ಅಭಿವ್ಯಕ್ತಿ
ಎಲ್.ಪಿ.ಕುಲಕರ್ಣಿ
ತಗೋಳೇ ತಗೋಳೇ, ನನ್ನೇ ತಗೋಳೇ, ಹೃದಯ ಬೇಕಾ,ಹೃದಯವಂತ ಬೇಕಾ…..ಇದೇನಿದು ಅಂತಿರಾ, 2002ರಲ್ಲಿ ತೆರೆಕಂಡ ಸ್ಯಾಂಡಲ್ ವುಡ್ನ ರಿಯಲ್ ಸ್ಟಾರ್ ಉಪೇಂದ್ರ ನಟಿಸಿದ ‘ಸೂಪರ್ ಸ್ಟಾರ್’ ಚಿತ್ರದ ಹಾಡು.
ಈ ಹಾಡಿನಂತೆಯೇ ನೋವು, ಹತಾಶೆ ಭಾವಗಳನ್ನು ಹೃದಯಕ್ಕಾದ ಗಾಯವೆಂದು ಪರಿಭಾವಿಸಿ ಬಿಂಬಿಸಲಾಗುತ್ತದೆ. ಇದು ಭಾವನಾತ್ಮಕ ಸಂಗತಿಯಾಯಿತು. ಆದರೆ ನಿಜವಾಗಿ ಹೃದಯಕ್ಕೆ ಗಾಯವಾದರೆ ಏನು ಮಾಡುವುದು? ಎಂಬ ಪ್ರಶ್ನೆಗೆ ಈಗ ವಿಜ್ಞಾನಿಗಳಿಂದ ಉತ್ತರ ಸಿಕ್ಕಿದೆ. ಅದೇನಂತಿರಾ, ನೆರಳಾತೀತ ವಿಕಿರಣ (ಯು.ವಿ ರೇಸ್) ಉಪಸ್ಥಿತಿಯಲ್ಲಿ ತಯಾರಿಸಿದ
ಒಂದು ಅಂಟು ಪದಾರ್ಥ ಹೃದಯಕ್ಕಾದ ಗಾಯವನ್ನು ವಾಸಿಮಾಡುತ್ತದೆ.
ಚೀನಾದ ಜಿಜಿಯಾಂಗ್ ವಿಶ್ವವಿದ್ಯಾಲಯದ ಪ್ರೊ.ಹೋಂಗ್ವೆ ಹೋಯಾಂಗ್ ಮತ್ತು ಆತನ ಸಹಚರರು ಸೇರಿ ನೀರು ಮತ್ತು
ಪಾಲಿಮರ್ ಒಂದನ್ನು ಬಳಸಿ ಇಂತಹದೊಂದು ಅಂಟನ್ನು (ಗ್ಲೂ) ತಯಾರಿಸಿದ್ದಾರೆ. Gel MA/HA&NB/LAP ಹೈಡ್ರೊಜೆಲ್ ಮತ್ತು -ಬ್ರಿನ್ ಗ್ಲೂ, ಸಿಎ ಮತ್ತು ಸರ್ಗಿ- ಮುಂತಾದವುಗಳಿಂದ ತಯಾರಾದ ಈ ವಸ್ತುವನ್ನು ಹೃದಯಕ್ಕಾದ ಗಾಯಕ್ಕೆ ಲೇಪಿಸಿದಾಗ ಏಳೆಂಟು ದಿನಗಳಲ್ಲಿ ಗಾಯ ಮಾಯ್ದು ಮೊದಲಿನ ಹಾಗೆ ಮೆದು ಚರ್ಮ ಬರುತ್ತದಂತೆ.
ಅಂದಹಾಗೆ ಈ ಅಂಟಿನಂಥ ಪದಾರ್ಥದ ಲೇಪನವನ್ನು ಮನುಷ್ಯನ ಹೃದಯದ ಗಾಯಕ್ಕೆ ಹಚ್ಚಿ ಪ್ರಯೋಗಿಸಿದ್ದಾರೆಯೇ ಎಂಬ ಪ್ರಶ್ನೆ ಉದ್ಭವವಾಗುವುದು ಸಹಜ. ಸದ್ಯ ಇದಕ್ಕೆ ಇಲ್ಲವೆಂದೇ ಉತ್ತರ ಬರುತ್ತದೆ. ಹಾಗಾದರೆ ಯಾರ ಹೃದಯದ ಗಾಯಕ್ಕೆ ಇದನ್ನು ಲೇಪಿಸಿ ಪ್ರಯೋಗಿಸಿದ್ದಾರೆಂದು ತಿಳಿಯಲು ಹೊರಟರೆ ಆಗ ಬರುವುದೇ ವರಾಹ. ಅರ್ಥಾತ್ ಹಂದಿ.
ಹೌದು, ಈ ಪ್ರಯೋಗಕ್ಕಾಗಿ ಬರೋಬ್ಬರಿ 4 ಹಂದಿಗಳನ್ನು ಪ್ರೊ.ಹೋಂಗ್ವೆ ಹೋಯಾಂಗ್ ಮತ್ತು ಆತನ ತಂಡದವರು ಬಳಸಿ ಕೊಂಡಿzರೆ. ಹಂದಿಗಳ ಹೃದಯದ ಎಡ ಕುಹರದ ಮೇಲೆ ಸೂಜಿಗಳಿಂದ ತಿರುಚಿನ ಗಾಯಮಾಡಿ, ನೆರಳಾತೀತ (ಯು.ವಿ) ಬೆಳಕಿನ ಇರುವಿಕೆಯಲ್ಲಿ ಈ ಕೃತಕ ಅಂಟನ್ನು ಲೇಪಿಸಿದ್ದಾರೆ. ಅಂಟು ಲೇಪಿಸಿದ ಕೇವಲ 30 ಸೆಕೆಂಡುಗಳಲ್ಲಿ ಗಾಯದಿಂದ ರಕ್ತ ಸ್ರಾವ ನಿಂತಿದೆಯಂತೆ. ‘ಹೀಗೆ ರಕ್ತ ನಿಂತು ಎರಡು ವಾರಗಳಲ್ಲಿ ಗಾಯವೆ ಮಾಯವಾಗಿ, ಹೃದಯದ ಕೋಶಗಳು ಮೊದಲಿನಂತೆ ಕಾರ್ಯನಿರ್ವಹಿಸಿವೆ.
ಆದರೆ ಗಾಯದ ಜಾಗದಲ್ಲಿ ಅಲ್ಪಪ್ರಮಾಣದ ನೋವು ಕಾಣಿಸಿಕೊಂಡಿದೆ.’ ಎಂಬುದಾಗಿ ಪ್ರೊ.ಹೋಯಾಂಗ್ ಹೇಳುತ್ತಾರೆ. ‘ಈ ಅಂಟಿನ ಹಾಗೆ ಇಷ್ಟು ಬೇಗ ಹೃದಯ ಗಾಯ ವಾಸಿಮಾಡವ ಯಾವ ಔಷಧಿಯನ್ನೂ ಇದುವರೆಗೂ ಕಂಡುಹಿಡಿಯಲಾಗಿಲ್ಲ. ಅಲ್ಲದೇ, ಅಂಟಿನಿಂದ ವಾಸಿಯಾದ ಗಾಯದಲ್ಲಿನ ಕೋಶಗಳ ಗಟ್ಟಿತನ ಹೇಗಿದೆಯೆಂದರೆ, ಸಾಮಾನ್ಯ ರಕ್ತದೊತ್ತಡಕ್ಕಿಂತಲೂ ಎರಡುಪಟ್ಟು ಹೆಚ್ಚು ರಕ್ತದೊತ್ತಡ ಗಾಯವಾದ ಸಂದರ್ಭದಲ್ಲಿ ಇದ್ದರೂ ಕೂಡ ಹೃದಯ ಸ್ನಾಯುಗಳಿಗೆ ಯಾವುದೇ
ಹಾನಿಯಾಗುವುದಿಲ್ಲ.
ಇದರ ಅರ್ಥ, ಹೃದಯದಲ್ಲಿ ಪ್ರತೀ ಕ್ಷಣ ರಕ್ತ ಪಂಪಾಗಿ ದೇಹದ ಎಲ್ಲ ಭಾಗಗಳಿಗೂ ಹೋಗುವುದಲ್ಲದೆ, ಮರಳಿ ಹೃದಯಕ್ಕೆ ಬರುವ ಸಂದರ್ಭದಲ್ಲೂ ಯಾವ ತೊಂದರೆಯೂ ಆಗುವುದಿಲ್ಲ.’ ಎಂದೂ ಸಹ ಪ್ರೊ. ಹೋಯಾಂಗ್ ಮತ್ತು ಅವರ ತಂಡ ಹೇಳುತ್ತದೆ. ಅಲ್ಲದೇ ಈ ಅಂಟು ಪದಾರ್ಥದ ಜೈವಿಕ ವಿಘಟನೀಯತೆ (ಬಯೋಡಿಗ್ರೆಟೆಬಿಲಿಟಿ) ಪರೀಕ್ಷಿಸಲು. ಅಂದರೆ ಈ
ಅಂಟು ಜೀವಿಗಳ ದೇಹದಲ್ಲಿ ಎಷ್ಟು ದಿನಗಳಲ್ಲಿ ವಿಘಟನೆಗೊಳ್ಳುತ್ತದೆ ಎಂದು ತಿಳಿಯುವುದು. ಅದಕ್ಕಾಗಿ ಹೆಗ್ಗಣಗಳ ಒಳ ಚರ್ಮದಲ್ಲಿ ಸೂಜಿಗಳಿಂದ ಈ ಅಂಟು ಪದಾರ್ಥವನ್ನು ಹಾಯಿಸಿದ್ದಾರೆ.
8 ವಾರಗಳ ನಂತರ ಚರ್ಮದ ಒಳಗೆ ಕೇವಲ ಶೇ 20ರಷ್ಟು ಮಾತ್ರ ಈ ಅಂಟು ಇರುವುದನ್ನು ಕಂಡುಕೊಂಡಿದ್ದಾರೆ. ಒಟ್ಟಾರೆ ಈ ಎಲ್ಲ ಬೆಳವಣಿಗೆಗಳಿಂದ ತಿಳಿಯುವುದೇನೆಂದರೆ, ಮುಂದೊಂದು ದಿನ ಮನುಷ್ಯನ ಹೃದಯಕ್ಕಾದ ಗಾಯಕ್ಕೂ ಸಹ ಈ ಅಂಟು ಪದಾರ್ಥವನ್ನು ಲೇಪಿಸಿ ಗಾಯ ವಾಸಿ ಮಾಡಿ ವೈದ್ಯಕೀಯ ಲೋಕದಲ್ಲಿ ಒಂದು ಹೊಸ ಮೈಲುಗಲ್ಲನ್ನು ಪ್ರೊಹೊಯಾಂಗ್ ಮತ್ತು ತಂಡದವರು ಸೃಷ್ಟಿಸಲು ಹೊರಟಿದ್ದಾರೆ ಎನ್ನುವುರಲ್ಲಿ ಯಾವ ಸಂಶಯವೂ ಇಲ್ಲ.