Saturday, 10th April 2021

ಹೇ ಹುಡುಗಿ ನಿನ್ನ ಮುದ್ದಿಸುತಿದೆ ಈ ಮನ

ಅಪರ್ಣಾ ಎ.ಎಸ್‌, ಬೆಂಗಳೂರು

ಮಧುರ ಭಾವನೆಗಳನ್ನು ಮನದಲಿ ಮೂಡಿಸುವ, ಪ್ರೀತಿಯ ನಾವೆಯನ್ನು ಅದರಲಿ ತೇಲಿಬಿಡುವ ಆ ಒಂದು ಪ್ರಪಂಚವೇ ಅನನ್ಯ ಅಪೂರ್ವ!

ಪ್ರೀತಿದೆಷ್ಟು ಸುಂದರ..! ಎಂತಹ ಮಧುರ ಅನುಭವ..! ನಿನ್ನ ಜೊತೆ ಇಂದು ಎಲ್ಲಾ ಹೇಳಿಕೊಳ್ಳುವ ಆಸೆ. ಪ್ರಾರಂಭದಿಂದ ಈ ಕ್ಷಣದವರೆಗೂ ಅದೇನೇನು ಅನುಭವಿಸಿದೆನೋ ಆ ಮಧುರ ಕ್ಷಣಗಳು ಅವೆಲ್ಲವನ್ನೂ ನಿನ್ನ ಮುಂದಿಟ್ಟು. ನಿನ್ನನ್ನು ನನ್ನವ ಳನ್ನಾಗಿ ಮಾಡಿಕೊಳ್ಳುವ ಹಂಬಲ ಬಹು ದಿನಗಳದ್ದು.

ಇಷ್ಟು ದಿನ ನಿನ್ನ ಕೇವಲ ಪುಸ್ತಕಗಳ ಓಣಿಗಳ ಸಂದಿಯಿಂದ.. ಕಾಫಿ ಕಪ್ಪುಗಳ ಬದಿಯಿಂದ… ಗಮನಿಸಿದ್ದಾಯ್ತು.. ಇವತ್ತಿಗೆ ಇವೆಲ್ಲಾ ಬಂದ್! ಇನ್ನು ಮುಂದೆ ಏನಿದ್ದರೂ ನಿನ್ನ ಜತೆಗೆ ಅಂತ ನಿರ್ಧಾರ ಮಾಡಿ ಆಯ್ತು. ಒಂದು ದಿನ ರಾತ್ರಿಯೊಳಗಾಗಿ ಅದೆಷ್ಟು ಬದಲಾವಣೆಗಳು ನನ್ನಲ್ಲಿ. ಕನಸಿನಂತೆ ಎಲ್ಲಾ ನಡೆದುಹೋಯಿತು. ಯಾವುದೋ ಮಾಯೆಯಲ್ಲಿ ಪ್ರೀತಿಯೆಂಬ ಮಾಯಾಲೋಕದೊಳಕ್ಕೆ ಅನುಮತಿಯಿಲ್ಲದೇ ಅಡಿಯಿಟ್ಟಾಗಿತ್ತು.

ಅದೊಂದು ಕ್ಷಣ ಕನಸಿನಲ್ಲೇ ಪ್ರೇಮದ ಬೀಜವ ಬಿತ್ತಿ ನನ್ನೆದೆಯಲ್ಲೇ ಮೊಳಕೆಯೊಡೆದು ಚಂದದ ಸಸಿಯೊಂದು ಚಿಗುರೊಡೆಯು ವಂತೆ ಮಾಡಿತ್ತು. ತಳಿರು ಚಿಗುರೆಲೆಗೆ ಮುತ್ತಿಕ್ಕುವ ಇಬ್ಬನಿಯಂತೆ ನೀ ತಣ್ಣಗೆ ನನ್ನ ಮನದೊಳಗೆ ನೆಲೆಸಿಬಿಟ್ಟಿದ್ದೇ ಹುಡುಗಿ.. ಅದೂ ಯಾವುದೇ ಅನುಮತಿ ಕೇಳದೆ!

ಮುಂಜಾನೆ ಎದ್ದು ಎಂದಿನಂತೆ ಜಾಗಿಂಗ್ ತೆರಳಿದ್ದ ನನಗೆ ಅದ್ಯಾಕೋ ಗೊತ್ತಿಲ್ಲ ಕಾರಣವಿಲ್ಲದೇ ಮನಸ್ಸು ತನ್ನಿಂದ ತಾನಾಗೇ ಕುಣಿಯುತ್ತಿತ್ತು. ಯಾವುದೋ ಅಚ್ಚರಿಯೇ ಈಗ ಆಗುವುದೇನೋ ಎಂಬಂತಹ ಒಂದು ಬಗೆಯ ಪುಳಕ ಮೈಮನದಲ್ಲೆಲ್ಲಾ. ವಸಂತಾಗಮನಕ್ಕೆ ತೆರೆದುಕೊಳ್ಳುವ ಪರಿಸರದಂತೆ ಅಂದು ನನ್ನೀ ಹೃದಯ ನಿನ್ನ ಆಗಮನಕ್ಕಾಗಿ ತೆರೆದುಕೊಂಡಿತ್ತು ಕಾರಣವ
ಹೇಳದೇ. ನನಗರಿವಾಗದೇ ನನ್ನವಳ ಪರಿಚಯ ನನಗಾಗಿತ್ತು. ತಿರುಗಿ ತಿರುಗಿ ನೋಡುವಂತೆ ಮಾಡಿತ್ತು ಅದ್ಯಾವುದೋ ಘಳಿಗೆ ಯಲ್ಲಿ ನೀ ನನ್ನ ಮನದಾಳಕ್ಕೆೆ ಇಳಿದುಬಿಟ್ಟಿದ್ದೆ ಅಷ್ಟೇ ನನಗೊತ್ತು.

ಅಂದು ಮುಂಜಾನೆ ನಾ ಜಾಗಿಂಗ್‌ಗೆ ಹೊರಟಿದ್ದರೆ ನೀ ಆಂಜನೇಯ ಸ್ವಾಮಿ ಗುಡಿಯಿಂದ ಮೆಲ್ಲ ಮೆಲ್ಲನೇ ಮೆಟ್ಟಿಲಿಳಿಯುತ್ತಾ
ಬರುತ್ತಿದ್ದೆ. ಮೂಡಣದಲ್ಲಿ ಆಗ ತಾನೇ ಹುಟ್ಟುತ್ತಿರುವ ಸೂರ್ಯನ ಕೆಂಪಿನೊಂದಿಗೆ ನಿನ್ನ ಕೆನ್ನೆ, ಹಾಗೂ ತುಟಿಯ ಕೆಂಪು ಕೂಡಾ ಪೈಪೋಟಿಗೆ ನಿಂತಂತಿತ್ತು! ಕಣ್ಣಂಚಿಗೆ ಹಚ್ಚಿದ ಕಾಡಿಗೆ ಕಣ್ಣಿಗೊಂದು ಸಿಂಗಾರವಾಗಿದ್ದರೆ ಆ ಮೊನಚು ಹುಬ್ಬು ಬಾಗಿದ ಬಿಲ್ಲಿನ ರೀತಿಯಾಗಿ ಕಂಡಿತ್ತು. ನೀ ಅಂದು ಧರಿಸಿದ್ದ ಆ ಶುಭ್ರ ಬಿಳಿ ಆಕಾಶ ನೀಲಿಯ ದಿರಿಸು, ನಿನ್ನ ಆ ನೋಟ, ಮುಗುಳು ನಗೆಯೊಂದಿಗಿನ ಮಾತು ಎಂತವರ ನ್ನಾಾದರೂ ಮೋಡಿ ಮಾಡಿಬಿಡುವಂತಿತ್ತು.

ಒಟ್ಟಿನಲ್ಲಿ ಹೇಳುವುದಾದರೆ ನಾ ಬಯಸಿ ಬಯಸಿ ಹುಡುಕುತ್ತಿದ್ದ ನನ್ನ ಕನಸಿನ ಕನ್ಯೆಯೇ ಎದುರಾದಂತಿತ್ತು ಅಂದು ನನಗೆ.
ಸಿಂಪಲ್ಲಾಗಿ ಸಿಂಗಲ್ಲಾಗಿದ್ದ ನನಗೆ ನೀ ಅದೆಲ್ಲಿಂದಲೋ ಕಂಡಿದ್ದೆ. ನೀ ಮೆಟ್ಟಿಲಿಳಿಯುತ್ತಿದ್ದರೆ ನಾನು ನಿಂತಲ್ಲೇ ಜಾಗಿಂಗ್ ಮುಂದುವರಿಸಿದ್ದೆೆ. ಬಿಟ್ಟ ಕಂಗಳಿಂದ ನಿನ್ನನ್ನು ನೋಡಿರುವುದಷ್ಟೇ ಗೊತ್ತಿದೆ ನನಗೆ ಬೇರೇನೂ ನೆನಪೇ ಇಲ್ಲ. ತುಸು ಜೋರು ಗಾಳಿ ಬೀಸಿದರೂ ಸಾಕು ನಿನ್ನ ಮುಖವನ್ನೇ ಮುತ್ತುವ ಆ ಮುಂಗುರುಳಿಗೆ ಮನಸೋತಿದ್ದ ನಾನು ತುಂತುರು ಮಳೆ ಬಂದರೂ
ಅಲ್ಲೇ ತಟಸ್ಥನಾಗಿದ್ದೆ.

ತುಂತುರು ಮಳೆಗೆ ನಿನ್ನ ಮೈ ಘಮಲು ಮೈಮರೆಸುವಂತಿತ್ತು. ಅಷ್ಟೇ ಸಾಕಾಗಿತ್ತು ನಿನಗೆ ಮನಸೋಲಲು. ಒಟ್ಟಿನಲ್ಲಿ ಹೇಳುವುದಾದ್ರೆ ನನ್ನ ಕನಸಿನ ಅರಸಿಯೇ ಎದುರಿಗೆ ಬಂದಂತಿತ್ತು. ನಿನ್ನ ಮೊದಲ ನೋಟಕ್ಕೆೆ ನಾನು ಬಲಿಯಾಗಿದ್ದೆ. ನಿನ್ನ ಅಂದು ನೋಡಿದ ಮೇಲೆ ಅದೆಷ್ಟೋ ಬಾರಿ ಅಂದುಕೊಂಡದ್ದಿದೆ, ಒಂದು ಬಾರಿ ಎದುರು ಬಂದು ಬಿಡೇ ಚೆಲುವೆ ಎಂದು.
ಅಪರೂಪಕ್ಕೊಮ್ಮೆ ನಿನ್ನ ದರ್ಶನ ಭಾಗ್ಯ ನನಗೆ.

ಆಗೆಲ್ಲಾ ಅಂದುಕೊಂಡದ್ದಿದೆ ನಿನ್ನ ಬಳಿ ಸಾರಿ ಎಲ್ಲವನ್ನೂ ಹೇಳಿಕೊಳ್ಳಬೇಕು ಅಂತ. ಆದ್ರೆ ಯಾವತ್ತೂ ಆಗಿಲ್ಲ. ಹೇ ಚೆಲುವೆ ತಂಪಾದ ತಂಗಾಳಿಯ ನಿನ್ನ ಮುಂಗುರುಳಿನೊಂದಿಗೆ ತೇಲಿ ಆ ಮೆರುಗಿನಲ್ಲೇ ಕಳೆದುಬಿಡುವಂತಹ ಹುಚ್ಚು ಆಸೆ ನನ್ನದು. ಕಾಲವೆಲ್ಲಾಾ ಜತೆಗಿದ್ದು ಒಂದಿಂಚೂ ನೋಯದಂತೆ ಕಣ್ಣಲ್ಲೇ ಕಾಪಿಡುವ ಮಹತ್ತರದಾಸೆ ನನ್ನದು. ಓ ಹುಡುಗಿ ಸಾಕಿಷ್ಟು
ಕಾಡಿಸಿದ್ದು. ಒಮ್ಮೆ ಜತೆಯಾಗು ನನಗೆ! ಜತೆ ಜತೆಗೆ ಹೆಜ್ಜೆಯಿಡುವ ಜೀವನದ ಪರ‌್ಯಂತ ಅಂತಂದು ನಿನ್ನ ಮೃದು ಕೈಗಳನ್ನು ನನ್ನ ಕೈಗಳಲಿ ಹಿಡಿದುಕೊಳ್ಳುವಾಸೆ..

ಇನ್ನೆಷ್ಟು ವರ್ಣಿಸಲಿ ನಿನ್ನ!

ಅಂದು ರಸ್ತೆ ದಾಟಲು ನೀನು ಪರದಾಡುತ್ತಿದ್ದಾಗ ನಿನ್ನ ಕೈ ಹಿಡಿದು ರಸ್ತೆ ದಾಟಿಸಿದ್ದೆ. ಆಗಿನ ಆ ನಿನ್ನ ಕೈಯ ಮೃದುವಾದ ಸ್ಪರ್ಶ ಇನ್ನೂ ನನ್ನಲ್ಲಿ ಹಸಿರಾಗಿವೆ. ಪ್ರತೀ ಬಾರಿ ನಾನು ಅಲ್ಲಿರುತ್ತಿದ್ದೆ ನಿನಗಾಗಿ, ನಿನ್ನ ಕೈಗಳ ಮೃದುತ್ವಕ್ಕಾಗಿ ಮತ್ತು ನಿನ್ನ
ಆ ಹೊಳಪು ಕಂಗಳ ಭೇಟಿಗಾಗಿ ನಿನಗಿದರ ಅರಿವಿತ್ತೋ ಇಲ್ಲವೋ. ನಿನ್ನ ಮುದ್ದು ಮುಖಕ್ಕೆ, ಮುಗ್ಧ ಮಗುವಿನಂತ ಮನಸಿಗೆ ಮತ್ತೆ ಮತ್ತೆ ಬಿದ್ದು ಹೋಗುತ್ತಿದ್ದೆ. ನಿನ್ನ ಒಂದು ಮುಗುಳುನಗೆಗಾಗಿ ದಿನ ರಾತ್ರಿ ಕಾತರಿಸಿ ಕಾಯುತ್ತಿದ್ದೆ ಅಂದರು ಸುಳ್ಳಲ್ಲ. ಇಷ್ಟು ಸಮಯದಲ್ಲಿ ಒಂದು ಬಾರಿಯೂ ಈ ಎಲ್ಲಾ ಭಾವನೆಗಳನ್ನು ನಿನ್ನೊಂದಿಗೆ ಹಂಚಿಕೊಂಡಿಲ್ಲ.

ಭಾವನೆಗಳನ್ನು ಪದಗಳಲ್ಲಿ ಬಿಚ್ಚಿಡುವುದು ಅಂದುಕೊಂಡಷ್ಟು ಸುಲಭ ಅಲ್ಲ. ಆದರೂ ಕೆಲವೊಮ್ಮೆ ಮನಸ್ಸಿಗೆ ಅನಿಸಿದ್ದನ್ನು, ನಮ್ಮ ಕಲ್ಪನೆಗಳನ್ನು ಅಥವಾ ಕನಸನ್ನು ಹೊರತೆರೆದಿಟ್ಟಾಗ ಅದೆಷ್ಟೋ ನೆಮ್ಮದಿ ಅಂತನಿಸುವುದು. ಹಾಗಂದುಕೊಂಡು ಬರೆದಿಟ್ಟ ಅದೆಷ್ಟೊ ಪತ್ರಗಳು ಇನ್ನೂ ನನ್ನಲ್ಲಿದೆ. ಅವನ್ನೆಲ್ಲಾ ನಿನ್ನ ಕೈಯಲ್ಲಿರಿಸಿ ನಿನ್ನ ಮುಂದೆ ಕೆಟ್ಟವನಾಗುವುದು ನನಗೆ ಬೇಕಿಲ್ಲ!

ಆದರೂ ಹುಡುಗಿ, ಪ್ರೇಮಿ ನಾನು ಹೇಳುವೆ, ಹೇ ಹುಡುಗಿ ನಿನ್ನ ಮುದ್ದಿಸುತಿದೆ ಈ ಮನ.

Leave a Reply

Your email address will not be published. Required fields are marked *