೇವಲ ಅಧ್ಯಕ್ಷರ ರಾಜೀನಾಮೆ ಕೇಳಿದ್ದ ಕಾರಣ, ಸ್ವಲ್ಪ ಗೊಂದಲ ಉಂಟಾಗಿತ್ತು. ಆ ವೇಳೆಯಲ್ಲಿ ಅವಿಶ್ವಾಸಕ್ಕೆ ಸಹಿ ತೆಗೆದುಕೊಳ್ಳಲಾ ಗಿತ್ತು. ಅದನ್ನೇ ಈಗ ಉಪ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ದೊಡ್ಡ ವಿಷಯವಾಗಿ ಬಿಂಬಿಸಲು ಯತ್ನಿಸುತ್ತಿರಬಹುದು ಎಂದರು.

ಎರಡೂ ಸ್ಥಾನಗಳನ್ನು ಮತ್ತೊಂದು ಪಕ್ಷಕ್ಕೇ ಬಿಟ್ಟುಕೊಡಬೇಕು ಎನ್ನುವ ವಿಚಾರ ನನಗೆ ಸಮ್ಮತ ಎನಿಸಲಿಲ್ಲ. ಉಪಾಧ್ಯಕ್ಷರೂ ರಾಜೀನಾಮೆ ನೀಡಿದಲ್ಲಿ ತಕ್ಷಣ ಅಧ್ಯಕ್ಷರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಅಧ್ಯಕ್ಷರು ಬರುವ 6ಕ್ಕೆ ವಿಶ್ವಾಸ ಮತ ಗೆದ್ದುಬರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಪಂ ಮಾಜಿ ಸದಸ್ಯ ಸಿ.ಆರ್.ಉಮೇಶ್, ಎಪಿಎಂಸಿ ಅಧ್ಯಕ್ಷ ಚಂದ್ರೇಗೌಡ, ಎಸ್.ಪುಟ್ಟೀರಪ್ಪ, ಗೋವಿಂದರಾಜು, ಸತ್ಯಪ್ರಕಾಶ್, ಟಿ.ಡಿ.ಮಲ್ಲೇಶ್, ಸುಧಾಕರಗೌಡ, ತಾಪಂ ಮಾಜಿ ಉಪಾಧ್ಯಕ್ಷ ಉದಯಶಂಕರ್, ಜಾಫರ್ ಅಹಮದ್, ಅರೇಹಳ್ಳಿ ಬಾಬು, ಸೋಮು, ಮಲ್ಲಿಕಾರ್ಜುನ್ ಸೇರಿದಂತೆ ಹಲವಾರು ಜೆಡಿಎಸ್ ಮುಖಂಡರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *