Thursday, 19th May 2022

ಹೆದ್ದಾರಿಯಲ್ಲಿ ಹೆಣಗಾಟದ ಪಯಣಗಳು

ಅಲೆಮಾರಿಯ ಡೈರಿ

ಸಂತೋಷಕುಮಾರ ಮೆಹೆಂದಳೆ

mehandale100@gmail.com

ಇಂಫಾಲದಿಂದ ಎಲ್ಲಿಂದ ಎಲ್ಲಿಗೇ ಹೋದರೂ ಇಲ್ಲಿ ಪರ್ವತಗಳ ಸೆರಗಿನಲ್ಲೇ ರಸ್ತೆಗಳನ್ನು ನಿರ್ಮಿಸಲಾಗಿದ್ದು ಒಂದು ಪರ್ವತ ಶ್ರೇಣಿ ದಾಟುತ್ತಿದ್ದಂತೆ ಆ ನೆತ್ತಿಯ ಮೇಲೊಂದು ಊರು.ಅದರಾಚೆಗೆ ಇಳಿದರೆ ಅಲ್ಲೊಂದು ಸಮುದಾಯ. ಮತ್ತೆ ಸಾಲು ಸಾಲು ಬೆಟ್ಟ !

ಒಂದೇ ರಸ್ತೆ ರಾಜ್ಯ ಹೆದ್ದಾರಿ, ರಾಷ್ಟ್ರ ಹೆದ್ದಾರಿ ಕೊನೆಗದು ಅಂತರಾಷ್ಟ್ರೀಯ ಹೆದ್ದಾರಿಯೂ ಆಗುವ ಸಾಧ್ಯತೆ ಕೇವಲ ನಮ್ಮಲ್ಲಿ ಮಾತ್ರ ಇದ್ದು, ಇಂಫಾಲ – ಮೊರ್ರೆ – ಬರ್ಮಾ ಇದಕ್ಕೆ ಉದಾಹರಣೆ ಆಗುತ್ತದೆ. ಆದರೆ ಇದರ ಮೇಲೆ ಚಲಿಸುವಾಗ ನೀವು ಪಕ್ಕದ ಯಾವುದೋ ತಾಲೂಕಿಗೆ ಚಲಿಸಿದಂತಿರುತ್ತದೆ.

ಯಾವ ಅನೂಹ್ಯ ಅನುಭವಕ್ಕೂ ಈಡು ಮಾಡದೆ ಸೈಕಲ್ಲು, ಆಟೊ, ಟೆಂಪೋ, ಮಿನಿ ಬಸ್ಸು, ಲಾರಿ ಅಲ್ಲೊಂದು ಇಲ್ಲೊಂದು ಕಾರುಗಳು ಹೀಗೆ ಎಲ್ಲದರ ಜೊತೆಗೆ ಊರ ರಸ್ತೆ ಎನ್ನಿಸುವ ಅನುಭವ ನೀಡುತ್ತಲೇ ಅಂತರಾಷ್ಟ್ರೀಯ ಹೆದ್ದಾರಿಯ ಪಯಣ ಸಾಗುತ್ತದೆ. ಇಂಫಾಲದಿಂದ ಹೊರ ಬೀಳುತ್ತಲೇ ಹೆದ್ದಾರಿ ಎನ್ನುವ
ರಸ್ತೆಯ ಮೂಲಕ, ಸಂಖ್ಯೆ 39 ರಲ್ಲಿ ‘ಥಂಗಾಲ್ ಬಜಾರ್ ’ಎನ್ನುವ ಎಂದಿನ ಹೊರಸಂಚಾರಿ ಜಾಗದಲ್ಲಿ ಒಮ್ಮೆ ಬೈಕು ನಿಲ್ಲಿಸಿ ಮುಂದುವರೆದಿದ್ದೆ.

ಇಲ್ಲಿಂದಲೇ ಇಂಫಾಲದಿಂದ ‘ಮೊರ್ರೆ’ವರೆಗೂ ವಾಹನಗಳು ಚಲಿಸುತ್ತವೆ. ಈ ಮೊರ್ರೆ (ಇದು ಭಾರತ – ಬರ್ಮಾ ಸರಹದ್ದಿನ ನಗರ. ಇಲ್ಲಿಂದಲೇ ಬರ್ಮಾ ಪ್ರವೇಶ)ವರೆಗೆ ವಿಂಗರ್‌ದಲ್ಲಿ ಹೋಗಬೇಕಾದರೆ ಬೆಳಿಗ್ಗೆ ಆರು ಗಂಟೆಗೆ ಹೊರಡಬೇಕು. ಇಲ್ಲವಾದರೆ ದಾರಿಯ ಮೇಲೆ ಕಾಕ್ಸಿಂಗ್ ಅಥವಾ ಲಿಲ್ಲೊಂಗ್ ವರೆಗೆ ಹೊರಡುವ ವಾಹನದಲ್ಲಿ ಕೂತು ಅಲ್ಲಿಳಿದು ಅಲ್ಲಿಂದ ಬೇರೆ ಟೆಂಪೊ ಹಿಡಿಯಬೇಕಾಗುತ್ತದೆ. ಇದರ ಮಧ್ಯೆ ಅತಿ ದೊಡ್ಡ ತಮಾಷೆಯೆಂದರೆ ಇಂಫಾಲದಿಂದ ಪಯಣ ಆರಂಭಿಸಿದ ಅರ್ಧ ಗಂಟೆಯೊಳಗಾಗಿ ನಾಲ್ಕು ಜಿಲ್ಲೆಗಳನ್ನು ದಾಟಿ ಬಿಟ್ಟಿರುತ್ತೇವೆ.

ಇಂಫಾಲ ಈಸ್ಟ್ ಮತ್ತು ವೆಸ್ಟ್ ಅಂತೂ ಎಲ್ಲಿ ತಿರುಗಿದರೂ ಕಾಲಿಗೆ ತೊಡರುತ್ತಿರುತ್ತದೆ. ಅದರ ಮಗ್ಗುಲಿಗೆ ಪುಟ್ಟದಾದ ಇನ್ನೊಂದು ಜಿಲ್ಲೆ ಥೌಬಾಲ್ ಇದೆ ಅದನ್ನು ಕ್ರಮಿಸಿ ಚಾಂಡೆಲ್‌ನಲ್ಲಿ ಪಯಣಿಸುತ್ತಲೇ ಗೊತ್ತಾಗೋ ಮೊದಲೇ ಮೂರು ಜಿಲ್ಲೆಗಳ ಸರಹದ್ದು ಪಾಸ್. ಸಾರಿಗೆಯಲ್ಲಿ ಚಲಿಸಿದರೆ ಒಂದು ದಿನಕ್ಕೆ ಒಮ್ಮುಖ ಪ್ರಯಾ
ಣ ಮಾತ್ರ ಸಾಧ್ಯವಾದೀತು. ‘ಥಂಗಾಲ್ ಬಜಾರ್’ ನಿಂದ ಹೊರಟರೆ ಶಿಂಗ್ಝಾ ಮು, ಲಿಲ್ಲೊಂಗ್(ಇಲ್ಲಿ ಪಂಗಾಲ್ಸ್‌ ಗಳ ದ್ದೆಡಿತ), ಚಾಜಿಂಗ್, ವೈಥುಚಿರು, ಥೌಬಾಲ್, ಖುಲ್ಲೇನ್, ಟುಂವಾಂಗ್, ಲಾಲ್ಚಿಂಗ್, ಚೇರಾ ಪುರ್, ಪಾಪೆಟ್, ಲೊಮ್ಸಿಪೇಟ್, ಲಿಂಗ್ಝಿಂಗ್ (ಇಲ್ಲಿ ಅಸ್ಸಾಂ ರೈಫಲ್ಸ್ ಪಡೆ ಬಹು ದೊಡ್ಡ ಕ್ಷೇತ್ರವೇ ಇದೆ. ಇಲ್ಲಿ ಬಿಟ್ಟರೆ ಮುಂದೆ ಮೊರ್ರೆವರೆಗೂ ಯಾವ ನೆರವು ಸಿಗುವುದಿಲ್ಲ. ಸಂಪೂರ್ಣ ಅರಣ್ಯದ ಘಾಟ್ ದಾರಿ ಇದು), ಥಂಗುಪಾವ್ಲ್, ಖುಡೆನ್ಂಗ್ ಥಾಭಿ.. ಹೀಗೆ ಒಂದಾ ಎರಡಾ ದಾರಿಯುದ್ದಕ್ಕೂ ಮಣಿಪುರದ ಆಡಳಿತದ ಲೆಕ್ಕದಲ್ಲಿ ಹೆಸರಿಸಬಹುದಾದ ನಗರ ಅಥವಾ ಪಟ್ಟಣಗಳು.

ಆದರೆ ಅದಕ್ಕೆ ಇರುವ ಯಾವ ಮಾನದಂಡ ಏನು ಹೇಗೆ ಎತ್ತ ನನಗರ್ಥವಾಗಿಲ್ಲ ಇಲ್ಲಿಯವರೆಗೂ. ಅಷ್ಟಕ್ಕೂ ಇದ್ದುದರಲ್ಲಿ ಇಂಫಾಲ ಮಾತ್ರ ಜನವಸತಿ ಮತ್ತು ನಿಭಿಡತೆಯ ಜೊತೆಗೆ ಕಾಸ್ಮೊಪಾಲಿಟಿನ್ ಸಂಸ್ಕೃತಿಯ ನಗರ ಎಂದರೂ ಪರವಾಗಿಲ್ಲ. ಭಾರತದ ಭಾಗವೇ ಅಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಬದಲಾಗಿರುವ
ನಗರಗಳ ಮಧ್ಯೆ ಇಲ್ಲಿ ಅಪ್ಪಟ ತುಳರು ಕಾಣಸಿಗುತ್ತಾರೆ. ಈ ಮೊರ್ರೆ ನಗರದಿಂದ ಒಂದು ಹೆದ್ದಾರಿ ನೇರವಾಗಿ ಇನ್ನೊಂದು ದಿಕ್ಕಿನ ಮಾವೋ ನಗರಕ್ಕೂ ಸಂಪರ್ಕ ಕಲ್ಪಿಸುತ್ತದೆ. ಈ ನಗರ ಸೇನಾಪತಿ ಜಿಲ್ಲೆಯಲ್ಲಿದ್ದು ಈ ಉದ್ದನೆಯ ದಾರಿ ಯುದ್ದಕ್ಕೂ ಎಲ್ಲೆಲ್ಲೊ ಸಿಕ್ಕುವ ಚಾಂಡೇಲ್ ಮೂಲ ನಿವಾಸಿಗಳಾದ ಖಾಸಿಗಳು ಮತ್ತು ನಾಗಾಗಳು ಅಪ್ಪಟ ಬುಡಕಟ್ಟು ವಾಸಿಗಳು.

ಇದ್ದುದರಲ್ಲಿ ಈಗ ಜಿಲ್ಲೆ ಅನಾನಸ್ಸು, ಪಪ್ಪಾಯಿ ಕೃಷಿ ಮೂಲಕ ಹೊರ ಜಗತ್ತಿನ ಸಂಪರ್ಕಕ್ಕೆ ಈಡಾಗುತ್ತಿದೆ. ಪರ್ವತ ಇಳಿಜಾರಿನಲ್ಲಿ ಕಾಡು ಸವರಿ ಮಾಡಿರುವ ಸಾಲು ಸಾಲು ಪಟ್ಟಿಯಂತಹ ಜಾಗದಲ್ಲಿ ಅನಾನಸ್ಸು, ಪಪ್ಪಾಯಿ ಬಾಳೆ ತೋಟಗಳ ನಿರ್ಮಾಣದ ವಸಾಹತುಗಳು ಸರ್ವೇ ಸಾಮಾನ್ಯ. ಇಂಫಾಲದಿಂದ ಎಲ್ಲಿಂದ ಎಲ್ಲಿಗೇ ಹೋದರೂ ಇಲ್ಲಿ ಪರ್ವತಗಳ ಸೆರಗಿನಲ್ಲೇ ರಸ್ತೆಗಳನ್ನು ನಿರ್ಮಿಸಲಾಗಿದ್ದು ಒಂದು ಪರ್ವತ ಶ್ರೇಣಿ ದಾಟುತ್ತಿದ್ದಂತೆ ಆ ನೆತ್ತಿಯ ಮೇಲೊಂದು ಊರು.

ಅದರಾಚೆಗೆ ಇಳಿದರೆ ಅಲ್ಲೊಂದು ಸಮುದಾಯ. ಮತ್ತೆ ಇನ್ನೊಂದು ಸಾಲು ಸಾಲು ಬೆಟ್ಟಗಳ ನಡುಮಧ್ಯೆ ಗೆರೆಯಂತಹ ರಸ್ತೆಯ ಮೇಲೆ ಚಲಿಸುತ್ತಲೇ ಇದ್ದರೆ ಧುತ್ತನೆ ಎದುರಾಗುವ ಅಸ್ಸಾಂ ರೈಫಲ್ಸ್ ಬ್ಯಾರಕ್ಕು ನಮ್ಮನ್ನು ತಡೆದು ನಿಲ್ಲಿಸುತ್ತವೆ ಪ್ರತಿ ಬಾರಿಯೂ ಸಂಪೂರ್ಣ ಚೆಕ್ಕಿಂಗ್ ಎನ್ನುವ ಸಮಯ ಹಿಂಡುವ ಪ್ರಾಸ್ಸೆಸ್ಸು ನಮ್ಮ ಸಹನೆ ಪರೀಕ್ಷಿಸುತ್ತದೆ. ಇಂಥಾ ಚೆಕ್ಕಿಂಗ್‌ಗೆ ಕಾರಣ, ಪಕ್ಕದ ಬರ್ಮಾ ಹಾಗು ಇತರ ಸರಹದ್ದುಗಳಿಂದ ಸ್ಥಳೀಯರು ಮುಗಿಬಿದ್ದು ಬಳಸುವ ಮಾದಕ ವಸ್ತುಗಳ ಸಾಗಾಟ ತಡೆಯಲು ಇದು ಅನಿವಾರ್ಯವಾಗಿದೆ.

ಸ್ಥಳೀಯ ಜನರು ಈ ಸಮಯವನ್ನೂ ಸೇರಿಸಿಕೊಂಡೆ ಇಲ್ಲಿಂದ ಪಯಣ ಆರಂಭಿಸುವುದರಿಂದ ಅಭ್ಯಾಸಕ್ಕೆ ಒಗ್ಗಿ ಹೋಗಿದ್ದಾರೆ. ಆದರೆ ಬರ್ಮಾ ಗಡಿಯಿಂದ ಒಳಬರುವ ಮತ್ತು ಗಡಿಯಲ್ಲಿ ತಪಾಸಣೆಗೊಳಪಡುವ ಮಾರ್ಗದೆಯಲ್ಲ ಅದನ್ನು ಯಾಮಾರಿಸುವುದು ಆಗದ ಮಾತು. ಹಾಗಾಗಿ ನಿರ್ದಿಷ್ಟ ಪರ್ವತದ ನೆತ್ತಿಯಲ್ಲಿ ಹಾಯ್ದು ಹೋಗುವ ಜಾಗದಲ್ಲಿ ಅಸ್ಸಾಂ ರೈಫಲ್ಸ್ ಪಡೆ ತನ್ನ ಪೋಸ್ಟ್ ವೊಂದನ್ನು ತೆರೆದಿದೆ. ಇಲ್ಲಿ ಅಕ್ಷರಶ: ಮನುಷ್ಯರ ಬಟ್ಟೆ ಬಿಚ್ಚಿ ಬೆತ್ತಲೆ ನಿಲ್ಲಿಸುವುದೊಂದು ಬಾಕಿ ಇದೆ ಹಾಗೆ ನಡೆಯುತ್ತದೆ ತಪಾಸಣೆ.

ನಾನು ನೋಡುತ್ತಿದ್ದಾಗಲೇ ಸಿಮೆಂಟು, ಖಾರಪುಡಿ ಇತ್ಯಾದಿ ಸೇರಿದಂತೆ ಕಾಯಿಪಲ್ಯೆ ಚೀಲಗಳು ರಸ್ತೆಯ ಮೇಲೆ ಬರಿದಾಗುತ್ತಿದ್ದವು. ಕೆಲವೊಮ್ಮೆ ಅಕ್ಕಿ ಮೂಟೆ ಗಳು ಕೂಡಾ ಹೊರಳಾಡುತ್ತಿದ್ದವು. ಯಾವ ಚೀಲಕ್ಕೆ ಸರಳು ನುಗ್ಗುತ್ತದೆ ಯಾವ ಚೀಲದ ಮೇಲೆ ನಾಯಿಗಳ ದಾಳಿಯಾಗುತ್ತದೆ ಹೇಳಲಾಗುವುದಿಲ್ಲ. ಕಾರಣ ಅತ್ತ ಕಡೆಯಲ್ಲಿರುವ ‘ತಾಮು’ ಎಂಬ ಬರ್ಮಾದ ನಗರ ಕೇವಲ ನಾಲ್ಕೇ ಕಿ.ಮೀ. ದೂರದಲ್ಲಿದೆ. ಅಲ್ಲಿ ಭಾರತೀಯ ಮಾರುಕಟ್ಟೆಗಿಂತ ಹಲವು ಪಟ್ಟು ಕಡಿಮೆ ದರದಲ್ಲಿ ಮಾಲು ಹೋಲ್‌ಸೇಲ್ ಬಿಕರಿಯಾಗುತ್ತದೆ. ಯಾವ ವ್ಯಾಪಾರಿ ತಾರದೇ ಬಿಟ್ಟಾನು..? ಲಕ್ಷಾಂತರ ರೂಪಾಯಿಗೆ ಸಾಮಾನು ಖರೀದಿಸಿ ಪೂರ್ತಿ ಮಾರುತಿ ವ್ಯಾನ್ ತುಂಬಾ ತರುತ್ತಾರೆ.

ಚಾಪೆ, ಪ್ಲಾಸ್ಟಿಕ್ ಕುರ್ಚಿಯಿಂದ ಕಾಂಡೊಮ್‌ವರೆಗೂ ಇಲ್ಲಿಂದಲೇ ಖರೀದಿ. ಸಾಮಾನುಗಳನ್ನು ವಿಂಗರ್ ವ್ಯಾನಿನಲ್ಲಿ ತರುವ ಪೂರೈಕೆದಾರರು ದಾರಿಯ ಮೇಲೆ ಮೊದಲೇ ನಿಗದಿಪಡಿಸಿದ ಚಿಕ್ಕ ಚಿಕ್ಕ ಸಗಟು ಮಾರುಕಟ್ಟೆಗೆ ಪೂರೈಸುವ ಕಾರಣ, ಸರಾಸರಿ ದಿನವೊಂದರ ವಹಿವಾಟು ಇಲ್ಲಿ ನಲ್ವತ್ತು ಲಕ್ಷಕ್ಕೂ ಹೆಚ್ಚಿದೆ. ದಾರಿಯ ಮೇಲೆ ಸಿಕ್ಕುವ ಪರ್ವತ ಪ್ರದೇಶದ ಘಾಟ್ ರಸ್ತೆಗಳಲ್ಲಿ ಎಲ್ಲಿ ಬೇಕಾದರೂ ನಿಂತು ನಮ್ಮ ಕುದುರೆ ಮುಖದ ಹೊರಳುಗಳಂತಹ ರಸ್ತೆಯಲ್ಲಿ ನಿಸರ್ಗವನ್ನು ಇಲ್ಲಿ ಸವಿಯಬಹುದು. ಆದರೆ ಮಳೆಗಾಲ ಮುಗಿದ ತಕ್ಷಣ ಮಾತ್ರ ಚೆನ್ನಾಗಿರುತ್ತದೆ ಎನಿಸಿತು ನನಗೆ. ಕಾರಣ ಅಂಥಾ ಹಸಿರನ್ನೇನೂ ಹೊಂದಿರದ ಇಲ್ಲಿನ ಪ್ರದೇಶದಲ್ಲಿ ಕುರುಚಲು ಕಾಡಿನ ಆವರಣ ಮಳೆಯ ಹೊಡೆತ ಮುಗಿಯುತ್ತಿದ್ದಂತೆ ಬೇಗ ಹಸಿರನ್ನು ಕಳಚಿ ನಿಲ್ಲುತ್ತದೆ. ಹಾಗಾಗಿ ನೈಜವಾಗಿ ಹಸಿರಿನ ಆಮೋದಕ್ಕೆ ಮಳೆಗಾಲದ ನಂತರ ಪ್ರವಾಸ ಸರಿಯಾದ ಸಮಯ ಇಲ್ಲಿ.

ಹೀಗೆ ಮೊರ್ರೆ ಸೇರಿದಂತೆ ಬರ್ಮಾದ ಸರಹದ್ದು ಮುಟ್ಟಿಂದಿರುಗುವಾಗ ಹಲವು ಬುಡಕಟ್ಟು ಮತ್ತು ಸಮುದಾಯದ ಭಿನ್ನತೆ ಒಮ್ಮೆ ನೋಡಲೇಬೇಕಾದ ಸ್ಥಳೀಯ
ಬಿನ್ನತೆ ಅದು. ಸಂಜೆಯ ವೇಳೆಗಂತೂ ಬದಲಾಗಿ ಬಿಡುವ ದಿರಿಸು ಮತ್ತು ಆಯಾ ಊರ ವ್ಯಾಪ್ತಿಗೆ ಒಳಪಡುವ ಸ್ಥಳೀಯ ಕಾನೂನುಗಳ ಕಾರಣದಿಂದಾಗಿ ಊರುಗಳ ಚಹರೆಯೇ ಬದಲಾಗಿ ಬಿಡುತ್ತದೆ. ಹಾಗಾಗಿ ಥೌಬಾಲ್ ಮತ್ತು ಚಾಂಡೇಲ್ ಜಿಲ್ಲಾ ವ್ಯಾಪ್ತಿಯಲ್ಲಿ ಸಾಲು ಸಾಲು ಊರುಗಳಿದ್ದರೂ ಹೀಗೆ ಪ್ರವಾಸಿಗರು ಸಂದರ್ಶಿಲೆ ಬೇಕೆನ್ನುವ ಮೊರ್ರೆ ಎನ್ನುವ ಊರಿನ ಪ್ರಸಿದ್ಧಿ ಬಿಟ್ಟರೆ ಬೇರೆ ಸ್ಥಳಗಳ ಪ್ರವೇಶವೇ ಕಷ್ಟ ಕಷ್ಟ.

ಎಲ್ಲೆಂದರಲ್ಲಿ ನಿಂತು ಫೋಟೊ ಕ್ಲಿಕ್ಕಿಸಲು ಬೆಟ್ಟ ಗುಡ್ಡಗಳ ಬೆಂಬಲ ಹೊರತು ಪಡಿಸಿದರೆ ಬೋಳು ಬೆಟ್ಟಗಳನ್ನಾವರಿಸಿರೋ ಅನಾನಸ್ಸಿನ, ಬಾಳೆಯ ತೋಟದ ಚೆಂದ ಒಂದಷ್ಟು ನಮ್ಮನ್ನು ಆವರಿಸುತ್ತದೆ. ಆದರೆ ಚಾಂಡೆಲ್‌ನಲ್ಲಿ ಕೇವಲ ಹೆದ್ದಾರಿ ಹಾಯ್ದು ಹೋಗಿದ್ದು ಬಿಟ್ಟರೆ ಹೆಚ್ಚಿನಾಂಶ ಇಂಫಾಲದಿಂದ ಮೊದಲಿಗೆ ಲಭ್ಯವಾಗೋ ಥೌಬಾಲ್ ಜಿಲ್ಲೆ ಅಪ್ಪಟ ಸಮುದಾಯಗಳ ಡಿತದ ರಾಜಧಾನಿ. ಚಿಕ್ಕದಾದರೂ ಸಾಕಷ್ಟು ವೆವಿಧ್ಯಮಯಗಳಿಗೆ ಈಡಾದ ನಾಡು ಕೂಡಾ. ಕಾರಣ
ಇತಿಹಾಸದಿಂದ ಹಿಡಿದು ಆಧುನಿಕ ಜಗತ್ತಿನ ಆಗುಹೋಗುಗಳಿಗೆ ತೆರೆದುಕೊಳ್ಳುದ, ಮೊರ್ರೆಯ ರಸ್ತೆಯನ್ನು ನಿರಂತರವಾಗಿ ರಾಸ್ತಾ ರೋಕೊಗಳಿಗೆ ಈಡು ಮಾಡುವ ಮೂಲಕ ಪ್ರಮುಖ ಕುತ್ತಿಗೆಯ ಜಾಗದಲ್ಲಿ ನಿಲ್ಲುತ್ತದೆ.

ನಾನು ಮೊರ್ರೆ ಸಂದರ್ಶಿಸಲು ಹೊರಟು ನಿಂತ ದಿನ ಕೂಡಾ ಇದ್ದಕ್ಕಿದ್ದಂತೆ ಈ ಹೆದ್ದಾರಿ(?)ಯಲ್ಲಿ ಮರದ ಬೊಡ್ಡೆಗಳನ್ನಿಟ್ಟು ಅರ್ಧ ರಸ್ತೆ ಪೂರ್ತಿ ಆವರಿಸಿ ಕೂತ ಸಮುದಾಯದ ಹೆಂಗಸರ ರಾಸ್ತಾರೋಕೊನಿಂದಾಗಿ ಪಕ್ಕದ ಹಳ್ಳಿಯನ್ನು ಹಾಯ್ದು ಬರುವಂತಾಯಿತು. ಅದಕ್ಕಾಗಿ ‘ಖೊಂಗ್ಜೊಂ’ ಹಳ್ಳಿಯ ಹೆಬ್ಬಾಗಿಲಲ್ಲೇ ಹಾಯ್ದು ಹೆದ್ದಾರಿಯ ಮೇಲೆ ಬಲಕ್ಕೆ ತಿರುಗಿ ಹಲವು ಹಳ್ಳಿಗಳ ಗದ್ದೆಯಂತಹ ರಸ್ತೆಯನ್ನು ಹಾರುತ್ತಾ ಸಾಗಿ ಕೊನೆಗೂ ಪ್ರಮುಖ ನಗರವಾದ ‘ಕಾಕ್ಸಿಂಗ್’ ತಲುಪಿದ್ದೆ. ಅದ್ಯಾಕೆ
ಇವುಗಳಿಗೆ ನಗರ ಎನ್ನುತ್ತಾರೆ ಕೊನೆಗೂ ಅರ್ಥವಾಗಲಿಲ್ಲ. ಇವೆಲ್ಲ ಒಮ್ಮೆ ಹೆದ್ದಾರಿ ಎನ್ನುವ ರಸ್ತೆಗಳಿಗೆ ತೆರೆದುಕೊಂಡು ಸುಮ್ಮನೆ ಅಲೆಮಾರಿ ತರಹ ತಿರುಗಲು ಬಿದ್ದರೆ ಮಾತ್ರ ಅನುಭವಕ್ಕೆ ಸಿಕ್ಕುವ ಚಿತ್ರಣ.