Monday, 3rd October 2022

ಹಬ್ಬಗಳ ರಜೆ ನಿಮಗಷ್ಟೇ ಅಲ್ಲ, ಬಾಯಿಗೂ ಇರಲಿ !

ಸುಪ್ತ ಸಾಗರ

rkbhadti@gmail.com

ಆಶಾಢ ಕಳೆಯಿತೆಂದರೆ ಹಬ್ಬಗಳ ಸಾಲು; ಆಗಸ್ಟ್ ಬಂತೆಂದರೆ ರಜೆಗಳ ಸಾಲು. ಇನ್ನೂ ಮೂರ‍್ನಾಲ್ಕು ತಿಂಗಳು ಹಬ್ಬಗಳಿಗೂ ಕೊರತೆಯಿಲ್ಲ; ರಜೆಗಳಿಗೂ. ಅದರಲ್ಲೂ ಈ ಬಾರಿಯ ಸ್ವಾತಂತ್ರ್ಯದಿನದಂತೆ ವಾರಾಂತ್ಯಕ್ಕೆ ಸೇರಿಕೊಂಡು ರಾಷ್ಟ್ರೀಯ ರಜಾ ದಿನಗಳೋ, ಹಬ್ಬಗಳೋ ಬಂದರಂತೂ ಮುಗಿದೇ ಹೋಯಿತು, ಹಿಂದೆ ಅಥವಾ ಮುಂದೆ ಇನ್ನೊಂದೆರಡು ಸಿಎಲ್ ಗುಜರಾ ಯಿಸಿ ಪ್ರವಾಸ, ಮೋಜು ಮಸ್ತಿ ಕಟ್ಟಿಟ್ಟದ್ದು.

ಮನೆಯಲ್ಲಿದ್ದರಂತೂ ಗಡದ್ದಾಗಿ ಊಟ, ಸುದೀರ್ಘ ನಿದ್ದೆ, ನಾನಾ ಬಗೆಯ ತಿನಿಸುಗಳು… ಒಟ್ಟಾರೆ ಬಾಯಿಗೆ ಪುರುಸೊತ್ತಿಲ್ಲ. ದೇಹಕ್ಕೆ ದಣಿವಿಲ್ಲ. ಮನೆಯ ಇದ್ದೇವೆ ಅಂದರೆ ಸಹಜವಾಗಿ ಕೆಲಸ ಕಡಿಮೆ. ಹೀಗಾಗಿ ಹಸಿವೂ ಕಡಿಮೆ ಆಗಬೇಕು. ಆದರೆ ಕೆಲಸವಿಲ್ಲದೇ ಟೈಂಪಾಸ್ ಸಹ ಆಗುತ್ತಿಲ್ಲ. ಬೇಸರ ಕಳೆಯಲು ಏನಾದರೂ ಒಂದನ್ನು ಬಾಯಾಡುತ್ತಲೇ ಇರುತ್ತೇವೆ. ಇಲ್ಲವೇ ಏನಾದರೂ ಕುಡಿಯುತ್ತಲೇ ಇರುತ್ತೇವೆ. ಹೀಗೆ ತಿನ್ನುವ ಖಯಾಲಿ ನಮ್ಮನ್ನು ಕೊರೋನಾಕ್ಕಿಂತಲೂ ಅಪಾಯಕಾರಿ ರೋಗಕ್ಕೆ ದೂಡಲೂ ಬಹುದು!

ಹೌದು, ಈಗಷ್ಟೇ ಕರೋನಾ ಸಾಂಕ್ರಾಮಿಕದ ಕರಿನೆರಳಿನಿಂದ ಹೊರ ಬಂದಿದ್ದೇವೆ. ಜಗತ್ತನ್ನು ಇನ್ನಿಲ್ಲದಂತೆ ಕರೋನಾ ಬಾಧಿಸಲಾರಂಭಿಸಿದಾಗ ಅನಿವಾರ್ಯವಾಗಿ ಭಾರತ ಸೇರಿದಂತೆ ಹಲವು ದೇಶಗಳು ಸುದೀರ್ಘ ಲಾಕ್ ಡೌನ್ ಮೊರೆ ಹೋಗಿತ್ತು. ಎರಡು, ಮೂರು ತಿಂಗಳುಗಳ ಕಾಲ ಮನೆಯಲ್ಲೇ ಕುಳಿತಿರಬೇಕಾದ ಅನಿವಾರ್ಯಕ್ಕೆ ಸಿಲುಕಿದ್ದೆವು. ಕೊನೆಗಂತೂ ಕರೋನಾದ ಹೋರಾಟದಲ್ಲಿ ನಾವು ತಕ್ಕಮಟ್ಟಿಗೆ ಜಯ ಸಾಧಿಸಿದ್ದೇವೆ.

ಆದರೆ ಕರೋನೋತ್ತರ ಸಮಸ್ಯೆಗಳಲ್ಲಿ ಇಂದಿಗೂ ಹೊರಬಾರಲಾಗದ್ದು ‘ಹೊಟ್ಟೆಯ ಸಮಸ್ಯೆ’. ಲಾಕ್‌ಡೌನ್‌ನಿಂದ ಅದೆಷ್ಟೋ
ಮಂದಿ ಉದ್ಯೋಗ ಕಳೆದುಕೊಂಡರು, ಇನ್ನಷ್ಟು ಮಂದಿಯ ಉದ್ಯಮಗಳೇ ಬಾಗಿಲುಮುಚ್ಚಿ, ಬೀದಿಗೆ ಬಂದರು. ಹೀಗಾಗಿ ಸಾಕಷ್ಟು ಕುಟುಂಬಗಳ ಹೊಟ್ಟೆ ಪಾಡಿಗೆ ಸಮಸ್ಯೆ ಆಗಿದ್ದು ಗೊತ್ತಿರುವ ಸಮಸ್ಯೆಯೇ. ಆದರೆ ಇದು ಹೊಟ್ಟೆಗಿಲ್ಲದೇ ಆದ ಸಮಸ್ಯೆ ಅಲ್ಲ. ಲಾಕ್‌ಡೌನ್ ಸಂದರ್ಭದಲ್ಲಿ ಮಿತಿಮೀರಿ ತಿಂದಿದ್ದರ ಪರಿಣಾಮ ಬೆಳೆದ ಹೊಟ್ಟೆಯನ್ನು ಕರಗಿಸಲಾಗದೇ ಆಗುತ್ತಿರುವ ಸಮಸ್ಯೆ. ಆಗ ಅಂಟಿಕೊಂಡ ಈ ತಿನ್ನುವ ರೋಗಕ್ಕೆ ಇಂದಿಗೂ ಪರಿಹಾರ ಸಿಕ್ಕಿಲ್ಲ. ಅದರ ನಡುವೆಯೇ ಕರೋನಾತಂಕ ಕಳೆದು ಈ ವರ್ಷದ ಹಬ್ಬಗಳ ಸಾಲು ಬಂದಿದೆ.

ಈಗ ಹೇಳಿ ನಿಮಗೆ ನಿತ್ಯ ಆಹಾರ ಸೇವನೆ ಅಗತ್ಯವೇ, ಹವ್ಯಾಸವೇ ಅಥವಾ ರೋಗವೇ? ವಿಚಿತ್ರ ಪ್ರಶ್ನೆ ಅಂತನ್ನಿಸಬಹು ದಲ್ಲವೇ? ಮನುಷ್ಯನ  ಮೂಲಭೂತ ಅಗತ್ಯವಾದ ಆಹಾರವು ನಮಗೆ ಚಟ ಅಥವಾ ರೋಗವಾಗಲು ಹೇಗೆ ಸಾಧ್ಯ? ಹೌದು, ಎಲ್ಲರಿಗೂ ಆಹಾರ ಅಗತ್ಯ. ಆದರೆ ಕೆಲವರಲ್ಲಿ ತಿನ್ನುವುದೇ ಒಂದು ಚಟವಾಗಿ ಪರಿವರ್ತನೆಯಾಗಿರುತ್ತದೆ. ನಿಮಗೆ ಗೊತ್ತೇ?
ಮದ್ಯಪಾನ-ಧೂಮಪಾನಕ್ಕಿಂತಲೂ ಅಪಾಯಕಾರಿ ಚಟ ಇದು. ಅಂಥವರು ಹೀಗೇಯೇ ಮುಂದುವರಿದು ಗುಣ ಪಡಸಲಾಗದ ‘ರೋಗ’ಕ್ಕೆ ತುತ್ತಾಗಿರುತ್ತಾರೆ.

ನಿಮ್ಮಲ್ಲಿ ಯಾರು ಈ ರೋಗದಿಂದ ಬಳಲುತ್ತಿದ್ದಿರಿ; ನೋಡಿಕೊಳ್ಳಿ. ಪ್ರತಿದಿನ ಹಸಿವಾದಾಗ ದೇಹಕ್ಕೆ ಬೇಕಷ್ಟು ಆಹಾರ
ತೆಗೆದುಕೊಳ್ಳುವುದು ಅಗತ್ಯ. ಆದರೆ ಬಹುತೇಕ ಸಂದರ್ಭದಲ್ಲಿ ಹಸಿವಾಗಲೀ ಆಗದಿರಲಿ, ಆಹಾರದ ಸಮಯವಾಯಿತೆಂದು ತಿನ್ನುವವರೇ ಹೆಚ್ಚು. ಅಷ್ಟಕ್ಕೂ ಹಸಿವಾಗುವುದು ಯಾವಾಗ ? ತಿಂದ ಆಹಾರ ಜೀರ್ಣವಾಗಿ ಕ್ಯಾಲೋರಿಯಾಗಿ ಪರಿವರ್ತನೆ ಆಗಿರುತ್ತದೆ. ದೇಹದ ಚಟುವಟಿಕೆಗಳು ನಡೆದಾಗ ಈ ಕ್ಯಾಲೋರಿ ಖರ್ಚಾಗಿ ಮತ್ತೆ ಹಸಿವಾಗುತ್ತದೆ.

ಆದರೆ ಕೆಲಸ ಕಡಿಮೆ ಇದ್ದಾಗ ಕ್ಯಾಲೋರಿ ಖರ್ಚಾಗುವುದೂ ಕಡಿಮೆ ಆಗಿ ಹಸಿವಾಗುವುದೂ ವಿಳಂಬವಾಗುತ್ತದೆ. ಆದರೂ ಕೆಲಸವಿಲ್ಲದೇ ಇದ್ದಾಗ ಟೈಂಪಾಸ್ ಆಗುವುದಿಲ್ಲ. ಆ ಬೇಸರ ಕಳೆಯಲು ಏನಾದರೂ ಒಂದನ್ನು ಬಾಯಾಡುತ್ತಲೇ ಇರುತ್ತೇವೆ. ಇಲ್ಲವೇ ಏನಾದರೂ ಕುಡಿಯುತ್ತಲೇ ಇರುತ್ತೇವೆ. ಅದರಲ್ಲೂ ಕೆಲಸವಿಲ್ಲದಿದ್ದಾಗಲೇ ಬಹುತೇಕರು ಕಾಫೀ, ಟೀಗಳಂಥವುಗಳ ಮೊರೆ ಹೋಗುವುದು ಹೆಚ್ಚು. ಇದು ನಮ್ಮ ದೇಹದ ಮೆಟಾ ಬಾಲಿಕ್ ದರವನ್ನು ಹೆಚ್ಚಿಸುತ್ತದೆ. ಒಮ್ಮೆ ಹೀಗೆ ಮೆಟಬಾಲಿಕ್
ಮೇಲೇರಿದರೆ ಮತ್ತೆ ಮತ್ತೆ ತಿನ್ನಬೇಕೆನಿಸುತ್ತದೆ. ತಿಂದ ಹಾಗೆಲ್ಲ ಮೆಟಬಾಲಿಕ್ ಮೇಲೇರುತ್ತಲೇ ಹೋಗುತ್ತದೆ. ಮತ್ತೆ ತಿನ್ನು ತ್ತೇವೆ; ಹೊರತೂ ದೇಹಕ್ಕೆ ಬೇಕಾಗಿಯಾಗಲೀ, ಹಸಿವಾಗಿಯಾಗಲೀ ತಿನ್ನುವುದು ಅಲ್ಲ.

ಇದನ್ನು ‘ಸಂವೇದನಾ ರಹಿತ’ ಆಹಾರ ಸೇವನೆ ಅನ್ನು ತ್ತಾರೆ. ಆಹಾರವು ನಮಗೆ ಸಂತೋಷ ನೀಡಬೇಕು. ಇಡೀ ದೇಹವನ್ನು ಸಂವಹನಕ್ಕೆ ಒಳಪಡಿಸಬೇಕು. ಆರೋಗ್ಯ ಪೂರ್ಣ ವ್ಯಕ್ತಿಗಳಲ್ಲಿ ಇಂಥ ಸಂವಹನಾ ಕ್ರಿಯೆ ನಡೆಯುತ್ತದೆ. ಅದಕ್ಕಾಗಿಯೇ ತೀರಾ ಹಸಿವಾದಾಗ ತಲೆ ಸುತ್ತು ವುದು, ನಿತ್ರಾಣಗೊಳ್ಳುವುದು ಇತ್ಯಾದಿ ಆಗುತ್ತದೆ. ಆಹಾರವು ದೇಹದೊಳಕ್ಕೆ ಸೇರುತ್ತಿದ್ದಂತೆ ಆರಾಮದಾಯಕ ಎನಿಸುತ್ತದೆ. ಈ ಸಂವಹನೆ ನಡೆಯುವುದು ನಾವು ಸೇವಿಸುವ ಆಹಾರದಲ್ಲಿನ ಗ್ಲೋಕೋಸ್ ಪ್ರಮಾಣ ದಿಂದ.

ಸಾಮಾನ್ಯ ಎಲ್ಲ ಆಹಾರದಲ್ಲೂ ಗ್ಲೂಕೋಸ್ ಅಥವಾ ಶರ್ಕರ ಪಿಷ್ಟದ ಅಂಶವಿರುತ್ತದೆ. ಆಹಾರ ಜಠರದಲ್ಲಿ ಪಚನವಾಗು ತ್ತಿದ್ದಂತೆಯೇ ಅದರಲ್ಲಿನ ಗ್ಲೂಕೋಸ್ ಅಂಶ ಬಿಡುಗಡೆಯಾಗಿ ರಕ್ತವನ್ನು ಸೇರುತ್ತದೆ. ಸಾಮಾನ್ಯವಾಗಿ ಈ ಪ್ರಕ್ರಿಯೆಗೆ ನಾಲ್ಕು ಗಂಟೆಗಳ ಸಮಯಬೇಕಿರುತ್ತದೆ. ಆದರೆ, ಇವತ್ತು ನಾವು ಸೇವಿಸುತ್ತಿರುವ ಬಹುತೇಕ ಆಹಾರದಿಂದ ಕೇವಲ ಹದಿನೈದು ಇಪ್ಪತ್ತು ನಿಮಿಷಗಳ ಗ್ಲೂಕೋಸ್ ಬಿಡುಗಡೆ ಆಗಿಬಿಡುತ್ತದೆ. ಹೀಗಾಗಿ ಜಠರದಲ್ಲಿ ಅದು ಬೇಗ ಅರಗಿ ತಿಂದ ಸ್ವಲ್ಪ ಹೊತ್ತಿನ ಮತ್ತೆ ಹಸಿವಾಗಲು ತೊಡಗುತ್ತದೆ.

ಹೀಗೆ ಹೆಚ್ಚು ಹೆಚ್ಚು ತಿನ್ನುವುದು, ಅದರಿಂದ ಗ್ಲೂಕೋಸ್ ಬಿಡುಗಡೆ ಆಗುವುದು ಆಗುವುದರಿಂದಲೇ ಮಧುಮೇಹ, ಅಧಿಕ ರಕ್ತದೊತ್ತಡ, ಎಡಿಮಾ, ಹೊಟ್ಟೆಯ ತೊಂದರೆಗಳು ಮತ್ತು ಹೃದಯರಕ್ತನಾಳದ ಸಮಸ್ಯೆಯಂಥ ಕಾಯಿಲೆಗಳು ಹೆಚ್ಚುತ್ತಿ ರುವುದು. ನಿಧಾನವಾಗಿ ಪಿಷ್ಟವನ್ನು ಬಿಡುಗಡೆಗೊಳಿಸುವ ಗುಣವುಳ್ಳ, ಪ್ರೋಟೀನ್ ಯುಕ್ತ ಆಹಾರವನ್ನು ಸೇವಿಸುವುದರಿಂದ ಇದರಿಂದ ಪಾರಾಗಬಹುದು. ಇಂಥ ಆಹಾರಗಳನ್ನು ಲೋಗ್ಲೈಸಮಿಕ್ ಇಂಡೆಕ್ಸ್ ಗುಣವುಳ್ಳದ್ದು ಎಂದು ಕರೆಯುತ್ತಾರೆ.

ತಿನ್ನುವುದು ಚಟವಾಗುವುದು ಹೈ ಗ್ಲೈಸಮಿಕ್ ಇಂಡೆಕ್ಸ್ ಆಹಾರದಿಂದಲೇ. ತಿನ್ನುವ ಚಟ ಮದ್ಯಪಾನಕ್ಕಿಂತ ಹೆಚ್ಚು
ಭಿನ್ನವಲ್ಲ ಎನ್ನುತ್ತದೆ ಅಧ್ಯಯನ. ಬಹುತೇಕ ಸಂದರ್ಭದಲ್ಲಿ ಇದು ಒಂದೇ ರೀತಿಯ ಮಾನಸಿಕ ಅಸ್ವಾಸ್ಥ್ಯ ಎನ್ನುತ್ತಾರೆ
ತಜ್ಞರು. ತಿನ್ನುವ ಆಹಾರ ಹಾಗೂ ಆಶಿಸ್ತಿನ ಜೀವನ ಶೈಲಿಯಿಂದಾಗಿ ಬೊಜ್ಜಿನ ಸಮಸ್ಯೆ ತೀವ್ರಗೊಳ್ಳುತ್ತಿದ್ದು, ವಿಶ್ವ
ಆರೋಗ್ಯ ಸಂಸ್ಥೆ ಬೊಜ್ಜನ್ನು ‘ಆಧುನಿಕ ಯುಗದ ಸಾಂಕ್ರಾಮಿಕ’ ಎಂದು ಗುರುತಿಸಿದೆ.

ಆಲ್ಕೊಹಾಲ್‌ಗೆ ದಾಸನಾದ ವ್ಯಕ್ತಿಗೆ ಹೇಗೆ ಕುಡಿಯದೇ ಇರಲಿಕ್ಕಾಗುವುದಿಲ್ಲವೋ ಹಾಗೆಯೇ ತಿನ್ನುವ ಚಟಕ್ಕೆ ಬಿದ್ದ ವ್ಯಕ್ತಿಗೆ ಬಾಯಾಡದೇ ಇರಲು ಸಾಧ್ಯವಿಲ್ಲ. ತುಂಬ ಸಂದರ್ಭದಲ್ಲಿ ಮಾನಸಿಕ ಒತ್ತಡವನ್ನು ನಿಭಾಯಿಸಲೆಂದೇ ವ್ಯಕ್ತಿಗಳು ಮನ ಬಂದಂತೆ ತಿನ್ನಲು ಆರಂಭಿಸಿ, ಹೊಟ್ಟೆಬಾಕತನಕ್ಕೆ ‘ವಶ’ವಾಗಿರುತ್ತಾರೆ. ಗಮನಾರ್ಹ ಸಂಗತಿಯೆಂದರೆ ಹೆಚ್ಚಾಗಿ, ಮಹಿಳೆ ಯರೇ ಇದರಿಂದ ಬಳಲುತ್ತಿದ್ದಾರೆ. ಇದರಿಂದ ಹೊರಬರಲು ನಿಮಗಿಂತ ಸೂಕ್ತ ವ್ಯಕ್ತಿ ಇನ್ನೊಬ್ಬರಿಲ್ಲ. ಮಾತ್ರವಲ್ಲ, ನಿಮ್ಮ ಮನಸ್ಸಿಗಿಂತ ಸೂಕ್ತ ಚಿಕಿತ್ಸಕ ಬೇರಾರೂ ಅಲ್ಲ.

ನೀವು ಒಂದು ನಿರ್ದಿಷ್ಟ ಉತ್ಪನ್ನದ ರುಚಿಗೆ ಮನಸೋತು ಅದನ್ನು ನಿರಂತರವಾಗಿ ತಿನ್ನುತ್ತಿದ್ದರೆ, ಇದು ಆಹಾರದ ಚಟವಲ್ಲ. ಅದು ನಿಮ್ಮ ವೈಯಕ್ತಿಕ ಚಟ. ಆದರೆ ಏನನ್ನಾದರೂ ನಿರಂತರವಾಗಿ ತಿನ್ನುತ್ತಲೇ ಇದ್ದರೆ ಅದು ಆಹಾರ ವ್ಯಸನ. ಹಸಿವಿ ನಿಂದಾಗಲೀ, ಭಾವನಾತ್ಮಕ ಬಯಕೆಯಿಂದಾಗಲೀ ಆತ ತಿನ್ನುವುದಿಲ್ಲ. ಆತ ತನ್ನಲ್ಲಿನ ಒತ್ತಡ, ನೋವು, ದುಃಖ, ಅಪರಾಧಿ ಭಾವಗಳನ್ನು ತಿನ್ನುವುದರಲ್ಲಿ ಕಳೆದುಕೊಳ್ಳಲು ಯತ್ನಿಸುತ್ತಾನೆ. ಕ್ರಮೇಣ ಈ ಪ್ರಮಾಣ ಜಾಸ್ತಿಯಾಗುತ್ತ ಹೋಗಿ ಕೊನೆ ಸ್ವಲ್ಪ ತಿಂದರೆ ಆತನಿಗೆ ತೃಪ್ತಿಯೇ ಆಗುವುದಿಲ್ಲ.

ನಿಜವಾಗಿ ನಿಮಗೆ ಆಹಾರ ತಿಂದಾಗ ಸಿಗುವ ತೃಪ್ತಿ ದೊರೆಯುವುದು ಅದರ ರುಚಿಯಿಂದಲ್ಲ. ರುಚಿ ನಿಮ್ಮನ್ನು ಮತ್ತೆ ತಿನ್ನಲಷ್ಟೇ ಪ್ರೇರೇಪಿಸುವುದು. ತೃಪ್ತಿ ಆಗುವುದು ಆಹಾರದ ಪಚನ ಪ್ರಕ್ರಿಯೆಯಿಂದ. ಆದರೆ ವ್ಯಸನ ಪೀಡಿತರಿಗೆ ರುಚಿಯೂ ಮುಖ್ಯವಲ್ಲ, ತೃಪ್ತಿಯನ್ನಂತೂ ಅವರು ಕಾಣುವುದೇ ಇಲ್ಲ.

ಹಾಗಾದರೆ ತಿನ್ನುವುದು ಮತ್ತು ತಿನ್ನುವ ವ್ಯಸನಕ್ಕೂ ಇರುವ ವ್ಯತ್ಯಾಸವೇನು? ವ್ಯಸನದ ಲಕ್ಷಣಗಳು ಯಾವುವು? ತಿನ್ನುವಾಗ, ಮುಂದಿನ ಬಾರಿ ಏನು ತಿನ್ನಬೇಕು ಎಂದು ಯೋಚಿಸುತ್ತಿದ್ದರೆ ನೀವು ಮಾರುಕಟ್ಟೆಗೆ ಹೋದಾಗ ತಿನಿಸುಗಳನ್ನು ಖರೀದಿಸದೇ ಮರಳಲು ಸಾಧ್ಯವೇ ಇಲ್ಲ ಎನಿಸುತ್ತಿದ್ದರೆ ಹಸಿವಿರಲಿ, ಇಲ್ಲದಿರಲಿ ತಿನ್ನಬೇಕೆಂದು ಅನಿಸುತ್ತಲೇ ಇದ್ದರೆ ಎರಡು ಆಹಾರದ ಸೇವನೆ(ಊಟ)ಯ ಮಧ್ಯ ಏನಾದರೂ ತಿನ್ನಲೇ ಬೇಕೆಂದು ಯಾವಾಗಲೂ ಅನಿಸುತ್ತಿದ್ದರೆ ತಿನ್ನುವ ಜಾಗ, ಸಮಯ, ರುಚಿ ಇಂಥವು ನಿಮಗೆ ಮುಖ್ಯವೆನಿಸದೇ ಇದ್ದರೆ ಎಂಥದ್ದೇ ಸನ್ನಿವೇಶದಲ್ಲೂ ನಿಮಗೆ ಆಹಾರವೇ ಮುಖ್ಯವೆನಿಸುತ್ತಿದ್ದರೆ.

ಪರಿಚಿತರು, ಬಂಧುಗಳ ಮನೆಗೆ ಹೋಗುವ ಮುನ್ನವೇ ಅವರ ಮನೆಯಲ್ಲಿ ತಿನ್ನಲು ಏನು ಕೊಟ್ಟಾರು ಎಂದು ಯೋಚಿಸುತ್ತಿದ್ದರೆ
ಎಲ್ಲ ಆಲೋಚನೆಗಳು ಮತ್ತು ಸಂಭಾಷಣೆಗಳು ಆಹಾರದ ಸುತ್ತ ಸುತ್ತುತ್ತವೆ ದಿನದಲ್ಲಿ ಎಚ್ಚರಿರುವ ಬಹುತೇಕ ಸಮಯದಲ್ಲಿ ನಿಮ್ಮ ಬಾಯಿ ಆಡುತ್ತಲೇ ಇದ್ದರೆ ಇದೆಲ್ಲವೂ ನಿಮ್ಮದಾಗಿದ್ದರೆ ಖಂಡಿತಾ ನೀವು ಆಹಾರದ ವ್ಯಸನಕ್ಕೆ ಈಡಾಗಿದೀರೆಂದೇ ಅರ್ಥ. ಹಾಗಾದರೆ ಆಹಾರ ವ್ಯಸನದಿಂದಾಗುವ ಅಪಾಯಗಳೇನು? ನಿಮ್ಮ ರಕ್ತದೊತ್ತಡ ಹೆಚ್ಚಾಗುತ್ತದೆ. ಸ್ಥೂಲ ಕಾಯದಿಂದ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ.

ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚು. ದೈಹಿಕವಾಗಿ ಮಾತ್ರವಲ್ಲ, ಆರ್ಥಿಕವಾಗಿ, ಮಾನಸಿಕ ವಾಗಿ ಮತ್ತು ಭಾವನಾತ್ಮಕವಾಗಿ ಹಾನಿ ಮಾಡುತ್ತದೆ. ಅಧಿಕ ತೂಕದ ಜತೆಗೆ ಸ್ವಾಭಿಮಾನವನ್ನು ಕಳೆದುಕೊಳ್ಳುವ ಅಪಾಯ ವಿದೆ. ನಿರಂತರ ಶಾಪಿಂಗ್ ಮತ್ತು ಅಡುಗೆಗಾಗಿ ಹಣ ಮತ್ತು ಸಮಯವನ್ನು ವ್ಯಯಿಸುತ್ತದೆ. ಆಹಾರ ಚಟವನ್ನು ತೊಡೆದು ಹಾಕಲು ಹೇಗೆ? ನಿಮ್ಮ ಆಹಾರ ಡೈರಿಯನ್ನು ಇಟ್ಟುಕೊಳ್ಳಿ.

ಒಂದು ದಿನದಲ್ಲಿ ನೀವು ಸೇವಿಸಿದ ಮತ್ತು ಸೇವಿಸಿದ ಎಲ್ಲವನ್ನೂ ಅದರಲ್ಲಿ ಬರೆಯಿರಿ. ನೀವು ಎಷ್ಟು ಅತಿಯಾಗಿ ತಿನ್ನುತ್ತಿದ್ದೀರಿ
ಎಂಬುದನ್ನು ಅರಿತುಕೊಳ್ಳಲು ಡೈರಿ ಸಹಾಯ ಮಾಡುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮತ್ತು ಸಂಜೆ ಮಲಗುವ ಮುನ್ನ ನೀವೇ ತೂಕ ಮಾಡಿ ಮತ್ತು ಫಲಿತಾಂಶಗಳನ್ನು ಬರೆದು ಹೋಲಿಸಿಕೊಳ್ಳಿ. ಕಳೆದ ದಿನಗಳಲ್ಲಿ, ವಿಶೇಷವಾಗಿ ರಜಾದಿನಗಳ ನಂತರ ನಿಮ್ಮ ಆಹಾರ ದಿನಚರಿಯನ್ನು ನಿಯಮಿತವಾಗಿ ಪರಿಶೀಲಿಸಿ.

ಬನ್, ಪಪ್ಸ್, ಕೇಕ್ ಇತ್ಯಾದಿ ಮೈದಾದಿಂದ ತಯಾರಿಸಿದ ತಿನಿಸುಗಳಿಂದ ದೂರವಿರಿ. ಹಣ್ಣು-ತರಕಾರಿಗಳಲ್ಲಿ ಆಲೂಗಡ್ಡೆ-ಸಿಹಿಕುಂಬಳ, ಮಾವು, ಹಲಸು, ಬಾಳೆ ಹಣ್ಣು ಇತ್ಯಾದಿ ತೂಕ ಹೆಚ್ಚಿಸುವ ವಸ್ತುಗಳನ್ನು ವರ್ಜಿಸಿ. ಸಿಹಿ, ಕರಿದ ಪದಾರ್ಥಗಳು ನಿಮ್ಮನ್ನು ಆಕರ್ಷಿಸದಿರಲಿ. ಹಸಿದಿರುವಾಗ ಮಾತ್ರ ತಿನ್ನಿರಿ! ತಿನ್ನುವುದಕ್ಕೆ ಬೇರೆ ಕಾರಣಗಳನ್ನು ಹುಡುಕದಿರಿ.

ಬೆಳಗ್ಗೆ ಮತ್ತು ಮಧ್ಯಾಹ್ನಕ್ಕಿಂತ ಹೆಚ್ಚಿನ ಆಹಾರವನ್ನು ಸಂಜೆ ಸೇವಿಸುತ್ತಿದ್ದೀರಾ ಗಮನಿಸಿ ಕಡಿಮೆ ಮಾಡಿಕೊಳ್ಳಿ. ನಿಧಾನವಾಗಿ ತಿನ್ನಿರಿ, ಒಳದಬ್ಬಬೇಡಿ. ಪ್ರತಿ ತುತ್ತನ್ನೂ ಎಚ್ಚರಿಕೆಯಿಂದ ಅಗಿಯಿರಿ, ಅದನ್ನು ಸವಿಯಿರಿ. ನಿಮ್ಮ ಬಾಯಿಗೆ ಹೊಸ ತುತ್ತನ್ನು ಕಳುಹಿಸುವ ಮೊದಲು ಆಹಾರವನ್ನು ಸಂಪೂರ್ಣವಾಗಿ ನುಂಗಿ. ನಿಮ್ಮ ಊಟದ ತಟ್ಟೆ ವೈವಿಧ್ಯಮಯ, ವರ್ಣಮಯವಾಗಿರಲಿ. ಹಸಿ ತರಕಾರಿ, ಹಣ್ಣುಗಳಿಗೆ ತಟ್ಟೆಯಲ್ಲಿ ಜಾಗವಿರಲಿ.

ಪ್ರೋಟಿನ್, ವಿಟಮಿನ್, ಕಾರ್ಬೋಹೈಡ್ರೇಡ್, ಮಿನರಲ್ಸ, ಫೈಬರ್‌ಗಳ ಸಮತೋಲನವನ್ನು ಊಟದಲ್ಲಿ ಕಾಪಾಡಿಕೊಳ್ಳಿ. ಪ್ರೋಟೀನ್ ಅಂಶ ಜಾಸ್ತಿ ಸೇವಿಸಿದರೆ ಹಸಿವು ಮುಂದೂಡುತ್ತದೆ. ಸಣ್ಣಪುಟ್ಟ ವ್ಯಾಯಾಮ, ಧ್ಯಾನ, ಯೋಗ ಇತ್ಯಾದಿ
ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ ಆಹಾರ ಚಟವನ್ನು ತೊಡೆದುಹಾಕುವುದು ಸುಲಭದ ಕೆಲಸವಲ್ಲ ಮತ್ತು ನಿಮ್ಮ ಕಡೆಯಿಂದ ದೃಢ ಪ್ರಯತ್ನಗಳು ಬೇಕಾಗುತ್ತವೆ. ನಿಮ್ಮ ಗುರಿಯನ್ನು ನೆನಪಿಡಿ!

ರೋಗ ಆಗುವುದು ಯಾವಾಗ? ಆಹಾರದ ವಿಚಾರದಲ್ಲಿ ಬುಲಿಮಿಯಾ (ಅತಿಯಾಗಿ ತಿನ್ನುವುದು) ಮತ್ತು ಅನೋರೆಕ್ಸಿಯಾ (ಆಹಾರವನ್ನು ಸಂಪೂರ್ಣವಾಗಿ ತಿರಸ್ಕರಿಸುವುದು) ಎರಡು ರೀತಿಯ ಸಮಸ್ಯೆ ಇರುತ್ತದೆ. ವ್ಯಕ್ತಿಯಲ್ಲಿ ಆಗುವ ಎಲ್ಲ ಬದಲಾವಣೆಗಳೂ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ಆಹಾರ ಸೇವನೆಯೂ ಹೊರತಲ್ಲ. ಏಕೆಂದರೆ ಆಹಾರವನ್ನು ಸೇವಿಸಿದಾಗ ಸೆರೊಟೋನಿನ್ ಎಂಬ ಹಾರ್ಮೋನ್ ದೇಹದಲ್ಲಿ ಉತ್ಪತ್ತಿಯಾಗುತ್ತದೆ.

ತಿನ್ನುವ ಪ್ರಮಾಣ ಮತ್ತು ಆವರ್ತನ ಹೆಚ್ಚಿದಂತೆಲ್ಲ ಈ ಹಾರ್ಮೋನು ಉತ್ಪತ್ತಿಯಲ್ಲಿ ವ್ಯತ್ಯಯವಾಗಿ ನರಮಂಡಲದ ಮೇಲೆ ವ್ಯತಿರಿಕ್ತ ಪರಿಣಾಮ ಆಗುತ್ತದೆ. ಇದೇ ಮನಸ್ಸಿನ ಒತ್ತಡವನ್ನು ನಿರ್ಧರಿಸುವುದರಿಂದ ಕಾಲಾನಂತರದಲ್ಲಿ ತಿನ್ನುವುದರಿಂದಲೇ ವ್ಯಕ್ತಿ ತನ್ನ ಒತ್ತಡವನ್ನು ಮರೆಯಲು ಯತ್ನಿಸುತ್ತಾನೆ. ಖಿನ್ನತೆ ಮತ್ತು ಒಂಟಿತನದ ಸಂದರ್ಭದಲ್ಲಿ ತಿನ್ನುವುದರಿಂದ ಸಂತೋಷ
ಕಾಣುವುದು ಇದೇ ಕಾರಣಕ್ಕೆ. ಕೆಲವೊಮ್ಮೆ ದೈಹಿಕ ನೋವನ್ನು ಕಡಿಮೆ ಮಾಡಲು ಸಹ ಸಾಕಷ್ಟು ಜನರು ಆಹಾರ ಸೇವಿಸುವ ಸಂದರ್ಭಗಳಿವೆ. ಹಸಿವಾದಾಗ, ತಿನ್ನಬೇಕೆನಿಸಿದಾಗ ದೇಹ ಅಸ್ವಸ್ಥಗೊಳ್ಳುವುದರ ಜತೆಗೆ ಆತಂಕ ಮತ್ತು ಭೀತಿ ಶುರುವಾದರೆ ಖಂಡಿತಾ ನೀವು ಹೊಟ್ಟೆ ಬಾಕತನದ ರೋಗದಿಂದ ಬಳಲುತ್ತಿದ್ದಿರೆಂದೇ ಅರ್ಥ.

ಇದಕ್ಕೆ ಕೌನ್ಸೆಲಿಂಗ್, ಜತೆಗೆ ಸೂಕ್ತ ಚಿಕಿತ್ಸೆ ಪಡೆಯಬೇಕು. ಕೊನೆಯಲ್ಲಿ ಅತಿ ಮುಖ್ಯ ಸಂಗತಿ, ಈ ತಿನ್ನುಬಾಕತನ ಚಿಕ್ಕಂದಿನ ಹುಟ್ಟುವ ರೋಗ. ಮಗು ಊಟ-ತಿಂಡಿಗೆ ಕೂತಾಗಲೇ ಹೊಟ್ಟೆ ತುಂಬ ತಿನ್ನವಂತೆ ನೋಡಿಕೊಳ್ಳುವುದು ಮುಖ್ಯ. ಅವರು ಕೇಳಿದಾಗೆಲ್ಲ ಏನಾದರೂ ತಿನ್ನಲು ಕೊಡುತ್ತಿರುವುದು, ಚಾಕೋಲೇಟ್, ಬೇಕರಿ ತಿನಿಸು, ಬಿಸ್ಕೇಟ್‌ಗಳಿಂದ ಅವರನ್ನು ದೂರವಿಡಿ.

೦೦೦