Wednesday, 1st February 2023

ತಾತನ ಮನೆಯೆಂಬ ಐತಿಹಾಸಿಕ ತಾಣ…

ಅಲೆಮಾರಿಯ ಡೈರಿ

ಸಂತೋಷಕುಮಾರ ಮೆಹೆಂದಳೆ

mehandale100@gmail.com

ಅಲ್ಲಿ ಪ್ರಮುಖವಾಗಿ ನಿಂತು ಆಗಿನ ಜನಜೀವನ ಜೊತೆಗೆ ಇದ್ದಿರಬಹುದಾದ ಸಾಮಾಜಿಕ ಪ್ರಾಮುಖ್ಯತೆಯನ್ನು ಅರಿಯಲಾದರೂ ಆ ಚಿತ್ರ ಸಂಗ್ರಹ ವನ್ನೊಮ್ಮೆ ನೀವು ನೋಡಲೇಬೇಕು. ಕಾರಣ ಪ್ರತಿಯೊಂದರಲ್ಲೂ ಗಾಂಽ ನಿಂತ ಕೂತ ಮತ್ತು ದಿರಿಸಿನಲ್ಲಿ ತೋರಿಸುವ ಸರಳತೆ ಇದೆಯಲ್ಲ.

ಅದು ತೀರ ಆಕಸ್ಮಿಕವಾಗಿ ಆವತ್ತು ಗಾಡಿ ತಿರುಗಿಸುವ ನಿರ್ಧಾರಕ್ಕೆ ಬಂದಿದ್ದು. ಕಾರಣ ಮುಳುಗಿ ಹೋದ ಶ್ರೀಕೃಷ್ಣನ ದ್ವಾರಕೆಯ ಸಾಮ್ರಾಜ್ಯ ನೋಡಲು ಜೀವ ಕೈಲಿ ಹಿಡಿದುಕೊಂಡು ಬೇಟ್ ದ್ವಾರಕ ಸುತ್ತು ಹಾಕಿ ಬದುಕಿ ವಾಪಸ್ಸು ಬಂದಾಗ, ಮುಳುಗಿದ ಸಾಮ್ರಾಜ್ಯದಲ್ಲಿ ಯಾವುದು ಏನೆಂಬುವುದು ಆವತ್ತಿನ ಮಟ್ಟಿಗೆ ಅರಿವಿಗೆ ದಕ್ಕಿರಲಿಲ್ಲ.

ಇಂದು ಅಪಾಯಕಾರಿ ಅನುಭವವಿದೆ ಅದನ್ನು ಮತ್ತಿನ್ಯಾವಾಗಲಾದರೂ ಬರೆದೇನು. ಕಾರಣ ನೂರು ನೂರೈವತ್ತರ ಕೆಪಾಸಿಟಿಯ ದೊಡ್ಡ ಬೋಟಿನಲ್ಲಿ ಹತ್ತಿರತ್ತಿರ ಎಂಟನೂರು ಜನರನ್ನು ಹೇರಿಕೊಂಡು ಅಪಾಯಕಾರಿ ಸಮುದ್ರ ಪ್ರಯಾಣ ಮಾಡುವುದಿದೆಯಲ್ಲ ಇದು ಯಾವತ್ತಿಗಾದರೂ ಮಾರಣ ಹೋಮಕ್ಕೆ ಕಾಯ್ದಿರುವಂಥದ್ದೆ.

ಹಾಗೆ ಅದರಿಂದ ಹೊರಬಿದ್ದು ಇನ್ನೇನು ಹಿಂದಿರುಗಬೇಕು ಎನ್ನುವಾಗ, ಹೇಗಿದ್ದರೂ ಇತ್ತಲಿಂದ ಬಂದಾಗಿದೆ, ಮತ್ತದೆ ರಾಜಕೋಟ್, ಉಪ್ಪರ್‌ಕೋಟ್ ಕಡೆಗಿನ ದಾರಿ ಹಿಡಿಯುವ ಬದಲಿಗೆ ಈಗ ದಿಕ್ಕು ಬದಲಿಸಿ ವಾಪಸ್ಸು ಹೋದರೆ ಅದೊಂದು ಸುತ್ತು ಕೂಡಾ ಮುಗಿಸಿದಂತಾಗುತ್ತೆ ಎಂದು, ಕೈಲಿದ್ದ ಝೈಲೋ ತಿರುಗಿಸುವಾಗ, ಸಮುದ್ರ ಕುತ್ತಿಗೆಯ ರಾ.ಹೆ. ೮ಬಿ ಬಿಟ್ಟು ರಾಜ್ಯ ಮುಖ್ಯ ರಸ್ತೆ ೯೪ರ ದಿಕ್ಕು ಹಿಡಿದಿದ್ದೆ. ಒಂದೆಡೆ ರಣಗಾತ್ರ ಗಾಳಿಮರಗಳು. ಅದಕ್ಕೆ ಸ್ಪರ್ಧೆಗೆ ಬಿದ್ದಂತೆ ನಿಂತ ಗಾಳಿ ಗೋಪುರಗಳ ಪವನ ವಿದ್ಯುತ್ ಯಂತ್ರಗಳ ಕೇಸರಿ ಬಿಳಿ ರೆಕ್ಕೆಗಳು. ಪ್ರತಿ ಕರಾವಳಿ ತೀರದ ಊರಿನಲ್ಲೂ ಇಲ್ಲಿ ಲೆಕ್ಕ ತಪ್ಪಿ ಚಹದ ಅಂಗಡಿಗಳಿವೆ. ಈ ಜಂಕ್ಷನ್‌ನಲ್ಲಿ ಮುಕ್ಕಾಲು ಕಪ್ಪು ಚಹ ಕುಡಿಯಲೇ ಬೇಕು ನೀವು.

ಹಾಗೆ ದ್ವಾರಕೆಯ ಪಾದದಿಂದ ಹೊರಟು ಸುಮಾರು ನೂರೈವತ್ತು ಕಿ.ಮೀ. ಡ್ರೈವ್ ನಿಲ್ಲಿಸಿದ್ದು ಅರ್ಧ ದೇಶಕ್ಕೆ ಈಗಲೂ ಪಿತಾಮಹ, ಇನ್ನರ್ಧ ದೇಶಕ್ಕೆ ಐತಿಹಾಸಿಕ ಪ್ರಮಾದ ಎಸಗಿದವ ಎಂದು ಚರ್ಚೆಗೆ ಎಳೆಸಲ್ಪಡುವ ಮಹಾತ್ಮ ಎಂದು ಕರೆಸಿಕೊಂಡ ಗಾಂಧಿಯ ಊರಿನ ಹೆಬ್ಬಾಗಿಲಲ್ಲಿದ್ದೆ. ಜಗತ್ತಿನ ನಕಾಶೆಯಲ್ಲಿ ಆಗಿನ ಕಾಲಕ್ಕೆ ಸೂಜಿ ಮೊನೆಗೂ ಲಾಯಕ್ಕಿಲ್ಲದ ಊರಿಗೆ ಹೆಸರು ಬಂದಿದ್ದೇ ಈ ತಾತ ಅಲ್ಲಿ ಹುಟ್ಟಿದ್ದಕ್ಕೆ. ಊರಿನ ಸರಾ- ಅಂಗಡಿಗಳ ಒತ್ತುವರಿ ಮತ್ತು ಸುತ್ತುವರೆಯುವ ಮಧ್ಯದಲ್ಲೂ ಕೀರ್ತಿ ಮಂದಿರ ಸಹಜ ಪ್ರವಾಸಿ ತಾಣವಾಗಿ ಕಿಷ್ಕಿಂದೆಯಲ್ಲಿ ಗಟ್ಟಿಯಾಗಿ ನಿಂತಿದೆ.

ಏನೇ ಇಲ್ಲ ಎಂದರೂ ಪೋರ್‌ಬಂದರ್ ಎಂಬ ಅತ್ಯಂತ ಟ್ರೆಡಿಷನ್ ಶೈಲಿಯ, ಮಿಡೀಯಂ ಸೈಜಿನ ನಗರಿಗೆ ಕಾಲಿಟ್ಟರೆ ಈ ತಾತನ ಮನೆಯ ಆಕರ್ಷಣೆ
ತಪ್ಪಿಸಿಕೊಳ್ಳಲಾರಿರಿ. ಸುತ್ತಲಿನ ಎತ್ತರದ ಕಟ್ಟಡಗಳ ಮಧ್ಯೆಯೂ ತನ್ನ ಐಡೆಂಟಿಟಿ ಉಳಿಸಿಕೊಂಡ ಗತ್ತಿನಲ್ಲಿ ಗಾಂಧಿಯ ಈ ಆಕರ್ಷಣೆ ಪ್ರವಾಸಿ ಮಾತ್ರ ವಲ್ಲ ಸ್ಥಳೀಯರಿಗೆ ಅನಿವಾರ್ಯ ಕೂಡಾ. ಎರಡುಮೂರು ಮಹಡಿಯ ಹಳೆಯ ಕಾಲದ ಮನೆಯನ್ನು ಜತನದಿಂದ ಕಾಯ್ದುಕೊಳ್ಳಲಾಗಿದ್ದು, ತಲೆಗೆ ತಾಗುವ ಗಿಡ್ಡ ಬಾಗಿಲುಗಳು, ಗೋಡೆಯಲ್ಲ ಕೂರಿಸಿದ ಕಮಾನಿನ ಕಪಾಟುಗಳು, ಇದ್ದಬದ್ದ ಎಲ್ಲ ವಸ್ತು ಮತ್ತು ಚಿತ್ರಗಳನ್ನು ಸಂಗ್ರಹಿಸಿ ಮಾಡಿರಿಸಿರುವ ಗ್ಯಾಲರಿ, ಶತಮಾನ ಹಿಂದಿನ ಚಿಲುಕ ಮತ್ತು ಕಟ್ಟಿಗೆಯ ಅಟ್ಟಣಿಗೆ ಅಗಲ ಪಾವಟಿಗೆಗಳು ಹತ್ತುವಾಗ ಇಳಿಯುವಾಗ ಮಾಡು ಜಿರಕ್ ಜಿರ್ಕ್ ಎನ್ನುವ
ಶಬ್ದ, ಹಿಂದೆ ಈ ಮೆಟಿಲ್ಲುಗಳ ಮೇಲೆ ಆ ಮಹಾತ್ಮ ಹತ್ತಿಳಿದು ಮಾಡುವಾಗಲೂ ಹೀಗೆ ಜಿರುಕುತ್ತಿದ್ದವೇ ಎನ್ನುವ ಭಾವಗಳ ನವಿರುತನ, ಗಾಳಿಮಚ್ಚಿನಲ್ಲಿ ಕೂತಿರಬಹುದಾದ ಭಂಗಿಯಲ್ಲಿ ಅಡಗಿರುವ ಅವನ ಮೋದ ಎಲ್ಲ ನಿಧಾನಕ್ಕೆ ಅಲ್ಲಲ್ಲಿ ಕೈಗೆ ಹತ್ತುವ ವಸ್ತುಗಳನ್ನು ತಡುವುತ್ತಾ ಅನುಭವಿಸುವ ಅನನ್ಯತೆಗಾದರೂ ಗಾಂಧಿ ನಿಮಗೆ ಬೇಕಿದ್ದರೂ ಬೇಡದಿದ್ದರೂ ಇಲ್ಲಿಗೊಮ್ಮೆ ಭೇಟಿ ನೀಡಬೇಕು.

ಕಾರಣ ಇದೇ ಮನೆಯಲ್ಲಿ ಮೋಹನದಾಸ ಕರಮಚಂದ ಗಾಂಧಿ ಹುಟ್ಟಿದ್ದು, ನಡುಮನೆಯ ಜಾಗದಲ್ಲಿ ಮೊದಲ ಉಸಿರೆಳೆದುಕೊಂಡಿದ್ದು, ರಚ್ಚೆ ಹಿಡಿದಿರಬಹುದಾದ ಅನಂತ ರಂಪಗಳನ್ನು ಮೇಲಿನಿಂದ ಕೆಳಗಿನವರೆಗೂ ಕಿರ್ ಕಿರ್ ಎನ್ನುವ ಮೆಟ್ಟಿಲ ಮೂಲಕ ಹತ್ತಿಳಿಯುವ ಅನುಭೂತಿಯನ್ನು
ಪಡೆಯುವುದಕ್ಕಾದರೂ ನೀವು ಇದನ್ನು ಒಮ್ಮೆ ನೋಡಬೇಕು. ಹುಟ್ಟಿದ ಕ್ಷಣದಲ್ಲಿ ನೆಲ ಸ್ಪರ್ಶಿದ ಮೊದಲ ಸ್ಥಳವನ್ನು ಕಾದಿರಿಸಲಾಗಿದ್ದು, ದಿನಕ್ಕೊಮ್ಮೆ ಹೂವಿರಿಸಿ ತಾಜಾತನ ಕಾಯ್ದುಕೊಂಡಿದ್ದಿರೆ, ಅಕ್ಕಪಕ್ಕದ ಸುಣ್ಣದ ಗೋಡೆಗಳು ಈಗಲೂ ಜಾಲರಿ ಸಮೇತ ಕಿಂಡಿ ಕಿಟಕಿಗಳ ಸಮೇತ ಹಿಂದಿನ ಶತಮಾ ನಕ್ಕೆ ಒಯ್ಯುತ್ತವೆ.

ಎಲ್ಲಕ್ಕಿಂತ ಮಿಗಿಲು ತಾತನ ಮನೆಯ ನಿಶಬ್ಧತೆಗೆ ನಿಮ್ಮನ್ನು ದೂಡುವ ಅವಿಸ್ಮರಣೀಯತೆ ತುಂಬ ವಿಭಿನ್ನ. ಹೊರಗಿನಿಂದ ಕವಕವ ಮಾಡುತ್ತಾ ಪ್ರವೇಶಿಸುವ ನಾವು ಇದ್ದಕ್ಕಿದ್ದಂತೆ ಮೌನವಾಗಿ ಬಿಡುತ್ತೇವಲ್ಲ ಅದರ ಮಜವೇ ಬೇರೆ ಬಿಡಿ. ಗಾಂಧಿ ದೇಶದ ಸ್ವಾತಂತ್ರಕ್ಕಾಗಿ ತಮ್ಮ ನಿರ್ಧಾರಗಳಿಂದ ಅಹಿಂಸೆ ಮತ್ತು ಶಾಂತಿ ಎಂಬೆರಡು ಆಯುಧವನ್ನೇನೊ ಪ್ರಯೋಗಿಸಿದರು. ಆದರೆ ಭವಿಷ್ಯತ್ತಿನ ಭಾರತದ ಹೆಗಲ ಮೇಲೆ ವಾಸಿಯಾಗದ ಹುಣ್ಣಿನಂತೆ ಮಾಯದ ಗಾಯವನ್ನೂ ಮಾಡಿದರು ಎಂದು ನಾನೂ ಸಹಿತ ತೆರಪಿಲ್ಲದೆ ಹಲವು ಬಾರಿ ಟೀಕಿಸಿದ್ದಿದೆ. ಅದು ನನ್ನ ನಂಬಿಕೆ ಕೂಡಾ.

ಆದಾಗ್ಯೂ ಅದು ನನ್ನ ಅಭಿಪ್ರಾಯ ಮತ್ತು ಸೈದ್ಧಾಂತಿಕ ಯೋಚನೆಗಳ ಹೊರತಾಗಿಯೂ ಜಗತ್ತಿನ ಮಹಾ ನಾಯಕರೆಲ್ಲ ತುಂಡು ಪಂಚೆ -ಕೀರನೆದುರಿಗೆ
ಮಂಡಿಯೂರಿದ್ದರಲ್ಲ, ಕೇವಲ ಅರೆಬಟ್ಟೆಯ ಸಂತನಾಗಿ ಬದುಕುತ್ತಲೇ ಜಗತ್ತಿನ ಹಲವು ದಿಶೆಗಳಿಗೆ ತೋರು ಬೆರಳು ತೋರಿದ ಆಗಿನ ಕಾಲಕ್ಕೆ ತಕ್ಕಂತೆ ಅಗತ್ಯದ ಅವನದೇ ರಾಜಕೀಯ ಮಾಡಿದ ಇತಿಹಾಸ ಇದೆಯಲ್ಲ, ಇದೆಲ್ಲ ನಮಗೆ ಈಗ ಕೆಲವೊಮ್ಮೆ ಗಾಂಧಿ ತಪ್ಪು ಮಾಡಿದರು ಎಂದೆಲ್ಲ ಅನ್ನಿಸು ವಾಗಲೇ ಈಗಿನವರಂತೆ, ಆಗಿನ ನಾಯಕರಂತೆ ಅವರೂ ಅವರವರ ರಾಜಕೀಯ ಮತ್ತು ನಂಬಿಕೆಗಳನ್ನು ಬ್ಲೆಂಡ್ ಮಾಡಿ ವ್ಯವಹರಿಸಿದ್ದಾರೆ ಎನ್ನಿಸ ದಿರದು.

ಆ ಸರಳ ಸುಂದರ ಬಿಸಿಲ ಮಚ್ಚಿನ ಮಾಡು, ಎರಡಂತಸ್ತಿನ ಎಲ್ಲ ಮೂಲೆಗಳ ಗಾಂಧಿಯ ಒಡನಾಟ ಮತ್ತು ಓಡಾಟದ ಘಮ, ಇಲ್ಲ ಹೀಗೆ ತಿರುಗಾಡಿ ದ್ದರಾ? ಹೀಗೆಲ್ಲ ಕೂತಿದ್ದರಾ? ಇ ನಿಂತು, ಕೂತು ಓದುತ್ತಿದ್ದರಾ? ಪೋರ್ ಬಂದರಿನ ಚಳಿಗೆ ಇಲ್ಲ ನಿಂತು ಬಿಸಿಲು ಕಾಯಿಸಿಕೊಂಡಿರಬಹುದಾ? ಎನ್ನುವ ಯೋಚನೆಗಳ ಜೊತೆಗೆ ಬಾಪುವಿನ ಮನೆಯಲ್ಲಿ ನಿಶ್ಯಬ್ಧವಾಗಿ ಕಳೆದು ಹೋಗುವ ಪರಿಯಿದೆಯಲ್ಲ ಅದನ್ನೊಮ್ಮೆ ಅಲೆಮಾರಿಯಾಗಿ ಹೋಗಿ ಕೂತೆದ್ದು ಬಂದೇ ಅನುಭವಿಸಿ. ಕೆಲವೊಮ್ಮೆ ಬೇಕಿದೆಯೋ ಬೇಡವೋ ಸ್ಥಳ ಮತ್ತು ಅದಕ್ಕಿರುವ ಐತಿಹ್ಯಗಳು, ಇತಿಹಾಸ, ಸಂಬಂಧಿಸಿದ ಜನ ಅವರ ಕಥಾನಕ
ಶ್ರಮ ಇತ್ಯಾದಿಗಳು ನಮ್ಮನ್ನು ಭೇಟಿಗೆ ಪ್ರಚೋದಿಸುತ್ತವೆ.

ಅಲ್ಲಿ ಪ್ರಮುಖವಾಗಿ ನಿಂತು ಆಗಿನ ಜನಜೀವನ ಜೊತೆಗೆ ಇದ್ದಿರಬಹುದಾದ ಸಾಮಾಜಿಕ ಪ್ರಾಮುಖ್ಯತೆಯನ್ನು ಅರಿಯಲಾದರೂ ಆ ಚಿತ್ರ ಸಂಗ್ರಹ ವನ್ನೊಮ್ಮೆ ನೀವು ನೋಡಲೇಬೇಕು. ಕಾರಣ ಪ್ರತಿಯೊಂದರಲ್ಲೂ ಗಾಂಧಿ ನಿಂತ ಕೂತ ಮತ್ತು ದಿರಿಸಿನಲ್ಲಿ ತೋರಿಸುವ ಸರಳತೆ ಇದೆಯಲ್ಲ. ಉಹೂಂ ಅದನ್ನು ಬೇಕೆಂದೇ ಮಾಡಿದ್ದರಾ ಅಥವಾ ಆಗಿನ ರಾಜಕೀಯಕ್ಕಾಗಿ ಬಳಸಿಕೊಂಡರಾ ಎಂಬೆಲ್ಲ ಸೈದ್ಧಾಂತಿಕ ಸಂಘರ್ಷಗಳ ಹೊರತಾಗಿಯೂ ಎಲ್ಲೂ
ಅಸಹಜತೆಗೂ ಕೃತ್ರಿಮತೆಗೂ ದಕ್ಕದ ಆ ಚಿತ್ರಗಳಲ್ಲಿ ಯಾರಿಲ್ಲ ಯಾರಿದ್ದಾರೆ ಎಂದರೆ ಹುಬ್ಬೇರುತ್ತವೆ. ಕಾರಣ ಜಗತ್ತಿನ ಧೀಮಂತ ಮತ್ತು ಗಣ್ಯಾತಿಗಣ್ಯ ನಾಯಕರೆಲ್ಲ ಅದೇ ಭಾವದಲ್ಲಿ ಕೈ ಕಟ್ಟಿ ನಿಂತವರೇ ಈ ಲಂಡ ಪಂಚೆ ಫಕೀರನೆದುರಿಗೆ.

ಇಂಗ್ಲೆಂಡಿನ ಮಹಾರಾಣಿಯಿಂದ ಹಿಡಿದು, ರಷ್ಯಾದ ನಾಯಕರವರೆಗೂ ಅದರಲ್ಲಿದ್ದಾರೆ ಹಲವು ಚಿತ್ರಗಳಲ್ಲಿ. ಅವರ ಮುಖದಲ್ಲಿ ಭಂಗಿಯಲ್ಲಿ ಈ
ಗಾಂಧಿ ಎಂಬ ನರಪೇತಲನ ಎರಡು ಮಾತಿಗೆ ಕಾಯ್ದು ನಿಂತಿದ್ದ ಪೋಸುಗಳು ನಿಮಗೆ ರೋಚಕ ಎನಿಸದಿರಲಾರವು. ದಂಡಿಮಾರ್ಚ್ ಇರಬಹುದು, ಸುಡು ಮಧ್ಯಾಹ್ನದ ಇನ್ಯಾವುದೋ ಸತ್ಯಾಗ್ರಹವಿರಬಹುದು, ಇಳಿ ಸಂಜೆಯ ಧೇನಿಸುತ್ತಾ ಕೂತ ಅರೆ ಹೊಟ್ಟೆ ಬಡಕಲು ಶರೀರದ ಮಹಾತ್ಮ ಎಲ್ಲ ವೈರುಧ್ಯ ಮತ್ತು ಕಟಕಿಗಳ ಮಧ್ಯೆಯೂ ಆವರಿಸಿಕೊಳ್ಳದೇ ಇರಲಾರ.

ಅದರಲ್ಲೂ ಗಾಂಧಿ ಮತ್ತು ಸರ್ದಾರ ಪಟೇಲ, ಗಾಂಧಿ ಮತ್ತು ನೆಹರುವಿನ ಹಲವು ಚಿತ್ರಗಳು, ಸಾವಿರಾರು ಜನರೊಂದಿಗೆ ಉzನು ಉದ್ದದ ಸಾಲುಗಳಲ್ಲಿ ನಡೆದು ಹೋಗುತ್ತಿರುವ ಅರಬತ್ತಲೆ ಸಂತ, ಹೊರ ದೇಶದಲ್ಲೂ ಅದೇ ದಿರಿಸಿನಲ್ಲಿ ಕೂತೆದ್ದು ಬಂದ ಬಗೆ ಬಗೆಯ ಕಥಾನಕವನ್ನು ಈ ಚಿತ್ರ ಸಂಗ್ರಹ ನಮಗೆ ಪ್ರಾಯೋಗಿಕ ಕಥೆಯನ್ನೇ ಹೇಳುತ್ತವೆ. ಉಳಿದೆಲ್ಲದ್ದಕ್ಕಿಂತ ನನ್ನನ್ನು ಆಕರ್ಷಿಸಿದ್ದು ಮತ್ತು ಸಮಯ ಹೊಂದಿಸಿದ್ದು ಈ ಚಿತ್ರಸಂತೆ ಎಂದರೆ
ತಪ್ಪಾಗಲಿಕ್ಕಿಲ್ಲ. ಇವೆಲ್ಲದರ ಮಧ್ಯೆ ಈ ಮೋಹನದಾಸ ಎಂಬ ಅಪರ ಕರ್ಮಠ ಗುಜರಾತಿಯನ್ನು ಮಹಾತ್ಮನನ್ನಾಗಿಸುವಲ್ಲಿ ಪ್ರಥಮ ಹೆಜ್ಜೆ ಊರಿಸಿ ಎಲ್ಲ ರೀತಿಯ ಬೆಂಬಲ ನೀಡಿದ್ದ ಗುಜ್ಜುಗಳ ಆಗಿನ ಉದ್ಯಮಿ ಸೇಟ್ ಹಾಜಿ ಅಬ್ದುಲ್ ಝವೇರಿಯ ಜೊತೆಗಿನ ಪ್ರಮುಖ ಚಿತ್ರಗಳೂ ಇಲ್ಲಿವೆ.

ಉಳಿದದ್ದೇನೆ ಇದ್ದರೂ ಈಗೆಲ್ಲ ಬಾಪು ಎನ್ನುವ ಬಗ್ಗೆ ಬೇಸರ ಮೂಡಿಸುವಷ್ಟೂ ವೈರುಧ್ಯಗಳು, ಸೈದ್ಧಾಂತಿಕ ಸಂಘರ್ಷಗಳ ಮಧ್ಯೆಯೂ ಇದನ್ನೆಲ್ಲ ಒಮ್ಮೆ ಮೆಲುಕು ಹಾಕಿಸಿ ತನ್ನದೇ ಆದ ಪ್ರಭಾವಲಯಕ್ಕೆ ಸೆಳೆಯುವ ವ್ಯಕ್ತಿತ್ವ ಆಗಿದ್ದಿದ್ದಂತೂ ಹೌದಾಗಿತ್ತು ಎನ್ನಿಸದಿರಲಾರದು. ಬರೀ ಕಾಡು ಗುಡ್ಡವೇ
ಅಲೆಮಾರಿತನವಾಗಬೇಕಿಲ್ಲ. ಇಂಥವೂ ಕೆಲವೊಮ್ಮೆ ಚಿಂತನೆಗೆ ಎಳೆಸುತ್ತವೆ.

error: Content is protected !!