Tuesday, 9th August 2022

ಸೈನಿಕರಿಗಾಗಿ ಉಂಗುರ ದೇಣಿಗೆ ನೀಡಿದ ನೆನಪು

ಸತ್ಯಮೇವ ಜಯತೆ (ಭಾಗ-೪)

ಭಾರತ – ಚೀನಾ ಯುದ್ಧದ ಸಮಯದಲ್ಲಿ ರಾಷ್ಟ್ರೀಯ ರಕ್ಷಣಾ ನಿಧಿಗೆ ದೇಣಿಗೆ ಸಂಗ್ರಹಿಸುವ ಕಾರ್ಯ ದೇಶಾದ್ಯಂತ ನಡೆದಿತ್ತು. ಒಂದು ದಿನ ನಾನು ಸಹಪಾಠಿಗಳು ದೇಣಿಗೆ ಸಂಗ್ರಹದ ಡಬ್ಬಿ ಹಿಡಿದುಕೊಂಡು ಬರುತ್ತಿದ್ದುದನ್ನು ಕಂಡೆ. ‘ಅದೇನು?’ ಎಂದು ಅವರನ್ನು ವಿಚಾರಿಸಿದೆ. ‘ಈ ಡಬ್ಬಿಯಲ್ಲಿ ರಾಷ್ಟ್ರೀಯ ರಕ್ಷಣಾ ನಿಽಗೆ ದೇಣಿಗೆ ಹಾಕಿ’ ಎಂದರು. ಆಗ ಮುತ್ಯಾ ನನಗೆ ಅರ್ಧ ತೊಲೆ ಬಂಗಾರದ ಉಂಗುರವನ್ನು ಡಬ್ಬಿಗೆ ಹಾಕಿಬಿಟ್ಟೆ.

ನಮ್ಮ ಶಾಲೆಯಲ್ಲಿ ಶ್ರೀ ಹಲಗತ್ತಿ ಎಂಬುವವರು ಶಾಲಾ ಮುಖ್ಯೋಪಾಧ್ಯಾಯ ರಾಗಿದ್ದರು. ನಮ್ಮ ಮುತ್ಯಾ ಅವರನ್ನು ಭೇಟಿ ಯಾದ ಕೂಡಲೇ, ‘ಈ ಹುಡುಗನಿಗೆ ಶಾಲೆಗೆ ಸೇರಿಸಬೇಕಾ?’ ಎಂದು ಕೇಳಿದರು. ನಮ್ಮ ಮುತ್ಯಾ ‘ಹೌದು’ ಎಂದರು. ಆದರೆ, ‘ಹುಡುಗನಿಗೆ ಐದು ವರ್ಷ ಸಹಿತ ಆಗಿಲ್ಲ ಎಂದು ಕಾಣುತ್ತದೆ’ ಎಂದು ಹಲಗತ್ತಿ ಮಾಸ್ತರ್ ಹೇಳಿದರು.

ಆಗ ನಮ್ಮ ಮುತ್ಯಾ, ‘ಇವನ ತಾಯಿಗೆ ಈಗ ಎರಡನೇ ಮಗುವಾಗಿದೆ. ಇವನು ಈಗ ಮನೆಯಲ್ಲಿ ಬಹಳ ಗಲಾಟೆ ಮಾಡುತ್ತಾನೆ. ಏನಾದರೂ ಮಾಡಿ ಶಾಲೆಗೆ ಸೇರಿಸಿ ಕೊಳ್ಳಿ’ ಎಂದು ವಿನಂತಿಸಿದರು. ಆಗ ಹೆಡ್‌ಮಾಸ್ತರ್ ಒಪ್ಪಿ ಶಾಲೆಗೆ ಸೇರಿಸಿಕೊಂಡರು. ನನ್ನ ಜನ್ಮ ದಿನಾಂಕವನ್ನು ಜೂನ್ ೧, ೧೯೫೨ ಎಂದು ದಾಖಲಿಸಿಕೊಂಡರು. ನನ್ನ ತಂದೆಯ ಹೆಸರು ಏನೆಂದು ಮುತ್ಯಾನಿಗೆ ಕೇಳಿದಾಗ, ಮನೆಯಲ್ಲಿ ಕರೆಯತ್ತಿದ್ದ ಹಾಗೆ ‘ಮಹಾದೇವ’ ಎಂದು ಹೇಳಿದರು.

ಅದರಂತೆಯೇ ಶಾಲಾ ದಾಖಲೆಗಳಲ್ಲಿ ನನ್ನ ತಂದೆಯ ಹೆಸರು ಮಹಾದೇವ ಎಂದು ದಾಖಲಾಗಿದೆ. ಆದರೆ ನನ್ನ ತಮ್ಮ, ತಂಗಿ ಯರ ದಾಖಲೆಗಳಲ್ಲಿ ಅವರ ಹೆಸರು ಮಹಾದೇವಪ್ಪ ಎಂದೇ ಇದೆ. ಪ್ರವೇಶ ನೀಡಿದ ನಂತರ ನನ್ನನ್ನು ಒಂದನೇ ತರಗತಿಯ ಕೋಣೆಗೆ ಕಳುಹಿಸಲಾಯಿತು. ಅಲ್ಲಿ ಸುಮಾರು ೪೦ ಮಂದಿ ವಿದ್ಯಾರ್ಥಿಗಳಿದ್ದರು. ನಂತರ ನನಗೆ ತಿಳಿದುಬಂದಿದ್ದೇ ನೆಂದರೆ, ಒಬ್ಬ ಬ್ರಾಹ್ಮಣರ ಹುಡುಗನನ್ನು ಬಿಟ್ಟರೆ ಉಳಿದೆಲ್ಲಾ ಸಹಪಾಠಿಗಳ ಜನ್ಮ ದಿನಾಂಕ ಜೂನ್ ೧, ೧೯೫೨ ಎಂದೇ ದಾಖಲಿಸಲಾಗಿತ್ತು.

ನಾನು ಸರಕಾರಿ ಸೇವೆಗೆ ಸೇರಿದ ಮೇಲೆ ೧೯೭೨ರಲ್ಲಿ ಬಾಗಲಕೋಟೆ ಟೆಲಿಫೋನ್ ಎಕ್ ಚೇಂಜ್ ಡೆಪ್ಯುಟೇಶನ್ ಮೇಲೆ ಕರ್ತವ್ಯಕ್ಕೆ ನಿಯುಕ್ತನಾದಾಗ ಬೀಳಗಿ ತಹಶೀಲ್ದಾರ್ ಕಚೇರಿಯಲ್ಲಿ ನನ್ನ ಜನ್ಮ ದಾಖಲೆಯನ್ನು ಪರಿಶೀಲಿಸಿದಾಗ, ೨೬ನೇ ಆಗಸ್ಟ್ ೧೯೫೪ ಎಂದು ನಮೂದಾಗಿತ್ತು. ಆಗ ನನಗೆ ನನ್ನ ನಿಜವಾದ ಜನ್ಮ ದಿನಾಂಕ ತಿಳಿಯಿತು. ನಮ್ಮವ್ವ, ‘ನೀನು ಶುಕ್ರವಾರ ಹುಟ್ಟಿದವನು’ ಎಂದು ಹೇಳುತ್ತಿದ್ದಳು. ನಾನು ಪರಿಶೀಲನೆ ಮಾಡಿದಾಗ, ೨೬ನೇ ಆಗಸ್ಟ್ ೧೯೫೪ರಂದು ಗುರುವಾರ ಇರುವುದು ಎಂದು ತಿಳಿಯಿತು. ಈ ಬಗ್ಗೆ ನಾನು ಬೀಳಗಿ ತಹಶೀಲ್ದಾರ್ ಕಚೇರಿಯಲ್ಲಿ ವಿಚಾರಣೆ ಮಾಡಿದಾಗ, ಅವರು ಹೇಳಿದ್ದೇನೆಂದರೆ, ಹಿಂದೂ ಪಂಚಾಂಗದ ಪ್ರಕಾರ ಸೂರ್ಯೋದಯದಿಂದ ಮಾರನೇ ದಿನ ಸೂರ್ಯೋದಯದವರೆಗೆ ಅದೇ ದಿನ ಇರುತ್ತದೆ ಎಂದು.

ನಾನು ಶುಕ್ರವಾರ ಬೆಳಗಿನ ಜಾವ ೩ ಗಂಟೆಗೆ ಅಂದರೆ, ಸೂರ್ಯೋದಯಕ್ಕೂ ಮುಂಚೆ ಹುಟ್ಟಿದ್ದರಿಂದ ತಹಶೀಲ್ದಾರ್ ಕಚೇರಿ ಯಲ್ಲಿ ನನ್ನ ಜನ್ಮ ದಿನಾಂಕವನ್ನು ೨೬ನೇ ಆಗಸ್ಟ್ ೧೯೫೪ ಎಂದು ನಮೂದಿಸಲಾಗಿತ್ತು ಎಂದು ತಿಳಿದುಬಂತು. ನಾನು ಭಾರತೀಯ ಪೊಲೀಸ್ ಸೇವೆ ಸೇರಿದ ಮೇಲೆ, ಪೊಲೀಸ್ ಉಪ ವಿಭಾಗಾಧಿಕಾರಿಯಾಗಿ ತಿಪಟೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾಗ, ಕರ್ನಾಟಕ ಸರಕಾರದವರು ರಾಜ್ಯದ ಎಲ್ಲಾ ಅಧಿಕಾರಿಗಳಿಗೆ, ‘ಅವಶ್ಯ ಇರುವ ಪ್ರಕರಣಗಳಲ್ಲಿ’ ಒಂದು ಬಾರಿಗೆ ಜನ್ಮ ದಿನಾಂಕ ವನ್ನು ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ನೀಡಿದ್ದರು. ಆದರೆ ನಾನು ಶಾಲೆಯಲ್ಲಿ ಇದ್ದ ಜನ್ಮ ದಿನಾಂಕಕ್ಕೆ ಅನುಗುಣವಾಗಿ ಸರಕಾರದ ಸೇವೆಗೆ ಸೇರಿದ್ದರಿಂದ ಮತ್ತೆ ಅದನ್ನು ತಿದ್ದುಪಡಿ ಮಾಡಲು ನನ್ನ ಮನಸ್ಸು ಒಪ್ಪಲಿಲ್ಲ.

ನಾನು ೧೯೭೩ರಿಂದಲೂ ನನ್ನ ಜನ್ಮ ದಿನವನ್ನು ಆಗಸ್ಟ್ ೨೭ರಂದೇ ಆಚರಿಸುತ್ತಾ ಬಂದಿದ್ದೇನೆ. ಅದರೆ ಸರಕಾರಿ ದಾಖಲೆಗಳಲ್ಲಿ ನನ್ನ ಜನ್ಮ ದಿನ ಜೂನ್ ೧, ೧೯೫೨ ಎಂದೇ ಮುಂದುವರಿದಿದೆ. ನಮ್ಮ ಒಂದನೇ ತರಗತಿಗೆ ಶ್ರೀ ಬಾಣಕಾರ್ ಎಂಬುವವರು ಮಾಸ್ತರ್ ಆಗಿದ್ದರು. ಮೊದಲನೆ ದಿನದಿಂದಲೇ ಅ ಆ ಇ ಈ ಮತ್ತು ರ ಠ ಈ ಖ ಅಕ್ಷರಗಳನ್ನು ಬರೆಯುವ ಅಭ್ಯಾಸ ಮಡಿಸುವ ಮೂಲಕ ನನ್ನ ಪ್ರಾಥಮಿಕ ಶಿಕ್ಷಣ ಆರಂಭವಾಯಿತು.

ನಾಲ್ಕನೇ ತರಗತಿಯಲ್ಲಿ ಫೇಲಾಗಿದ್ದೆ: ಆಗ ಈಗಿನಂತೆ ಡೆಸ್ಕ್‌ಗಳಿರಲಿಲ್ಲ. ಶಾಬಾದಿ ಕಲ್ಲುಗಳ ನೆಲಹಾಸಿನ ಮೇಲೆ ಕುಳಿತು ಅಭ್ಯಾಸ ಮಾಡುತ್ತಿದ್ದೆವು. ಪ್ರತಿ ತರಗತಿಯಲ್ಲಿ ೪೦ ವಿದ್ಯಾರ್ಥಿಗಳಿರುತ್ತಿದ್ದರು. ಪಾಟಿ, ಬಳಾಯಿ ತೆಗೆದುಕೊಂಡು ಹೋದರೆ ಸಾಕಾಗಿತ್ತು ಯಾವುದೇ ಪುಸ್ತಕ, ಚೀಲದ ಹೊರೆ ಇರಲಿಲ್ಲ. ದಿನವೂ ಮೂರು ಗಂಟೆ ಮಾತ್ರ ಅಭ್ಯಾಸ ಮಾಡಿಸುತ್ತಿದ್ದರು. ಉಳಿದ ವೇಳೆಯಲ್ಲಿ ಆಟವಾಡಲು ಅವಕಾಶ ನೀಡುತ್ತಿದ್ದರು. ನಾವು ಪಾಠಕ್ಕಿಂತ ಆಟವೇ ಹೆಚ್ಚಾಗಿತ್ತು.

ದಿನಾಲೂ ಸಹಪಾಠಿಗಳೊಂದಿಗೆ ಗೋಲಿ ಗುಂಡು, ಚಿನ್ನಿದಾಂಡು, ಆಡುತ್ತಿದ್ದೆವು. ನನಗೆ ಒಂದನೇ ತರಗತಿಯಿಂದ ನಾಲ್ಕನೇ ತರಗತಿಯವರೆಗೆ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ ಇರಲಿಲ್ಲ. ನಾನು ಎರಡನೇ ಕ್ಲಾಸ್‌ಗೆ ಬಂದಾಗ ನನಗೆ ಸುಮಾರು ನಾಲ್ಕು ಆಣೆ ಬೆಲೆಬಾಳುವ ಅಂಕ ಲಿಪಿ ಪುಸ್ತಕವನ್ನೂ ಸಹಿತ ಕೊಡಿಸಿದರು. ಈ ಪುಸ್ತಕವನ್ನು ನೋಡಿ ೧ರಿಂದ ೩೦ರವರೆಗೆ ಮಗ್ಗಿ ಮತ್ತು ಕನ್ನಡದ ವರ್ಣಮಾಲೆ ಬರೆಯುವ ಅಭ್ಯಾಸ ಮಾಡಿಸಿದರು. ಮುಂದೆ ಮೂರನೇ ತರಗತಿಗೆ ಬಂದಾಗ ನನಗೆ ಗಲಗ ಮತ್ತು ಮಸಿ ದೌತಿ ಬಂದವು. ಅವುಗಳನ್ನು ಒಂದು ಕಾಪಿ ಪುಸ್ತಕದಲ್ಲಿ ಗಲಗನ್ನು ಮಸಿಯಲ್ಲಿ ಅದ್ದಿ ಕಾಪಿ ಪುಸ್ತಕದಲ್ಲಿ ಅಕ್ಷರಗಳನ್ನು ಬರೆಯುವ ಅಭ್ಯಾಸ ಪ್ರಾರಂಭವಾಯಿತು.

ಹೀಗೆ ನಾನು ನಾಲ್ಕನೇ ತರಗತಿಗೆ ಬಂದೆ. ನಾನು ಹೆಚ್ಚಿನ ಸಮಯವನ್ನು ಸಹಪಾಠಿಗಳೊಂದಿಗೆ ಓಡಾಡಲು ಮತ್ತು ಕೂಡಿ ಆಡಲು ಕಳೆಯುತ್ತಿದ್ದೆ. ನಮ್ಮ ಕ್ಲಾಸ್ ಟೀಚರ್ ಶ್ರೀ ಕಬ್ಬಿನ ಎಂಬ ಶಿಕ್ಷಕರು ಬಹಳ ಕಟ್ಟುನಿಟ್ಟಾಗಿದ್ದರು. ನಾನು ಅವರ ನಿರೀಕ್ಷೆಗೆ ತಕ್ಕಂತೆ ಅಭ್ಯಾಸ ಮಾಡದ ಕಾರಣ ನನ್ನನ್ನು ನಾಲ್ಕನೇ ತರಗತಿಯಲ್ಲಿಯೇ ಫೇಲ್ ಮಾಡಿದರು. ಹಾಗಾಗಿ ನಾನು ನಾಲ್ಕನೇ ತರಗತಿಯನ್ನು ಮತ್ತೊಂದು ಬಾರಿ ಓದಬೇಕಾಯಿತು.

ನಾನು ನಾಲ್ಕನೇ ತರಗತಿಯಲ್ಲಿದ್ದಾಗ ನಮ್ಮ ದೊಡ್ಡ ಮುತ್ಯಾ ಬಸಲಿಂಗಪ್ಪ ಅವರ ಮಗನಾದ ಈಶ್ವರ ಬಿದರಿ ಮತ್ತು ನಮ್ಮ
ದೊಡ್ಡಪ್ಪ ಪರಪ್ಪ ಬಿದರಿ ಅವರ ಮಗ ಶ್ರೀಶೈಲ ಬಿದರಿ ಅವರ ಮದುವೆ ನಮ್ಮ ಮನೆಯ ಅಂಗಳದಲ್ಲಿ ಸಂಭ್ರಮದಿಂದ
ನೆರವೇರಿತು. ಈ ಸಂದರ್ಭದಲ್ಲಿ ನಮ್ಮ ಶಿಕ್ಷಕರಾದ ಶ್ರೀ ಕಬ್ಬಿನ ಅವರಿಗೆ ಆಮಂತ್ರಣ ಪತ್ರಿಕೆ ಕೊಡಲು ನಮ್ಮ ತಂದೆ ನನಗೆ
ಹೇಳಿದರು. ಅದರಂತೆಯೇ ನಾನು ಅವರಿಗೆ ಆಮಂತ್ರಣ ಪತ್ರಿಕೆ ನೀಡಿ, ಮದುವೆಗೆ ಬರುವಂತೆ ಆಮಂತ್ರಣ ನೀಡಿದೆ. ಅವರು ಆಗ ‘ಮದುವೆಗೆ ಬರುತ್ತೇನೆ. ಆದರೆ ನಾನು ನಿಮ್ಮ ಮದುವೆಗಳಲ್ಲಿ ಊಟ ಮಾಡುವುದಿಲ್ಲ. ಹಿಟ್ಟಕ್ಕಿ ಬೇಕಾದರೆ ತಂದುಕೊಡು’ ಎಂದು ತಿಳಿಸಿದರು.

ಅವರು ಜೈನರಾಗಿದ್ದರಿಂದ ಭೂಮಿಯ ಅಡಿಯಲ್ಲಿ ಬೆಳೆದ ಪದಾರ್ಥಗಳಾದ ಈರುಳ್ಳಿ, ಬೆಳ್ಳುಳ್ಳಿ, ನೆಲಗಡಲೆ, ಗಜ್ಜರಿ ಇವುಗಳನ್ನು ತಿನ್ನುತ್ತಿರಲಿಲ್ಲ. ಆದರೆ ಲಿಂಗಾಯತರ ಮನೆಗಳಲ್ಲಿ ಈ ವಸ್ತುಗಳನ್ನು ಊಟಕ್ಕೆ ಉಪಯೋಗಿಸುತ್ತಿದ್ದರು. ಆದ್ದರಿಂದ ಅವರಿಗೆ ಹಿಟ್ಟಕ್ಕಿ ನೀಡುವ ಪದ್ಧತಿ ಇತ್ತು. ಹಿಟ್ಟಕ್ಕಿ ಎಂದರೆ, ಅಕ್ಕಿ, ಬೇಳೆ, ಗೋಧಿ, ಬೆಲ್ಲ ಇವುಗಳನ್ನು ಸ್ವಲ್ಪ ಪ್ರಮಾಣದಲ್ಲಿ ಒಂದು ದಿನದ ಊಟಕ್ಕಾಗುವಷ್ಟು ಬಟ್ಟೆಯಲ್ಲಿ ಕಟ್ಟಿಕೊಡುವುದು. ಈ ಘಟನೆಯಿಂದ ನನಗೆ ಮೊದಲ ಬಾರಿಗೆ, ವಿವಿಧ ಸಮಾಜಗಳ ವಿವಿಧ ಆಹಾರ ಪದ್ಧತಿ ಮತ್ತು ಜಾತಿ ಪದ್ಧತಿ ಅರಿವಿಗೆ ಬಂತು.

ನಾನು ಎರಡನೇ ಬಾರಿಗೆ ನಾಲ್ಕನೇ ತರಗತಿಯ ಅಭ್ಯಾಸ ಆರಂಭಿಸಿದಾಗ, ಶ್ರೀ ಕುಬಕಡ್ಡಿ ಎಂಬವರು ಕ್ಲಾಸ್ ಟೀಚರ್ ಆಗಿದ್ದರು. ಅವರು ನಮಗೆ ವಿಶೇಷ ಗಮನ ನೀಡಿ ಎಲ್ಲಾ ವಿಷಯಗಳನ್ನೂ ಒಳ್ಳೆಯ ರೀತಿಯಿಂದ ಅಭ್ಯಾಸ ಮಾಡಿಸುತ್ತಿದ್ದರು. ಎರಡನೇ ವರ್ಷದಲ್ಲಿ ನಾಲ್ಕನೇ ತರಗತಿಯನ್ನು ಯಶಸ್ವಿಯಾಗಿ ಪಾಸಾದೆನು. ಇದೇ ಸಂದರ್ಭದಲ್ಲಿ ೧೯೬೨ರ ಡಿಸೆಂಬರ್‌ನಲ್ಲಿ ಪೋರ್ಚು ಗೀಸರ ವಶದಲ್ಲಿದ್ದ ಗೋವಾವನ್ನು ಭಾರತಕ್ಕೆ ಸೇರಿಸಲು ಸೈನಿಕ ಕ್ರಮ ಪ್ರಾರಂಭವಾಯಿತು.

ಆಗ ಸೈನಿಕ ವಾಹನಗಳು ನಮ್ಮ ಶಾಲೆಯ ಮುಂದಿನ ಬಿಜಾಪುರ-ಬೆಳಗಾವಿ ರಸ್ತೆಯ ಮೂಲಕ ಸಿಕಂದರಾಬಾದ್‌ನಿಂದ ಗೋವಾಕ್ಕೆ ಹೋಗುತ್ತಿದ್ದವು. ಒಂದೊಂದು ಬಾರಿಯೂ ೧೦೦ಕ್ಕೂ ಹೆಚ್ಚು ವಾಹನಗಳು ಹೋಗುತ್ತಿದ್ದವು. ನಾವು ಈ ವಾಹನಗಳ ಓಡಾಟ ಆರಂಭವಾದ ಕೂಡಲೇ ವಾಹನಗಳನ್ನು ಮತ್ತು ಅವುಗಳಲ್ಲಿರುತ್ತಿದ್ದ ಸೈನಿಕರನ್ನು ಕೌತುಕದಿಂದ ನೋಡುತ್ತಾ ನಿಲ್ಲುತ್ತಿದ್ದೆವು. ಗೋವಾ-ಪಣಜಿ ಸೈನಿಕ ಕಾರ್ಯಾಚರಣೆ ಮುಗಿದ ಮೇಲೆ ಮತ್ತೆ ಅದೇ ಮಾರ್ಗದ ಮೂಲಕ ಆ ವಾಹನಗಳು ಸಿಕಂದರಾಬಾದ್‌ಗೆ ಮರಳಿದವು.

ಐದನೇ ತರಗತಿಯಿಂದ ಓದಿನಲ್ಲಿ ಆಸಕ್ತಿ: ನಾಲ್ಕನೇ ತರಗತಿವರೆಗೆ ಅಭ್ಯಾಸದಲ್ಲಿ ಹಿಂದಿದ್ದ ನನಗೆ ಐದನೇ ತರಗತಿ ಪ್ರಾರಂಭವಾಗುತ್ತಿದ್ದಂತೆ ಓದಿನಲ್ಲಿ ಆಸಕ್ತಿ ಹುಟ್ಟಿತು. ಐದನೇ ತರಗತಿಯ ಇಂಗ್ಲಿಷ್ ಭಾಷೆಯ ಕಲಿಕೆ ಸಹಿತ ಶುರುವಾಯಿತು. ನನಗೆ ಇಂಗ್ಲಿಷ್ ಬಹಳ ಬೇಗನೆ ಒಲಿದುಬಿಟ್ಟಿತು. ಅದರಂತೆಯೇ ಇತಿಹಾಸ ಹಾಗೂ ಸಮಾಜಶಾಸದ ಮೇಲೂ ಒಲವು ಹೆಚ್ಚಿತು. ‘ದಡ್ಡ ವಿದ್ಯಾರ್ಥಿ’ ಎಂದೇ ಗುರುತಿಸಿಕೊಂಡಿದ್ದ ನಾನು ಒಂದೇ ವರ್ಷದಲ್ಲಿ ಬುದ್ಧಿವಂತ ಮತ್ತು ಮಾದರಿ ವಿದ್ಯಾರ್ಥಿಯಾದೆ. ನಮ್ಮ ತರಗತಿಯ ಶಿಕ್ಷಕರು ಉಳಿದವರಿಗೆ ನನ್ನ ಬಗ್ಗೆ ಉದಾಹರಣೆ ಕೊಡುವಂತಾಯಿತು.

೧೯೬೨ರಲ್ಲಿ ನಡೆದ ಇನ್ನೊಂದು ಘಟನೆ. ಭಾರತ – ಚೀನಾ ಯುದ್ಧ ಪ್ರಾರಂಭವಾಗಿದ್ದ ಹಿನ್ನೆಲೆಯಲ್ಲಿ ರಾಷ್ಟ್ರೀಯ ರಕ್ಷಣಾ ನಿಽಗೆ ದೇಣಿಗೆ ಸಂಗ್ರಹಿಸುವ ಕಾರ್ಯ ದೇಶಾದ್ಯಂತ ನಡೆದಿತ್ತು. ಒಂದು ದಿನ ನಾನು ಸಹಪಾಠಿಗಳೊಂದಿಗೆ ಶಾಲೆಯಿಂದ ಮನೆಗೆ ಮರಳುವಾಗ ಕೆಲವರು ಕೈಯಲ್ಲಿ ದೇಣಿಗೆ ಸಂಗ್ರಹದ ಡಬ್ಬಿ ಹಿಡಿದುಕೊಂಡು ಬರುತ್ತಿದ್ದುದನ್ನು ಕಂಡೆ. ಕುತೂಹಲಕ್ಕಾಗಿ,  ಅದೇನು?’ ಎಂದು ಅವರನ್ನು ವಿಚಾರಿಸಿದೆ.

‘ಈ ಡಬ್ಬಿಯಲ್ಲಿ ರಾಷ್ಟ್ರೀಯ ರಕ್ಷಣಾ ನಿಧಿಗೆ ದೇಣಿಗೆ ಹಾಕಿ’ ಎಂದರು. ನನ್ನ ಬಳಿ ಹಣವಿರಲಿಲ್ಲ. ಹಿಂದಿನ ವರ್ಷ ಬೇಸಿಗೆ ರಜೆಯಲ್ಲಿ ನಾನು ನಮ್ಮ ತಾಯಿಯ ಊರಾದ ಗಲಗಲಿಗೆ ಹೋದಾಗ ನಮ್ಮ ತಾಯಿಯ ತಂದೆ ಅಂದರೆ, ನಮ್ಮ ಮುತ್ಯಾ ನನಗೆ ಅರ್ಧ ತೊಲೆ ಬಂಗಾರದ ಉಂಗುರವನ್ನು ಮಾಡಿಸಿ ಕೈಗೆ ಹಾಕಿದ್ದರು. ನನಗೆ ಏನನಿಸಿತೋ ಏನೋ ತಕ್ಷಣ ನಾನು ಆ ಉಂಗುರ ವನ್ನು ತೆಗೆದು ರಕ್ಷಣಾ ನಿಧಿಯ ಡಬ್ಬಿಗೆ ಹಾಕಿಬಿಟ್ಟೆ. ನನ್ನ ಜತೆಗಿದ್ದ ಸಹಪಾಠಿಗಳು, ‘ತುಂಬಾ ಒಳ್ಳೆಯ ಕೆಲಸ ಮಾಡಿದೆ’ ಎಂದು ಹೊಗಳಿದರು. ಆದರೆ ಮನೆಗೆ ಹೋದ ಮೇಲೆ ನಮ್ಮವ್ವನಿಗೆ ಏನು ಹೇಳುವುದೆಂದು ಚಿಂತೆಯಾಯಿತು. ನಾನು ಬಚ್ಚಲಿಗೆ ಹೋಗಿ
ಕೈಕಾಲು ಮುಖ ತೊಳೆದು ಬರುವಷ್ಟರಲ್ಲಿ ನಮ್ಮವ್ವ ಉಂಗುರ ಇಲ್ಲದಿರುವುದನ್ನು ಗಮನಿಸಿದಳು. ಕೂಡಲೇ ‘ಉಂಗುರ ಎಲ್ಲಿ?’ ಎಂದು ವಿಚಾರಿಸಿದಳು.

‘ಗೊತ್ತಿಲ್ಲ’ ಎಂದು ಸುಳ್ಳು ಹೇಳಿದೆ. ಅವಳು ಮನೆಯ ಅಂಗಳ, ಬಚ್ಚಲು, ಪಾಟಿ ಚೀಲದಲ್ಲೆಲ್ಲಾ ಹುಡುಕಾಡಿದಳು. ಎಲ್ಲಿಯೂ ಸಿಗಲಿಲ್ಲ. ಆಗ ಅವಳು, ಯಾವ ರಸ್ತೆಯ ಮೂಲಕ ಬಂದೆ, ಎಲ್ಲೆಲ್ಲಿ ಆಟವಾಡಿದೆ ಎಂದೆಲ್ಲಾ ಕೇಳಿದಳು. ಹುಡುಕಿಕೊಂಡು ಬರುವಂತೆ ನನ್ನನ್ನು ಕಳುಹಿಸಿದಳು. ಅವಳಿಗೆ ಸತ್ಯ ಹೇಳಲು ಆಗದೆ ಅರ್ಧ ಗಂಟೆ ಅಲ್ಲೆಲ್ಲಾ ಕಳೆದು ಬಂದು, ‘ಹುಡುಕಿದೆ, ಸಿಗಲಿಲ್ಲ’ ಎಂದು ಮತ್ತೆ ಸುಳ್ಳು ಹೇಳಿದೆ. ಅಗ ಅವಳು ಪಕ್ಕದ ಮನೆಯ ಸಹಪಾಠಿ ತುಂಗಳ ಎನ್ನುವವನನ್ನು ಕರೆಸಿ ‘ಶಂಕರ ಉಂಗುರ ಕಳೆದುಕೊಂಡಿದ್ದಾನೆ, ಇಬ್ಬರೂ ಹೋಗಿ ಶಾಲೆಯ ಬಳಿ ಹುಡುಕಿಕೊಂಡು ಬನ್ನಿ’ ಎಂದು ಹೇಳಿದಳು.

ಆಗ ಅವನು, ‘ಶಂಕರ ಉಂಗುರ ಕಳೆದುಕೊಂಡಿಲ್ಲ, ದೇಣಿಗೆ ಡಬ್ಬಿಗೆ ಹಾಕಿದ್ದಾನೆ’ ಎಂದು ಬಾಯಿಬಿಟ್ಟ. ಆಗ ನನ್ನವ್ವ ಸುಳ್ಳು ಹೇಳಿದ್ದನ್ನು ಸಹಿಸದೆ ನನಗೆ ಊದುಗೋಳಿಯಿಂದ ಚೆನ್ನಾಗಿ ಥಳಿಸಿದಳು ಮತ್ತು ‘ಏನೇ ಮಾಡು ಆದರೆ ಸುಳ್ಳು ಹೇಳಬೇಡ’ ಎಂದು ಎಚ್ಚರಿಕೆ ನೀಡಿದಳು. ಮಾಸ್ತರ ಮನೆಯಲ್ಲಿ ಪೇಪರ್ ಓದುವ ಹುಚ್ಚು: ನಾನು ಏಳನೇ ತರತಿಯ ಅಭ್ಯಾಸ ಮಾಡಿದ್ದು ೧೯೬೫-೬೬ರ ಶೈಕ್ಷಣಿಕ ವರ್ಷದಲ್ಲಿ. ಆಗ ನಮ್ಮ ವರ್ಗದ ಶಿಕ್ಷಕರು ಶ್ರೀ ಎನ್. ಎಚ್. ದಾಸರ್ ಎಂಬುವವರಿದ್ದರು.

ಅವರು ಬಹಳ ಕಟ್ಟುನಿಟ್ಟು. ಅವರ ಬಗ್ಗೆ ಎಲ್ಲರಿಗೂ ಭಯ. ಆ ಭಯದಿಂದಲೇ ಪಾಠಗಳನ್ನು ಮನಸ್ಸು ಕೊಟ್ಟು ಕೇಳುತ್ತಿದ್ದರು. ಶಾಲೆಯ ಅವಧಿ ಮುಗಿದ ಮೇಲೂ ವಿದ್ಯಾರ್ಥಿಗಳು ಶಾಲೆಯಲ್ಲೇ ಉಳಿದು ಅಭ್ಯಾಸ ಮಾಡಬೇಕು ಎಂದು ಅವರು  ಬಯಸು ತ್ತಿದ್ದರು. ಏಳನೇ ತರಗತಿಯಾದ್ದರಿಂದ ನಾವು ಎಲ್ಲಾ ವಿದ್ಯಾರ್ಥಿಗಳು ರಾತ್ರಿ ಮನೆಯಲ್ಲಿ ಊಟ ಮಾಡಿದ ಮೇಲೆ ಅಭ್ಯಾಸ ಮಾಡಲು ಕಂದೀಲು ಅಥವಾ ಲ್ಯಾಂಪ್‌ನೊಂದಿಗೆ ಶಾಲೆಗೆ ಹೋಗುತ್ತಿದ್ದೆವು. ಶಿಕ್ಷಕರಾದ ದಾಸರ ಅವರೂ ಬಂದು ಒಂದು ಗಂಟೆ ನಮಗೆ ಅಭ್ಯಾಸ ಮಾಡಿಸಿ, ಪ್ರಶ್ನೆಗಳನ್ನು ಕೇಳಿ ಮನೆಗೆ ಹೋಗುತ್ತಿದ್ದರು.

ಐದನೇ ತರಗತಿಯಿಂದ ಏಳನೇ ತರಗತಿ ಅಭ್ಯಾಸ ಮಾಡುತಿದ್ದಾಗ ನಮ್ಮೂರಿನಲ್ಲಿ ಎಲ್ಲಾ ಪತ್ರಿಕೆಗಳ ಏಜೆಂಟರಾಗಿದ್ದ ಶ್ರೀ ವೀರಣ್ಣ ತುಂಗಳ ಅವರ ಅಂಗಡಿಗೆ ಹೋಗಿ ಅವರು  ಅಂಗಡಿಗೆ ತರಿಸುತ್ತಿದ್ದ ಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆ ಗಳನ್ನು
ವಿತರಣೆಯಾಗುವುದಕ್ಕೂ ಮೊದಲೇ ಓದುವ ಅಭ್ಯಾಸ ಬೆಳೆಸಿಕೊಂಡೆ. ಅವರಲ್ಲಿ ಬರುತ್ತಿದ್ದ ಇಂಡಿಯನ್ ಎಕ್ಸ್‌ಪ್ರೆಸ್, ಟೈಮ್ಸ್ ಆ- ಇಂಡಿಯಾ, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಸುಧಾ, ಮಯೂರ, ಕಸ್ತೂರಿ, ಪ್ರಜಾಮತ, ಬ್ಲಿಟ್ಜ್ ಮತ್ತು ಇಲ್ಲಸ್ಟ್ರೇಟೆಡ್ ವೀಕ್ಲಿ ಆ- ಇಂಡಿಯಾವನ್ನು ಅಂಗಡಿಗೆ ಬಂದ ತಕ್ಷಣ ಓದಿ ವಿತರಣೆಗೆ ನೀಡುತ್ತಿದ್ದೆ.

ನಾನು ಈ ರೀತಿ ಪತ್ರಿಕೆಗಳನ್ನು ವಿತರಣೆಗೂ ಮುಂಚೆಯೇ ಓದಲು ಅವಕಾಶ ಸಿಕ್ಕಿದ್ದರಿಂದ ನನ್ನ ಸಾಮಾನ್ಯ ಜ್ಞಾನ ಮತ್ತು ವಿಷಯ ಜ್ಞಾನ ಹೆಚ್ಚಿಸಿಕೊಳ್ಳಲು ಅನುಕೂಲವಾಯಿತು. ಅದಕ್ಕಾಗಿ ನಾನು ಶ್ರೀ ವೀರಣ್ಣ ತುಂಗಳ ಅವರಿಗೆ ಸದಾ ಕಾಲ ಆಭಾರಿಯಾಗಿದ್ದೇನೆ. ಗಂಡು ಮಕ್ಕಳ ಸರಕಾರಿ ಶಾಲೆಯಲ್ಲಿ ಶಿಕ್ಷಣದ ಗುಣಮಟ್ಟ ತುಂಬಾ ಉತ್ತಮವಾಗಿತ್ತು. ಸಹಾಯಕ ಶಿಕ್ಷಣಾಧಿಕಾರಿಗಳು ಮತ್ತು ಶಿಕ್ಷಣಾಧಿಕಾರಿಗಳು ಆರು ತಿಂಗಳಿಗೊಮ್ಮೆ ಶಾಲೆಗೆ ಭೇಟಿ ನೀಡಿ ಎಲ್ಲಾ ತರಗತಿಗಳ ಕೋಣೆಗೆ ಹೋಗಿ
ವಿದ್ಯಾರ್ಥಿಗಳ ಜ್ಞಾನ ಮಟ್ಟವನ್ನು ಪರಿಶೀಲಿಸುತ್ತಿದ್ದರು. ಮತ್ತು ಶಿಕ್ಷಕರಿಗೆ ಸೂಕ್ತ ಸಲಹೆ ಸೂಚನೆ ನೀಡುತ್ತಿದ್ದರು.

ಕಲಿಕೆಯಲ್ಲಿ ಹಿಂದುಳಿದಿದ್ದ ವಿದ್ಯಾರ್ಥಿಗಳಲ್ಲಿ ಸುಧಾರಣೆ ತರಲು ಏನು ಮಾಡಬೇಕು ಎಂದು ಶಿಕ್ಷಕರಲ್ಲಿ ಚರ್ಚಿಸುತ್ತಿದ್ದರು. ಅವರು ಜನಸಂದಣಿಯಿದ್ದ ಬಸ್‌ನಲ್ಲೇ ಬಿಜಾಪುರದಿಂದ ಬಂದು, ಆಮೇಲೆ ಶಾಲೆಗೆ ನಡೆದುಕೊಂಡೇ ಬರುತ್ತಿದ್ದರು. ಹೆಡ್ ಮಾಸ್ತರ್ ಕೋಣೆಗೆ ಊಟ ತರಿಸಿ ಊಟ ಮಾಡುತ್ತಿದ್ದರು. ಈ ರೀತಿ ಶಾಲೆಗೆ ಪರಿಶೀಲನೆಗೆ ಬರುತ್ತಿದ್ದ ಸಹಾಯಕ ಶಿಕ್ಷಣಾಧಿಕಾರಿ ಗಳಲ್ಲಿ ಶ್ರೀ ಶೆಟ್ಟರ್ ಮತ್ತು ಶಿಕ್ಷಣಾಧಿಕಾರಿಗಳಲ್ಲಿ ಶ್ರೀ ಗಾಂವ್ಕರ್ ಎಂಬಬುವವರ ಹೆಸರುಗಳು ನನಗೆ ಈಗಲೂ ನೆನಪಿವೆ.

ಇದೇ ಶ್ರೀ ಗಾಂವ್ಕರ್ ಅವರ ಮಗ ಶ್ರೀ ಜೀವನ್‌ಕುಮಾರ್ ಗಾಂವ್‌ಕರ್ ಅವರು ನನ್ನೊಂದಿಗೆ ಭಾರತೀಯ ಪೊಲೀಸ್ ಸೇವೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಕೊನೆಗೆ, ಏಳನೇ ತರಗತಿಯ ಪಬ್ಲಿಕ್ ಪರೀಕ್ಷೆ ಬಂತು. ನಾನು ಅದರಲ್ಲಿ ಇಡೀ ಜಿಲ್ಲೆಗೇ ಪ್ರಥಮ ಸ್ಥಾನ ಪಡೆದು ಪಾಸಾಗಿದ್ದೆ. ನನ್ನ ಈ ಸಾಧನೆಗೆ ನನ್ನ ಶಿಕ್ಷಕರು ಮತ್ತು ಮನೆಯವರು ತುಂಬಾ ಸಂತೋಷಪಟ್ಟರು. ಗಂಡು ಮಕ್ಕಳ ಸರಕಾರಿ  ಶಾಲೆಯಲ್ಲಿ ಏಳನೇ ತರಗತಿಯವರೆಗೆ ಮಾತ್ರ ವಿದ್ಯಾಭ್ಯಾಸಕ್ಕೆ ಅವಕಾಶವಿತ್ತು. ಮುಂದೆ ಎಂಟನೇ ತರಗತಿಗೆ ಸೇರಲು ನಾನು ನಮ್ಮೂರಿನ ಎಸ್.ಆರ್.ಎ. ಹೈಸ್ಕೂಲ್‌ಗೆ ಪ್ರವೇಶ ಪಡೆಯಬೇಕಾಗಿತ್ತು. ಮುಂದುವರಿಯುವುದು….

ಎಮ್ಮೆ ಕಳೆದ ಜಾಹೀರಾತು ಓದಿದ್ದು
ಐದು ಮತ್ತು ಆರನೆ ತರಗತಿಗೆ ಎಸ್.ಬಿ. ಚನ್ನಾಳ ಎಂಬುವವರು ನಮ್ಮ ವರ್ಗದ ಶಿಕ್ಷಕರಾಗಿದ್ದರು. ಅವರು ವಿಶೇಷವಾಗಿ ಇಂಗ್ಲಿಷ್ ಭಾಷೆಯನ್ನು ಚೆನ್ನಾಗಿ ಪಾಠ ಮಾಡುತ್ತಿದ್ದರು. ಅವರು ಈ ಎರಡು ವರ್ಷಗಳಲ್ಲಿ ಭಾಷಾಂತರ ಪಾಠ ಮಾಲಿಕೆಯ ಮೂರೂ ಭಾಗಗಳನ್ನು ಚೆನ್ನಾಗಿ ಬೋಧನೆ ಮಾಡಿದರು. ನನಗೆ ಈ ಮೂರು ಭಾಗಗಳ ಅಭ್ಯಾಸದಿಂದ ಮುಂದಿನ ಶೈಕ್ಷಣಿಕ ಜೀವನದಲ್ಲಿ ಬಹಳ ಅನುಕೂಲವಾಯಿತು. ಶಾಲೆಯಲ್ಲಿ ಪ್ರತಿ ದಿನ ಪ್ರಾರ್ಥನೆಯಾದ ಮೇಲೆ ‘ಸಂಯುಕ್ತ ಕರ್ನಾಟಕ’ ಪತ್ರಿಕೆ ಯಲ್ಲಿನ ಮಹತ್ವದ ಸುದ್ದಿಗಳನ್ನು ಒಬ್ಬೊಬ್ಬ ವಿದ್ಯಾರ್ಥಿ, ಸರದಿಯಲ್ಲಿ ಓದಿಹೇಳಬೇಕಾಗಿತ್ತು. ಈ ಕೆಲಸದ ಮೇಲ್ವಿಚಾರಣೆಯನ್ನು ನನಗೆ ನೀಡಲಾಗಿತ್ತು. ಒಮ್ಮೆ ಒಬ್ಬ ನನ್ನ ಸಹಪಾಠಿ, ಪತ್ರಿಕೆಯಲ್ಲಿ ಬಂದಿದ್ದ ಸುದ್ದಿಯ ತಲೆಬರಹದೊಂದಿಗೆ ‘ಎಮ್ಮೆ ಕಳೆದಿದೆ’ ಎಂಬಜಾಹೀರಾತನ್ನೂ ಪೂರ್ತಿಯಾಗಿ ಓದಿಬಿಟ್ಟ. ಇಡೀ ಶಾಲೆಯ ಶಿಕ್ಷಕರು ಮತ್ತು ಮಕ್ಕಳು ದಿನವಿಡೀ ನಕ್ಕಿದ್ದೇ ನಕ್ಕಿದ್ದು