Tuesday, 29th September 2020

ಐತಿಹಾಸಿಕ ಹಲಸಿ

ಶಾರದಾಂಬ ವಿ ಕೆ

ಸುಮಾರು 1500 ವರ್ಷಗಳ ಹಿಂದೆ ನಿರ್ಮಾಣಗೊಂಡ ಹಲಸಿ ಪಟ್ಟಣ ಮತ್ತು ಅಲ್ಲಿನ ವಾಸ್ತು ವಿನ್ಯಾಸದ ಕಟ್ಟಡ, ದೇಗುಲಗಳು ನಮ್ಮ ಪರಂಪರೆಯನ್ನು ನೆನಪಿಸುವ, ಅಭಿಮಾನ ಹುಟ್ಟಿಸುವ ನಿರ್ಮಿತಿಗಳು. ಕದಂಬ ರಾಜರ ರಾಜಧಾನಿಯಾಗಿದ್ದ ಹಲಸಿಗೆ ಭೇಟಿ ಎಂದರೆ ಇತಿಹಾಸದಲ್ಲಿ ಒಂದು ಸುತ್ತು ಹಾಕಿ ಬಂದ ಅನುಭವ.

ಕರ್ನಾಟಕದಲ್ಲಿ ಮೊಟ್ಟ ಮೊದಲ ಕನ್ನಡ ಸಾಮ್ರಾಜ್ಯವನ್ನು ಕಟ್ಟಿದವರು ಬನವಾಸಿಯ ಕದಂಬರು (ಕ್ರಿಸ್ತ ಶಕ ನಾಲ್ಕನೆಯ ಶತಮಾನ). ಸುಮಾರು 250 ವರ್ಷಗಳ ಕಾಲ ಕರ್ನಾಟಕವನ್ನು ಮತ್ತು ಗೋವಾದ ಭಾಗ ಗಳನ್ನು ಸಹ ಆಳಿ, ನಮ್ಮ ನಾಡಿನ ಸಂಸ್ಕೃತಿಗೆ, ಇಲ್ಲಿನ ವಾಸ್ತುಶೈಲಿಗೆ ತಮ್ಮದೇ ಆದ ಕೊಡುಗೆಯನ್ನು ಕದಂಬರು ನೀಡಿದ್ದಾರೆ.

ಕದಂಬರು ಕರ್ನಾಟಕದಲ್ಲಿ ಹಲವು ಕೋಟೆ, ಅರಮನೆ ಮತ್ತು ದೇವಾಲಯಗಳನ್ನು ಕಟ್ಟಿಸಿ, ವಾಸ್ತು ಶೈಲಿಗೆ ನಾಂದಿ ಹಾಡಿದರು. ಅವರ ಮುಖ್ಯ ಪಟ್ಟಣಗಳು ಬನವಾಸಿ ಮತ್ತು ಹಲಸಿ. ಕದಂಬರ ಎರಡನೆಯ ರಾಜಧಾನಿ ಯಾಗಿ ಹೆಸರು ಗಳಿಸಿದ ಹಲಸಿಯು, ಅಪರೂಪದ ಶಿಲ್ಪಕಲೆಯ ಬೀಡು. ಅಂದು ರಾಜಧಾನಿ ಎನಿಸಿದ್ದ ಈ ಪಟ್ಟಣವು ಇಂದು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಪುಟ್ಟ ಊರು.

ಇಲ್ಲಿನ ಹಲವು ವಾಸ್ತುರತ್ನಗಳನ್ನು ಪುರಾತತ್ವ ಇಲಾಖೆ ಸಂರಕ್ಷಿಸಿದೆ. ಇತ್ತೀಚಿನ ವರ್ಷಗಳಲ್ಲಿ ಸಹಾ ಉತ್ಖನನ
ದಲ್ಲಿ ಹಲವು ಸ್ಮಾರಕಗಳು ದೊರೆತಿದ್ದು ರಕ್ಷಿಸಿ ಇಡಲಾಗಿದೆ. ನಂತರದ ಕದಂಬರು ಹನ್ನೆರಡನೆಯ
ಶತಮಾನದಲ್ಲಿ ಹಲಸಿಯ ಹಲವು ನಿರ್ಮಾಣಗಳನ್ನು ಅಭಿವೃದ್ಧಿಪಡಿಸಿದ್ದು ಇತಿಹಾಸದಲ್ಲಿ ದಾಖಲಾಗಿದೆ.

? ಸೂಕ್ಷ್ಮ ಕೆತ್ತನೆಯ ವಿಗ್ರಹ

ಕದಂಬರ ಆರಾಧ್ಯ ದೈವ ಭೂವರಾಹ ನರಸಿಂಹ ದೇವಾಲಯ ಹಲಸಿಯ ಪ್ರಮುಖ ಆಕರ್ಷಣೆ. ಮಂದಿರದ ಆವರಣದಲ್ಲಿ ಸೂಕ್ಷ್ಮ ಕೆತ್ತನೆಯ ಗಣಪತಿ, ಆದಿ ಶಕ್ತಿ, ವೀರ ಭದ್ರೇಶ್ವರ ವಿಠ್ಠಲರು ಕುಮಾಯಿ ಮಂದಿರಗಳಿವೆ. ಕಲಸಿಯಲ್ಲಿರುವ ದೇಗುಲಗಳಲ್ಲಿ, ಮುಖ್ಯವಾದುದು ಲಕ್ಷ್ಮೀ ನರಸಿಂಹ ದೇವಾಲಯ. ಈ ದೇವಾಲಯವನ್ನು ಕದಂಬ ಅರಸರಾದ ಶಿವಚಿತ್ತ, ವಿಷ್ಣುಚಿತ್ತ ಸಹೋದರರು ಕಟ್ಟಿಸಿದರು. ಇಡೀ ದೇವಾಲಯವನ್ನು ಶಿಲೆ ಯಿಂದ ನಿರ್ಮಿಸಲಾಗಿದೆ. ಈ ಮಂದಿರಕ್ಕೆ ಮುಂಭಾಗದಲ್ಲಿ ದ್ವಾರವಿಲ್ಲ. ಪೂರ್ವ ಪಶ್ಚಿಮಾಭಿಮುಖವಾಗಿ ಎರಡು ಗರ್ಭಗುಡಿ. ಹಾಗೂ ಗರ್ಭಗುಡಿಯ ಎಡ -ಬಲ ಭಾಗದಲ್ಲಿ ಎರಡು ದ್ವಾರಗಳಿವೆ. ಪೂರ್ವಾಭಿಮುಖ ವಾಗಿರುವ ಗರ್ಭಗುಡಿಯಲ್ಲಿ 5 ಅಡಿ ಎತ್ತರದ ಕುಳಿತ ಭಂಗಿಯ ಏಕಶಿಲೆಯ ನಾರಾಯಣ ಮೂರ್ತಿ ಪ್ರತಿ ಷ್ಠಾಪಿಸಲಾಗಿದೆ. ಈ ಮೂರ್ತಿಯ ಎಡಬದಿಯಲ್ಲಿ ಮೂರು ಅಡಿ ಎತ್ತರದ ಸ್ವಯಂಭೂ ಬಾಲನರಸಿಂಹ, ಬಲಭಾಗದಲ್ಲಿ ಅಮೃತ ಶಿಲೆಯ ಆಂಜನೇಯ ಮೂರ್ತಿ ಇದೆ. ಸಾಮಾನ್ಯವಾಗಿ ಆಂಜನೇಯ ಮೂರ್ತಿಯ ಮುಖ ಎಡಗಡೆಗೆ ತಿರುಗಿರುತ್ತದೆ. ಇಲ್ಲಿ ಮುಖ ನೇರವಾಗಿ ಇರುವುದು ವಿಶೇಷ.

? ನೀರಿನ ಸೌಲಭ್ಯ

ದೇವಾಲಯದ ಆವರಣದಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ನಿರ್ಮಿಸಿರುವ ಕೊಳವೆಯ ಪದ್ಧತಿ ಅಂದಿನ ವಾಸ್ತು ಶೈಲಿಯ ವಿಶೇಷ ಎನಿಸಿದ್ದು, ಇಂದಿಗೂ ಕೆಲಸ ಮಾಡುತ್ತಿದೆ. ಹಲಸಿ ಗ್ರಾಮದಿಂದ 3 .ಕಿ.ಮೀ. ದೂರದ ಬೆಟ್ಟದ ಮೇಲೆ ಪುರಾತನ ರಾಮೇಶ್ವರ ದೇವಾಲಯವಿದೆ. ಬೆಟ್ಟದ ತುದಿಯಲ್ಲಿರುವ ಈ ಸ್ಥಳದಲ್ಲಿ ನೀರಿನ ಕೊರತೆ ಇಲ್ಲ. ಅಲ್ಲಿಂದ ಪ್ರಕೃತಿಯ ಸುಂದರ ನೋಟ ಕಣ್ಣಿಗೆ ಹಬ್ಬ. ಕದಂಬ ಶೈಲಿಯ ಈ ಪುರಾತನ ವಾಸ್ತುವನ್ನು ನೊಡುವ ಅನುಭವದ ಜತೆಯಲ್ಲೇ, ಇಲ್ಲಿನ ಬೆಟ್ಟದ ಮೇಲಿನ ನೋಟವು ಈ ಸ್ಥಳದ ಭೇಟಿ ಯನ್ನು ಸ್ಮರಣಾರ್ಹ ಪ್ರವಾಸವನ್ನಾಗಿ ರೂಪಿಸುವಲ್ಲಿ ನೆರವಾಗಿದೆ. ನಮ್ಮ ರಾಜ್ಯದ ಮೊದಲ ಕನ್ನಡ ರಾಜರು ನಿಮಿಸಿದ ಹಲಸಿಯ ವಾಸ್ತುವಿಶೇಷಗಳನ್ನು ನೋಡುವುದು ಒಂದು ಅಪರೂಪದ ಅನುಭವ. ಇಲ್ಲಿನ ಭೇಟಿ ಯು ನಮ್ಮ ಪರಂಪರೆಯನ್ನು ನೆನಪಿಸುವುದಂತೂ ನಿಜ.

ಅಪರೂಪದ ಭೂ ವರಾಹ
ಪಶ್ಚಿಮಾಭಿಮುಖವಾಗಿ ಪ್ರತಿಷ್ಠಾಪಿಸಲಾಗಿರುವ 5 ಅಡಿ ಎತ್ತರದ ಭೂವರಾಹಮೂರ್ತಿ ಮನಮೋಹಕ.
ಭೂದೇವಿ ಯನ್ನು ರಕ್ಷಿಸಲು ವರಾಹ ಅವತಾರದ ವಿಷ್ಣು ಭೂದೇವಿ ಯನ್ನು ಹೆಗಲ ಮೇಲೆ ಹೊತ್ತು, ಒಂದು ಕಾಲನ್ನು ಕೂರ್ಮದ ಮೇಲೆ ಮತ್ತೊೊಂದನ್ನು ಆದಿಶೇಷನ ಮೇಲೆ ಇಟ್ಟು ನಿಂತಿರುವ ವರಾಹ ಮೂರ್ತಿ ಮನಸೆಳೆಯುತ್ತದೆ. ಕಾಲಿನ ಬೆರಳುಗಳು ಸ್ವಲ್ಪ ಮೇಲೆದ್ದು, ಉಗುರೂ ಸಹಾ ಸ್ಪಷ್ಟವಾಗಿ ಗೋಚರಿಸುವಷ್ಟು ನವಿರಾದ ಶಿಲಾ ಕೆತ್ತನೆ ಈ ವಿಗ್ರಹದ ವಿಶೇಷ. ಈ ಮೂರ್ತಿಯ ಎಡ ದಲ್ಲಿ ಸೂರ್ಯ ನಾರಾಯಣ, ಬಲದಲ್ಲಿ ಮಹಾಲಕ್ಷ್ಮಿ ಮೂರ್ತಿಗಳು ಸಾಲಿಗ್ರಾಮ ಶಿಲೆಯಲ್ಲಿ ನಿರ್ಮಾಣವಾಗಿದೆ.

ಬೆಳಗಾವಿಯಿಂದ 41 ಕಿ.ಮೀ., ಖಾನಾಪುರದಿಂದ 14 ಕಿ.ಮಿ. ಮತ್ತು ಕಿತ್ತೂರಿನಿಂದ 25 ಕಿ.ಮೀ. ದೂರದಲ್ಲಿದೆ. ಉತ್ತಮ ರಸ್ತೆ ಸೌಕರ್ಯವಿದೆ.

Leave a Reply

Your email address will not be published. Required fields are marked *