Friday, 24th March 2023

ನಗರದಲ್ಲಿ ಧಾರಾಕಾರ ಮಳೆ: ಸಿಲಿಕಾನ್ ಸಿಟಿ ಜನ ಹೈರಾಣ

ಬೆಂಗಳೂರು: ಭಾನುವಾರ ರಾತ್ರಿಯೂ ನಗರದಲ್ಲಿ ಧಾರಾಕಾರ ಮಳೆ ಸುರಿದಿದ್ದು, ಸಾಕಷ್ಟು ಅವಾಂತರ ಸೃಷ್ಟಿ ಮಾಡಿದೆ.

ರಸ್ತೆಯಲ್ಲಿ ಮಳೆ ನೀರು ನುಗ್ಗಿದ್ದರಿಂದ ನಗರದ ಹಲವೆಡೆ ತಡರಾತ್ರಿಯವರೆಗೂ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸತತ ಮೂರು ತಾಸು ಸುರಿದ ಮಳೆಗೆ ಸಿಲಿಕಾನ್ ಸಿಟಿ ಜನ ಹೈರಾಣಾ ಗಿದ್ದಾರೆ.

ನಗರದ ಹಲವು ರಸ್ತೆಗಳು ಮಳೆ ನೀರಿನಿಂದಾಗಿ ಕೆರೆಗಳಂತಾಗಿದ್ದವು. ಪೀಣ್ಯ, 8ನೇ ಮೈಲಿ ರಸ್ತೆಯಲ್ಲಿ ಐದಾರು ಅಡಿಯಷ್ಟು ನೀರು ನಿಂತಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ತಡರಾತ್ರಿವರೆಗೂ ಪರದಾಟ‌ ನಡೆಸಿದರು.

ಪ್ಯಾಲೆಸ್ ರಸ್ತೆ, ಯಲಹಂಕ, ವಿದ್ಯಾರಣ್ಯಪುರ ಮುಖ್ಯ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಇಲ್ಲಿ ರಾತ್ರಿ 12 ಆಗಿದ್ದರೂ ಸಹ ಟ್ರಾಫಿಕ್ ಜಾಮ್ ಕಂಡುಬಂತು. ಯಲಹಂಕ ಪೊಲೀಸ್ ಠಾಣೆ ಸಮೀಪ ಮಳೆ ನೀರು ಕೆರೆಗೆ ಹೋಗದೆ ರಾಜಕಾಲುವೆಗೆ ರಸ್ತೆಗೆ ನುಗ್ಗಿದ್ದವು. ನಾಲ್ಕೈದು ಬಿಎಂಟಿಸಿ ಬಸ್‌ಗಳು ರಸ್ತೆಯಲ್ಲಿಯೇ ಕೆಟ್ಟು ನಿಂತಿದ್ದವು.

ಯಲಹಂಕ ಕೋಗಿಲು ಬಳಿ ಸುಮಾರು ನಾಲ್ಕು ಅಡಿಯಷ್ಟು ನೀರು ನಿಂತಿದ್ದರಿಂದ ರಸ್ತೆ ಮಧ್ಯೆ ಹೆಚ್ಚಿನ ವಾಹನಗಳು ಕಟ್ಟು ನಿಂತಿದ್ದವು. ಯಲಹಂಕ ಫ್ಳೈ ಓವರ್ ಕೆಳಗೂ ಸಹ ವಾಹನಗಳು ಮುಳುಗುವಷ್ಟು ನೀರು ನಿಂತಿದ್ದವು.

ಬಿಬಿಎಂಪಿ ಅಧಿಕಾರಿಗಳು ಹಾಗೂ ಶಾಸಕರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿ ಬಾರಿ ಮಳೆ ಬಂದಾಗಲೂ ಇದೇ ರೀತಿ ಸಮಸ್ಯೆಯಾಗುತ್ತದೆ. ಆದರೆ, ಬಿಬಿಎಂಪಿ ಅಧಿಕಾರಿಗಳು, ಶಾಸಕರು ಮಾತ್ರ ಇತ್ತ ಗಮನ ಹರಿಸುತ್ತಿಲ್ಲ ಎಂದು ವೆಂಕಟ ಸ್ವಾಮಪ್ಪ ಹಾಗೂ ಬಸವ ಸಮಿತಿ ಲೇಔಟ್ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

error: Content is protected !!